ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು, ಬಾಳೆ, ಹತ್ತಿ ಬೆಳೆ ನೆಲಸಮ

ಕುದುರೆನಾಳ ಗ್ರಾಮದಲ್ಲಿ ಕಾಡಾನೆಗಳ ಉಪಟಳ; ಒಂಟಿಸಲಗದ ಪುಂಡಾಟ
Last Updated 4 ಡಿಸೆಂಬರ್ 2013, 8:46 IST
ಅಕ್ಷರ ಗಾತ್ರ

ಮುಂಡಗೋಡ: ಬಾಳೆ ಹಾಗೂ ತೆಂಗಿನ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದ ಘಟನೆ ತಾಲ್ಲೂಕಿನ ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುದುರೆನಾಳದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಸುಮಾರು 9–12ರಷ್ಟಿರುವ ಕಾಡಾನೆಗಳ ಹಿಂಡು ಕುದುರೆನಾಳ ಗ್ರಾಮದ  ಪದ್ಮನಾಭ ಇಂಗೋಲೆ, ಸೀತಾಬಾಯಿ ರಾಠೋಡ, ಅರ್ಜುನ ಶಿಂಧೆ, ರವಿ ಇಂಗೋಲೆ ಅವರ ತೋಟ, ಗದ್ದೆಗಳಿಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಮಾಡಿವೆ. ಸುಮಾರು 3ಎಕರೆ ಪ್ರದೇಶದಲ್ಲಿ ಬೆಳೆಸಲಾಗಿರುವ ಬಾಳೆ ಹಾಗೂ ತೆಂಗಿನ ಗಿಡಗಳನ್ನು ಮುರಿದು ಹಾನಿ ಮಾಡಿವೆ. ಕಾಡಾನೆ ಗಳ ದಾಳಿಗೆ ತೋಟದಲ್ಲಿ ಅಳವಡಿಸಲಾಗಿರುವ ನೀರಿನ ಪೈಪ್‌ಗಳು ಸಹ ಜಖಂಗೊಂಡಿವೆ.

ಗಜಪಡೆಯು ನಂತರ ಪಕ್ಕದ ಭತ್ತದ ಬಣವೆಗೂ ದಾಳಿ ಮಾಡಿ ಸುಮಾರು 15ಕ್ವಿಂಟಲ್‌ ಭತ್ತವನ್ನು ತಿಂದು ಹಾನಿ ಮಾಡಿವೆ. ಇದಲ್ಲದೇ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಗೋವಿನ ಜೋಳ, ಹತ್ತಿ ಬೆಳೆಯ ಗದ್ದೆಗಳಿಗೂ ದಾಳಿ ನಡೆಸಿ ಹಾನಿ ಮಾಡಿವೆ.

ರಾತ್ರಿ 10ಗಂಟೆಯ ಸುಮಾರಿಗೆ ಗ್ರಾಮದ ಅನತಿ ದೂರದಲ್ಲಿರುವ ಅರಣ್ಯದಿಂದ ಗುಂಪು ಗುಂಪಾಗಿ ಬಂದ ಕಾಡಾನೆಗಳನ್ನು ನೋಡಿ ಹೊಲದಲ್ಲಿ ಭತ್ತ ರಾಶಿ ಮಾಡುತ್ತಿದ್ದ ಜನರು ಭಯದಿಂದ ದೂರ ಹೋಗಿದ್ದಾರೆ. ನಂತರ ನೋಡು ನೋಡುತ್ತಿದ್ದಂತೆ ಐದಾರು ಆನೆಗಳು ಒಂದೊಂದು ಮಾರ್ಗದಲ್ಲಿ ಸಂಚರಿಸಿ ಅಕ್ಕಪಕ್ಕದ ಗದ್ದೆ, ತೋಟಗಳಿಗೆ ದಾಳಿ ನಡೆಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಂಟಿಸಲಗದ ಪುಂಡಾಟಿಕೆ: ಕಳೆದ 15ದಿನಗಳಿಂದ ಈ ಭಾಗದಲ್ಲಿ ಒಂಟಿ ಸಲಗವೊಂದು ಗ್ರಾಮದ ಹೊಲಗದ್ದೆಗಳಿಗೆ ಆಗಮಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದೆ. ಸಂಜೆಯಾಗುತ್ತಿದ್ದಂತೆ ಅರಣ್ಯ ಸನಿಹದ ಹೊಲಗದ್ದೆಗಳಿಗೆ ಒಂಟಿ ಸಲಗ ಬಂದು ಬೆಳೆಯನ್ನು ಹಾನಿ ಮಾಡುತ್ತಿದೆ. ಇದನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದರೂ  ಜಗ್ಗದ ಆನೆ ತನ್ನ ಪುಂಡಾಟವನ್ನು ತೋರುತ್ತಿದೆ.
ಕೆಲ ದಿನಗಳ ಹಿಂದೆ ಹೊಲದಲ್ಲಿದ್ದ ನಾಯಿ ಯೊಂದನ್ನು ತುಳಿದು ಸಾಯಿಸಿದೆ. ಕಾಡಾನೆಗಳ ಗುಂಪನ್ನು ಓಡಿಸಲು ಪ್ರಯತ್ನಿಸುತ್ತೇವೆ. ಆದರೆ ಒಂಟಿ ಸಲಗವನ್ನು ಓಡಿಸುವದು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಕಳೆದ 10–12ದಿನಗಳಿಂದ ಈ ಭಾಗದಲ್ಲಿ ದಾಳಿ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಜೊತೆಗೂಡಿ ಸುಮಾರು 7–8 ಕಿ.ಮೀ. ದೂರದ ಕಾಡಿಗೆ ಕಳಿಸಿದರೂ ಸಹಿತ  ಮರಳಿ ಬಂದು ದಾಳಿ ಮಾಡುತ್ತಿವೆ’ ಎಂದು ಪದ್ಮನಾಭ ತಿಳಿಸಿದರು.

‘ಸಂಜೆಯಾಗುತ್ತಿದ್ದಂತೆ ಒಂಟಿಸಲಗವೊಂದು ಹೊಲಗದ್ದೆಗಳಿಗೆ ನುಗ್ಗಿ ದಾಳಿ ಮಾಡಿತು. ಅದನ್ನು ಕಾಡಿಗೆ ಮರಳಿಸಿ ಬರುವಷ್ಟರಲ್ಲಿಯೇ 8–10ರಷ್ಟಿದ್ದ ಕಾಡಾನೆಗಳ ಗುಂಪು ತೋಟ, ಗದ್ದೆಗಳಿಗೆ ದಾಳಿ ನಡೆಸಿವೆ. ಬೆಳಗಿನ ಜಾವ ಕಾಡಾನೆಗಳನ್ನು ಕಾಡಿಗೆ ಕಳಿಸಲಾಗಿದೆ. ಕಳೆದ ಎಂಟು ದಿನಗಳಿಂದ ಕಾಡಾನೆಗಳನ್ನು ಕಾಡಿಗೆ ಕಳಿಸುವಲ್ಲಿ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ’ ಎಂದು ಗಾರ್ಡ್‌ ಚಂದ್ರಕಾಂತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT