ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು ರೋಗಗಳಿಗೆ ಮನೆಯಲ್ಲೇ ಮದ್ದು!

Last Updated 30 ಮಾರ್ಚ್ 2011, 19:30 IST
ಅಕ್ಷರ ಗಾತ್ರ

‘ಇಳುವರಿ ಹೆಚ್ಚಾಗುವುದು ಬೇಡ. ತೆಂಗು ಬೆಳೆಗೆ ಬಂದಿರುವ ನುಸಿ ಬಾಧೆ, ಸೊರಗು ರೋಗ, ಹರಳು ಉದುರುವ ರೋಗ ಹಾಗೂ ಇಲಿಗಳ ಕಾಟ ನಿಯಂತ್ರಣಗೊಂಡರೆ ಸಾಕು. ಪ್ರತಿ ಮರದಿಂದ 15 ರಿಂದ 20 ತೆಂಗಿನ ಕಾಯಿ ನಷ್ಟವಾಗುವುದು ತಪ್ಪುತ್ತದೆ. ಈ ನಷ್ಟ ತಗ್ಗಿದರೆ ಇಳುವರಿ ಹೆಚ್ಚಿದಂತೆ...’

ತೆಂಗು ಬೇಸಾಯದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಲುವಾಗಿ ನಬಾರ್ಡ್ ಮತ್ತು ಚಿಕ್ಕಮಗಳೂರಿನ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಇತ್ತೀಚೆಗೆ ಕೆ.ಬಿ.ಹಾಳ್‌ನಲ್ಲಿ ಏರ್ಪಡಿಸಿದ್ದ ‘ಸುಸ್ಥಿರ ತೆಂಗು ಕೃಷಿ ಕಾರ್ಯಾಗಾರ’ದಲ್ಲಿ ಹದಿಮೂರು ಹಳ್ಳಿಯ ತೆಂಗು ಬೆಳೆಗಾರ ಒಕ್ಕೊರಲಿನ ಅಹವಾಲು ಇದು.

‘ನುಸಿ ರೋಗ ನಿಯಂತ್ರಣಕ್ಕೆ ನುಸಿಗುಳಿಗೆಯಲ್ಲೇ ಇದೆ ಮದ್ದು’ - ಅಹವಾಲಿಗೆ ಹೀಗೊಂದು ಅಚ್ಚರಿಯ ಪ್ರತಿಕ್ರಿಯೆ ನೀಡಿದರು ಸಂಪನ್ಮೂಲ ವ್ಯಕ್ತಿ ಪ್ರಗತಿಪರ ರೈತ ಸಂತೇಶಿವರ ಬಸವರಾಜು. ಎರಡು ದಶಕಗಳಿಂದ ತಾವು ಅನು ಸರಿಸುತ್ತಿರುವ ವಿಧಾನವೊಂದನ್ನು ಅವರು ವಿವರಿಸಿದರು.

‘ಪಚ್ಚ ಕರ್ಪೂರ, ಕಚ್ಚಾಇಂಗು ಮತ್ತು ನುಸಿ ಉಂಡೆಗಳನ್ನು ಸಮ ಪ್ರಮಾಣದಲ್ಲಿ ಪ್ರತ್ಯೇಕವಾಗಿ ಪುಡಿ ಮಾಡಿ. ಮಿಶ್ರಣ ಮಾಡಬೇಕು. ಒಂದು ಟೀ ಚಮಚದಷ್ಟು ಮಿಶ್ರಣವನ್ನು ಪುಟ್ಟ ಪ್ಲಾಸ್ಟಿಕ್ ಪೊಟ್ಟಣಕ್ಕೆ ತುಂಬಿ, ನಡುವೆ ಸಣ್ಣದೊಂದು ರಂಧ್ರ ಮಾಡಬೇಕು. ಈ ಪೊಟ್ಟಣವನ್ನು ಗಳದ(ಕೋಲು) ಸಹಾಯದಿಂದ ತೆಂಗಿನ ಸುಳಿಯ ಸಮೀಪ ಇಡಬೇಕು. ಈ ಮಿಶ್ರಣ ಆವಿಯಾಗಿ, ಸುಳಿಯ ಸುತ್ತ ಪಸರಿಸಿ, ನುಸಿ ನಿಯಂತ್ರಿಸುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ಮಿಶ್ರಣ ತಯಾರಿಸಿ ನುಸಿ ಹೆಚ್ಚಿರುವ ಗಿಡಕ್ಕೆ ನೀಡಬೇಕು.

ಸತತ 2 ವರ್ಷಗಳ ಕಾಲ ಈ ವಿಧಾನ ಅನುಸರಿಸಿದರೆ ನುಸಿರೋಗ ವಾಸಿಯಾಗುತ್ತದೆ’ ಎಂದರು. ರೈತರದ್ದು ಈ ಮಾದರಿ.
 ವಿಜ್ಞಾನಿಗಳು, ‘ಒಂದು ಮರಕ್ಕೆ 50 ಕೆಜಿ ಕೊಟ್ಟಿಗೆ ಗೊಬ್ಬರ, 5 ಕೆ.ಜಿ ಬೇವಿನ ಹಿಂಡಿ ಕೊಡಬೇಕು. ಮಣ್ಣು ಪರೀಕ್ಷೆ ಮಾಡಿಸಿ, ತಜ್ಞರ ಶಿಫಾರಸ್ಸಿನಂತೆ ಅವಶ್ಯಕ ಪೋಷಕಾಂಶಗಳನ್ನು ನೀಡಬೇಕು’ ಎಂದು ವಿವರಿಸಿದರು.

ಚಿಪ್ಪುಗಳಲ್ಲಿ ನೀರು ಇಡಿ, ಇಲಿ ಕಾಟತಪ್ಪುತ್ತದೆ !: ‘ತೆಂಗಿನ ತೋಟಕ್ಕೆ ಇಲಿ, ಅಳಿಲು ಯಾಕೆ ದಾಳಿ ಮಾಡ್ತಾವೆ ಹೇಳಿ . ರೈತರನ್ನು ಪ್ರಶ್ನಿಸಿದರು ಬಸವರಾಜು. ಉತ್ತರ ಬಾರದಿದ್ದಾಗ ‘ಹೇಳ್ತೀನಿ ಕೇಳಿ’ ಎನ್ನುತ್ತಾ ಸರಳ ವಿಧಾನವೊಂದನ್ನು ವಿವರಿಸಿದರು. ಬಾಯಾರಿದಾಗ ಇಲಿ, ಅಳಿಲುಗಳು ತೋಟಗಳಿಗೆ ನುಗ್ಗಿ, ಮರ ಏರಿ ಎಳನೀರು ಹೀರುತ್ತವೆ. ತೋಟದಲ್ಲಿ ಅಲ್ಲಲ್ಲಿ ತೆಂಗಿನ ಚಿಪ್ಪುಗಳಲ್ಲಿ ನೀರು ತುಂಬಿಟ್ಟರೆ, ಬಾಯಾರಿದ ಇಲಿಗಳು ಅದೇ ನೀರನ್ನು ಕುಡಿದು ತೃಪ್ತಿಪಡುತ್ತವೆ. ಮರ ಏರುವುದನ್ನು ಮರತೇ ಬಿಡುತ್ತವೆ’ ಎಂದು ಹೇಳಿದಾಗ ರೈತರ ಮನದಲ್ಲಿ ನಗು ಜೊತೆಗೆ ‘ಎಂಥ ಸರಳ ಪರಿಹಾರ ವಿಧಾನ’ಎಂಬ ಉದ್ಘಾರ! ಇಲಿ ಕಾಟಕ್ಕೆ ಗೂಬೆ ಸಾಕ್ರಿ..! ರಾತ್ರಿ ವೇಳೆ ಇಲಿಗಳು ಮರ ಏರುತ್ತವೆ. ಬೇಕಾದ್ರೆ ನಡು ರಾತ್ರಿ ತೋಟ ಸುತ್ತಿ ನೋಡಿ ಎಂದರು ಬಸವರಾಜು. ಇಲಿ ಗೂಬೆಗಳ ಆಹಾರ. ಹಾಗಾಗಿ ತೋಟದಲ್ಲಿ ಗೂಬೆ ಸಾಕಿ’ ಎಂದು ಸಲಹೆ ನೀಡಿದರು. ಅಂದ ಹಾಗೆ ಬಸವರಾಜು ತೋಟದಲ್ಲಿ ಗೂಬೆ ಸಂಸಾರವೇ ಇದೆಯಂತೆ. ‘ಅದಕ್ಕೆ ನಮ್ಮ ತೋಟದಲ್ಲಿ ಇಲಿ ಕಾಟ ಇಲ್ಲ’ ಎನ್ನುತ್ತಾರವರು.

ಗೂಬೆ ಸಾಕುವುದಾ ...?! - ರೈತರ ಅಚ್ಚರಿಯ ಪ್ರಶ್ನೆ. ‘ನೀವು ಗೂಬೆ ಮರಿ ತಂದು ಸಾಕಬೇಕಿಲ್ಲ. ತೋಟದಲ್ಲಿ ಎತ್ತರವಾಗಿರುವ (ಅಂದಾಜು 20 ಅಡಿ )ಮರದ ಮೇಲೆ ಎರಡೂ ಕಡೆ ತೆರೆದ ಬಾಯಿಯ ಪ್ಲಾಸ್ಟಿಕ್ ಡ್ರಂ ಕೂರಿಸಿ. ಈ ಡ್ರಂ ನಲ್ಲಿ ನಡುವೆ ಅಡ್ಡಡ್ಡ ಕಡ್ಡಿ ಇಡುವ ವ್ಯವಸ್ಥೆ ಮಾಡಿ. ರಾತ್ರಿ ತೋಟಕ್ಕೆ ಬರುವ ಗೂಬೆಗಳು ಈ ಡ್ರಂ ಒಳಗಡೆ ಕಡ್ಡಿ ಮೇಲೆ ಕೂರುತ್ತವೆ (ಮಲಗುವುದಿಲ್ಲ). ಒಂದು ಗೂಬೆ ಕುಳಿತರೆ ಸಾಕು, ನಾಲ್ಕೈದು ತಿಂಗಳಲ್ಲಿ ಸಂಸಾರ ವಿಸ್ತರಿಸುತ್ತದೆ. ಇವು ರಾತ್ರಿ ವೇಳೆ ಗಸ್ತು ತಿರುಗುತ್ತಾ, ಇಲಿಗಳನ್ನು ಗುಳುಂ ಮಾಡ್ತವೆ. ತೋಟದಲ್ಲಿ ಇಲಿ ಕಾಟ ಕಡಿಮೆಯಾಗುತ್ತದೆ’ ಅನುಭವದ ಸಾರವನ್ನು ಒಂದೇ ಉಸಿರಿನಲ್ಲಿ ವಿವರಿಸಿದರು ಬಸವರಾಜು.
‘ಇಲಿ, ಅಳಿಲುಗಳ ನಿಯಂತ್ರಣಕ್ಕೆ ಮತ್ತೊಂದು ಉಪಾಯವೆಂದರೆ, ತೋಟದಲ್ಲಿ ಸೀಬೆ, ಗೋಡಂಬಿ, ಮಾವಿನಂತಹ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಪರ್ಯಾಯ ಆಹಾರ ದೊರೆಯುವುದರಿಂದ ಇಲಿ,ಅಳಿಲುಗಳು ತೆಂಗಿನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುತ್ತವೆ’ ಎಂದಾಗ, ಪ್ರಗತಿಪರ ರೈತರ ಧ್ವನಿಗೆ ವಿಜ್ಞಾನಿಗಳಾದ ಪಾಲಯ್ಯ, ಬೋರಯ್ಯ ಅವರು ಧ್ವನಿಗೂಡಿಸಿದರು.

ಹರಳು ಉದುರುವುದಕ್ಕೆ ಪರಿಹಾರ:
‘ತೇವಾಂಶದ ಕೊರತೆ, ವಾತಾವರಣದ ಏರಿಳಿತ ಮತ್ತು ಅಸಮರ್ಪಕ ಪರಾಗಸ್ಪರ್ಶ ಕ್ರಿಯೆಯಿಂದ ಹರಳು ಉದುರುತ್ತದೆ’ ಎಂದರು ಅರಸೀಕೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರಜ್ಞ ಡಾ.ಬೋರಯ್ಯ ಮತ್ತು ಕೊನೇಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಸಸ್ಯಶಾಸ್ತ್ರಜ್ಞ ಪಾಲಣ್ಣ. ಜನವರಿ, ಫೆಬ್ರವರಿ, ಜೂನ್, ಜುಲೈ ತಿಂಗಳಲ್ಲಿ ಈ ಸಮಸ್ಯೆ ಹೆಚ್ಚು. ಪ್ರತಿ ಗಿಡಕ್ಕೆ 50ರಿಂದ 100 ಗ್ರಾಂ ಬೋರೆಕ್ಸ್ ಲಘು ಪೋಷಕಾಂಶ ನೀಡಿದರೆ ಹರಳು ಉದುರುವಿಕೆ ನಿಯಂತ್ರಿಸಬಹುದು’ ಎನ್ನುವುದು ಅವರ ವೈಜ್ಞಾನಿಕ ಸಲಹೆ.

‘ಪೋಷಕಾಂಶಗಳು ತಾತ್ಕಾಲಿಕ ಉಪಶಮನ ನೀಡುತ್ತವೆ. ಕಾಯಂ ಪರಿಹಾರಕ್ಕಾದರೆ ತೋಟದಲ್ಲಿ ‘ಶೂನ್ಯ ಕೃಷಿ’ ಅಳವಡಿಸಬೇಕು’ - ಇದು ಬಸವರಾಜು ಸಲಹೆ.  ‘ಮೊದಲು ತೆಂಗಿನ ತೋಟದ ಸುತ್ತ ಹೆಬ್ಬೇವು, ಹೊಂಗೆ, ಹಿಪ್ಪೆಯಂತಹ ಕಾಡು ಗಿಡಗಳನ್ನು ಬೆಳೆಸಿ. ಗಿಡಗಳ ಪಕ್ಕದಲ್ಲೇ ಟ್ರೆಂಚ್ ಮಾಡಿ. ಕಾಡು ಗಿಡಗಳ ಸೊಪ್ಪು, ತೋಟದ ತ್ಯಾಜ್ಯವನ್ನು ಟ್ರೆಂಚ್‌ಗೆ ತುಂಬಿ. ಮಳೆ ಸುರಿದಾಗ ಈ ಟ್ರಂಚ್‌ನಲ್ಲಿ ನೀರು ಇಂಗುತ್ತದೆ. ತ್ಯಾಜ್ಯಗಳು ಕೊಳೆತು ಗೊಬ್ಬರ ವಾಗುತ್ತವೆ. ಎರೆಹುಳುಗಳು ರಾತ್ರಿಯಲ್ಲಿ ತೋಟವನ್ನು ಉಳುಮೆ ಮಾಡುತ್ತವೆ. ಕೊಳೆತ ತ್ಯಾಜ್ಯ ಗೊಬ್ಬರವಾಗುತ್ತದೆ. ಪರಿಣಾಮ, ಮಣ್ಣು ಉತ್ಕೃಷ್ಟವಾಗಿ, ತೇವಾಂಶ ನಿರಂತರವಾಗಿರುತ್ತದೆ. ಹರಳು ಉದುರುವುದು ನಿಲ್ಲುತ್ತದೆ’- ತಮ್ಮ ತೋಟದಲ್ಲಿ ಅಳವಡಿಸಿಕೊಂಡ ವಿಧಾನ ವಿವರಿಸಿದರು ಬಸವರಾಜು.

ತೆಂಗಿನ ಕೃಷಿ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂತೇಶಿವರ ಬಸವರಾಜು ಅವರನ್ನು  9482118587 ನಂಬರಿನ ಮೊಬೈಲ್ ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT