ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪದ ಮೇಲಿನ ಬದುಕು...

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಯಸ್ಸಾದೋರು, ಗರ್ಭಿಣಿ, ಎಳೆಮಕ್ಕಳಿಗೆ ಕಾಯಿಲೆ ಬಂದರೆ ತೆಪ್ಪದಲ್ಲೇ ನದಿ ದಾಟಿ ಆಸ್ಪತ್ರೆ ಸೇರಿಕೊಳ್ಳಬೇಕು. ನದಿ ದಾಟುವವರೆಗೂ ವಾಪಸ್ಸು ಬರುವ ನಂಬಿಕೆ ಇರಾಕಿಲ್ಲ. ಸರ್ಕಾರ ಅಯ್ತೋ ಇಲ್ವೋ ಗೊತ್ತಿಲ್ಲ. ಅವರ‌್ಯಾರು ಈ ಕಡೆ ಬಂದೇ ಇಲ್ಲ. ಮಕ್ಕಳಿಗೆ ಓದೋಕೂ ಕಷ್ಟ ಆಗ್ತಿದೆ.
 
ನಮ್ಮೂರಿಗೆ ಸೇತುವೆ ಕಟ್ಟಿಸಿಕೊಡಿ ಅಂದ್ರೆ ಅವರಿಗೆ ಕಿವಿನೇ ಕೇಳ್ಸಾಕಿಲ್ಲ. ನಮ್ಮ ಮಕ್ಕಳನ್ನ ಮದುವೆ ಆಗೋಕು ಪಕ್ಕದೂರಿನವರು ಹಿಂದು ಮುಂದು ನೋಡ್ತಾರೆ. ಕಾವೇರಿ- ಕಬಿನಿ ಯಾವಾಗ ನಮ್ ಮೇಲೆ ಮುನಿಸ್ಕೊತ್ತಾರೋ ಅಂತ ಭಯದಲ್ಲೇ ಜೀವನ ಸಾಗಿಸ್ತಿದೀವಿ...~

ಇದು ಯಡಕುರಿಯಾ ಗ್ರಾಮಸ್ಥರ ನೋವಿನ ನುಡಿಗಳು.ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ ಈ ಯಡಕುರಿಯಾ. ಇದು ಸತ್ತೇಗಾಲ ಗ್ರಾಮ ಪಂಚಾಯಿತಿಗೆ ಸೇರಿದೆ. ಸತ್ತೇಗಾಲದಿಂದ 2ಕಿ.ಮೀ ದೂರದಲ್ಲಿರುವ ಈ ಗ್ರಾಮದ ಸುತ್ತಲೂ ಕಾವೇರಿ- ಕಬಿನಿ ಸುತ್ತುವರೆದಿದೆ. ಆದುದರಿಂದ ಈ ಗ್ರಾಮವೊಂದು ದ್ವೀಪವಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ, ಜನಸಂಖ್ಯೆ ಸುಮಾರು 900. ಸೌಲಭ್ಯದ ದೃಷ್ಟಿಯಿಂದ ಈ ಹಳ್ಳಿಗೆ ಸಿಕ್ಕಿದ್ದು ಮಾತ್ರ ಶೂನ್ಯ.

ಈ ಗ್ರಾಮ ಇದುವರೆಗೂ ಬಸ್ಸು, ಕಾರು, ಆಟೊ, ಬೈಕ್‌ಗಳ ಮುಖವನ್ನೇ ಕಂಡಿಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು, ದಿನಗೂಲಿಗಾರರು ಸೇರಿದಂತೆ ನೆಂಟರಿಷ್ಟರು, ವೃದ್ಧರು, ರೋಗಿಗಳೂ 100 ಮೀಟರ್‌ಗೂ ಹೆಚ್ಚು ದೂರ ತೆಪ್ಪದ ಮೂಲಕವೇ ನದಿ ದಾಟಬೇಕು. ಏಕೆಂದರೆ ಗ್ರಾಮಕ್ಕೆ ಸೇತುವೆಯ ಸಂಪರ್ಕ ಇಲ್ಲ. ಇಲ್ಲಿನ ಜನರು ಬೈಕ್‌ಗಳನ್ನು ಕೊಂಡುಕೊಂಡಿದ್ರೂ ಅವುಗಳನ್ನು ಊರಿನೊಳಗೆ ತರಲಾಗದೆ ನೀರಿನ ದಡದಲ್ಲಿ ಪಾರ್ಕಿಂಗ್ ಮಾಡುತ್ತಾರೆ.

ಮರೀಚಿಕೆಯಾದ ವ್ಯಾಸಂಗ
ಹೆಚ್ಚಿನ ವ್ಯಾಸಂಗವಂತೂ ಇವರ ಪಾಲಿಗೆ ಮರೀಚಿಕೆ. ಇಲ್ಲಿ 1ರಿಂದ 5ನೇ ತರಗತಿವರೆಗೆ ಓದಲು ಸರ್ಕಾರಿ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸಕ್ಕೆ ಸಾತನೂರು ಮತ್ತು ಕೊಳ್ಳೆಗಾಲಕ್ಕೆ ಹೋಗಬೇಕು. ಓದಲೇಬೇಕೆಂಬ ಕನಸು ಹೊತ್ತ ವಿದ್ಯಾರ್ಥಿಗಳು ತೆಪ್ಪದಲ್ಲಿ  ನಿತ್ಯ ಆತಂಕದ ಪಯಣ ಮಾಡಲೇಬೇಕು.

ಕೆಲಸದ ನಡುವೆಯೂ ಪೋಷಕರು ಶಾಲೆಗೆ ಹೋಗುವ ಮಕ್ಕಳನ್ನು ದಡ ಸೇರಿಸಬೇಕು. ಕೆಲವೊಮ್ಮೆ ಈ ಮಕ್ಕಳೇ ನಾವಿಕರಾಗಿ ಪಯಣಿಸಬೇಕು. ಎಷ್ಟೋ ಮಂದಿ ಈ ಉಸಾಬರಿಯೇ ಬೇಡವೆಂದು ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಓದು ಬಿಟ್ಟವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ.

ವಧು-ವರ ಅನ್ವೇಷಣೆಯೂ ಕಷ್ಟ. ಹೊಳೆ ದಾಟಿ ಹೋಗುವ ಸಂದರ್ಭದಲ್ಲಿ ಅನಾಹುತ ಸಂಭವಿಸೀತು ಎಂಬ ಅಳುಕಿನಿಂದಲೇ ಅಕ್ಕಪಕ್ಕದ ಗ್ರಾಮಸ್ಥರು ಇಲ್ಲಿನವರೊಂದಿಗೆ ಸಂಬಂಧ ಬೆಳೆಸಲು ಹಿಂದು ಮುಂದು ನೋಡುತ್ತಾರೆ. ಇದರಿಂದ ಮದುವೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.

ಇನ್ನು ಆಸ್ಪತ್ರೆ ಕನಸಂತೂ ಮಾರುದೂರ. ಎಷ್ಟೇ ಗಂಭೀರ ಅನಾರೋಗ್ಯಕ್ಕೆ ತುತ್ತಾದರೂ ತೆಪ್ಪವೊಂದೇ ರಾಜಮಾರ್ಗ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೂ ಲಾಟೀನು ಇಲ್ಲವೇ ಬ್ಯಾಟರಿ ದೀಪ ಹಿಡಿದು ನದಿ ದಾಟುತ್ತಾರೆ.
 
ದಡ ಸೇರಿದ ಮೇಲೆಯೂ ವಾಹನಕ್ಕಾಗಿ ಕಾಯಬೇಕು. ವಾಹನ ಸಂಪರ್ಕವಿಲ್ಲದೆ ಈ ಊರಿಗೆ ದಿನ ಪತ್ರಿಕೆಗಳೇ ಬರುವುದಿಲ್ಲ.

ಯಾವುದೇ ವಸ್ತುಗಳನ್ನು ಈ ಊರಿಂದ ಹೊರಗೆ ತೆಗೆದುಕೊಂಡು ಹೋಗಿ ಬರುವುದು ಕಷ್ಟ. ಭಾರದ ವಸ್ತುಗಳನ್ನು ತೆಪ್ಪದಲ್ಲಿ ಸಾಗಿಸುವುದು ಸುಲಭದ ಮಾತಲ್ಲ. ಆದರೆ, ಮನೆ ಕಟ್ಟಲು ಬೇಕಾಗಿರುವ ಇಟ್ಟಿಗೆ, ಮರಳು, ಸಿಮೆಂಟ್, ಜಲ್ಲಿಕಲ್ಲು, ಮರಗಳು ಸೇರಿದಂತೆ ಇನ್ನಿತರ ಸಲಕರಣೆಗಳನ್ನು ತೆಪ್ಪದಲ್ಲೇ ಸಾಗಿಸಬೇಕು.

ನೀರ ಮೇಲಿನ ಸವಾರಿ
`ನಮ್ಮದು ತೆಪ್ಪದ ಮೇಲಿನ ಬದುಕು. ಯಾವಾಗ ಏನಾಗುತ್ತೋ ಗೊತ್ತಿಲ್ಲ. ನಮ್ಮೂರಿಗೆ ಒಂದು ಹುಲ್ಲು ಕಡ್ಡಿ ತರಬೇಕಿದ್ದರೂ ತೆಪ್ಪ ಬೇಕು. ಅಷ್ಟೇ ಅಲ್ಲ ಕಾವೇರಿ ಮೈದುಂಬಿ ಹರಿದಾಗ ಈ ಗ್ರಾಮ ಪ್ರವಾಹಕ್ಕೂ ತುತ್ತಾಗುತ್ತೆ. 1991ರಲ್ಲಿ ಪ್ರವಾಹಕ್ಕೆ ಸಿಲುಕಿ ಬೀದಿಗೆ ಬಿದ್ದ ನಮ್ಮವರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ನೀಡಿದ್ದರು. ಸೇತುವೆ ಕಟ್ಟಿಕೊಡ್ತೀವಿ ಅಂತಾನೂ ಭರವಸೆ ನೀಡಿದ್ರು~ ಎಂದು ಗ್ರಾಮಸ್ಥ ಉಮೇಶ್ ಹೇಳುತ್ತಾರೆ.

 `2005ರಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಊರಿನ ಸ್ವಲ್ಪ ಭಾಗ ಜಲಾವೃತಗೊಂಡಿತ್ತು. ಆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್. ಮಹಾದೇವ್ ಪ್ರಸಾದ್ ಮತ್ತು ಕೊಳ್ಳೆಗಾಲ ತಾಲ್ಲೂಕಿನ ಶಾಸಕರಾಗಿದ್ದ ಬಾಲರಾಜು ಅವರು ಒಂದು ಬೋಟನ್ನು ಮಂಜೂರು ಮಾಡಿದ್ದರು. ಸಮರ್ಪಕ ಡೀಸೆಲ್ ಪೂರೈಕೆಯಿಲ್ಲದೆ ಸರ್ಕಾರ ಕರುಣಿಸಿದ ಒಂದೇ ಒಂದು ಬೋಟ್ ಕೂಡ ಉಪಯೋಗಕ್ಕೆ ಅಷ್ಟಾಗಿ ಬರುತ್ತಿಲ್ಲ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸುತ್ತಲೂ ನೀರು ಮಧ್ಯದಲ್ಲಿ ದ್ವೀಪದಂತೆ ನಮ್ಮೂರು. ಇಷ್ಟು ಚಂದದ ನಿಸರ್ಗ ಸೌಂದರ್ಯವನ್ನು ಮನಸಾರೆ ಸವಿಯುವ ಭಾಗ್ಯ ನಮಗಿಲ್ಲ. ನಾವೆಲ್ಲರೂ ಪ್ರತಿನಿತ್ಯ ಪ್ರಾಣದ ಹಂಗನ್ನೂ ತೊರೆದು ನೀರಿನೊಂದಿಗೆ ಬದುಕುತ್ತಿದ್ದೇವೆ. ಸೂರ್ಯಾಸ್ತವಾಗುವ ಮುನ್ನವೇ ಊರು ಸೇರಿಕೊಳ್ಳಬೇಕು. ಕತ್ತಲಾದರಂತೂ ಊರಿನ ದಡ ಸೇರುವ ತನಕ ಕಾವೇರಿ-ಕಬಿನಿ ಮುನಿಸಿಕೊಂಡಾರು ಎಂದು ಮನದಲ್ಲೇ ಮನೆ ದೇವರ ನೆನೆದು ಹೋಗುತ್ತೇವೆ~ ಎಂದು ವಿದ್ಯಾರ್ಥಿ ಬಸವಣ್ಣ ಪ್ರತಿಕ್ರಿಯಿಸಿದರು. 

ಈ ಹಳ್ಳಿಯ ಸುತ್ತೆಲ್ಲಾ ನೀರು. ಕಣ್ಣು ಹಾಯಿಸಿದಷ್ಟೂ ಹಸಿರಿನ ರಕ್ಷೆ. ಹರಿಯುವ ನೀರಿನ ಜುಳುಜುಳು ಸದ್ದಿಗೆ ಕಿವಿಯೊಡ್ಡಿದರೆ ಮನಸ್ಸು ಕುಣಿದಾಡುತ್ತದೆ. ತಂಪು ಗಾಳಿ, ಹಕ್ಕಿಗಳ ಕಲರವ ಕೇಳುತ್ತಾ ಇಲ್ಲಿ ಬದುಕುವುದೇ ಚೆನ್ನ. ಈ ದ್ವೀಪ ನಗರಿಯ ಸೌಂದರ್ಯ ನೋಡಿದಷ್ಟೂ ನೋಡಬೇಕೆನ್ನಿಸುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಗಾಳಿಯೂ ಇಲ್ಲದೆ, ಗಿಜಿಗುಡುವ ವಾಹನಗಳ ಪೀಕಲಾಟವೂ ಇಲ್ಲದೆ ಬೆಚ್ಚಗಿರುವ ಈ ಹಳ್ಳಿ ಎಂದರೆ ಭೂಲೋಕ ಸ್ವರ್ಗ.

ಕಾವೇರಿ-ಕಬಿನಿ ಒಟ್ಟಿಗೆ ಇಲ್ಲಿ ಹರಿಯುತ್ತಿವೆ. ಇದನ್ನು ನೋಡುವುದು ಕಣ್ಣಿಗೆ ಹಬ್ಬ. ಆದರೆ, ಇಲ್ಲಿಯ ಜನರ ಪಾಡು ಮಾತ್ರ ಹೇಳತೀರದು. ಊರಿನ ಸುತ್ತಲೂ ನೀರು. ಮಳೆಗಾಲದಲ್ಲಂತೂ ಹರೋಹರ. ಹೊಳೆ ದಾಟಿ ಹೋದರೇನೇ ಬದುಕು. ಇಲ್ಲದಿದ್ದರೆ ಉಪವಾಸವೇ ಗತಿ.

ಮನೆ ಬಿಟ್ಟ ಮಕ್ಕಳು ವಾಪಸ್ ಬರುವವರೆಗೂ ಎದೆಯಲ್ಲಿ ಢವಢವ. ಹಾಗೆಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಶಾಲೆಗೆ ಕಳುಹಿಸಿದರೆ ವಾಪಸಾಗುವ ಧೈರ್ಯವಿಲ್ಲ. `ದಯವಿಟ್ಟು ಸೇತುವೆ ನಿರ್ಮಿಸಿಕೊಡಿ~ ಎಂಬ ಇಲ್ಲಿಯ ಜನರ ಮೊರೆಗೆ ಇನ್ನಾದರೂ ಅಧಿಕಾರಿಗಳು ಸ್ಪಂದಿಸುವರೇ...?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT