ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪದಲ್ಲಿ ಜಾರಿ ಬಿದ್ದ ಗೋವಾ ಸಿಎಂ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಯಚೂರು: ದೇವರ ದರ್ಶನ ಪಡೆಯಲು ದೂರದ ಗೋವಾದಿಂದ ಬೆಳಿಗ್ಗೆಯೇ ಕುಟುಂಬ ಸದಸ್ಯರೊಂದಿಗೆ ಬಂದ ಅಲ್ಲಿನ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ಸಾಗುವಾಗ ತೆಪ್ಪದಲ್ಲಿಯೇ ಬಿದ್ದು ಎದ್ದು ಸಾವರಿಸಿಕೊಂಡ ಘಟನೆ ಗುರುವಾರ ನಡೆಯಿತು!

ತಾಲ್ಲೂಕಿನ ಕುರವಕಲಾ ಗ್ರಾಮದ ಶ್ರೀಪಾದಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನಕ್ಕೆ ಗುರುವಾರ ಗೋವಾದಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಮಧ್ಯಾಹ್ನ 12ಕ್ಕೆ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

ದೇವಸ್ಥಾನಕ್ಕೆ ತೆರಳುವಾಗ ಕೃಷ್ಣಾ ನದಿಯ ಆಚೆ ದಡದಿಂದ ಈಚೆ ದಡದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಬರಲು ಯಾವುದೇ ಸೇತುವೆ, ಸಂಪರ್ಕ ಮಾರ್ಗವಿಲ್ಲ. ಹೀಗಾಗಿ ನದಿಯಲ್ಲಿ ತೆಪ್ಪದಲ್ಲಿ ಕುಳಿತು ಸಾಗಬೇಕು. ತೆಪ್ಪದಲ್ಲಿ ತಮ್ಮ ಕುಟುಂಬದ ಸದಸ್ಯರು, ಭದ್ರತಾ ಸಿಬ್ಬಂದಿಯೊಂದಿಗೆ ಸಾಗುತ್ತಿದ್ದಾಗ ತೆಪ್ಪದಲ್ಲಿಯೇ ಜಾರಿ ಬಿದ್ದು ಸಾವರಿಸಿಕೊಂಡರು.

ಸರ್ಕಾರದ ನಿರ್ಲಕ್ಷ್ಯ:  ಆಂಧ್ರಪ್ರದೇಶದ ಜುರಾಲಾ ಜಲಾಶಯ ನಿರ್ಮಾಣದ ಹಿನ್ನೆಲೆಯಲ್ಲಿ ಮುಳುಗಡೆಯಾಗುವ ರಾಯಚೂರು ತಾಲ್ಲೂಕಿನ ಕುರವಕಲಾ, ಕುರವಕುರ್ದಾ, ನಾರದಗಡ್ಡೆ ಗ್ರಾಮಕ್ಕೆ ಜನತೆಯ ಅನುಕೂಲಕ್ಕಾಗಿ ಮೂರು ಸೇತುವೆ ನಿರ್ಮಾಣಕ್ಕೆ ಒಪ್ಪಿಕೊಂಡು 22 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರಕ್ಕೆ 2002ರಲ್ಲಿಯೇ ದೊರಕಿಸಿತ್ತು. ಆಂಧ್ರ ಸರ್ಕಾರ ದೊರಕಿಸಿದ ಈ 22 ಕೋಟಿ ಇಂದಿಗೂ ರಾಯಚೂರು ಜಿಲ್ಲಾಡಳಿತ ಖಾತೆಯಲ್ಲಿ ಕೊಳೆಯುತ್ತಿದೆ.

ಈ ಸೇತುವೆ ನಿರ್ಮಾಣಕ್ಕೆ ನಿರಂತರ ಒತ್ತಡ, ಒತ್ತಾಯ ಗ್ರಾಮಸ್ಥರಿಂದ ಇದ್ದರೂ ಈವರೆಗೂ ಕರ್ನಾಟಕ ಸರ್ಕಾರ ಕಣ್ತೆರೆದು ನೋಡಲಿಲ್ಲ. ಈಚೆಗೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದರೂ ಗುತ್ತಿಗೆದಾರರು ಬರುತ್ತಿಲ್ಲ. ಕಾರಣ ಕಾಮಗಾರಿ ಅಂದಾಜು ಮೊತ್ತ ಅತ್ಯಂತ ಕಡಿಮೆ ಎಂಬುದು. ಹೀಗಾಗಿ ದಿನದಿಂದ ದಿನಕ್ಕೆ ನೆನೆಗುದಿಗೆ ಬೀಳುತ್ತ ಬಂದಿದೆ.

ಈ ಸೇತುವೆ ನಿರ್ಮಾಣಗೊಂಡಿದ್ದರೆ ಕರ್ನಾಟಕಕ್ಕೆ ಬಂದ ಕಾಮತ್ ಅವರು ತೆಪ್ಪದಲ್ಲಿ ಸಾಗಬೇಕಿರಲಿಲ್ಲ. ಜಾರಿ ಬಿದ್ದು ತೊಂದರೆ ಪಡಬೇಕಿರಲಿಲ್ಲ. ಆಂಧ್ರ ಮುಖ್ಯಮಂತ್ರಿ ಹಣ ಕೊಟ್ರು. ಕರ್ನಾಟಕ ಮುಖ್ಯಮಂತ್ರಿಗಳು ಸೇತುವೆ ಕಟ್ಟಲಿಲ್ಲ. ದೇವರ ದರ್ಶನಕ್ಕೆ ಬಂದ ಗೋವಾ ಮುಖ್ಯಮಂತ್ರಿಗಳು ತೆಪ್ಪದಲ್ಲಿ ಮಗುಚಿಬಿದ್ದರು!

ಈ ದೇವಸ್ಥಾನಕ್ಕೆ ಅನೇಕ ಪ್ರತಿಷ್ಠಿತರು ಆಗಾಗ ಭೇಟಿ ನೀಡುತ್ತಾರೆ. ಸುತ್ತಮುತ್ತಲಿನ ಗ್ರಾಮದ ಜನತೆ ನಿತ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಸರ್ಕಾರ ಇನ್ನಾದರೂ ಶೀಘ್ರ ಕಾಮಗಾರಿ ಆರಂಭಿಸಬೇಕು. ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರದೇ ಇದ್ದರೆ ಭೂ ಸೇನಾ ನಿಗಮ, ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಕೈಗೊಂಡು ಸೇತುವೆ ನಿರ್ಮಿಸಬೇಕು ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ರಾಯಪ್ಪ ನಾಯಕ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT