ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಯ್ಯಂ ಆವೇಶ: ಕೇರಳ ಸ್ಪರ್ಧಿ ಅಸ್ವಸ್ಥ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕೈಯಲ್ಲಿ ಹಿಡಿದ ದೀವಟಿಕೆಯಲ್ಲಿ ಉರಿಯುವ ಬೆಂಕಿ. ಮುಖದ ತುಂಬಾ ರೌದ್ರ ಭಾವ. ವೇದಿಕೆಯನ್ನಿಡೀ ಆವರಿಸಿಕೊಂಡ ದೈವಗಳ ಆವೇಶಭರಿತ ನರ್ತನ...

ಕೇರಳದ ಯುವ ತಂಡ ಪ್ರದರ್ಶಿಸಿದ `ತೆಯ್ಯಂ~ ಜಾನಪದ ನೃತ್ಯದ ಆರ್ಭಟ-ಆವೇಶಕ್ಕೆ `ಹವಾನಿಯಂತ್ರಿತ~ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನೆರೆದ ಪ್ರೇಕ್ಷಕರೂ ಸಣ್ಣಗೆ ಬೆವರಿದರು.

17ನೇ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ನಗರದಲ್ಲಿ ನಡೆಯುತ್ತಿರುವ ಜಾನಪದ ಸ್ಪರ್ಧೆಗಳು ಮೂರನೇ ದಿನವಾದ ಭಾನುವಾರವೂ ಪ್ರೇಕ್ಷಕರ ಕುತೂಹಲ ತಣಿಸಿದವು. ಪ್ರತಿಯೊಂದು ರಾಜ್ಯದ ಜಾನಪದ ಕಲೆಗಳ ಪ್ರದರ್ಶನವೂ ಒಂದನ್ನೊಂದು ಮೀರಿಸುವಂತಿದ್ದವು. ನೃತ್ಯದ ಸಂಯೋಜನೆ, ರಂಗಕ್ಕಿಳಿಸುವಾಗಿನ ತಲ್ಲೆನತೆಗೆ ಕಡಲ ತಡಿಯ ಕಲಾಪ್ರಿಯರು ಮಾರುಹೋದರು. ಕೇರಳ ತಂಡದ ಪ್ರದರ್ಶನ ವೀಕ್ಷಿಸಲು ಕರಾವಳಿ ಮಂದಿ ಬೆಳಿಗ್ಗೆಯಿಂದಲೇ ಕುತೂಹಲದಿಂದ ಕಾದಿದ್ದರು. ಸಭಿಕರು ಬೆಚ್ಚಿ ಬೀಳುವಂತೆ ಈ ತಂಡ ಪ್ರದರ್ಶನ ನೀಡಿತು.

ನರ್ತಿಸುತ್ತಲೇ ಅಸ್ವಸ್ಥರಾದರು: `ತೆಯ್ಯಂ~ ನೃತ್ಯ ಮುಗಿಯಲು ಐದು ನಿಮಿಷ ಬಾಕಿ ಇದೆ ಎನ್ನುವಾಗ ನಾಟಕೀಯ ಬೆಳವಣಿಗೆ! ಮಾನವ ಪಿರಮಡ್ ರಚಿಸುವ ತರಾತುರಿಯಲ್ಲಿದ್ದಾಗಲೇ ದಣಿದ ಯುವತಿಯೊಬ್ಬಳು ಪಿರಮಿಡ್ ಮೇಲಿನಿಂದ ಏಕಾಏಕಿ ಜಾರಿ ಬಿದ್ದಳು. ಪ್ರದರ್ಶನದಲ್ಲಿ ತನ್ಮಯರಾಗಿದ್ದ ತಂಡದ ಸದಸ್ಯರು ಸ್ವಲ್ಪವೂ ವಿಚಲಿತರಾಗದೆ ನೃತ್ಯ ಮುಂದುವರಿಸಿದರು. ಪ್ರದರ್ಶನ ಮುಕ್ತಾಯಗೊಂಡ ಬಳಿಕವೂ ತಂಡದ ಮೂವರು ಯುವತಿಯರು ಪ್ರಜ್ಞೆ ತಪ್ಪಿದರು. ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಯಿತು. 
ದೇವರ ಸ್ವಂತ ನಾಡಿನ ಜಾನಪದ ಕಲೆ ಹಾಗೂ ನಂಬಿಕೆಯೂ ಆಗಿರುವ `ತೆಯ್ಯಂ~ ತುಳುನಾಡಿನ ಭೂತಾರಾಧನೆಯನ್ನೇ ಸ್ವಲ್ಪ ಮಟ್ಟಿಗೆ ಹೋಲುವಂತಹುದು. 

`ತೆಯ್ಯಂ~ ಒಂದು ಆರಾಧನಾ ಕಲೆ. ಹಾಗಾಗಿ ತಂಡದ ಸದಸ್ಯರು ತೆಯ್ಯಂ ಪ್ರದರ್ಶಿಸುವವರೆಗೂ ಉಪವಾಸ ಇರುತ್ತಾರೆ. ಇದರಿಂದ ತಂಡದ ಸದಸ್ಯರು ಸಹಜವಾಗಿ ಬಳಲಿದ್ದರು~ ಎಂದು ಕೇರಳ ಮೂಲದವರೊಬ್ಬರು `ಪ್ರಜಾವಾಣಿ~ಗೆ ವಿವರಿಸಿದರು.

ರಾಜಸ್ತಾನಿ ತಂಡ ಆದಿವಾಸಿ ಜನರ ಲೋಕ ನೃತ್ಯ ದೇಸೀತನದ ವಯ್ಯಾರ ತೆರೆದಿಟ್ಟಿತು. ಶರದ್ ಪೂರ್ಣಿಮೆಯ ರಾತ್ರಿ ತಮ್ಮ ನಾಡಿನ ಮಂದಿ ಆಚರಿಸುವ ಕೋಲಾಟ ನೃತ್ಯದ ಮೂಲಕ ಸಭಿಕರ ಚಿತ್ತಾಪಹಾರ ಮಾಡಿದ್ದು ಡಿಯು ಮತ್ತು ದಾಮನ್‌ನ ಯುವ ಬಳಗ. ಆ ನೃತ್ಯದಲ್ಲಿ ಎಲ್ಲ ಸಂಸ್ಕೃತಿಗಳ ಸಮ್ಮಿಲನವನ್ನು ಕಾಣಬಹುದಾಗಿತ್ತು. ಆದರೆ ನೃತ್ಯಕ್ಕೆ ತಕ್ಕದಾದ ಹಾವಭಾವದ ಕೊರತೆ ಇತ್ತು. 

ಪಂಚ ನದಿಗಳ ನಾಡಿನಿಂದ ಬಂದ ಚಂಡೀಗಢದ ಯುವ ಸರ್ದಾರ್ಜಿಗಳ ಲವಲವಿಕೆಯ ಕುಣಿತಕ್ಕೆ ಸಭಿಕರಿಂದ ಸಿಳ್ಳೆ, ಚಪ್ಪಾಳೆಯ ಪ್ರತಿಧ್ವನಿ. `ಬಲ್ಲೆ.. ಬಲ್ಲೆ..~ ಎಂದು ಕುಣಿಯುತ್ತಾ ಮೈಮರೆತ ಸರ್ದಾರ್ಜಿಗಳು ಇಡೀ ವೇದಿಕೆಯನ್ನು ಆವರಿಸಿಕೊಂಡರು. ಬಣ್ಣದ ವೇಷಭೂಷಣ ನೃತ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.  

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಾಡಿನಿಂದ ಆಗಮಿಸಿದ ಗುಜರಾತಿ ತಂಡ ಪ್ರದರ್ಶನಕ್ಕೆ ಆಯ್ದುಕೊಂಡಿದ್ದು ಗರ್ಬಾ ನೃತ್ಯ. ಆರಂಭದಲ್ಲಿ ವೇಗವಾಗಿ, ಬಳಿಕ ನಿಧಾನವಾಗಿ ಹೆಜ್ಜೆ ಹಾಕುವುದು ಈ ನೃತ್ಯದ ವೈಶಿಷ್ಟ್ಯ. ರಾಧಾಕೃಷ್ಣನ ಸ್ತುತಿಗೀತೆಗೆ ಅವರು ಮೋಹಕ ನರ್ತನ ಪ್ರದರ್ಶಿಸಿದರು.  ಅಂಡಮಾನ್-ನಿಕೋಬಾರ್ ತಂಡದ ಸದಸ್ಯರು ಆದಿವಾಸಿಗಳ ಸರಳ ವೇಷಭೂಷಣ ಮೂಲಕ ಗಮನ ಸೆಳೆದರು. ತ್ರಿಪುರ ತಂಡ ಪ್ರದರ್ಶಿಸಿದ `ನವನ್ನ~ ನೃತ್ಯ ನಾಡಿನ ಕೃಷಿ ಸಂಸ್ಕೃತಿಯ ಶ್ರೀಮಂತಿಕೆ ಕಟ್ಟಿಕೊಟ್ಟಿತು. ಈ ನೃತ್ಯದಲ್ಲಿ ಸಂಗೀತಕ್ಕೇ ಪ್ರಾಧಾನ್ಯತೆ. ಅದಕ್ಕೆ ತಕ್ಕದಾದ ಭಾವಾಭಿಯವೂ ಮನಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT