ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ ತಡೆ: ಪ್ಯಾನ್ ಅಸ್ತ್ರ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ಹಣಕಾಸು ವರ್ಷದಿಂದ ದೇಶದಲ್ಲಿ ಕಪ್ಪುಹಣ, ತೆರಿಗೆ ವಂಚನೆ ಹಾಗೂ  ಹಣಕಾಸು ಅಪರಾಧ ವಹಿವಾಟಿಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆಗೆ `ಪ್ಯಾನ್ ಕಾರ್ಡ್~ ಅತ್ಯಂತ ಪರಿಣಾಮಕಾರಿ ಸಾಧನವಾಗುವ ಸಾಧ್ಯತೆಗಳಿವೆ.

ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಿರುವ ಇತ್ತೀಚಿನ ನಿರ್ದೇಶನವೊಂದರಲ್ಲಿ ದೊಡ್ಡ ಮೊತ್ತದ ಆರ್ಥಿಕ ವಹಿವಾಟುಗಳನ್ನು ನಡೆಸುವಾಗ `ಪ್ಯಾನ್ (ಶಾಶ್ವತ ಖಾತೆ  ಸಂಖ್ಯೆ)  ಸಲ್ಲಿಸದೆ ವಂಚಿಸಿದವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆ ತಿಳಿಸಿದೆ.

`ತೆರಿಗೆ ವಂಚಿಸುವ ವ್ಯಕ್ತಿಗಳು ತಮ್ಮ ಭಾರಿ ಪ್ರಮಾಣದ ಬಂಡವಾಳ ಹೂಡಿಕೆ, ಠೇವಣಿ ಹಾಗೂ ವೆಚ್ಚಗಳ ಮೂಲ ಮತ್ತು ಆದಾಯ ತೆರಿಗೆ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಈ ವಿವರವನ್ನು ನೀಡಲಾಗಿದೆಯೇ ಎಂಬುದನ್ನು ಸಮಂಜಸವಾಗಿ ನಮೂದಿಸುವುದು ಅಗತ್ಯ~ ಎಂದೂ ಸಿಬಿಡಿಟಿ ತನ್ನ ಆದೇಶದಲ್ಲಿ ಹೇಳಿದೆ.

ಇದರ ಅನ್ವಯ ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳುವುದಕ್ಕೆ 11 ದಿನ ಮುಂಚಿತವಾಗಿ, ಅಂದರೆ ಇದೇ (2012) ಮಾರ್ಚ್ 20ರಂದು ಈ ಕಾರ್ಯಾಚರಣೆ ಕೊನೆಗೊಳ್ಳಲಿದೆ. ತೆರಿಗೆ ವಂಚಿಸಿದವರು ಇದೇ ಮಾರ್ಚ್ 31ರೊಳಗೆ ತೆರಿಗೆ ಬಾಕಿ ಮತ್ತು ಆದಾಯ ತೆರಿಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲು `ಸಿಬಿಡಿಟಿ~ ಸೂಚಿಸಿದೆ. ಇವರಲ್ಲಿ ಅನೇಕರು ಉನ್ನತ ಮಟ್ಟದ ಸಮಿತಿಯ ತನಿಖಾ ವರದಿಯಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳಾಗಿದ್ದಾರೆ. `ಪ್ಯಾನ್~ ಹೊಂದಿಲ್ಲದಿರುವುದು ಅಥವಾ ನಮೂದಿಸದಿರುವುದರ ವಿರುದ್ಧ ದಂಡ ಶಿಕ್ಷೆ ವಿಧಿಸುವತ್ತಲೂ ಸಿಬಿಡಿಟಿ ಚಿಂತಿಸಿದೆ.  

ಭಾರಿ ತೆರಿಗೆ ವಂಚನೆ: ಸುಮಾರು ರೂ 1,01,836 ಕೋಟಿಗಳಷ್ಟು ಮೌಲ್ಯದ ತೆರಿಗೆ ಪಾವತಿಸದೆ ತಪ್ಪಿಸಿಕೊಂಡಿರುವ ತೆರಿಗೆದಾರರನ್ನು ಪತ್ತೆಹಚ್ಚಲು ಕಳೆದ ವರ್ಷ `ಸಿಬಿಡಿಟಿ~ ನೇಮಿಸಿದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕ್ರಮ  ಕೈಗೊಳ್ಳಲಾಗಿದೆ.  ಪತ್ತೆಯಾಗದ ಮತ್ತು ವಸೂಲಿಯಾಗದ ಸಂಪತ್ತಿಗೆ ಸಂಬಂಧಿಸಿದ ಆದಾಯ ತೆರಿಗೆ ಬಾಕಿ ಪ್ರಕರಣಗಳನ್ನು ಪರಿಶೀಲಿಸಲು ಆದಾಯ ತೆರಿಗೆ ಪ್ರಧಾನ ನಿರ್ದೇಶನಾಲಯ (ಆಡಳಿತ) ದಡಿ ಈ ಸಮಿತಿ ರಚಿಸಲಾಗಿತ್ತು.

ಈ ಕಾರ್ಯಾಚರಣೆಯನ್ನು ಯೋಜಿಸಿದವರಲ್ಲಿ ಪ್ರಮುಖರಾದ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು, ದೇಶದಾದ್ಯಂತ ನಡೆದ ಆದಾಯ ತೆರಿಗೆ ದಾಳಿಗಳ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ. ಫೆಬ್ರುವರಿ 20ರಂದು ಆರಂಭವಾಗುವ ಕಾರ್ಯಾಚರಣೆಯಲ್ಲಿ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಲಿರುವ `ಪ್ಯಾನ್~ ಕಾರ್ಡ್‌ನ ಅಂಕಿ-ಅಂಶಗಳು ಇಲಾಖೆಯ ದತ್ತಾಂಶಗಳ ಬ್ಯಾಂಕ್‌ನ  ಕಂಪ್ಯೂಟರ್‌ನಲ್ಲಿ ದಾಖಲಾಗುತ್ತವೆ.
 
ಈ ವ್ಯವಸ್ಥೆಗೆ ಹೊಸ `ಪ್ಯಾನ್~ಗಳನೂ ಸೇರಿಸಲಾಗುತ್ತದೆ. ಈ ಗುರುತಿನಿಂದ ಎಲ್ಲ ಕ್ರೆಡಿಟ್/ಡೆಬಿಟ್ ಕಾರ್ಡುಗಳು, ಬ್ಯಾಂಕಿಂಗ್ ಹಾಗೂ ಇತರ ಹಣಕಾಸು ವ್ಯವಹಾರ ವಿವರಗಳ ಪಟ್ಟಿಯು ತನಿಖಾಧಿಕಾರಿಗಳಿಗೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

`ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಒದಗಿಸಿರುವ 10 ಅಂಕಿಗಳ `ಪ್ಯಾನ್~ ಕಾರ್ಡ್ ವ್ಯವಸ್ಥೆಯು ತೆರಿಗೆ ವಂಚನೆ ಮತ್ತು ಹಣಕಾಸು ಅಪರಾಧವನ್ನು ಪತ್ತೆ ಹಚ್ಚಲು ಇಲಾಖೆಗೆ ಪ್ರಮುಖ ಸಾಧನವಾಗಲಿದೆ. ಇದು ತೆರಿಗೆದಾರರಿಗೆ ತೊಂದರೆ ಕೊಡದೆ ತನಿಖೆ ನಡೆಸಲು ಅಧಿಕಾರಿಗಳಿಗೆ ನೆರವಾಗುವ ಪಾರದರ್ಶಕ ವ್ಯವಸ್ಥೆಯಾಗಲಿದೆ. ಪ್ರತಿಯೊಬ್ಬ ತೆರಿಗೆದಾರನ ಹಣಕಾಸು ವ್ಯವಹಾರಗಳ ಅಂಕಿ-ಅಂಶಗಳನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಒದಗಿಸಿದಂತಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 `ಪ್ಯಾನ್~ ಹೊಂದಿದ ತೆರಿಗೆದಾರರು ತಮ್ಮ `ಪ್ಯಾನ್~ ಸಂಖ್ಯೆಯನ್ನು ಹಣಕಾಸು ವ್ಯವಹಾರದಲ್ಲಿ  ನಮೂದಿಸುವುದನ್ನು ಕಡ್ಡಾಯವಾಗಲಿದೆ. `ಪ್ಯಾನ್~ ಹೊಂದದವರು ತಕ್ಷಣ ಅದಕ್ಕಾಗಿ ಅರ್ಜಿ ಸಲ್ಲಿಸಿ ಪಡೆಯುವಂತೆ ಮಾಡಲಿದೆ. ರೂ 10 ಕೋಟಿಗೂ ಹೆಚ್ಚಿನ ತೆರಿಗೆ ಪಾವತಿಸದವರ ಹೆಸರನ್ನು `ಸ್ನೇಹಿಯಲ್ಲದ ಕ್ರಮ~ವೆಂಬ ಕಾರಣಕ್ಕಾಗಿ ಪ್ರಕಟಿಸದಿರಲು ಸಹ ಇಲಾಖೆ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT