ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಸಂಗ್ರಹ ರೂ.10.38ಲಕ್ಷ ಕೋಟಿ

ರಫ್ತು ಚೇತರಿಕೆ; ಚಾಲ್ತಿ ಖಾತೆ ಕೊರತೆ ತಗ್ಗುವ ನಿರೀಕ್ಷೆ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ರೂ. 10.38 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು, ನಿಗದಿಪಡಿಸಿದ್ದ ಗುರಿ ತಲುಪಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರ ತೆರಿಗೆ ಸಂಗ್ರಹವು ನಿರೀಕ್ಷಿತ ಮಟ್ಟಕ್ಕಿಂತ ತುಸು ತಗ್ಗಿದೆ. ಆದರೆ, ಪರೋಕ್ಷ ತೆರಿಗೆ ಸಂಗ್ರಹ ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಿದೆ. ಇದರಿಂದ ಒಟ್ಟಾರೆ ವರಮಾನದಲ್ಲಿ ಶೇ 16.7ರಷ್ಟು ಏರಿಕೆ ಕಂಡುಬಂದಿದೆ ಎಂದರು.

2012-13ನೇ ಸಾಲಿನಲ್ಲಿ ನೇರ ತೆರಿಗೆಯ ಮೂಲಕರೂ5.65ಲಕ್ಷ ಕೋಟಿ ಮತ್ತು ಪರೋಕ್ಷ ತೆರಿಗೆ ಮೂಲಕರೂ4.69 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಸರ್ಕಾರ ನಿಗದಿಪಡಿಸಿತ್ತು. ಈ ಗುರಿ ತಲುಪಲಾಗಿದೆ. ಜತೆಗೆ ಒಟ್ಟಾರೆ ವೆಚ್ಚವೂರೂ14.30 ಲಕ್ಷ ಕೋಟಿಗೆ ತಗ್ಗಿದೆ ಎಂದರು.

ಒಂದು ಲಕ್ಷ ಜನರಿಗೆ ಆದಾಯ ತೆರಿಗೆ ಇಲಾಖೆ ಪತ್ರ ಮುಖೇನ ಆದಾಯ ತೆರಿಗೆ ಲೆಕ್ಕಪತ್ರ ವಿವರ     (ರಿಟರ್ನ್ಸ್) ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದರಿಂದ ಒಟ್ಟಾರೆ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿದೆ. 2012-13ನೇ ಸಾಲಿನಲ್ಲಿ ಎಲೆಕ್ಟ್ರಾನಿಕ್ ವಿಧಾನದ ರಿಟರ್ನ್ಸ್ ಸಲ್ಲಿಸಿದವರ ಸಂಖ್ಯೆ  50 ಲಕ್ಷದಷ್ಟು ಹೆಚ್ಚಿದ್ದು ಒಟ್ಟು ಸಂಖ್ಯೆ 2.14 ಕೋಟಿಗೆ ಏರಿಕೆ ಕಂಡಿದೆ ಎಂದರು.

ಸರ್ಕಾರದ ವಿತ್ತೀಯ ಸೇರ್ಪಡೆ ನೀಲನಕ್ಷೆಯಂತೆ ಒಟ್ಟಾರೆ ವರಮಾನ ಮತ್ತು ಒಟ್ಟಾರೆ ವೆಚ್ಚದ ನಡುವಿನ ಅಂತರವನ್ನು 2013-14ನೇ ಸಾಲಿನಲ್ಲಿ        `ಜಿಡಿಪಿ'ಯ ಶೇ 4.8ಕ್ಕೆ ಮತ್ತು 2016-17ರ ವೇಳೆಗೆ ಶೇ  3ಕ್ಕೆ ತಗ್ಗಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ವಿವರಣೆ ನೀಡಿದರು. 

ಸಕ್ಕರೆ  ಸರ್ಕಾರಿ ನಿಯಂತ್ರದಿಂದ ಮುಕ್ತಗೊಳಿಸಿರುವುದರಿಂದ ರೈತರಿಗೆ ಮತ್ತು ಕಾರ್ಖಾನೆಗಳಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ.  ಆದರೆ, ಈ ಕ್ರಮದಿಂದ ವಾರ್ಷಿಕ ಸಬ್ಸಿಡಿ ಹೊರೆರೂ2,500ರಿಂದರೂ2,600 ಕೋಟಿಯಷ್ಟು ಹೆಚ್ಚಲಿದೆ ಎಂದರು.

ವಿಮೆ ತಿದ್ದುಪಡಿ
ಬರುವ ಅಧಿವೇಶನದಲ್ಲಿ ವಿಮೆ ತಿದ್ದುಪಡಿ ಮಸೂದೆಗೆ ಅನುಮೋದನೆ ಲಭಿಸುವ ವಿಶ್ವಾಸ ಇದೆ. ಇದರಿಂದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಶೇ 49ಕ್ಕೆ ಹೆಚ್ಚಲಿದೆ ಎಂದರು.

`ಸಿಎಡಿ' ಕಳವಳ
ತೈಲ ಮತ್ತು ಚಿನ್ನದ ಆಮದು ಹೆಚ್ಚಿರುವುದರಿಂದ 2012-13ನೇ ಸಾಲಿನ ಮೂರನೆಯ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ದಾಖಲೆ ಮಟ್ಟವಾದ  `ಜಿಡಿಪಿ'ಯ ಶೇ 6.7ಕ್ಕೆ ಏರಿಕೆ ಕಂಡಿದೆ.  ಆದರೆ, ಕಳೆದ ಮೂರು ತಿಂಗಳಿಂದ ರಫ್ತು ಚೇತರಿಸಿಕೊಂಡಿರುವುದರಿಂದ ನಾಲ್ಕನೆಯ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಇದು ತೃಪ್ತಿಕರ ಮಟ್ಟಕ್ಕೆ ತಗ್ಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಎಲ್‌ಪಿಜಿ' ಫಲಾನುಭವಿಗಳಿಗೆ ನೇರ ಸಬ್ಸಿಡಿ

ನವದೆಹಲಿ (ಐಎಎನ್‌ಎಸ್): ಅಡುಗೆ ಅನಿಲ (ಎಲ್‌ಪಿಜಿ) ಸಬ್ಸಿಡಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ  ನೇರವಾಗಿ ವರ್ಗಾಯಿಸುವ ವ್ಯವಸ್ಥೆಗೆ     (ಡಿಸಿಟಿ) ಚಾಲನೆ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು  ಚಿದಂಬರಂ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ        ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ತಿಳಿಸಿದರು.

ಫಲಾನುಭವಿಗಳಿಗೆ ಒಂದು ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಮುಂಚಿತವಾಗಿ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೇವೆ. ಇದರಿಂದ ಸಿಲಿಂಡರ್ ಮರು ಭರ್ತಿಯ ವೇಳೆ ಗ್ರಾಹಕರು ತಮ್ಮ ಜೇಬಿನಿಂದ ಹಣ ಪಾವತಿಸುವ ಅಗತ್ಯ ಇರುವುದಿಲ್ಲ, ಹೆಚ್ಚುವರಿ ಹೊರೆ ತಪ್ಪಲಿದೆ. ಎಂದರು.

ಈ ಯೋಜನೆ ಜಾರಿಗೆ ಬಂದರೆ ಸರ್ಕಾರ `ಎಲ್‌ಪಿಜಿ' ಫಲಾನುಭವಿಯ ಬ್ಯಾಂಕ್ ಖಾತೆಗೆ  9 ಸಿಲಿಂಡರ್‌ಗಳನ್ನು ಖರೀದಿಸಲು ವಾರ್ಷಿಕರೂ4 ಸಾವಿರ ವರ್ಗಾಯಿಸಬೇಕಾಗುತ್ತದೆ. ಸದ್ಯ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು 14.2ಕೆ.ಜಿ ಸಿಲಿಂಡರ್‌ಗೆರೂ410.50 ರಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿವೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ  ದೇಶದಾದ್ಯಂತ ನೇರ ನಗದು ವರ್ಗಾವಣೆ ವ್ಯವಸ್ಥೆ (ಡಿಸಿಟಿ) ಜಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಇದು 121 ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT