ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹೆಚ್ಚಳಕ್ಕೆ ನಗರಸಭೆಯಲ್ಲಿ ವ್ಯಾಪಕ ಚರ್ಚೆ

Last Updated 1 ಏಪ್ರಿಲ್ 2011, 6:00 IST
ಅಕ್ಷರ ಗಾತ್ರ

ಸಿಂಧನೂರು: ನಗರಸಭೆ ಆಡಳಿತ ಮಂಡಳಿಯು ಗುರುವಾರ ನಗರದ ಎಸ್.ಜೆ.ಎಸ್.ಆರ್.ವೈ. ಸಭಾ ಭವನದಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿತು.
2011ರಿಂದ 2020ರವರೆಗೆ ತೆರಿಗೆ ಹೆಚ್ಚಳ ಮಾಡಬೇಕು. ಜೂನ್ 30ರೊಳಗೆ ತೆರಿಗೆ ಪಾವತಿಸದಿದ್ದರೆ ಜುಲೈ 1ರಿಂದ ಶೇ.2ರಷ್ಟು ಬಡ್ಡಿ ಹಾಕಿ ಆಸ್ತಿಕರ ವಸೂಲಿ ಮಾಡುವ ನಿರ್ದೇಶನವಿದೆ ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.
 

ಸಾರ್ವಜನಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿದ ನಂತರ ತೆರಿಗೆ ಹೆಚ್ಚಳ ಮಾಡುವುದು ಸೂಕ್ತವೆಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಸದಸ್ಯರಾದ ಚಂದ್ರಶೇಖರ ಮೈಲಾರ, ಪ್ರಭುರಾಜ ಅಭಿಪ್ರಾಯಪಟ್ಟರು. ಏಪ್ರೀಲ್ 30ರೊಳಗೆ ಆಸ್ತಿಕರ ಪಾವತಿ ಮಾಡುವವರೆಗೆ ಶೇ.5ರಷ್ಟು ಕರ ರಿಯಾಯತಿ ನೀಡಲಾಗುವುದು. ಕಡ್ಡಾಯ ನಿರ್ಧರಣ ಆದೇಶದನ್ವಯ ಕಡ್ಡಾಯವಾಗಿ ಶೇ.15ರಷ್ಟನ್ನು ಹೆಚ್ಚಿಸಬೇಕೆಂದು ಪೌರಾಯುಕ್ತರು ತಿಳಿಸಿದರು.

ಪ್ರಸ್ತುತ ಉಪನೊಂದಣಿ ಅಧಿಕಾರಿಗಳ ಕಾರ್ಯಾಲಯವು ಆಸ್ತಿಗೆ ನಿಗದಿಪಡಿಸಿದ ದರದ ಆಧಾರದ ಮೇಲೆ ಶೇ.0.72ರಷ್ಟು ವಾಸದ ಮನೆಗಳಿಗೆ 1.08ರಷ್ಟು ವಾಣಿಜ್ಯ ಮಳಿಗೆಗಳಿಗೆ ವಸೂಲಿ ಮಾಡಲಾಗುತ್ತದೆ. ಉದಾಹರಣೆಗೆ 500 ರೂಪಾಯಿ ಆಸ್ತಿ ಕರ ಪಾವತಿಸದಿದ್ದರೆ, ಶೇ.15ರಷ್ಟು ಹೆಚ್ಚಳಗೊಂಡರೆ 575ರೂ ಪಾವತಿಸಬೇಕಾಗುತ್ತದೆ. ಕಾರಣ ಸದಸ್ಯರು ಸಾರ್ವಜನಿಕರಿಗೆ ಮನವೊಲಿಸುವ ಮೂಲಕ ನಗರಸಭೆಗೆ ಸಂದಾಯವಾಗಬೇಕಾದ ಆಸ್ತಿಕರವನ್ನು ಪಾವತಿಯಾಗುವಂತೆ ಕ್ರಮ ಕೈಗೊಳ್ಳಲು ಸರ್ವಾನುಮತದ ನಿರ್ಣಯ ಕೈಗೊಳ್ಳಲು ಮನವಿ ಮಾಡಿದರು.
 

ಅಂತಿಮವಾಗಿ ಶೇ.15ರಷ್ಟು ತೆರಿಗೆಯನ್ನು ಹೆಚ್ಚಳ ಮಾಡುವಂತೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಆಸ್ತಿ ಹೆಸರಿನಲ್ಲಿ ನೂತನ ಸಾಪ್ಟವೇರ್ ಸೃಷ್ಟಿ ಮಾಡಲಾಗಿದ್ದು, ಗಣಕೀಕರಣದಲ್ಲಿ ಫಾರಂ ನಂ.3 ಲಭ್ಯವಾಗಲಿದೆ. ಪಾರದರ್ಶಕವಾಗಿ ನಡೆಯಲಿರುವ ತೆರಿಗೆ ಪ್ರಕ್ರಿಯೆಯಲ್ಲಿ ಕರವಸೂಲಿಗಾರರ ಪಾತ್ರ ಕೇವಲ ಮಾಹಿತಿ ನೀಡುವುದಷ್ಟೇ ಆಗಿರುತ್ತದೆ ಎಂದು ಪೌರಾಯುಕ್ತರು ಹೇಳಿದರು. ನಗರಸಭೆ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಮಾಜಿ ಅಧ್ಯಕ್ಷ ಸುಭಾಷ್ ಪ್ರಾಂಕ್ಲಿನ್, ಸದಸ್ಯರಾದ ಎಸ್.ಶರಣೇಗೌಡ, ಕುಸುಮಾ ಕನಕಪ್ಪ ನಾಯಕ, ಗೋವಿಂದರಾವ್, ರಫೀ ಅಹ್ಮದ್, ಮದರ್ ಹುಸೇನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT