ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆಗಳು ಪ್ರಭುಗಳು ಪ್ರಜೆಗಳು

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪ್ರತೀ ವರ್ಷ ಫೆಬ್ರುವರಿ ಬಂತೆಂದರೆ ಸಾಕು, ಸರ್ಕಾರಗಳಿಗೆ ಮುಂಗಡಪತ್ರದಲ್ಲಿ ಯಾವ್ಯಾವುದಕ್ಕೆ ಹೊಸದಾಗಿ ತೆರಿಗೆ ಹಾಕಬೇಕೆಂಬ ‘ವರಿ’ ಶುರುವಾಗುತ್ತದೆ. ಜನರ ಪಾಲಿಗೆ ಹೊಸ ಹೊಸ ತೆರಿಗೆಗಳು ಹುರುಪಿನಿಂದ ‘ಮಾರ್ಚ್’ ಮಾಡಿಕೊಂಡು ಬರುತ್ತವೆ. ಬಜೆಟ್‌ನಲ್ಲಿ ಹಾಕುವ ತೆರಿಗೆಗಳು ಯಾವ ಸರ್ಕಾರದ ಬೊಕ್ಕಸವನ್ನಾದರೂ ತುಂಬಲಿ, ಜನಸಾಮಾನ್ಯರು ಬದುಕುವುದು ಮಾತ್ರ ಯಾವಾಗಲೂ ಕೊರತೆ ಬಜೆಟ್ಟಿನಲ್ಲೇ. ಬಿಡಿ, ಇದು ಈ ಕಾಲದ ಮಾತಾಯಿತು.

ಆದರೆ ತೆರಿಗೆಗಳ ಸಾವಿರಾರು ವರ್ಷಗಳ ಇತಿಹಾಸವನ್ನು ಸುಮ್ಮನೆ ಗಮನಿಸಿದರೆ ಸಾಕು, ಯಾವ ಕಾಲಕ್ಕೂ ಇದು ನಿಜವಾದ ಮಾತೇ ಅನ್ನಿಸುತ್ತದೆ. ‘ಮಾನವನಾಗಿ ಹುಟ್ಟಿದ್ ಮೇಲೆ ತೆರಿಗೆ ಕಟ್ಟು’ ಅನ್ನುವುದೇ ಆಳುವವರ ಸೂತ್ರ. ತೆರಿಗೆಗಳ ಚರಿತ್ರೆ ಎಂದರೆ ಅದು ರಾಜರ ಅಟ್ಟಹಾಸದ ಚರಿತ್ರೆ ಮತ್ತು ಜನರ ಕಷ್ಟನಷ್ಟದ ಚರಿತ್ರೆ ಎಂದು ಮೇಲ್ನೋಟಕ್ಕೇ ಹೇಳಿಬಿಡಬಹುದು. ಹಳಗನ್ನಡದಲ್ಲಿ ‘ಕಿರುಕುಳ’ ಅಂದರೆ ಸಣ್ಣ ತೆರಿಗೆ ಎಂದು ಅರ್ಥವಿತ್ತು; ಅಂದಮೇಲೆ ಕಿರುಕುಳ ಎಂಬ ಪದಕ್ಕೆ ಈಗಿರುವ ಅರ್ಥ ಬಂದದ್ದು ಸುಮ್ಮನೆ ಅಲ್ಲ!
ಭೂಮಿಯ ಮೇಲೆ ಈ ತೆರಿಗೆಗಳ ಕಥೆ ಯಾವಾಗ ಆರಂಭವಾಯಿತು ಅಂದರೆ, ಶಿಲಾಯುಗದಲ್ಲೇ ಶುರುವಾಯಿತು ಎಂದು ಸಂಶೋಧಕರು ಹೇಳುತ್ತಾರೆ. ಮನುಷ್ಯರು ಗುಂಪುಗಳಲ್ಲಿ ವಾಸ ಮಾಡತೊಡಗಿದ ಮೇಲೆ, ಗುಂಪಿಗೊಬ್ಬ ನಾಯಕ ಹುಟ್ಟಿಕೊಂಡ. ಗುಂಪಿನಲ್ಲಿದ್ದ ಮನುಷ್ಯರು ಬೇಟೆಯಾಡಿ ತಂದದ್ದರಲ್ಲಿ ಗುಂಪಿನ ನಾಯಕನಿಗೆ ಪಾಲು ಕೊಡುವುದು ಕಡ್ಡಾಯವಾಯಿತು- ಅದೇ ತೆರಿಗೆಯ ಮೂಲರೂಪವಂತೆ. ಅಂದಮೇಲೆ, ಮನುಷ್ಯ ಚರಿತ್ರೆಯಲ್ಲಿ ಯಾವಾಗ ನಾಯಕರು, ರಾಜರು, ಆಳುವವರು ಹುಟ್ಟಿದರೋ ಆಗ ತೆರಿಗೆಯೂ ಹುಟ್ಟಿತು. ಭೂಮಿಗೆ ರಾಜನೇ ಒಡೆಯ, ಅವನ ಭೂಮಿಯಲ್ಲಿ ಹುಟ್ಟಿದ್ದಕ್ಕೆ ತೆರಿಗೆ ಕೊಡಿ- ಇದು ತೆರಿಗೆಯ ಹಿಂದಿನ ತರ್ಕ.

ಜಗತ್ತಿನ ತೆರಿಗೆಗಳ ಜಟಿಲಾತಿಜಟಿಲ ಇತಿಹಾಸದಲ್ಲಿ ಒಂದು ಸುತ್ತು ಹಾಕಿಬಂದರೆ, ಸದ್ಯ ಅಷ್ಟು ಮಾಡಿದ್ದಕ್ಕೆ ತೆರಿಗೆ ಕೊಡದೆ ಪಾರಾಗಿ ಬಂದೆವಲ್ಲ ಎಂದು ನಿಟ್ಟುಸಿರು ಬಿಡದಿದ್ದರೆ ಕೇಳಿ! ಯಾವ ರಾಜನ ಹೆಸರಾದರೂ ಹೇಳಿ, ತೆರಿಗೆ ವ್ಯವಸ್ಥೆಯೇ ಅವನ ಆಳ್ವಿಕೆಯ ಜೀವಜೀವಾಳ. ಯಾವ ರಾಜನಾದರೂ ಆಗಿರಲಿ ಅಥವಾ ಎಂಥ ರಾಜವಂಶವಾದರೂ ಆಗಿರಲಿ, ಅವರ ರಾಜ್ಯ-ಸಾಮ್ರಾಜ್ಯ ರೂಪುಗೊಂಡಿರುವುದು ಯುದ್ಧಗಳಿಂದ- ಆ ಯುದ್ಧಗಳಿಗೆ ಅವರು ಹಣ ಹೊಂದಿಸಿದ್ದು ತೆರಿಗೆಗಳಿಂದ. ಬಹುಪಾಲು ರಾಜರು ತಮ್ಮ ಆಡಳಿತ ಉಳಿಸಿಕೊಳ್ಳಲು ಇಲ್ಲವೇ ವಿಸ್ತರಿಸಲು ನಿರಂತರವಾಗಿ ಯುದ್ಧಗಳನ್ನು ಮಾಡುತ್ತಿದ್ದುದರಿಂದ ಅವರದು ಸದಾಸರ್ವದಾ ‘ಮಿಲಿಟರಿ ಬಜೆಟ್’ ಆಗಿರುತ್ತಿತ್ತು. ಹಾಗಾಗಿ ರಾಜರ ಯುದ್ಧಗಳ ವೆಚ್ಚ ತೂಗಿಸಲು ಪ್ರಜೆಗಳು ತೆರಿಗೆ ಕೊಡಬೇಕಾಗಿತ್ತು, ಇಲ್ಲವೆ ಯುದ್ಧಕ್ಕಾಗಿ ಬಿಟ್ಟಿ ಕೆಲಸ ಮಾಡಬೇಕಾಗಿತ್ತು. ಅನೇಕ ಬಾರಿ ಯುದ್ಧಕ್ಕೂ ಕರ ಕೊಡಬೇಕಾಗಿತ್ತು, ಯುದ್ಧದಲ್ಲಿ ಗೆದ್ದರೆ ಸ್ಮಾರಕ ಕಟ್ಟಲೂ ಕರ ಕೊಡಬೇಕಾಗಿತ್ತು.

ಈಜಿಪ್ಟ್, ಚೀನಾ, ಪರ್ಷಿಯಾ, ಇಥಿಯೋಪಿಯ, ಮೆಸೊಪೊಟೇಮಿಯ, ರೋಮ್, ಗ್ರೀಸ್ ಮೊದಲಾದ ಯಾವ ಪ್ರಾಚೀನ ನಾಗರಿಕತೆಯನ್ನು ಅಭ್ಯಾಸ ಮಾಡಿದರೂ ರಾಜರು ರೂಪಿಸಿದ ವಿಶಾಲ ತೆರಿಗೆ ವ್ಯವಸ್ಥೆ ಕಣ್ಣಿಗೆ ರಾಚುತ್ತದೆ. ಇನ್ನು ಪ್ರಾಚೀನ ಭಾರತದಲ್ಲಿ ‘ರಾಜಾ ಪ್ರತ್ಯಕ್ಷ ದೇವತಾ’ ಅಂದಮೇಲೆ ಕೇಳುವುದೇ ಬೇಡ.

ಈಜಿಪ್ಟ್‌ನಲ್ಲಿ ದೊರೆಗಳು ತಾವು ಸುಖವಾಗಿ ಬದುಕಿಬಾಳಲು ಪ್ರಜೆಗಳಿಂದ ತೆರಿಗೆ ವಸೂಲು ಮಾಡುವುದು ಹೋಗಲಿ, ಸತ್ತಮೇಲೂ ಸುಖವಾಗಿ ಮಲಗಿರಲು ಅಮೋಘವಾದ, ಭವ್ಯವಾದ ಪಿರಮಿಡ್‌ಗಳನ್ನು ಕಟ್ಟಿಕೊಳ್ಳುತ್ತಿದ್ದರು. ಜನರಿಂದ ಹೆಚ್ಚು ತೆರಿಗೆ ವಸೂಲು ಮಾಡದೆ ಪಿರಮಿಡ್ ಕಟ್ಟಲು ಸಾಧ್ಯವಿಲ್ಲವಷ್ಟೆ. ಆದ್ದರಿಂದ ಒಬ್ಬ ದೊರೆಯ ಸಾವು ಪ್ರಜೆಗಳಿಗೆ ಪ್ರಾಣಸಂಕಟ ತಂದು ಅವರನ್ನು ಅರೆಜೀವ ಮಾಡುತ್ತಿತ್ತು. ಚೀನಾದಲ್ಲಿ ಕ್ರಿಸ್ತಪೂರ್ವ 2140-1711ರ ಅವಧಿಯಲ್ಲಿದ್ದ ಕ್ಸಿಯಾ ವಂಶದ ರಾಜರು ಕಟ್ಟುಮಸ್ತಾದ ತೆರಿಗೆ ವ್ಯವಸ್ಥೆ ರೂಪಿಸಿದ್ದರು. ಚೀನಾದ ಪ್ರಖ್ಯಾತ ಕನ್‌ಫ್ಯೂಷಿಯಸ್ (ಭಾರತಕ್ಕೆ ಬಂದಿದ್ದ ಯಾತ್ರಿಕ) ರಾಜನೊಬ್ಬನ ತೆರಿಗೆ ವಸೂಲಿ ಅಧಿಕಾರಿಯಾಗಿದ್ದು ಜನರ ಕಷ್ಟಗಳನ್ನು ಕಣ್ಣಾರೆ ನೋಡಿದ್ದ- ಅದರಿಂದಲೇ ಅವನಿಗೆ ಅಷ್ಟು ದೊಡ್ಡ ದಾರ್ಶನಿಕನಾಗಿ ಉಪದೇಶಗಳನ್ನು ಕೊಡಲು ಸಾಧ್ಯವಾಗಿರಬೇಕು!  

ಇಥಿಯೋಪಿಯದಲ್ಲಿ ದನಕರುಗಳಿಗೆ, ಬೆಳೆಗಳಿಗೆ ಸಮಾನ ಕರ ಇತ್ತು. ಸಾಲೊಮನ್ ದೊರೆ ಜನರಿಗೆ ತಾಳಿಕೊಳ್ಳಲಾಗದಷ್ಟು ತೆರಿಗೆ ಹೊರೆ ಹೊರಿಸಿದ್ದ. ಸ್ಪಾರ್ಟಾ, ಅಥೆನ್ಸ್, ರೋಮ್‌ಗಳಲ್ಲಿ ಸ್ವತಂತ್ರ ಪ್ರಜೆಗಳಿಗಿಂತ ಗುಲಾಮರ ಸಂಖ್ಯೆಯೇ ಜಾಸ್ತಿ ಇತ್ತಂತೆ.

ವೆಸ್ಪಸಿಯನ್ ಎಂಬ ರಾಜ ಹಾಕಿದ್ದ ತೆರಿಗೆಗಳನ್ನು ಅವನ ಮಗ ವಿರೋಧಿಸಿದಾಗ, ರಾಜ ಚಿನ್ನದ ನಾಣ್ಯವೊಂದನ್ನು ಮಗನ ಮೂಗಿಗೆ ಹಿಡಿದು ‘ತೆರಿಗೆ ಹಾಕಬೇಡ ಅನ್ನುತ್ತೀಯಲ್ಲಾ ಹುಡುಗಾ, ಈ ನಾಣ್ಯಕ್ಕೇನು ದುರ್ವಾಸನೆ ಇದೆಯೇ’ ಎಂದು ಕೇಳಿದನಂತೆ. ಮಗನಿಗೆ ತೆರಿಗೆಗಳ ಮಹತ್ವ ತಕ್ಷಣ ಅರ್ಥವಾಗಿರಬಹುದು.

ಯೂರೋಪಿನಾದ್ಯಂತ ಪುರೋಹಿತರು, ಶ್ರೀಮಂತರಿಗಿಂತ ಸಾಮಾನ್ಯ ಪ್ರಜೆಗಳಿಗೇ ಹೆಚ್ಚು ತೆರಿಗೆ ಇತ್ತು. ರಾಜರು ಮಾತ್ರವಲ್ಲದೆ ಗಣ್ಯ ಶ್ರೀಮಂತರು ಮತ್ತು ಚರ್ಚಿನ ಗಣ್ಯ ಪುರೋಹಿತರೂ ತೆರಿಗೆ ಹಾಕಬಹುದಿತ್ತು. ಯೂರೋಪಿನ ಅನೇಕ ಚರ್ಚ್‌ಗಳು ‘ವೈನ್ ಟ್ಯಾಕ್ಸ್’ ವಸೂಲು ಮಾಡುತ್ತಿದ್ದವು. ಸ್ಪಾರೋ ಟ್ಯಾಕ್ಸ್, ನೈಟಿಂಗೇಲ್ ಟ್ಯಾಕ್ಸ್ (!) ಗಳೂ ಇದ್ದವು.

ಕುರಿಗೆ... ಉಣ್ಣೆಗೆ...
ಜೂಜಾಡುವುದು ಪಾಪ ಎಂದು ಹೇಳದ ಧರ್ಮವಿಲ್ಲವಷ್ಟೆ. ಆದರೆ ರಾಜರ ತೆರಿಗೆಧರ್ಮದಲ್ಲಿ ಜೂಜಿಗೂ ಮುಖ್ಯಸ್ಥಾನವಿತ್ತು. ಪರ್ಷಿಯಾದಲ್ಲಿ ಜೂಜು ದೊಡ್ಡ ಉದ್ಯಮದ ಹಾಗೆ ಬೆಳೆದು ಸಾಕಷ್ಟು ತೆರಿಗೆ ವಸೂಲಾಗುತ್ತಿತ್ತು. ರೋಮ್‌ನಲ್ಲಂತೂ ಕುರಿ ಸಾಕುತ್ತೀರಾ ತೆರಿಗೆ ಕಟ್ಟಿ, ಅದರ ಉಣ್ಣೆ ಕತ್ತರಿಸುತ್ತೀರಾ ಅದಕ್ಕೂ ತೆರಿಗೆ ಕಟ್ಟಿ ಎಂದು ಹೇಳಿದ್ದ ರಾಜರಿದ್ದರು. ‘ಯಾವ್ಯಾವುದರ ಮೇಲೆ ತೆರಿಗೆ ಹಾಕಬಹುದು ಅಂತ ಕೇಳುತ್ತೀರಾ? ಇಡೀ ಜಗತ್ತಿಗೇ ತೆರಿಗೆ ಹಾಕಬೇಕು’ ಎಂದು ಸಾಮ್ರಾಟ ಸೀಸರ್ ಅಗಸ್ಟಸ್ ಎರಡು ಸಾವಿರ ವರ್ಷಗಳ ಹಿಂದೆಯೇ ಘೋಷಿಸಿದ್ದ!

ತೆರಿಗೆ ಹಾಕುವುದು ಎಷ್ಟು ಮುಖ್ಯವೋ ಅದನ್ನು ವಸೂಲಿ ಮಾಡುವುದೂ ಅಷ್ಟೇ ಮುಖ್ಯ ತಾನೆ? ಮೆಸೊಪೊಟೇಮಿಯ ಪ್ರಾಚೀನ ನಾಗರಿಕತೆಯಲ್ಲಿ ಕೃಷಿ ಮತ್ತು ವ್ಯಾಪಾರಗಳೇ ಪ್ರಧಾನವಾಗಿತ್ತು; ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಸುಮೇರ್‌ನ ಚಿತ್ರಲಿಪಿಯಿರುವ ಸುಟ್ಟ ಜೇಡಿಮಣ್ಣಿನ ಫಲಕವೊಂದರಲ್ಲಿ ‘ಕರ ವಸೂಲು ಮಾಡುವವನಿಗೆ ಭಯಪಡಿ’ ಎಂದು ಜನರಿಗೆ ಬೆದರಿಸುವ ಸಂದೇಶ ಇದೆಯಲ್ಲ ಎಂದು ವಿದ್ವಾಂಸರು ಅಚ್ಚರಿಪಟ್ಟಿದ್ದಾರೆ. ತೆರಿಗೆ ತಪ್ಪಿಸುವುದು ಪಾಪ, ಅದಕ್ಕೆ ದೇವರು ಶಿಕ್ಷಿಸುತ್ತಾನೆ ಎಂಬ ಭಯವನ್ನೂ ವ್ಯಾಪಕವಾಗಿ ಹರಡಲಾಗಿತ್ತು. ತೆರಿಗೆ ವಸೂಲು ಮಾಡಿ ರಾಜರ ಬೊಕ್ಕಸಕ್ಕೆ ಸಲ್ಲಿಸಲು ದೊಡ್ಡ ಪಡೆಯೇ ಇರುತ್ತಿತ್ತು. ಈಜಿಪ್ಟ್‌ನಲ್ಲಿ ಫ್ಯಾರೋಗಳ ತೆರಿಗೆ ವಸೂಲಿಗಾರರ ಮುಂದೆ ಜನರು ಮಂಡಿಯೂರಿ ಬೇಡಬೇಕಿತ್ತು. ಹಲವು ದೇಶಗಳಲ್ಲಿ, ತೆರಿಗೆ ಕಟ್ಟದಿದ್ದರೆ ಉಗ್ರ ಶಿಕ್ಷೆ ಕಾದಿರುತ್ತಿತ್ತು. ಅದಕ್ಕೆ ಕಾಲಿಗೆ ಸರಪಳಿ ಹಾಕುವುದು, ಹಿಂಸಾಕೋಣೆಯಲ್ಲಿ ಇಡುವುದು, ಕಲ್ಲಿನಿಂದ ಹೊಡೆದು ಕೊಲೆ ಮಾಡುವುದು ಇತ್ಯಾದಿ ಶಿಕ್ಷೆಗಳು ಇರುತ್ತಿದ್ದವು.

ಒಟ್ಟಿನಲ್ಲಿ ಪ್ರಾಚೀನ ನಾಗರಿಕತೆಗಳ ಶ್ರೇಷ್ಠತೆಯ ಒಂದು ಮಾನದಂಡವಾಗಿ ತೆರಿಗೆ ಪದ್ಧತಿ ಇತ್ತೆನ್ನಬಹುದು. ಹಾಗೆ ನೋಡಿದರೆ ರೋಮ್ ಸಾಮ್ರಾಜ್ಯ ಅಳಿದುಹೋಗಲು ತೆರಿಗೆಗಳು ಸರಿಯಾಗಿರದೆ ಭಂಡಾರ ದಿವಾಳಿಯಾದದ್ದೂ ಕಾರಣವಂತೆ. ನಂತರದ ಶತಮಾನಗಳಲ್ಲಿ, ಫ್ರೆಂಚ್ ಕ್ರಾಂತಿ ಆರಂಭವಾಗಲು ಅನ್ಯಾಯದ ತೆರಿಗೆಗಳೂ ನೆಪವಾದವು. ಅಮೆರಿಕದ ಕ್ರಾಂತಿಯಲ್ಲಿ ವಸಾಹತುಗಳ ಜನರು ‘ಪ್ರಾತಿನಿಧ್ಯ ಕೊಡದೆ ತೆರಿಗೆ ಕೊಡುವುದಿಲ್ಲ’ ಎಂದು ಸಮರ ಸಾರಿ ಗೆಲುವು ಸಾಧಿಸಿದ್ದು ಯಾರಿಗೆ ಗೊತ್ತಿಲ್ಲ?

ಭಾರತದಲ್ಲಿ ಎಷ್ಟು ಭಾರ?
ಜಗತ್ತಿನ ಬೇರೆಲ್ಲ ನಾಗರಿಕತೆಗಳ ಹಾಗೆ ಭಾರತದಲ್ಲೂ ಅದ್ಭುತವಾದ, ಕೆಲವೊಮ್ಮೆ ಅಮಾನುಷವಾದ ತೆರಿಗೆ ವ್ಯವಸ್ಥೆ ರೂಪುಗೊಂಡಿತ್ತು. ವೇದ ವೇದಾಂಗಗಳು, ಬ್ರಾಹ್ಮಣಗಳು, ಸ್ಮೃತಿಗಳು, ಜಾತಕಗಳು, ಧರ್ಮಶಾಸ್ತ್ರಗಳು, ಮಹಾಕಾವ್ಯಗಳು ಎಲ್ಲದರಲ್ಲೂ ತೆರಿಗೆಯ ಪ್ರಸ್ತಾಪವಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಎಷ್ಟಾದರೂ ಇದು ಕೌಟಿಲ್ಯನ ‘ಅರ್ಥಶಾಸ್ತ್ರ’ದ ನಾಡಲ್ಲವೇ? ಕೌಟಿಲ್ಯನ ನಾಡಿನಲ್ಲಿ ಅವನು ಹೇಳಿದಂತೆಯೇ ಕಲ್ಪನೆ ಹರಿದದ್ದರ ಮೇಲೆಲ್ಲಾ ಕರ ಇದೆ. ವಾನಪ್ರಸ್ಥಾಶ್ರಮದಲ್ಲಿರುವ ಸನ್ಯಾಸಿಗಳ ಮೇಲೂ ತೆರಿಗೆ ಇತ್ತು ಅಂದಮೇಲೆ ಹೆಚ್ಚು ಹೇಳುವುದೇ ಬೇಡ.

ಬಲಿ, ಕರ, ತೆರ, ಸುಂಕ, ಭಾಗ, ವಿಷ್ಟಿ, ಉತ್ಸಂಗ, ವಿರಜ, ಉಡಜ, ಶುಲ್ಕ, ಕಂದಾಯ- ಹೀಗೆ ತೆರಿಗೆಗೆ ತೆರತೆರನ ಹೆಸರುಗಳಿದ್ದವು. ಅಶೋಕನ (ಕ್ರಿ.ಪೂ.272-232) ಶಾಸನವೊಂದು ತೆರಿಗೆಯ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ ಎಂದಮೇಲೆ, ರಾಜರ ಆಡಳಿತದಲ್ಲಿ ಅದಕ್ಕಿದ್ದ ಸ್ಥಾನವನ್ನು ಊಹಿಸಬಹುದು.

ಇನ್ನು ಕೌಟಿಲ್ಯನಂತೂ ತನ್ನ ‘ಅರ್ಥಶಾಸ್ತ್ರ’ದ ಅರ್ಧ ಭಾಗವನ್ನು ತೆರಿಗೆ ಕುರಿತು ಹೇಳುವುದಕ್ಕೇ ಮೀಸಲಿಟ್ಟಿದ್ದಾನೆ. ಅವನ ಕೃತಿಯಂತೂ ರಾಜರಿಗೆ ‘ಟ್ಯಾಕ್ಸ್ ಮ್ಯಾನುಯಲ್’ ಇದ್ದಂತೆ. ಭಂಡಾರವೇ ಸಾಮ್ರಾಜ್ಯದ ಹೃದಯ ಎನ್ನುತ್ತಾನೆ ಅವನು. ಸಮಸ್ತ ಭೂಮಿಗೇ ಒಡೆಯನೆಂದರೆ ಭೂಪತಿಯಾದ ರಾಜನೇ, ಅವನ ಭೂಮಿಯಲ್ಲಿ ಹುಟ್ಟಿ ಅದನ್ನು ಅನುಭವಿಸುವುದಕ್ಕೆ ಬೇರೆಯವರೆಲ್ಲ ರಾಜನಿಗೆ ಕರ ಕೊಡಬೇಕು, ಕೊಡದಿದ್ದರೆ ಒದ್ದು ವಸೂಲು ಮಾಡಬೇಕು ಎನ್ನುವುದು ಕೌಟಿಲ್ಯನ ಸ್ಪಷ್ಟ ಸಿದ್ಧಾಂತವಾಗಿತ್ತು.

ಮಳೆಬೆಳೆ ಚೆನ್ನಾಗಿ ಆಗಿ ಜನರೆಲ್ಲ ಸುಭಿಕ್ಷವಾಗಿ ಮೈಮರೆತಿದ್ದಾಗ ಜಾಸ್ತಿ ತೆರಿಗೆ ಹಾಕಿ ಬೊಕ್ಕಸ ಭರ್ತಿ ಮಾಡಿಕೊಳ್ಳಬೇಕು; ಯುದ್ಧಕಾಲದಲ್ಲಿ, ಬರಗಾಲದಲ್ಲಿ ಅದು ನೆರವಿಗೆ ಬರುತ್ತದೆ ಎಂದು ಕೌಟಿಲ್ಯ ರಾಜರಿಗೆ ಕಿವಿಮಾತು ಹೇಳುತ್ತಾನೆ. ಬೇಯಿಸಿದ ಅನ್ನ, ಒಣಮೀನು ಯಾವುದರ ಮೇಲೆಂದರೆ ಅದರ ಮೇಲೆ ತೆರಿಗೆ ಹಾಕಬೇಕು ಎನ್ನುತ್ತಾನೆ. ರಾಜರು ಖಜಾನೆ ತುಂಬಿಕೊಳ್ಳಲು ತೆರಿಗೆ ಹಾಕುವಾಗ ಉಪ್ಪನ್ನೂ ಬಿಡಕೂಡದು ಸೊಪ್ಪನ್ನೂ ಬಿಡಕೂಡದು ಎಂದು ಕೌಟಿಲ್ಯ ಖಡಾಖಂಡಿತವಾಗಿ ಹೇಳಿದ್ದು ಸುಮಾರು 2300 ವರ್ಷಗಳ ಹಿಂದೆ!

ತೋಟಗಾರ ತನ್ನ ತೋಟದಲ್ಲಿ ಹಣ್ಣುಗಳನ್ನು ಮಾತ್ರ ಕಿತ್ತುಕೊಂಡು ಕಾಯಿಗಳನ್ನು ಹಣ್ಣಾಗಲು ಬಿಡುವಂತೆ, ರಾಜನೂ ಕೆಲವಕ್ಕೆ ತೆರಿಗೆ ಹಾಕಿ ಕೆಲವನ್ನು ಮುಂದಿನ ಸರದಿಗೆ ಬಿಟ್ಟುಕೊಂಡಿರಬೇಕು; ಪ್ರಜೆಗಳು ಹಾಲು ಕೊಡುವ ಹಸುವಿದ್ದಂತೆ, ಕೆಚ್ಚಲಿನಿಂದ ಹಾಲು ಕರೆದುಕೊಳ್ಳುತ್ತಾ ಇರಬೇಕೇ ಹೊರತು ಒಮ್ಮೆಲೇ ಕೆಚ್ಚಲನ್ನು ಕುಯ್ಯಲು ಹೋಗಬಾರದು- ಇದು ಕೌಟಿಲ್ಯ ರಾಜರಿಗೆ ಪಾಲಿಸುವಂತೆ ಹೇಳಿದ ‘ಟ್ಯಾಕ್ಸೇಷನ್ ಪಾಲಿಸಿ’.

ಅಷ್ಟೇ ಅಲ್ಲ, ತೆರಿಗೆ ಕಟ್ಟುವವರಿಗೂ ಕೌಟಿಲ್ಯನ ಪ್ರಜಾಧರ್ಮ ಬೋಧೆ ಇದ್ದೇ ಇದೆ- ವಸೂಲು ಮಾಡಿದ ತೆರಿಗೆ ಹಣವನ್ನು ರಾಜನಾದವನು ಜನಹಿತಕ್ಕೆ ಬಳಸದಿದ್ದರೆ ಸುಮ್ಮನಿರಬೇಡಿ, ಅವನು ವಿಫಲನಾದರೆ ತೆರಿಗೆ ಕೊಡುವುದನ್ನು ನಿಲ್ಲಿಸಿ, ಕೊಟ್ಟ ತೆರಿಗೆ ವಾಪಸು ಕೊಡುವಂತೆ ಒತ್ತಾಯಿಸಿ ಎಂದೆಲ್ಲ ಹೇಳುತ್ತಾನೆ. ಎಡೆಬಿಡದೆ ಯುದ್ಧಗಳನ್ನು ಮಾಡುವುದು, ಬೇಸಿಗೆಗೊಂದು ಚಳಿಗಾಲಕ್ಕೊಂದು ಅಂತ ಅರಮನೆಗಳನ್ನು ಕಟ್ಟಿಕೊಳ್ಳುವುದು, ಇಲ್ಲವಾದರೆ ಭವ್ಯವಾದ ಗೋರಿ ಕಟ್ಟಿಕೊಳ್ಳುವುದು ಇವುಗಳಲ್ಲೇ ನಿರತರಾಗಿದ್ದ ಪ್ರಭುಗಳಿಂದ, ಪ್ರಜೆಗಳು ತಾವು ಕೊಟ್ಟ ತೆರಿಗೆ ಹಣವನ್ನು ವಾಪಸು ವಸೂಲು ಮಾಡುವುದೂ ಒಂದೇ, ಸ್ಮಶಾನಕ್ಕೆ ಹೋದ ಹೆಣ ವಾಪಸು ಬರುವುದೂ ಒಂದೇ ಎಂಬುದು ಪಾಪ ಕೌಟಿಲ್ಯನಿಗೆ ಗೊತ್ತಿರಲಿಲ್ಲ.    

ಇನ್ನು ಧರ್ಮಶಾಸ್ತ್ರಗಳು ಕೂಡ ಉಳ್ಳವರು, ಮೇಲಿನವರ ಪರವಾಗಿಯೇ ಇದ್ದುದರಿಂದ  ಪ್ರಭುಗಳಿಗೆ ತೆರಿಗೆ ಕೊಡುವುದು ಪ್ರಜೆಗಳ ಧರ್ಮ ಎಂದೇ ಅವು ಒತ್ತಿ ಹೇಳಿವೆ. ರೈತ, ಕಮ್ಮಾರ, ದನಗಾಹಿ, ವ್ಯಾಪಾರಿ, ಕುಶಲಿಗ ಹೀಗೆ ಯಾವ ಕೆಲಸ ಮಾಡುವವರನ್ನೂ ಬಿಡದೆ ತೆರಿಗೆ ವಸೂಲು ಮಾಡಬೇಕು ಎಂದು ಹಿಂದಿನವರು ಹೇಳಿದ್ದನ್ನೇ ಮನುವೂ ಬೋಧಿಸುತ್ತಾನೆ. ಸಂಗೀತ, ನರ್ತನ ದೇವರ ಸೇವೆಗೆ ಮೀಸಲಿತ್ತು ಎಂದು ಯಾರಾದರೂ ಅಂದುಕೊಂಡಿರಬಹುದು, ಆದರೆ ಇವನು ಅಂದುಕೊಂಡಿಲ್ಲ. ಹಾಡುಗಾರ, ನಟ, ನರ್ತಕ, ವಾದ್ಯಗಾರ ಯಾವ ವೃತ್ತಿಯವರನ್ನೂ ಬಿಡದೆ ತೆರಿಗೆ ಹಾಕಿ ಎಂದು ಹೇಳುತ್ತಾನೆ. ಅಂದಹಾಗೆ ಗಂಡಸರನ್ನು ಖುಷಿ ಪಡಿಸಲು ಕುಣಿಯುತ್ತಾಳಲ್ಲ ಆ ಗಣಿಕೆ, ಅವಳ ಕಾಲಿನ ಗೆಜ್ಜೆಗೂ ತೆರಿಗೆ ವಸೂಲು ಮಾಡಿ ಎನ್ನುವುದು ಮನುವಿನ ವಾದ. ಈ ವಿಚಾರದಲ್ಲಿ ನಮ್ಮ ಬಹುಪಾಲು ರಾಜರು ಮನುವಾದಿಗಳು!

ಜನರಿಂದ ಕರ ವಸೂಲು ಮಾಡಿ ಅವರನ್ನು ರಕ್ಷಿಸದಿದ್ದರೆ ರಾಜ ನರಕಕ್ಕೆ ಹೋಗುತ್ತಾನೆ ಎಂದೂ ಮನುಸ್ಮೃತಿ ಹೆದರಿಸುತ್ತದೆ. ಅಲ್ಲಿ ನರಕದಲ್ಲಿ ಎಷ್ಟು ಮಂದಿ ರಾಜರಿದ್ದರೋ ಕಂಡವರಿಲ್ಲ, ಅನೇಕಾನೇಕ ಜನರಿಗೆ ಮಾತ್ರ ತೆರಿಗೆಗಳಿಂದ ಇಲ್ಲೇ ನರಕ ಸಿಕ್ಕಿರಬಹುದು.

ಒಟ್ಟಿನಲ್ಲಿ ನಮ್ಮ ಐದು ಸಾವಿರ ವರ್ಷಗಳ ಚರಿತ್ರೆಯಲ್ಲಿ ಕಾಲಕಾಲಕ್ಕೆ ಹೊಸ ತೆರಿಗೆಗಳು ಸೇರಿಕೊಂಡರೂ ಕೆಲವು ತೆರಿಗೆಗಳು ಚಿರಂಜೀವಿಗಳಾಗಿ ಉಳಿದವು. ತೆರಿಗೆ ಹಾಕುವ ವಿಚಾರದಲ್ಲಿ ಕೆಲವು ರಾಜರಿಗೆ ಹಳೆಯದೇ ಹೊನ್ನಾದರೆ ಕೆಲವರದು ನವನವೋನ್ಮೇಷಶಾಲೀ ಪ್ರತಿಭೆ. ಒಟ್ಟಿನಲ್ಲಿ ರಾಜಾದಾಯವೆಂಬ ಸಾಗರಕ್ಕೆ ಸಾವಿರಾರು ತೆರಿಗೆಗಳ ನದಿಗಳಿದ್ದವು.

ಸುಮಾರು ಎಂಟರಿಂದ ಹದಿನಂಟನೇ ಶತಮಾನದವರೆಗೆ ಅಂದರೆ ಸಾವಿರ ವರ್ಷಗಳ ಕಾಲ, ಹೊರಗಿನಿಂದ ಬಂದು ನಮ್ಮನ್ನು ಆಳಿದ ಮೊಘಲ್ ಮತ್ತಿತರ ದೊರೆಗಳಲ್ಲಿ ಬಹುಮಂದಿ ಪರ್ಷಿಯಾ ಸೇರಿ ತಮ್ಮ ಮೂಲ ದೇಶದ ತೆರಿಗೆಗಳನ್ನು ಇಲ್ಲಿಯೂ ತಂದರು.

ಸಹಜವಾಗಿ ತೆರಿಗೆಗಳಿಗೂ ಅವರ ಹೆಸರುಗಳೇ ಬಂದವು. ಅನೇಕರ ಆಡಳಿತ ಕಾಲದಲ್ಲಿ ‘ಜೆಜಿಯಾ’ ತಲೆಗಂದಾಯ ಸೇರಿ ಕೆಲವು ತೆರಿಗೆಗಳು ವಿಪರೀತ ಅಸಮಾಧಾನ ಹುಟ್ಟಿಸಿದವು. ಕೆಲವು ತೆರಿಗೆಗಳು ಧಾರ್ಮಿಕ-ಸಾಮಾಜಿಕ ಪರಿಣಾಮಗಳನ್ನು ತಂದವು. ಅಕ್ಬರ್ ಅಂತಹವರು ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಪ್ರಯತ್ನ ಪಟ್ಟರೂ ಸಫಲರಾಗಲಿಲ್ಲ. ಔರಂಗಜೇಬ ತನ್ನ ಐವತ್ತು ವರ್ಷಗಳ ಆಡಳಿತದಲ್ಲಿ ಸುಮಾರು 65 ಬಗೆಯ ತೆರಿಗೆ ರದ್ದು ಮಾಡಿದನೆಂದಮೇಲೆ ಇನ್ನೆಷ್ಟು ಬಗೆ ಇದ್ದವು !

ಕರುನಾಡಿನಲ್ಲಿ ಕರ
ಜಗತ್ತಿನಲ್ಲಿ ತೆರಿಗೆ ಎನ್ನುವುದು ಗಾಳಿಯ ಹಾಗೆ ಸೇರಿಕೊಂಡಿದ್ದರೂ ನಮ್ಮ ಹಿತ್ತಲಿನಲ್ಲಿ ಹೇಗಿತ್ತು ಎನ್ನುವುದನ್ನೂ ಸ್ವಲ್ಪ ನೋಡಬಹುದು. ‘ದಕ್ಷಿಣ ಭಾರತದ ಶಾಸನಗಳನ್ನು ಅಧ್ಯಯನ ಮಾಡುವಾಗ ಎದ್ದು ಕಾಣುವ ಅಂಶವೆಂದರೆ ಅವುಗಳಲ್ಲಿ ಕಂಡುಬರುವ ಅಸಂಖ್ಯ ತೆರಿಗೆಗಳು. ಇವುಗಳಲ್ಲಿ ಎಷ್ಟೋ ತೆರಿಗೆಗಳು ಅರ್ಥವೇ ಆಗುವುದಿಲ್ಲ’ ಎಂದು ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಹೇಳುತ್ತಾರೆ.

ಈ ತೆರಿಗೆಗಳು ಯಾವ ವೃತ್ತಿಯನ್ನೂ ಯಾರನ್ನೂ ಬಿಟ್ಟಿರಲಿಲ್ಲ. ಅಕ್ಕಸಾಲಿ, ಅಂಬಿಗ, ಅಗಸ, ಕುಂಬಾರ, ಕಮ್ಮಾರ, ನಾಯಿಂದ, ಚಿಪ್ಪಿಗ, ಬಡಗಿ ಎಲ್ಲರೂ ತಮ್ಮ ವೃತ್ತಿ ಮತ್ತು ಉಪಕರಣಗಳ ಮೇಲೆ ತೆರಿಗೆ ಕಟ್ಟಬೇಕಾಗಿತ್ತು. ಹನ್ನೆರಡನೆಯ ಶತಮಾನದ ಶಾಸನವೊಂದು ದೋಣಿ ಮತ್ತು ತೆಪ್ಪಗಳಿಗೆ ಸುಂಕ ಹಾಕಿದ್ದನ್ನು ಹೇಳುತ್ತದೆ. ಬುಟ್ಟಿ ಹೆಣೆಯುವವರ ಮೇಲೆ ‘ಮೇದತೆರೆ’, ಬಳೆಗಾರರಿಗೆ ‘ಬಳೆದೆರೆ’, ಎಣ್ಣೆ ತೆಗೆಯುವವರಿಗೆ ‘ಗಾಣದೆರೆ’, ಚಿಪ್ಪಿಗನು ಬಳಸುವ ಕತ್ತರಿಗೆ ‘ಕತ್ತರಿವಣ’, ಬಡಗಿಗೆ ‘ಕೊಡತಿವಣ’, ಕಮ್ಮಾರನಿಗೆ ‘ಕುಲುಮೆದೆರೆ’ ಇದ್ದವು. ಇವುಗಳಲ್ಲದೆ ನೇಯುವವರು, ಜವಳಿಯವರಿಗೆ ‘ಮಗ್ಗದೆರೆ’, ‘ನೂಲುದೆರೆ’, ‘ಬಣ್ಣದೆರೆ’ ಕಡ್ಡಾಯವಾಗಿತ್ತು. ಕನ್ನಡಿ ಬಳಸುವವರಿಗೆ ‘ಕನ್ನಡಿವಣ’ ಇತ್ತು. ಇವನ್ನೆಲ್ಲಾ ತಿಳಿದಮೇಲೆ, ‘ಪ್ರೊಫೆಷನಲ್ ಟ್ಯಾಕ್ಸ್’ ಜಾರಿಗೆ ತಂದದ್ದು ಹೊಸ ಕಾಲದ ಸರ್ಕಾರಗಳು ಎಂದು ಯಾರೂ ಶಾಪ ಹಾಕಲಾರರು!

ಜಮೀನು, ಮನೆ, ತೋಟ, ಅಂಗಡಿ ಇವುಗಳ ಮೇಲೆ ಜನರು ಪ್ರತಿವರ್ಷ ‘ಸಿದ್ಧಾಯ’ ಕಟ್ಟುತ್ತಿದ್ದರೂ ಮನೆಗೆ ಮಹಡಿ ಕಟ್ಟಿಸಿದರೆ ‘ಅಟ್ಟದೆರೆ’, ತೋಟದಲ್ಲಿ ಬಾವಿ ತೋಡಿಸಿದರೆ ‘ಕುಳಿಯ ಸುಂಕ’ ತೆರಬೇಕಾಗಿತ್ತು, ಇನ್ನು ಮನೆಯಲ್ಲಿ ಎತ್ತು, ಹಸು, ಕೋಣ, ಕತ್ತೆ, ಕುರಿ, ಮೇಕೆ ಹೀಗೆ ಬಾಲ ಇರುವ ಯಾವ ಪ್ರಾಣಿ ಸಾಕಿದರೂ ‘ಬಾಲವಣ’ ಕಟ್ಟಬೇಕಾಗಿತ್ತು. ರೈತರು ಹಿತ್ತಲಿನಲ್ಲಿ ಬೇಸಾಯಕ್ಕೆ ತಿಪ್ಪೆಗೊಬ್ಬರ ಮಾಡಿಕೊಂಡರೆ ಅದಕ್ಕೂ ತೆರ ಕೊಡಬೇಕಿತ್ತು ಎಂದರೆ ನಂಬಬೇಕು!

ಇದೆಲ್ಲಾ ಹೋಗಲಿ, ಮನೆಯಲ್ಲಿ ಯಾರಿಗಾದರೂ ಮದುವೆ ಆದರೆ ಹಾಕುವ ಚಪ್ಪರಕ್ಕೆ ‘ಚಪ್ಪರದೆರೆ’, ಹಸೆಗೆ, ಬಾಸಿಂಗಕ್ಕೆ ತೆರ ಕೊಡಬೇಕಾಗಿತ್ತು, ಅರಮನೆಯಲ್ಲಿ ಅವನ ಮಕ್ಕಳಿಗೆ ಮದುವೆ ಆದರೂ ಕಾಣಿಕೆ ಕೊಡಬೇಕಾಗಿತ್ತು. ಮನೆಯ ಹುಡುಗಿ ಮೈನರೆದರೆ ರಾಜನಿಗೆ ಕರ ಕೊಡಬೇಕೆನ್ನುವುದು ಯಾವ ರೀತಿಯ ನ್ಯಾಯವೋ? ಮನೆಯಲ್ಲಿ ಹೆಂಡತಿ, ಸೊಸೆ ಅಥವಾ ಮಗಳು ಬಸಿರಾದರೆ ಕರ ಕಟ್ಟುವುದಲ್ಲದೆ, ರಾಣಿ ಗಂಡುಮಗು ಹೆತ್ತರೆ ‘ಪುತ್ರೋತ್ಸವ ಕಾಣಿಕೆ’ ಕೊಡಬೇಕಾಗಿತ್ತು. ಅರಸ, ಅರಸಿಯರು ಊರಿಗೆ ಬಂದರೆ ‘ದರ್ಶನದೆರೆ’, ‘ದೇವಿದೆರೆ’ ಕೊಡುವುದು, ರಾಜಕುಮಾರ ಊರ ಮೇಲೆ ಹಾದುಹೋದರೆ ‘ಕುಮಾರ ಕಾಣಿಕೆ’ ಸಲ್ಲಿಸುವುದು ಸಾಮಾನ್ಯವಾಗಿತ್ತು.

ವಿಜಯನಗರ ಸಾಮ್ರಾಜ್ಯದಲ್ಲಿ ಕೂಡ ಬಹಮನಿ ವಂಶ ಸೇರಿ ಇತರ ರಾಜರ ಮೇಲೆ ಸದಾ ಯುದ್ಧ ಮಾಡುತ್ತಿದ್ದುದರಿಂದ, ಸಾಕಷ್ಟು ಹೊಸ ತೆರಿಗೆಗಳನ್ನು ಹೇರಲಾಯಿತು. ಆದರೆ ವಿದೇಶಿ ವ್ಯಾಪಾರಿಗಳನ್ನು ಆಕರ್ಷಿಸಲು ಅವರಿಗೆ ತೆರಿಗೆ ಮನ್ನಾ ಮಾಡಲಾಗಿತ್ತು.  
ಬ್ರಿಟಿಷರು ಉಪ್ಪಿನ ಮೇಲೆ ಹಾಕಿದ್ದ ಕರ ವಿರೋಧಿಸಿ ಗಾಂಧೀಜಿ ದಾಂಡೀ ಯಾತ್ರೆ ಕೈಗೊಂಡಿದ್ದರು ತಾನೆ? ಹತ್ತನೆಯ ಶತಮಾನದಲ್ಲೇ ಉಪ್ಪು ತಯಾರಿಸಿದರೆ ಆಳುವವರಿಗೆ ಸುಂಕ ಕೊಟ್ಟ ಜನರಿದ್ದರು. ಎಲ್ಲೋ ಕೆಲವು ರಾಜರು ಕೆಲವೊಮ್ಮೆ ಉದಾರಿಗಳಾಗಿ ತೆರಿಗೆ ಮನ್ನಾ ಮಾಡಿರುವ ಉದಾಹರಣೆ ಇರಬಹುದು.

ರಾಜನ ತೆರಿಗೆಗಳ ಜೊತೆ ಅಧಿಕಾರಿಗಳ, ಮಠದ ಸ್ವಾಮಿಗಳ, ವ್ಯಾಪಾರಿಗಳ ದಬ್ಬಾಳಿಕೆಯನ್ನೂ ಸಹಿಸುವುದು ಜನರಿಗೆ ಅನಿವಾರ್ಯವಾಗಿತ್ತು. ತೆರಿಗೆಗಳ ಜೊತೆ ಬಿಟ್ಟಿ ದುಡಿಮೆಯೂ ಇದ್ದು, ಅದನ್ನು ಕೊಡಲಾರದವರು ಇದನ್ನು ಮಾಡಬೇಕಿತ್ತು. ತೆರಿಗೆ ಮತ್ತು ಬಿಟ್ಟಿ ದುಡಿಮೆ ಇಲ್ಲದೆ ತಂಜಾವೂರಿನ ದೇವಾಲಯ ಅಥವಾ ತಾಜ್‌ಮಹಲ್ ಕಟ್ಟಲು ಹೇಗೆ ತಾನೇ ಸಾಧ್ಯ?

ತೆರಿಗೆಗಳ ತಪ್ಪಲೆಯಿಂದ ಈ ಅನ್ನದಗುಳು ಹಿಸುಕಿದ ಮೇಲೆ, ಹಾಗಾದರೆ ರಾಜರು ಅಂತ ಯಾಕಿರಬೇಕು, ರಾಜರಿಗೂ ರಾಜಧರ್ಮ ಇರುತ್ತದಲ್ಲವೇ, ಜನರಿಗೆ ಸೌಲಭ್ಯ ಕಲ್ಪಿಸಲು ಸಂಪನ್ಮೂಲ ಬೇಡವೇ ಇತ್ಯಾದಿ ಪ್ರಶ್ನೆಗಳು ಏಳುವುದು ಖಂಡಿತ. ಆದರೆ ಯಾವ ಪ್ರಶ್ನೆಗೂ ಮಗಳು ಮೈನರೆದರೆ ಕೊಡಬೇಕಾಗುವ ಕರ ಉತ್ತರವಾಗುವುದಿಲ್ಲ.

ಬ್ರಿಟಿಷರ ವಿರುದ್ಧ ನಡೆದ ‘ಕರನಿರಾಕರಣೆ’ ಚಳವಳಿಗಿಂತ ನೂರಾರು ವರ್ಷಗಳ ಮೊದಲೂ ತೆರಿಗೆ ವಿರೋಧ ವ್ಯಕ್ತವಾಗಿದೆ. ಕರದ ಕರಕರೆ, ತಾಳಲಾರದೆ ರಾಜರು ಚಂಡಾಲರು ಎಂದು ಶಾಪ ಹಾಕಿ, ಕರ ಕೊಡದೆ ಹೋರಾಡಿ ಕೆಲವರು ಮಡಿದಿದ್ದಾರೆ ಎಂದು ಶಾಸನಗಳೇ ಹೇಳುತ್ತವೆ. ವಿಪರೀತ ತೆರಿಗೆಗಳ ಭಾರ ತಾಳಲಾರದೆ ಹನ್ನೆರಡನೆಯ ಶತಮಾನದ ಕಾಯಕಜೀವಿಗಳು ಬಸವಣ್ಣನ ನೇತೃತ್ವದಲ್ಲಿ ನಡೆಸಿದ ಸಂಘಟಿತ ಹೋರಾಟವೇ ವಚನಕಾರರ ಚಳವಳಿ ಎನ್ನುವುದು ಗಮನಾರ್ಹ.

ತೆರಿಗೆ ತಪ್ಪಿಸುವುದು ವೇದಕಾಲದಷ್ಟು ಹಳೆಯದೆಂದರೆ, ರಾಜನ ಅಧಿಕಾರಿಗಳು ‘ಷಡಭಾಗ’ ಒಯ್ಯಲು ಬಂದಾಗ ಧಾನ್ಯಕ್ಕೆ ನೀರು ಹೊಯ್ದು ಕೊಡುತ್ತಿದ್ದರೆಂದರೆ, ತೆರಿಗೆ ಕೊಡುವಾಗ ನಕಲಿ ನಾಣ್ಯ ಕೊಡುವ ಜನರ ಬಗ್ಗೆ ಕೌಟಿಲ್ಯ ಎಚ್ಚರಿಸುತ್ತಾನೆಂದರೆ- ಇದು ಜನರ ಕೋಪ ಎಂದಲ್ಲದೆ ಇನ್ನೇನು ಹೇಳಬೇಕು? ಆದರೂ ಸುಂಕದವನ ಮಂದೆ ಸುಖದುಃಖ ಹೇಳಿಕೊಂಡು ಅದರಿಂದ ಪಾರಾದ ನರಮನುಷ್ಯರಿಲ್ಲ!

ಹರಿಶ್ಚಂದ್ರನ ಕಥೆಯಲ್ಲಿ, ಹಾವು ಕಚ್ಚಿ ಸತ್ತ ಮಗನನ್ನು ಸ್ಮಶಾನಕ್ಕೆ ತಂದ ಹೆಂಡತಿ ಚಂದ್ರಮತಿಗೆ ಅವನು ‘ಕರ ಕೊಡದೆ ಶವ ಹೂಳುವುದಿಲ್ಲ’ ಎಂದು ಅಬ್ಬರಿಸಿ ಹೇಳುತ್ತಾನೆ. ನೀನು ನನ್ನನ್ನು ಮಾರಿದ ಮೇಲೆ ಯಾರದೋ ಮನೆಯಲ್ಲಿ ಊಳಿಗ ಮಾಡುತ್ತಿರುವ ನಾನು ಹಣ ಎಲ್ಲಿಂದ ತರಲಿ ಎಂದವಳು ಗೋಳಾಡುತ್ತಾಳೆ. 

ಜಗತ್ತಿನ ಎಲ್ಲಾ ಕಡೆ ಇರುವಂತೆ ಸತ್ಯ ಹರಿಶ್ಚಂದ್ರನ ನಾಡಿನಲ್ಲೂ ಸತ್ತ ಮೇಲೂ ಸುಂಕ ತಪ್ಪದು- ಹರಿಶ್ಚಂದ್ರ ಘಾಟೇ ಕೊನೆಯ ಸುಂಕದ ಕಟ್ಟೆ!

(ಈ ಲೇಖನ ಬರೆಯಲು ಇಂಟರ್‌ನೆಟ್ ಸೇರಿ ಹಲವು ಲಿಖಿತ ಮೂಲಗಳಿಂದ ವಿವರಗಳನ್ನು ಸಂಗ್ರಹಿಸಿದ್ದೇನೆ. ಡಾ. ಎಂ.ಚಿದಾನಂದ ಮೂರ್ತಿ ಅವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಮತ್ತು ಡಾ. ಸಿ.ವೀರಣ್ಣ ಅವರ ‘ಹನ್ನೆರಡನೆಯ ಶತಮಾನದ ಕಾಯಕ ಜೀವಿಗಳ ಚಳವಳಿ’ ಪುಸ್ತಕಗಳಿಂದ ವಿಶೇಷವಾಗಿ ನೆರವು ಪಡೆದಿದ್ದೇನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT