ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಚರಂಡಿಯಲ್ಲಿ ಶೌಚ ನೀರು!

ಕಾರವಾರದಲ್ಲಿ ಹಳ್ಳ ಹಿಡಿದ ಒಳಚರಂಡಿ ವ್ಯವಸ್ಥೆ
Last Updated 22 ಜುಲೈ 2013, 7:16 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ತೆರೆದ ಚರಂಡಿಯಲ್ಲೇ ಶೌಚ ನೀರು ಹರಿಯುತ್ತಿದೆ. 

ನಗರದಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, ಇವುಗಳ ಪೈಕಿ ಏಳು ವಾರ್ಡ್‌ಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಒಳಚರಂಡಿ ವ್ಯವಸ್ಥೆ ಹೊಂದಿರುವ ಕಡೆಗಳಲ್ಲೂ ಮ್ಯಾನ್‌ಹೋಲ್‌ಗಳು ಒಡೆದು ಶೌಚ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ದುಃಸ್ಥಿತಿ ಇದೆ.

ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ಅನೇಕ ಸರ್ಕಾರಿ ಕಚೇರಿಗಳಿವೆ. ಈ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯ್ತಿ ಕಚೇರಿ ಮುಂದಿನ ತೆರೆದ ಚರಂಡಿಯಲ್ಲೇ ಶೌಚದ ನೀರು ಹರಿಯುತ್ತಿದೆ. ಇದರ ಬಳಿಯಲ್ಲಿಯೇ ತಾಲ್ಲೂಕು ಪಂಚಾಯ್ತಿ, ಪೊಲೀಸ್ ವಿಶ್ರಾಂತಿ ಗೃಹ, ತೋಟಗಾರಿಕಾ ಇಲಾಖೆ ಮತ್ತಿತರರ ಪ್ರಮುಖ ಇಲಾಖೆಗಳ ಕಚೇರಿಗಳಿವೆ. ಇಲ್ಲಿನ ಅವ್ಯವಸ್ಥೆಯಿಂದ ಬೇಸತ್ತ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಳೆಗಾಲ ಬಂತೆಂದರೆ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಶೌಚ ನೀರು ಉಕ್ಕಿ ಹರಿಯುತ್ತದೆ. ಈ ಅವ್ಯವಸ್ಥೆ ವಿರುದ್ಧ ಸಾಕಷ್ಟು ಸಂಘಟನೆಗಳು ಧ್ವನಿ ಎತ್ತಿದ್ದವು. ಆದರೆ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ.

2010ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯು (ಕೆಯುಡಿಎಫ್‌ಸಿ) ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆಯಡಿ (ಕೆಯುಡಿಸಿಇಎಂಪಿ) ಏಷ್ಯನ್ ಬ್ಯಾಂಕ್ ಮೂಲಕ ಸಾಲ ಪಡೆದು ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾದಲ್ಲಿ ಕುಡಿಯುವ ನೀರು, ರಸ್ತೆ, ವಾಣಿಜ್ಯ ಮಳಿಗೆಗಳ ಸ್ಥಾಪನೆ ಹಾಗೂ ಯುಜಿಡಿ  ಕಾಮಗಾರಿ ಕೈಗೊಂಡಿತ್ತು.

`ಕೆಯುಡಿಎಫ್‌ಸಿಯು ಕಾರವಾರದ ಏಳು ವಾರ್ಡ್ ಗಳಿಗೆ ಮಾತ್ರ ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿತ್ತು. ಒಂದು ವರ್ಷದ ಬಳಿಕ ಕೆಯುಡಿಎಫ್‌ಸಿ ಇದರ ನಿರ್ವಹಣೆಯನ್ನು ನಗರಸಭೆಗೆ ವಹಿಸಲು ಮುಂದಾಯಿತು. ಯುಜಿಡಿ ಸಮರ್ಪಕವಾಗಿಲ್ಲ ಎನ್ನುವ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದ ಕಾರಣ ನಗರಸಭೆ ಇದರ ನಿರ್ವಹಣೆ ತೆಗೆದುಕೊಳ್ಳಲು ಹಿಂದೇಟು ಹಾಕಿತು. ಆದರೆ, ಈಗ ಅನಿವಾರ್ಯವಾಗಿ ಇದರ ನಿರ್ವಹಣೆಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಯುಜಿಡಿ ಸಮಸ್ಯೆ ಎದುರಾಗುತ್ತಿದೆ. ದುಃಸ್ಥಿತಿಯಲ್ಲಿರುವ ಮ್ಯಾನ್‌ಹೋಲ್‌ಗಳನ್ನು ದುರಸ್ತಿಪಡಿಸಲಾಗುವುದು' ಎಂದು ನಗರಸಭೆ ಪರಿಸರ ಎಂಜಿನಿಯರ್ ಪ್ರಸನ್ನ `ಪ್ರಜಾವಾಣಿ'ಗೆ ತಿಳಿಸಿದರು.

2 ಸಾವಿರ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲಾಗಿತ್ತು. ಇದರಲ್ಲಿ 400 ಸಂಪರ್ಕಗಳು ಮಾತ್ರ `ಸುಸ್ಥಿತಿಯಲ್ಲಿವೆ. ನಗರದಲ್ಲಿ ಒಟ್ಟು 520 ಮ್ಯಾನ್‌ಹೋಲ್‌ಗಳಿದ್ದು, ಮಳೆಗಾಲ ಬಂತೆಂದರೆ ಮ್ಯಾನ್‌ಹೋಲ್‌ಗಳಿಗೆ ನೀರು ನುಗ್ಗಿ ಶೌಚದ ನೀರು ಉಕ್ಕುತ್ತದೆ' ಎನ್ನುತ್ತಾರೆ ಅವರು.

ಸರ್ಕಾರಕ್ಕೆ ಪ್ರಸ್ತಾವನೆ...
ನಗರದಲ್ಲಿನ ಎಲ್ಲಾ ವಾರ್ಡ್‌ಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರೊಂದಿಗೆ ದುಃಸ್ಥಿತಿಯಲ್ಲಿರುವ ಯುಜಿಡಿ ಸಂಪರ್ಕವನ್ನು ಸರಿಪಡಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು.
ಪ್ರಸನ್ನ, ಪರಿಸರ ಎಂಜಿನಿಯರ್, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT