ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದುಕೊಂಡಿತು ನೆನಪುಗಳ ಮೆರವಣಿಗೆ

1963ರ ಕಟ್ಟಡ ಕೆಡವಿದಾಗ..
Last Updated 6 ಏಪ್ರಿಲ್ 2013, 9:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಳಿಗ್ಗೆ 6 ಗಂಟೆ ಸುಮಾರಿಗೆ ನಗರದ ಹಳೆ ಬಸ್ ನಿಲ್ದಾಣದ ಹಳೆಯ ಕಟ್ಟಡವನ್ನು ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಡವಲು ಆರಂಭಿಸಿದ್ದೇ ತಡ, ಕಟ್ಟಡದೊಂದಿಗಿನ ಹಲವು ವರ್ಷಗಳ ನಂಟು ಒಂದೊಂದಾಗಿ ಬಿಚ್ಚಕೊಳ್ಳತೊಡಗಿತು. ಕಟ್ಟಡ ಕಟ್ಟುವಾಗಿನ ನೆನಪು, ಕಟ್ಟಡ ಉದ್ಘಾಟನೆಗೊಳ್ಳುವಾಗ ಇದ್ದ ಸಂಭ್ರಮ ಮತ್ತು ಎಲ್ಲವೂ ನಶಿಸಿ ಹೋಗುತ್ತಿರುವ ದುಃಖ ಎಲ್ಲವೂ ಅಲ್ಲಿ ಮೇಳೈಸಿತ್ತು. ನಗರದ ಜನಜೀವನದೊಂದಿಗೆ ಹಲವು ದಶಕಗಳಿಂದ ಹೊಂದಿದ್ದ ಸಂಬಂಧವನ್ನು ಕಟ್ಟಡವು ಕಳಚಿಕೊಳ್ಳುತ್ತಿರುವುದು ಕಂಡು ಜನರು ಮೌನವಾಗಿದ್ದರು.

ಹಳೆಯ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿ ದಿನವೂ ಕಾಣಸಿಗುತ್ತಿದ್ದ ಚಟುವಟಿಕೆ ಶುಕ್ರವಾರ ಕಂಡು ಬರಲಿಲ್ಲ. ಹಳೆಯ ಕಟ್ಟಡದಲ್ಲಿನ ಬಹುತೇಕ ಎಲ್ಲ ಅಂಗಡಿಗಳು ಖಾಲಿಯಾಗಿದ್ದವು. ಪ್ರಯಾಣಿಕರ ದಟ್ಟಣೆಯೂ ಕಡಿಮೆಯಿತ್ತು. ಬಸ್‌ಗಳ ನಿಲುಗಡೆ ಮತ್ತು ಸಂಚಾರಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ, ವಾಹನಗಳು ಕೂಡ ಅಲ್ಲಿದ್ದವು.

ಪೊಲೀಸರೊಂದಿಗೆ ಅಷ್ಟೇ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಕಟ್ಟಡದೊಂದಿಗಿನ ತಮ್ಮ ನಂಟನ್ನು ನೆನಪಿಸಿಕೊಳ್ಳುತ್ತಿದ್ದರು. ನಗರದಲ್ಲೇ ಹಳೆಯದಾದ ಸುಧಾ ದರ್ಶಿನಿ ಹೋಟೆಲ್‌ನಲ್ಲಿ ದೋಸೆ ತಿಂದದ್ದು, ಪಾನ್‌ಶಾಪ್‌ನಲ್ಲಿ ಕಲ್ಕತ್ತಾ ಪಾನ್ ಕಟ್ಟಿಸಿಕೊಂಡು ಸವಿದಿದ್ದು, ಬೆಳಿಗ್ಗೆಯಾದ ಕೂಡಲೇ ಪೇಪರ್‌ಗಳನ್ನು ಖರೀದಿಸುತ್ತಿದ್ದದ್ದು ಎಲ್ಲವನ್ನೂ ಅಲ್ಲಿ ನೆರೆದಿದ್ದವರು ಸ್ಮರಿಸಿದರು.

ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಬೆಳಿಗ್ಗೆ 6.30ರ ಸುಮಾರಿಗೆ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡಿತು. ಮೊದಲಿಗೆ ಎಂ.ಜಿ.ರಸ್ತೆಯ ಬದಿಯಲ್ಲಿರುವ ಅಂಗಡಿಗಳಿಂದ ಆರಂಭಗೊಂಡ ಕಾರ್ಯಾಚರಣೆ ನಂತರ ಕಟ್ಟಡದ ಮತ್ತೊಂದು ತುದಿಯವರೆಗೆ ಮುಂದುವರಿಯಿತು.

ಕಟ್ಟಡವನ್ನು ಕೆಡವಲು ಆರಂಭದಲ್ಲಿ ಒಂದೇ ಜೆಸಿಬಿ ವಾಹನವನ್ನು ತಂದಿದ್ದರಿಂದ ಕಾರ್ಯಾಚರಣೆ ಸ್ವಲ್ಪ ವಿಳಂಬಗೊಂಡಿತು. ಸಿಮೆಂಟ್ ಗಚ್ಚು ಗಟ್ಟಿಮುಟ್ಟಾಗಿದ್ದ ಕಾರಣ ಹಳೆ ಕಟ್ಟಡವನ್ನು ಕೆಡವಲು ಸ್ವಲ್ಪ ಪ್ರಯಾಸ ಪಡಬೇಕಾಯಿತು. ಕೆಲ ಹೊತ್ತಿನ ಬಳಿಕ ಮತ್ತೊಂದು ಜೆಸಿಬಿ ವಾಹನವನ್ನು ತಂದು ಕಾರ್ಯಾಚರಣೆ ಮುಂದುವರಿಸಲಾಯಿತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆಯಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

`ನಾವು ಇಲ್ಲಿನ ಹಳೆಯ ಕಟ್ಟಡದ ಮಳಿಗೆಗಳಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದೆವು. ಎರಡು ವರ್ಷಗಳಿಂದ ಕಟ್ಟಡ ಕೆಡವಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ ನಾವು ನಂಬಿರಲಿಲ್ಲ. ಕಳೆದ ಒಂದು ತಿಂಗಳ ಅವಧಿಯಲ್ಲಿ ಎಲ್ಲವೂ ತ್ವರಿತಗತಿಯಲ್ಲಿ ನೆರವೇರಿತು.

ನೋಡುನೋಡುತ್ತಿದ್ದಂತೆಯೇ ಮಳಿಗೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಹೇಳಿದರು. ಗುರುವಾರದೊಳಗೆ ಖಾಲಿ ಮಾಡಿಕೊಟ್ಟೆವು. ಈಗ ಕಣ್ಣೆದುರಿಗೆ ನಮಗೆ ಆಶ್ರಯವಾಗಿದ್ದ ಕಟ್ಟಡವನ್ನು ಕೆಡವಲಾಗುತ್ತಿದೆ' ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು.

`ಒಂದು ವರ್ಷದ ಅವಧಿಯೊಳಗೆ ಇಲ್ಲಿನ ನೂತನ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುವುದು. ಒಟ್ಟು ಐದು ಮಹಡಿಗಳ ಕಟ್ಟಡ ನಿರ್ಮಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಾಗುವುದು. ನಗರದಲ್ಲೇ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಕಟ್ಟಡ ನಿರ್ಮಿಸಲಾಗುವುದು. ಕಟ್ಟಡ ನಿರ್ಮಾಣ ಪೂರ್ಣಗೊಳಿಸಿದ ನಂತರ ಮಳಿಗೆದಾರರಿಗೆ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ನೀಡಲಾಗುವುದು. ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ' ಎಂದು ಜಿಲ್ಲಾ ಯೋಜನಾಧಿಕಾರಿ ಆರ್.ನಾಗರಾಜಶೆಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್, ನಗರ ಠಾಣೆ ಎಸ್‌ಐ ನಯಾಜ್ ಬೇಗ್, ಗ್ರಾಮಾಂತರ ಠಾಣೆ ಎಸ್‌ಐ ನಯಾಜ್ ಬೇಗ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT