ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಯಲ್ಲಿ ಅಕ್ರಮ ಮರಳು ಸಾಗಣೆ

ಪ್ರವಾಹದಿಂದ ಮರಳು ಗಣಿಗಾರಿಕೆಗೆ ಕೊಂಚ ಬ್ರೇಕ್
Last Updated 10 ಜುಲೈ 2013, 8:55 IST
ಅಕ್ಷರ ಗಾತ್ರ

ಮೈಸೂರು: ಹಗಲು ವೇಳೆಯಲ್ಲೇ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ಈಗ ಕೊಂಚ ತಗ್ಗಿದೆ. ಅಬ್ಬರದ ಮುಂಗಾರು ಮಳೆಯಿಂದ ಎಲ್ಲ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಮರಳು ತೆಗೆಯಲು ಸಾಧ್ಯವಾಗುತ್ತಿಲ್ಲ. ಆದರೂ, ಅಕ್ರಮ ಮರಳು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿಲ್ಲ. ಇಲ್ಲಿವರೆಗೆ ಸಂಗ್ರಹಿಟ್ಟಿದ್ದ ಮರಳನ್ನು ತೆರೆಮರೆಯಲ್ಲಿ ಸಾಗಣೆ ಮಾಡಲಾಗುತ್ತಿದೆ.

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸ ಮರಳು ನೀತಿಯನ್ನು ಜಾರಿ ತರಲಾಗಿತ್ತು. ಆದರೆ, ಮರಳನ್ನು ಹಗಲು ರಾತ್ರಿ ಎನ್ನದೆ ನಿರಂತರವಾಗಿ ನೆರೆ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಇದನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಸಹ ವಿಫಲರಾಗಿದ್ದರು.

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಅಗತ್ಯ ಇರುವ ಮರಳನ್ನು ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಲೋಕೋಪಯೋಗಿ ಇಲಾಖೆ ಮೂಲಕ ಪರ್ಮಿಟ್‌ಗಳನ್ನು ನೀಡಿ ಒಂದು ಲೋಡ್‌ಗೆ ರೂ 7 ಸಾವಿರಕ್ಕೆ ಮರಳನ್ನು ನೀಡುತ್ತಿತ್ತು.

ಜಿಲ್ಲಾಡಳಿತವೇ ನದಿಪಾತ್ರಗಳಲ್ಲಿ ಮರಳು ಯಾರ್ಡ್‌ಗಳನ್ನು ಗುರುತು ಮಾಡಿತ್ತು. ಸ್ವಂತ ವಾಹನ ಹೊಂದಿರುವವರು ಯಾರ್ಡ್‌ಗಳಿಗೆ ನೇರವಾಗಿ ತೆರಳಿ ಮರಳು ಖರೀದಿ ಮಾಡಲು ಅವಕಾಶ ನೀಡಿತ್ತು. ಇದರಿಂದ ಗ್ರಾಹಕರು ಸಹ ಸಂತಸಗೊಂಡಿದ್ದರು. ಇಷ್ಟಾದರೂ ಬೇಡಿಕೆಗೆ ತಕ್ಕಂತೆ ಗ್ರಾಹಕರಿಗೆ ಮರಳು ಸಿಗಲಿಲ್ಲ. ಯಾರ್ಡ್‌ಗಳಲ್ಲಿ ಮರಳು ಸಂಗ್ರಹ ಇಲ್ಲದ ಕಾರಣ ಗ್ರಾಹಕರೇ ಜಿಲ್ಲಾಡಳಿತ ವಿರುದ್ಧ ತಿರುಗಿಬಿದ್ದಿದ್ದರು. ಮರಳು ಲಾರಿ ಮಾಲೀಕರಿಗೆ ತಿಂಗಳಿಗೆ ನಿಗದಿಪಡಿಸಿದ್ದ ಪರ್ಮಿಟ್‌ಗಳನ್ನು ಸಹ ನೀಡಲು ಸಾಧ್ಯವಾಗಲಿಲ್ಲ. ಲಾರಿ ಮಾಲೀಕರ ಕೆಂಗಣ್ಣಿಗೂ ಜಿಲ್ಲಾಡಳಿತ ಗುರಿಯಾಗಿತ್ತು. ಇದೇ ಪರಿಸ್ಥಿತಿ ಈಗ ಮತ್ತೆ ಮುಂದುವರಿದಿದೆ. 

ಜಿಲ್ಲೆಯ ನರಸೀಪುರ ತಾಲ್ಲೂಕಿನಲ್ಲಿ ಕಾವೇರಿ-ಕಪಿಲಾ, ನಂಜನಗೂಡಿನಲ್ಲಿ ಕಪಿಲಾ, ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣತೀರ್ಥ, ಎಚ್.ಡಿ.ಕೋಟೆಯಲ್ಲಿ ಕಬಿನಿ ನದಿ ಉಕ್ಕಿ ಹರಿಯುತ್ತಿವೆ. ನೀರಿನ ಸೆಳೆತ ಹೆಚ್ಚಿರುವುದರಿಂದ ಮರಳು ಗಣಿಗಾರಿಕೆಯನ್ನು ಕೆಲವೆಡೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಕೆರೆಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ ಮತ್ತು ನೀರಿನ ಸೆಳೆತ ಕಡಿಮೆ ಇರುವ ಕಡೆ ಅಲ್ಲಲ್ಲಿ ಮರಳು ಎತ್ತಲಾಗುತ್ತಿದೆ. ಗುತ್ತಿಗೆದಾರರು, ಪ್ರಭಾವಿ ನಾಯಕರ ಬೆಂಬಲ ಇರುವ ಸ್ಥಳೀಯರು ಮರಳನ್ನು ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಸಾಗಿಸುತ್ತಿದ್ದಾರೆ.

ಹುಣಸೂರು ತಾಲ್ಲೂಕಿನ ರತ್ನಾಪುರಿ ಬಳಿ ಇರುವ ದೇವಿಕೆರೆಯಲ್ಲಿ ನಿತ್ಯ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿತ್ತು. ಈ ಬಗ್ಗೆ `ಪ್ರಜಾವಾಣಿ' ವರದಿ ಮಾಡಿದ್ದರಿಂದ ಎಚ್ಚತ್ತು ಕೊಂಡ ತಹಶೀಲ್ದಾರ್ ದಾಳಿ ಮಾಡಿ ಸುಮಾರು 30 ಲೋಡ್ ಮರಳನ್ನು ವಶಕ್ಕೆ ಪಡೆದಿದ್ದರು.

ಕೆ.ಆರ್. ನಗರ ಮತ್ತು ಎಚ್.ಡಿ. ಕೋಟೆ ತಾಲ್ಲೂಕಿನಲ್ಲೂ ಮರಳು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಕದ್ದುಮುಚ್ಚಿ ಮರಳನ್ನು ತೆಗೆದು ಅಕ್ರಮವಾಗಿ ಹೊರಗಡೆ ಸಾಗಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚು ನಡೆಯುತ್ತಿದ್ದ ತಿ.ನರಸೀಪುರ ತಾಲ್ಲೂಕಿನಲ್ಲಿ ಅಧಿಕಾರಿಗಳು ಬಿಗಿ ಮಾಡಿರುವುದರಿಂದ ಅಕ್ರಮ ಮರಳು ಗಣಿಗಾರಿಕೆಗೆ ಕೊಂಚ ಬ್ರೇಕ್ ಬಿದ್ದಿದೆ. ಇಲ್ಲಿವರೆಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳಿಗೆ ಬಾರಿ ಬೇಡಿಕೆ ಬಂದಿದ್ದು, ಹೆಚ್ಚಿನ ಹಣ ಪಡೆದು ಸಾಗಣೆ ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.ಆದರೆ, ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ನಡೆಯುತ್ತಿದೆ ಎಂಬ ಮಾತನ್ನು ಅಧಿಕಾರಿಗಳು ಸುತಾರಾಂ ಒಪ್ಪುವುದಿಲ್ಲ. ಜಿಲ್ಲೆಯ ಎಲ್ಲ ಕಡೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಮರಳು ಗಣಿಗಾರಿಕೆ, ಸಾಗಣೆ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ದಾಳಿ ಮಾಡಿ ಮರಳನ್ನು ವಶಪಡಿಸಿಕೊಂಡು ದಂಡ ಹಾಕುತ್ತಿದ್ದಾರೆ. ಮೇಲಾಗಿ ನದಿಗಳಲ್ಲಿ ಪ್ರವಾಹ ಇರುವುದರಿಂದ ಜಿಲ್ಲೆಯ ನದಿಪಾತ್ರಗಳಲ್ಲಿ ತಾತ್ಕಾಲಿಕವಾಗಿ ಮರಳು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಹಾಗಾಗಿ, ಎಲ್ಲೂ ಮರಳು ಗಣಿಗಾರಿಕೆ, ಅಕ್ರಮ ಸಾಗಣೆ ನಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಮರಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ: ಡಿಸಿ
ಮೈಸೂರು: ಮರಳಿಗೆ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಮೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಸ್ಥಳೀಯ ಲಾರಿ ಮಾಲೀಕರ ಸಂಘ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಲೋಡ್ ಮರಳು (5.5 ಕ್ಯುಬಿಕ್ ಮೀಟರ್) ರೂ 7,850 ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವವರ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಮರಳನ್ನು ಸರಬರಾಜು ಮಾಡಲು ಆಗುತ್ತಿಲ್ಲ. ನಗರಕ್ಕೆ ಹೆಚ್ಚಿನ ಮರಳು ಅಗತ್ಯ ಇದೆ. ಹಾಗಾಗಿ ಕೂಡಲೇ ಮೈಸೂರಿಗೆ 3 ಸಾವಿರ ಲೋಡ್ ಮರಳು ತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮರಳಿನ ಕೊರತೆ ಎದುರಾದರೆ ಮಂಡ್ಯದಿಂದ ತರಿಸುವಂತೆ ಹೇಳಿದರು.

ಟಿಪ್ಪರ್‌ಗೆ ಅವಕಾಶ: ಟಿಪ್ಪರ್‌ಗಳಲ್ಲಿ ಮರಳು ಸಾಗಿಸುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರಿಂದ ಸ್ಥಳೀಯ ಲಾರಿ ಮಾಲೀಕರು ಮತ್ತು ಟಿಪ್ಪರ್ ಮಾಲೀಕರು ಹಲವಾರು ಬಾರಿ ಪ್ರತಿಭಟನೆ ಮಾಡಿದ್ದರು. ಆದರೂ ಇದನ್ನು ಜಿಲ್ಲಾಡಳಿತ ಸಡಿಲಿಕೆ ಮಾಡಿರಲಿಲ್ಲ. ಇನ್ನು ಮುಂದೆ ಟಿಪ್ಪರ್‌ಗಳಲ್ಲೂ ಮರಳು ಸಾಗಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟಿಪ್ಪರ್ ಮತ್ತು ಲಾರಿಗಳ ಮೇಲೆ ಹಾಕಲಾಗಿದ್ದ ಕೇಸುಗಳನ್ನು ಹಿಂದಕ್ಕೆ ಪಡೆಯಲಾಗುವುದು. ಆದರೆ ಮೂರು ಬಾರಿಗಿಂತ ಹೆಚ್ಚು ಅಕ್ರಮ ಮರಳು ಸಾಗಿಸಿ ಕೇಸು ದಾಖಲಾದ ಪ್ರಕರಣಗಳು ಮತ್ತು ಹೈಕೋರ್ಟ್‌ನಲ್ಲಿ ಇರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದರು.

`ಅಕ್ರಮ ಸಾಗಣೆ ಸಂಪೂರ್ಣ ಕಡಿವಾಣ'
`ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಮತ್ತು ಸಾಗಣೆಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿದೆ. ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದಾಳಿ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ `ಫ್ಲೈಯಿಂಗ್ ಸ್ಕ್ವಾಡ್' ರಚಿಸಲಾಗಿದೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮರಳಿಗೆ ಬೇಡಿಕೆ ಹೆಚ್ಚಿರುವುದರಿಂದ ನಾವೇ ಮಂಡ್ಯದಿಂದ ಮರಳನ್ನು ತರಿಸುತ್ತಿದ್ದೇವೆ'
-ಡಾ.ರಾಮೇಗೌಡ,
ಜಿಲ್ಲಾಧಿಕಾರಿ

ಪ್ರಭಾವಿ ರಾಜಕಾರಣಿಗಳು ಭಾಗಿ
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆಯಲ್ಲಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಮಕ್ಕಳು ಭಾಗಿಯಾಗಿದ್ದಾರೆ ಎಂಬುದು ನಗ್ನಸತ್ಯ. ರಾಜಕಾರಣಿಗಳ ಹಿಂಬಾಲಕರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.

ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಮರಳು ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಸಾರ್ವಜನಿಕರ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾದರೆ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT