ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಇಂದು ವರದಿ ಪ್ರಕಟ

Last Updated 6 ಜನವರಿ 2011, 6:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಬೇಡಿಕೆ ಈಡೇರಿಕೆಗೆ ಸಂಬಂಧಿಸಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿಯು ಆರು ಶಿಫಾರಸುಗಳನ್ನು ಮಾಡಿದ್ದು ಇವುಗಳ ಜಾರಿಗೆ ಸರ್ಕಾರ ಆರು ವಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

 ಸರ್ಕಾರವು ಫೆಬ್ರುವರಿ ಅಂತ್ಯದೊಳಗೆ ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೂ ಮುನ್ನವೇ ಈ ಶಿಫಾರಸುಗಳ ಜಾರಿಗಾಗಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.  ಸರ್ಕಾರವು ಗುರುವಾರ ಈ ವರದಿಯನ್ನು ಬಿಡುಗಡೆ ಮಾಡಲಿದೆ.

ಸಮಿತಿಯು ಐತಿಹಾಸಿಕ ಹಿನ್ನೆಲೆಯೊಂದಿಗೆ ಈ ಆರು ಶಿಫಾರಸುಗಳಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ತಿಳಿಸಿದ್ದು ಯಾವುದೇ ನಿರ್ದಿಷ್ಟ ಸಮಾನ ಶಿಫಾರಸು ಮಾಡಿಲ್ಲ. ಇವುಗಳಲ್ಲಿ ಮುಖ್ಯವಾಗಿ ಈಗಿರುವ ಮಾದರಿಯಲ್ಲೇ ಆಂಧ್ರಪ್ರದೇಶ ರಾಜ್ಯವನ್ನು ಉಳಿಸಿಕೊಳ್ಳುವುದು, ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವುದು ಹಾಗೂ ಹೈದರಾಬಾದ್‌ನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವುದು ಸೇರಿವೆ. ರಾಜ್ಯದ ಎಲ್ಲ ಪ್ರಾಂತ್ಯಗಳ ಸಾಮಾಜಿಕ-ಆರ್ಥಿಕ ಕೋನಗಳನ್ನು ಪರಿಶೀಲಿಸಿ, ತೆಲಂಗಾಣವೊಂದೇ ಹಿಂದುಳಿದ ಪ್ರದೇಶ ಎನ್ನಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೂ ಸಮಿತಿ ಬಂದಿದೆ.

ಇಂದು ಸಭೆ: ಸಮಿತಿಯ ಈ ವರದಿ ಬಗ್ಗೆ ಚರ್ಚಿಸಲು ಆಂಧ್ರಪ್ರದೇಶದ ಎಲ್ಲ ರಾಜಕೀಯ ಪಕ್ಷಗಳ ಸಭೆಯನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಗುರುವಾರ ಇಲ್ಲಿ ಕರೆದಿದ್ದಾರೆ. ಆದರೆ ಟಿಆರ್‌ಎಸ್, ಬಿಜೆಪಿ ಹಾಗೂ ತೆಲುಗುದೇಶಂ ಈ ಸಭೆ ಬಹಿಷ್ಕರಿಸುವುದಾಗಿ ಪ್ರಕಟಿಸಿವೆ. ಆದರೂ ಸಚಿವರು ಸಭೆ ನಡೆಸಲು ನಿಶ್ಚಯಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬುಧವಾರ ತಮ್ಮನ್ನು ಭೇಟಿಯಾದ ಆಂಧ್ರಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಕ್ಷ್ಮವಾದ ತೆಲಂಗಾಣ ವಿಷಯದಲ್ಲಿ ಸರ್ಕಾರ ತೀವ್ರ ಪರಿಶೀಲನೆ ಮತ್ತು ಮಾತುಕತೆಯ ಬಳಿಕವೇ ನಿರ್ಧಾರ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.

ವರದಿ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯವಿರುವ ವದಂತಿಗಳನ್ನು ತಳ್ಳಿಹಾಕಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ, ಗುರುವಾರ ವರದಿ ಬಿಡುಗಡೆಯಾಗುವ ತನಕ ಎಲ್ಲರೂ ಕಾಯುವಂತೆ ಮನವಿ ಮಾಡಿದ್ದಾರೆ.

ಸಮಿತಿಯ ವರದಿಯನ್ನು ಒಪ್ಪಿಕೊಳ್ಳದಂತೆ ಆಗ್ರಹಿಸಿ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲು ದೆಹಲಿಗೆ ಧಾವಿಸಿರುವ ತೆಲಂಗಾಣ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು, ಗೃಹ ಸಚಿವರ ಸಭೆ ಬಹಿಷ್ಕರಿಸುವಂತೆ ಪಕ್ಷಗಳಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಿಗೂ ಸಭೆಯಲ್ಲಿ ಭಾಗವಹಿಸದಂತೆ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಹಾಜರಾಗುವವರಿಗೆ ಘೇರಾವ್ ಮಾಡಲು ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಲು ಯೋಜಿಸಿದ್ದಾರೆ.

ಹೈದರಾಬಾದ್ ವರದಿ: ಈ ನಡುವೆ, ತೆಲಂಗಾಣ ಚಳವಳಿಯಲ್ಲಿ ಅಲ್ಪಸಂಖ್ಯಾತರಿಗೆ ಆಸಕ್ತಿಯಿಲ್ಲ ಎಂಬ ಶ್ರೀಕೃಷ್ಣ ಸಮಿತಿಯ ಇಬ್ಬರು ಸದಸ್ಯರ ಹೇಳಿಕೆ ಬಗ್ಗೆ ತನಿಖೆ ನಡೆಸುವಂತೆ ಇಲ್ಲಿನ ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೊಲೀಸರಿಗೆ ಬುಧವಾರ ನಿದೇರ್ಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT