ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಬಿಕ್ಕಟ್ಟು: ಆಂಧ್ರ ರಾಜ್ಯಪಾಲರಿಂದ ಪ್ರಧಾನಿ ಭೇಟಿ

Last Updated 8 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆಲಂಗಾಣ ಬಿಕ್ಕಟ್ಟು ವಿಷಯದಲ್ಲಿ ಕೇಂದ್ರ ಬಿಗಿಪಟ್ಟು ಹಿಡಿದಿರುವಂತೆಯೇ ಆಂಧ್ರಪ್ರದೇಶ ದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಚಳವಳಿ ನಿರತ ಪ್ರಾಂತ್ಯಗಳ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.

ಶುಕ್ರವಾರ ಸಂಜೆ ನವದೆಹಲಿಗೆ ಆಗಮಿಸಿದ ನರಸಿಂಹನ್ ಅವರು ಶನಿವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿಯವರ ಗೃಹಕಚೇರಿಯಲ್ಲಿ  ಪ್ರಧಾನಿ ಅವರನ್ನು ಭೇಟಿ ಮಾಡಿ ತೆಲಂಗಾಣ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಧೀರ್ಘ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

ತೆಲಂಗಾಣ ಪ್ರಾಂತ್ಯದಲ್ಲಿ ನಡೆದಿರುವ ಚಳುವಳಿಯು ಶನಿವಾರಕ್ಕೆ  27ನೇ ದಿನಕ್ಕೆ ಕಾಲಿಟ್ಟಿದ್ದು, ಮುಂಬರುವ ದಿನಗಳಲ್ಲಿ ಚಳುವಳಿಯು ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಡೆದಿರುವ ಈ ಮಾತುಕತೆ ಮಹತ್ವದ್ದು ಎನ್ನಲಾಗಿದೆ. ಆದರೆ ಭೇಟಿಯ ವೇಳೆ ನಡೆದಿರುವ ಮಾತುಕತೆ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ತಿಳಿದು ಬಂದಿಲ್ಲ.

ಪ್ರಧಾನಿ ಅವರನ್ನು ಭೇಟಿ ಮಾಡುವುದಕ್ಕಿಂತಲೂ ಮೊದಲು ನರಸಿಂಹನ್ ಅವರು ಗೃಹ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಚರ್ಚಿಸಿದರು.
 
ಈ ಮಧ್ಯೆ ಮುಖ್ಯಮಂತ್ರಿ ಎನ್.ಕಿರಣ್‌ಕುಮಾರ್ ರೆಡ್ಡಿ ಮತ್ತು ಉಪಮುಖ್ಯಮಂತ್ರಿ ದಾಮೋದರ ರಾಜನರಸಿಂಹ ಸಹ ತೆಲಂಗಾಣ ಬಿಕ್ಕಟ್ಟು ಕುರಿತು ಕೇಂದ್ರ ನಾಯಕರೊಂದಿಗೆ ಚರ್ಚಿಸಲು ನವದೆಹಲಿಗೆ ಆಗಮಿಸಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ಅವರು ತೆಲಂಗಾಣ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಟಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ್ ರಾವ್ ಹಾಗೂ ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ನಿಲ್ಲಿಸುವಂತೆ ಪ್ರಧಾನಿ ಅವರು ಮಾಡಿಕೊಂಡ ಮನವಿಯನ್ನು ರಾವ್ ಅವರು ತಿರಸ್ಕರಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT