ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಮಸ್ಯೆ: ಪ್ರಮುಖ ಪಕ್ಷಗಳ ಜೊತೆ ಕೇಂದ್ರದ ತೀರ್ಮಾನ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆಲಂಗಾಣ ಸಮಸ್ಯೆಗೆ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಶ್ರೀಕೃಷ್ಣ ಸಮಿತಿಯ ಶಿಫಾರಸಿನ ಕುರಿತು ಚರ್ಚಿಸಲು ಗಣರಾಜ್ಯೋತ್ಸವ ದಿನದ ಒಳಗೆ ಆಂಧ್ರಪ್ರದೇಶದ ಪ್ರಮುಖ ಪಕ್ಷಗಳೊಂದಿಗೆ ಸಭೆ ಆಯೋಜಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಫೆಬ್ರುವರಿ ಅಂತ್ಯದಲ್ಲಿ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲೇ ಸಮಿತಿಯ ಶಿಫಾರಸ್ಸಿನ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಗೃಹಸಚಿವ ಪಿ.ಚಿದಂಬರಂ ಶೀಘ್ರದಲ್ಲಿಯೇ ಸಮಿತಿ ವರದಿ ಮೇಲಿನ ಅಭಿಪ್ರಾಯಗಳನ್ನು ಸಂಗ್ರಹಿಸಲು ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆಯಲಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಸೂಕ್ತ ದಿನಾಂಕವನ್ನು ನಿರ್ಣಯಿಸುವ ಸಾಧ್ಯತೆಯಿದೆ. ವರದಿ ಸಾರ್ವಜನಿಕವಾಗಿ ಪ್ರಕಟಗೊಂಡ ನಂತರದ ಜ.6ರ ಸಭೆಯಲ್ಲಿ ಪ್ರಮುಖ ಪಕ್ಷಗಳಾದ ಟಿಆರ್‌ಎಸ್, ಟಿಡಿಪಿ ಮತ್ತು ಬಿಜೆಪಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಕೇಂದ್ರ ಎಲ್ಲಾ ಎಂಟು ಪಕ್ಷಗಳ ಮನವೊಲಿಸಲು ಸರ್ವಪ್ರಯತ್ನ ನಡೆಸಿದೆ. ಮುಂದಿನ ಸಭೆಯಲ್ಲಿ ಎಲ್ಲಾ ಪಕ್ಷಗಳೂ ಭಾಗವಹಿಸುವ ಬಗ್ಗೆ ಅದು ಆಶಾಭಾವ ವ್ಯಕ್ತಪಡಿಸಿದೆ.

ಸಭೆಗೆ ಪ್ರತಿ ಪಕ್ಷಗಳಿಂದ ಎಷ್ಟು ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜ.6 ರ ಸಭೆಗೆ ಎಲ್ಲಾ ಪಕ್ಷಗಳಿಂದ ತಲಾ ಎರಡು ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟಿಆರ್‌ಎಸ್ ಕೇಂದ್ರ ಪ್ರತಿ ಪಕ್ಷಗಳ ಅಭಿಪ್ರಾಯಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಭೆಯನ್ನು ಬಹಿಷ್ಕರಿಸಿತ್ತು.

ತೆಲಂಗಾಣ ಸಮಸ್ಯೆ ಬಗ್ಗೆ ವರದಿ ನೀಡಿರುವ ಶ್ರೀಕೃಷ್ಣ ಸಮಿತಿ ಮೊದಲ ನಾಲ್ಕು ಬೇಡಿಕೆಗಳನ್ನು ಅಳವಡಿಸಲು ಅಸಾಧ್ಯ ಎಂದು ತಿರಸ್ಕರಿಸಿತ್ತು. ಹೀಗಾಗಿ ಅಖಂಡ ಆಂಧ್ರದೊಂದಿಗೆ ತೆಲಂಗಾಣದ ಸಬಲೀಕರಣಕ್ಕೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸಮಸ್ಯೆ ಬಗೆಹರಿಸಲು ಪ್ರತ್ಯೇಕ ರಾಜ್ಯ ಸ್ಥಾಪನೆ-ಈ ಎರಡು ಅಂಶಗಳು ಚರ್ಚೆಯ ಪ್ರಧಾನ ವಸ್ತುಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT