ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಸಮ್ಮತಿಮುದ್ರೆ

ಸಿಡಬ್ಲ್ಯುಸಿ ಒಮ್ಮತದ ನಿರ್ಧಾರ * ಯುಪಿಎ ಸಮನ್ವಯ ಸಮಿತಿಯೂ ಅಸ್ತು
Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಆಂಧ್ರಪ್ರದೇಶ ವಿಭಜಿಸಿ ತೆಲಂಗಾಣವನ್ನು ದೇಶದ 29ನೇ ರಾಜ್ಯವನ್ನಾಗಿ ರಚಿಸುವ ನಿರ್ಣಯಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಮಂಗಳವಾರ ಒಪ್ಪಿಗೆ ನೀಡಿದೆ. ಈ ಮೂಲಕ ದಕ್ಷಿಣ ಭಾರತದ ಹೊಸ ರಾಜ್ಯವು ಈ ವರ್ಷಾಂತ್ಯದ ಹೊತ್ತಿಗೆ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಜೊತೆಗೆ ಹೈದರಾಬಾದ್ ನಗರವು ಉಭಯ ರಾಜ್ಯಗಳಿಗೂ ಕನಿಷ್ಠ 10 ವರ್ಷಗಳ ಕಾಲ ರಾಜಧಾನಿಯಾಗಲಿದೆ.

`ಸಿಡಬ್ಲ್ಯುಸಿ' ಸಭೆಗೂ ಮೊದಲು ನಡೆದ ಯುಪಿಎ ಸಮನ್ವಯ ಸಮಿತಿ ಸಭೆ ಕೂಡ ತೆಲಂಗಾಣ ರಚನೆಗೆ ಅವಿರೋಧವಾಗಿ ಸಮ್ಮತಿ ಸೂಚಿಸಿತ್ತು. ಇದರಿಂದ ಐದು ದಶಕಗಳ ಕಾಲದ ಬೇಡಿಕೆಯಾಗಿದ್ದ ತೆಲಂಗಾಣ ಪ್ರತ್ಯೇಕ ರಾಜ್ಯದ ಕೂಗಿಗೆ ಜಯ ದೊರಕಿದೆ. ಸೀಮಾಂಧ್ರ ಮತ್ತು ರಾಯಲಸೀಮೆಯಿಂದ ಪ್ರತ್ಯೇಕಗೊಂಡ 10 ಜಿಲ್ಲೆಗಳ ಪ್ರದೇಶವು ತೆಲಂಗಾಣ ರಾಜ್ಯವಾಗಲಿದೆ.

ರಾಜ್ಯ ಪುನರ್ವಿಂಗಡಣೆಯ ಎರಡನೇ ಆಯೋಗ: ತೆಲಂಗಾಣ ರಾಜ್ಯ ರಚನೆ ನಿರ್ಧಾರದಿಂದ ಗೂರ್ಖಾಲ್ಯಾಂಡ್, ವಿದರ್ಭಾ ಮತ್ತು ಬೋಡೊಲ್ಯಾಂಡ್ ಪ್ರತ್ಯೇಕ ರಾಜ್ಯ ಬೇಡಿಕೆಯು ತೀವ್ರಗೊಂಡಿದೆ. ಈ ಬೇಡಿಕೆಯನ್ನು ತಳ್ಳಿಹಾಕದ `ಸಿಡಬ್ಲ್ಯುಸಿ' ನಿರ್ಣಯವು, ರಾಜ್ಯ ಪುನರ್ವಿಂಗಡಣೆ ಎರಡನೇ ಆಯೋಗವನ್ನು ರಚಿಸುವ ಇಂಗಿತ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ`ಸಿಡಬ್ಲ್ಯುಸಿ' ಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆಯ ನಿರ್ಣಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮತ್ತು ಆಂಧ್ರಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯೂ ಆಗಿರುವ ಅಜಯ್ ಮಾಕನ್ ಮತ್ತು ದಿಗ್ವಿಜಯ್ ಸಿಂಗ್ ಮಂಡಿಸಿದರು. ಸುಮಾರು ಒಂದೂವರೆ ತಾಸುಗಳ ಕಾಲ ಚರ್ಚೆ ನಡೆದ ಮೇಲೆ ಈ ನಿರ್ಣಯವನ್ನು ಒಮ್ಮತದಿಂದ ಅನುಮೋದಿಸಲಾಯಿತು. ಜೊತೆಗೆ ಅಗತ್ಯವಾದ ಸಾಂವಿಧಾನಿಕ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಪುಟ ಸಭೆ: ಬುಧವಾರ (ಜುಲೈ 31) ಕೇಂದ್ರ ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಸಭೆಯಲ್ಲಿ ತೆಲಂಗಾಣ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಆಂಧವನ್ನು ವಿಭಜಿಸಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದ ಸೀಮಾಂಧ್ರ  ಮತ್ತು ರಾಯಲಸೀಮೆ ಪ್ರದೇಶಗಳ ಪಕ್ಷದ ಸಂಸದರು ಮತ್ತು ಶಾಸಕರನ್ನು ಸಮಾಧಾನ ಮಾಡುವಲ್ಲಿ ಹೈಕಮಾಂಡ್ ಸಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರು, ರಾಜ್ಯವನ್ನು ವಿಭಜಿಸಿದರೆ ಆಡಳಿತ ನಡೆಸುವುದು ಕಷ್ಟ ಎಂದು ತೆಲಂಗಾಣ ರಚನೆ ಮಾಡದಂತೆ ಹಟಹಿಡಿದಿದ್ದರು ಎನ್ನಲಾಗಿದೆ. ಆದರೆ, ಪಕ್ಷದ ಹಿರಿಯ ಮುಖಂಡರು ಅವರನ್ನು ಒಪ್ಪಿಸಲು ಕಠಿಣವಾಗಿಯೂ ಮಾತನಾಡಬೇಕಾಯಿತು ಎಂದು ಮೂಲಗಳು ಹೇಳಿವೆ. ಇದೇ ರೀತಿ ವಿರೋಧವನ್ನು ಸೀಮಾಂಧ್ರ ಪ್ರದೇಶ ಪ್ರತಿನಿಧಿಸುವ ಕೇಂದ್ರದ ಸಚಿವರು ಪ್ರಧಾನಿ ಸಿಂಗ್ ಅವರಲ್ಲಿ ವ್ಯಕ್ತಪಡಿಸಿದ್ದರು. ಅವರನ್ನೂ ಸಮಾಧಾನ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

`ರಾಜೀನಾಮೆ ಬರೀ ವದಂತಿ': ಈ ಮಧ್ಯೆ,`ತೆಲಂಗಾಣ ಪರ ನಿರ್ಧಾರ ಕೈಗೊಂಡರೆ ನಾನು ರಾಜೀನಾಮೆ ನೀಡುತ್ತೇನೆ ಎಂಬ ವರದಿಗಳು ಬರೀ ವದಂತಿ' ಕಿರಣ್ ಕುಮಾರ್ ರೆಡ್ಡಿ ಸ್ಪಷ್ಟ ಪಡಿಸಿದರು. ಹಾಗೆಯೇ, `ಕೇಂದ್ರ ಸಂಪುಟ ತೊರೆಯಲು ನಾನು ಮುಂದಾಗಿದ್ದೆ ಎಂಬುದು ಸತ್ಯಕ್ಕೆ ದೂರವಾದುದು' ಎಂದು ಮಾನವ ಸಂಪನ್ಮೂಲ ಸಚಿವ ಎಂ.ಎಂ. ಪಲ್ಲಂರಾಜು ಹೇಳಿದರು. ರಾಯಲಸೀಮೆಯ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳನ್ನು ಒಳಗೊಂಡ `ರಾಯಲ ತೆಲಂಗಾಣ' ರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್ ಸಿಂಗ್, `ಇಂತಹ ಪ್ರಸ್ತಾವ ಏನಾದರೂ ಇದ್ದರೆ ಅದನ್ನು ಉನ್ನತ ಅಧಿಕಾರದ ಸಚಿವರ ಗುಂಪು (ಜಿಒಎಂ) ಪರಿಶೀಲಿಸಲಿದೆ' ಎಂದರು.

ಸಿಂಗ್- ಸೋನಿಯಾ ಸಭೆ: ಯುಪಿಎ ಮತ್ತು `ಸಿಡಬ್ಲ್ಯುಸಿ' ಸಭೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಇದಕ್ಕೂ ಮೊದಲು, ಸಚಿವರಾದ ಶಿಂಧೆ, ಪಿ. ಚಿದಂಬರಂ, ಗುಲಾಂ ನಬಿ ಆಜಾದ್ ಮತ್ತು ಆಂಧ್ರದ ಉಸ್ತುವಾರಿ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷರ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಸೋನಿಯಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT