ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಬಡಕಲು ಕೂಸು ‘ಮೆದಕ್‌’

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೆದಕ್ (ಆಂಧ್ರಪ್ರದೇಶ): ಮೆದಕ್‌ ‘ಹಿರಿಮೆ’ ಪಿರಿದು. ಆದರೆ ಅಭಿವೃದ್ಧಿ­ಯಲ್ಲಿ ಹಿಂದೆ. ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ ದಿ. ಇಂದಿರಾ ಗಾಂಧಿ ಅವರು 1980 ರಿಂದ 84ರ ವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಕೊರತೆಗಳ ‘ಶಾಪ’ ವಿಮೋಚನೆ ಆಗಿಲ್ಲ!

ಹೆಸರಿಗೆ ಜಿಲ್ಲೆ. ಸೌಕರ್ಯ­ಗಳ ವಿಚಾರದಲ್ಲಿ ತಾಲ್ಲೂಕು ಕೇಂದ್ರಕ್ಕೂ ಕಡೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿ­ಷ್ಠರ ಕಚೇರಿ ಒಳಗೊಂಡಂತೆ ಎಲ್ಲ ಪ್ರಧಾನ ಕಚೇರಿಗಳು ಇರು­ವುದು ಸಂಗಾ­ರೆಡ್ಡಿ ಪಟ್ಟಣ­ದಲ್ಲಿ. ಮೆದಕ್‌ಗೂ ಸಂಗಾ­ರೆಡ್ಡಿಗೂ 60 ಕಿ.ಮೀ. ಅಂತರ. ಜನ­ರಿಗೆ ಅಲೆ­­ದಾಟ ತಪ್ಪಿಲ್ಲ. ಇದು ನಿಜಾಮರ ಕಾಲ­ದಲ್ಲಿ ರೂಢಿಗೆ ಬಂದ ವ್ಯವಸ್ಥೆ­ಯಂತೆ. ಇಂದಿಗೂ ಅದೇ ಜಾರಿ­ಯಲ್ಲಿ ಇದೆ. ಆಡಳಿತ ಯಾವ ಪರಿ ಜಡ್ಡು­ಗಟ್ಟಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ?

ಹೈಟೆಕ್‌ ನಗರ ಹೈದರಾ­ಬಾದ್‌ಗೆ ಮೆದಕ್‌ ಬರಿ 100 ಕಿ.ಮೀ. ದೂರ­ದ­ಲ್ಲಿದೆ. ಆದರೆ ಮೆದಕ್‌ ಪಟ್ಟಣಕ್ಕೆ ಇನ್ನೂ ರೈಲು ಸಂಪರ್ಕ ಇಲ್ಲ. ಮೆದಕ್‌ಗೆ 10–12 ಕಿ.ಮೀ. ದೂರ­ದಲ್ಲಿ­ರುವ ಅಕ್ಕಣ್ಣ­ಪೇಟ­ವರೆಗೂ ರೈಲು ಮಾರ್ಗ ಇದೆ. ಅದನ್ನು ಮೆದಕ್‌ವರೆಗೆ ವಿಸ್ತರಿಸಿಲ್ಲ.

ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್‌ ಕಾರ್ಯಕ್ಷೇತ್ರ­ವಾದ ಸಿದ್ಧಿಪೇಟ ಈ ಜಿಲ್ಲೆಯ ವ್ಯಾಪ್ತಿಗೇ ಒಳ­ಪಡು­­ತ್ತದೆ. ಇಂತಹ ಪ್ರಭಾವಿ ನಾಯಕ­­ರಿದ್ದೂ ಮೆದಕ್‌ ‘ಮೆರುಗು’ ಪಡೆದಿಲ್ಲ. ಈಗಿನ ಸಂಸದೆ, ನಟಿ ವಿಜಯಶಾಂತಿ ಆಸ­ಕ್ತಿಯ ಫಲವಾಗಿ, ಮಾರ್ಗ ವಿಸ್ತ­­ರಣೆಗೆ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ ಅಂತ ಕ್ಷೇತ್ರದ ಜನ ನೆನೆಯುತ್ತಾರೆ. ಆ ಮಟ್ಟಿಗೆ ಅವರು ಮುಗ್ಧರು.

ಕರ್ನಾಟಕದ ಬಯಲು­ಸೀಮೆಯ ಬರ­ಪೀಡಿತ ಜಿಲ್ಲೆಗಳ ಜತೆ ಮೆದಕ್‌ ಸ್ಥಿತಿ ಹೋಲಿ­ಸ­ಬ­ಹುದು. ಬಹುತೇಕ ಕಡೆ ಕೊಳ­ವೆ­­ಬಾವಿ­ಗಳೇ ಕೃಷಿಗೆ ಆಧಾರ. ರೈತ­ರನ್ನು ಮಾತಿಗೆ ಎಳೆದರೆ, ನೀರಿನ ಅಭಾವ, ವಿದ್ಯುತ್‌ ಕೊರತೆ ಬಗ್ಗೆ ಪ್ರಸ್ತಾಪಿಸದೆ ಬಿಡು­ವುದಿಲ್ಲ.

ಆಗ ಇಂದಿರಾ ಗಾಂಧಿ ಸ್ಪರ್ಧೆಯ ಕಾರಣ­ಕ್ಕಾಗಿ ದೇಶದ ಗಮನ ಸೆಳೆದಿತ್ತು ಮೆದಕ್‌. ಈಗ ಕೆ.ಸಿ.ಆರ್‌. ಸ್ಪರ್ಧೆ­ಯಿಂ­ದಾಗಿ ತೀವ್ರ ಕುತೂಹಲ ಕೆರಳಿಸಿದೆ.

ಸಿದ್ಧಿಪೇಟ, ಕರೀಂ­ನಗರ, ಮಹ­ಬೂಬ್‌­­ನಗರ­­ದಿಂದ ಈ ಹಿಂದೆ ಸ್ಪರ್ಧಿಸಿದ್ದ ಅವರು, ಈ ಸಲ ಮೆದಕ್‌ಗೆ ಬಂದಿ­ದ್ದಾರೆ. ಮೆದಕ್‌ ಲೋಕ­ಸಭಾ ಕ್ಷೇತ್ರ ಮಾತ್ರ­­­­­ವಲ್ಲದೆ ಈ ಕ್ಷೇತ್ರದ ವ್ಯಾಪ್ತಿಗೇ ಒಳ­­­ಪಡುವ ಗಜ್ವೇಲ್‌ ವಿಧಾನಸಭಾ ಕ್ಷೇತ್ರ­­­ದಿಂ­ದಲೂ ಅವರು ಕಣಕ್ಕೆ ಇಳಿದಿದ್ದಾರೆ.

ಅತ್ತ ಲೋಕಸಭೆ, ಇತ್ತ ಅಸೆಂಬ್ಲಿ ಎರಡೂ ಕಡೆ ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜನರಲ್ಲಿ ತುಸು ಗೊಂದಲ ಉಂಟಾ­ಗಿದೆ. ಆದರೆ ತೆಲಂ­ಗಾಣ ಪರ­­ವಾದ ಅಲೆ, ಟಿಆರ್‌ಎಸ್‌ಗೆ ನೂಕು­ಬಲವಾಗಿ ಪರಿಣಮಿಸಿದೆ.

ಕಳೆದ ಚುನಾವಣೆಯಲ್ಲಿ ಟಿಆರ್‌ಎಸ್‌­­ನಿಂದಲೇ ಸ್ಪರ್ಧಿಸಿ ಗೆದ್ದಿದ್ದ ವಿಜಯ­ಶಾಂತಿ ಪಕ್ಷಾಂತರ ಮಾಡಿ­ದ್ದಾರೆ. ಈ ಸಲ ಮೆದಕ್‌ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ­ಯಾಗಿ ಅಖಾಡಕ್ಕೆ ಇಳಿ­ದಿದ್ದಾರೆ. ಪ್ರತಿ ಊರು, ತಾಂಡಾಕ್ಕೂ ತೆರಳಿ ಮತ ಯಾಚಿ­ಸು­ತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಶ್ರವಣ­ಕುಮಾರ್‌ ರೆಡ್ಡಿ ಅವರನ್ನು ಮೆದಕ್‌ ಲೋಕ­ಸಭಾ ಕ್ಷೇತ್ರ­ದಿಂದ ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಸಕ್ರಿಯ ರಾಜ­ಕೀಯಕ್ಕೆ ಇವರು ಹೊಸಬರು. ಟಿಡಿಪಿ ಬೆಂಬ­ಲಿತ ಬಿಜೆಪಿ ಅಭ್ಯರ್ಥಿ­ಯಾಗಿ ಸಿ.ನರೇಂದ್ರ­­ನಾಥ್‌ ಸ್ಪರ್ಧಿ­­ಸಿ­­ದ್ದಾರೆ. ಇವರು, ‘ನರೇ­ನ್‌ ಟ್ರಸ್ಟ್‌’ ಮೂಲಕ ಸೇವಾ ಕಾರ್ಯ­ಗಳನ್ನು ಹಮ್ಮಿ­ಕೊಂಡು ಚಿರಪರಿಚಿತ­ರಾಗಿ­ದ್ದಾರೆ.

ಮೆದಕ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಗಾರೆಡ್ಡಿ, ನರಸಾ­ಪುರ, ಗಜ್ವೇಲ್‌, ಮೆದಕ್‌, ಸಿದ್ಧಿಪೇಟ, ದುಬ್ಬಾಕ, ಪಟಾನ್‌­ಚೆರು ಈ ಏಳು ವಿಧಾನ­ಸಭಾ ಕ್ಷೇತ್ರಗಳು ಸೇರುತ್ತವೆ. ಗಜ್ವೇಲ್‌­­ನಲ್ಲಿ ಕೆ.ಸಿ.ಆರ್‌. ಅವರಿಗೆ ಟಿಡಿಪಿಯ ಪ್ರತಾಪ­ರೆಡ್ಡಿ ತೀವ್ರ ಸ್ಪರ್ಧೆ ಒಡ್ಡಿ­ದ್ದಾರೆ. ಪ್ರತಾಪರೆಡ್ಡಿ ಕುರಿತು ಜನ­ರಲ್ಲಿ ಸದ್ಭಾವ ಇದೆ. ‘ಕಷ್ಟಕ್ಕೂ ಸುಖಕ್ಕೂ ಸ್ಪಂದಿ­ಸು­ತ್ತಾರೆ. ಅವರಿಗೇ ನಮ್ಮ ವೋಟು’ ಎಂದರು ವಂಟಿ­ಮಾ­­­­ಮಿಡಿ ಗ್ರಾಮದ ಮುತ್ಯಾಲು. ‘ಕೆ.ಸಿ.ಆರ್‌. ಅಲ್ಲದೆ ಬೇರೆ ಯಾರೇ ಎದು­ರಾಳಿ ಆಗಿ­ದ್ದರೂ ರೆಡ್ಡಿ ನಿರಾಯಾಸವಾಗಿ ಗೆದ್ದು­­ಬಿ­ಡು­­­­­­­­­­­­­­­­­ತ್ತಿದ್ದರು’ ಎಂದು ಶಿಂಗಾ­ಯ ಪಲ್ಲಿಯ ಸತ್ಯ­ನಾರಾ­ಯಣ ಅಭಿಪ್ರಾಯ­ಪಟ್ಟರು.    

ಜಿಲ್ಲೆಯಲ್ಲಿ ಟಿಡಿಪಿಗೆ ಒಳ್ಳೆಯ ಹಿಡಿತ ಇದೆ. ಎಲ್ಲ ಕ್ಷೇತ್ರ­ಗಳಲ್ಲಿ ಸ್ಪರ್ಧಿಸ­ದಿರು­ವುದು ಆ ಪಕ್ಷಕ್ಕೆ ಹಿನ್ನಡೆ ಆಗಿದೆ. ಬಿಜೆಪಿ ಜತೆಗಿನ ಮೈತ್ರಿ­ಯಿಂದಲೂ ಹೆಚ್ಚಿನ ಪ್ರಯೋಜನ ಆದಂತಿಲ್ಲ. ಮುಂಚೂಣಿ ಮುಖಂಡ­ರನ್ನು ಹಾಗೂ ಕಾರ್ಯಕರ್ತರನ್ನು ಟಿಆರ್‌­ಎಸ್‌ ತನ್ನ ಕಡೆಗೆ ಸೆಳೆದು­ಕೊಂಡು ಬಲ ಹೆಚ್ಚಿಸಿಕೊಂಡಿದೆ. ಜಿಲ್ಲೆ­ಯಲ್ಲಿ ಹಿಡಿತ ಸಾಧಿಸುವ ತಂತ್ರ­­­ಗಾರಿಕೆಯ ಭಾಗ­ವಾ­ಗಿಯೇ ಕೆ.ಸಿ.ಆರ್‌ ಲೋಕ­ಸಭೆಗೂ ಸ್ಪರ್ಧಿಸಿದ್ದಾರೆ ಎಂಬ ಮಾತಿದೆ.

‘ತೆಲಂಗಾಣ ಕೊಟ್ಟಿದ್ದು ನಾವು’ ಎಂಬ ನಿನಾದದೊಂದಿಗೆ ಕಾಂಗ್ರೆಸ್‌ ಮುಖಂ­ಡರು ಮತ ಯಾಚಿಸುತ್ತಿದ್ದಾರೆ.  ‘ಅದ­ಕ್ಕಾಗಿ ಹೋರಾಡಿದ್ದು ನಾವು’ ಎಂದು ಟಿಆರ್‌ಎಸ್‌ ಹೇಳುತ್ತಿದೆ. ಕೆ.ಸಿ.ಆರ್‌. ನಾಯಕತ್ವ ಸಾಮ­ರ್ಥ್ಯಕ್ಕೆ ಸರಿದೂಗು­ವಂತಹ ಪ್ರಭಾವಿ ನಾಯಕ ಇಲ್ಲದಿರು­ವುದು ಕಾಂಗ್ರೆಸ್‌ಗೆ ತೊಡರು­ಗಾಲಾಗಿ ಪರಿಣಮಿಸಿದೆ. ಇಷ್ಟಾಗಿಯೂ ಸೋಲು– ಗೆಲುವನ್ನು ತೀರ್ಮಾ­­­ನಿಸುವುದು ಯುವ ಮತ­­ದಾರರು ಎಂಬು­ದನ್ನು ಎಲ್ಲ ಪಕ್ಷ­ಗಳ ನಾಯಕರೂ ಒಪ್ಪುತ್ತಾರೆ.

ಜೂನ್‌ 2ಕ್ಕೆ ಉದಯಿಸ­ಲಿರುವ ತೆಲಂಗಾಣ ರಾಜ್ಯ­ದಲ್ಲಿ ಸ್ಥಳೀಯರಿಗೆ ಉದ್ಯೋಗ ಅವ­ಕಾಶಗಳ ಬಾಗಿಲು ತೆರೆ­ದು­ಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿ­ರುವ ಯುವ ಪೀಳಿಗೆ­ಯನ್ನು ಯಾವ ಪಕ್ಷ ಹೆಚ್ಚಿನ ಪ್ರಮಾಣ­ದಲ್ಲಿ ಸೆಳೆ­ಯು­ವುದೋ ಆ ಪಕ್ಷಕ್ಕೆ ಗೆಲುವಿನ ಅವ­ಕಾಶ ಹೆಚ್ಚು ಎಂಬುದು ಕಾರ್ಯ­ಕರ್ತರ ಲೆಕ್ಕಾಚಾರ.  

ಜಿಲ್ಲೆ­ಯಲ್ಲಿ ವ್ಯಾಪಕ ಪ್ರಚಾರ ನಡೆಸಿರುವ ಕೆ.ಸಿ.ಆರ್‌ ಅವರು ಸಿಂಗೂರು ನೀರಿನಿಂದ ಜಿಲ್ಲೆಯ 1.50 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸು­ವುದಾ­ಗಿಯೂ, ಮೆದಕ್‌ ಪಟ್ಟಣ­ವನ್ನು ಪೂರ್ಣ ಪ್ರಮಾ­ಣ­­ದಲ್ಲಿ ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿ­­ಪಡಿ­ಸು­­ವು­ದಾಗಿಯೂ ಭರ­ವಸೆ ನೀಡಿ­ದ್ದಾರೆ.

ಗೆದ್ದರೆ ಮುಖ್ಯಮಂತ್ರಿ­­ಯಾಗುವ ಅವಕಾಶ ಇರು­ವುದರಿಂದ ಅವರ ಮಾತಿಗೆ ಜನ ಕಿವಿಗೊಡುವ ಸೂಚನೆ­­ಗಳು ಕಾಣಿಸುತ್ತಿವೆ. ತೆಲಂಗಾಣ ‘ಸೆಂಟಿ­­­ಮೆಂಟ್‌’ ಅಂತರ­­ಗಂಗೆಯಂತೆ ಪ್ರವ­ಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT