ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಾ ಸಾಗಿದೆ ಯೋಜನೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಕಾಮಗಾರಿಗಳು ತೆವಳುತ್ತಾ ಸಾಗಿವೆ. 2006- 07ರಲ್ಲಿ ಜಾರಿಗೆ ಬಂದ ಯೋಜನೆಯ ಸಾಕಷ್ಟು ಕಾಮಗಾರಿಗಳು ಈಗ ಮುಕ್ತಾಯದ ಹಂತ ತಲುಪಿವೆ. ರಸ್ತೆ ಮತ್ತು ಚರಂಡಿ ಕಾಮಗಾರಿ ಸಾಕಷ್ಟು ನಡೆದಿದ್ದರೂ, ಕಟ್ಟಡ ಕಾಮಗಾರಿಗಳು ನಿರೀಕ್ಷೆಯಂತೆ ನಡೆದಿಲ್ಲ.

ಈಗಾಗಲೇ 5ನೇ ಹಂತದ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಗೆ 1, 3 ಮತ್ತು 5ನೇ ಹಂತವನ್ನು ಮಾತ್ರ ಮಂಜೂರು ಮಾಡಲಾಗಿದೆ. ಸರ್ಕಾರ 1ನೇ ಹಂತದಲ್ಲಿ ಜಿಲ್ಲೆಯ 67 ಗ್ರಾಮಗಳನ್ನು ಆಯ್ಕೆ ಮಾಡಿ, ರೂ  54.82 ಕೋಟಿ ಅನುದಾನ ನಿಗದಿ ಮಾಡಿತ್ತು. ಆದರೆ ಇದುವರೆಗೆ ಬಿಡುಗಡೆ ಆಗಿರುವುದು ರೂ 47.66 ಕೋಟಿ. ಬಿಡುಗಡೆಯಾದ ಹಣವನ್ನು ಸಂಪೂರ್ಣ ವೆಚ್ಚ ಮಾಡಲಾಗಿದೆ. ಆದರೆ ಭೌತಿಕ ಪ್ರಗತಿ ಉತ್ತಮವಾಗಿಲ್ಲ.

66 ಸಮುದಾಯ ಭವನಗಳಲ್ಲಿ 43 ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿವೆ. ಅಂಗನವಾಡಿ ಕಟ್ಟಡಗಳನ್ನು ಸಹ ಸಂಪೂರ್ಣವಾಗಿ ಮುಕ್ತಾಯ ಮಾಡಲಾಗಿಲ್ಲ. 82 ಕಟ್ಟಡ ಕಟ್ಟಬೇಕಿದ್ದು, 54 ಕಟ್ಟಡಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿವೆ.

2009-10ರಲ್ಲಿ 3ನೇ ಹಂತದ ಯೋಜನೆಯಡಿ 99 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ರೂ 53.28 ಕೋಟಿ ಕಾಮಗಾರಿಗೆ ಮಂಜೂರಾತಿ ನೀಡಿದೆ. ಇದರಲ್ಲಿ ರೂ 44.14 ಕೋಟಿ ಬಿಡುಗಡೆಯಾಗಿದ್ದು, ರೂ 39.76 ಕೋಟಿ ವೆಚ್ಚ ಮಾಡಲಾಗಿದೆ.

ಆದರೆ ಕಾಮಗಾರಿಗಳ ಪ್ರಗತಿ ಶೋಚನೀಯವಾಗಿದೆ. ಸಾಕಷ್ಟು ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ರಸ್ತೆ ಮತ್ತು ಸಮುದಾಯ ಭವನ ನಿರ್ಮಾಣ ಎರಡರಲ್ಲೂ ಉತ್ತಮ ಕೆಲಸವಾಗಿಲ್ಲ.

ನಗರಕ್ಕೆ ಹತ್ತಿರವಾಗಿರುವ ಗ್ರಾಮಗಳಲ್ಲಿ ಉತ್ತಮ ಕೆಲಸ ನಡೆದಿದೆ. ತುಮಕೂರು ತಾಲ್ಲೂಕಿನಲ್ಲಿ ಪ್ರಗತಿ ಉತ್ತಮವಾಗಿದೆ. ಆದರೆ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆಯಂತಹ ಹಿಂದುಳಿದ ತಾಲ್ಲೂಕಿನ ಹಳ್ಳಿಗಳಲ್ಲಿ ಇನ್ನೂ ಕೆಲಸವೇ ಆರಂಭವಾಗಿಲ್ಲ.

ರಸ್ತೆ, ಅಂಗನವಾಡಿ, ಸಮುದಾಯ ಭವನ ಸೇರಿದಂತೆ ಯವುದೇ ಕಾಮಗಾರಿಗಳು ಪ್ರಗತಿಯಲ್ಲಿ ಇಲ್ಲ. ಆದರೂ ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂಬ ಕಾರಣಕ್ಕೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ.

ಅಲ್ಲದೆ ಈ ತಾಲ್ಲೂಕುಗಳಲ್ಲಿ ಮೊದಲ ಹಂತದ ಕಾಮಗಾರಿಗಳು ಸಹ ಉತ್ತಮವಾಗಿಲ್ಲ. ಭೂಸೇನಾ ನಿಗಮ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಗಳು ಕಾಮಗಾರಿ ನಡೆಸಿದ್ದರೂ ಪ್ರಯೋಜನವಾಗಿಲ್ಲ.

3ನೇ ಹಂತದ ಯೋಜನೆಯಡಿ ಸ್ವ ಉದ್ಯೋಗ ತರಬೇತಿಗಾಗಿ ನೀಡಲಾಗಿರುವ ರೂ 1.26 ಕೋಟಿ ಹಣದಲ್ಲಿ ಇದುವರೆಗೆ ಒಂದು ಪೈಸೆಯನ್ನೂ ವೆಚ್ಚ ಮಾಡಿಲ್ಲ. ತರಬೇತಿ ಯೋಜನೆ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ.

ಎರಡೂ ಹಂತದಲ್ಲಿ ಕಂಪ್ಯೂಟರ್ ಖರೀದಿಗೆ ಅವಕಾಶವಿದ್ದರೂ, ಆ ಕೆಲಸವೂ ಆಗಿಲ್ಲ. ತ್ಯಾಜ್ಯವಸ್ತು ವಿಲೇವಾರಿ ಘಟಕಗಳ ಸ್ಥಾಪನೆಯಲ್ಲಿ ಪ್ರಗತಿ ಶೂನ್ಯ. ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿಲ್ಲ. ಘಟಕ ಸ್ಥಾಪನೆಗೆ ರೂ 4.4 ಕೋಟಿ ನೀಡಲಾಗಿದ್ದರೂ ಜಾಗ ಖರೀದಿ ಸಹ ಈವರೆಗೂ ನಡೆದಿಲ್ಲ.

ಅಲ್ಲದೆ ಈಗ 2012- 13ನೇ ಸಾಲಿಗೆ 5ನೇ ಹಂತದ ಯೋಜನೆಯಲ್ಲಿ ಜಿಲ್ಲೆಯ 178 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ರೂ 59.55 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ದೊರೆತಿದೆ. ಇದರಲ್ಲಿ ತುಮಕೂರು, ಕೊರಟಗೆರೆ, ತಿಪಟೂರು ತಾಲ್ಲೂಕುಗಳ ಕಾಮಗಾರಿಯನ್ನು ಈಗಾಗಲೇ ಭೂಸೇನಾ ನಿಗಮಕ್ಕೆ ನೀಡಲಾಗಿದೆ. 3ನೇ ಹಂತದ ಯೋಜನೆಯೇ ಸಮರ್ಪಕವಾಗಿ ನಡೆಯದಿದ್ದರೂ, 5ನೇ ಹಂತಕ್ಕೆ ಚಾಲನೆ ದೊರೆತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT