ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವಾಂಶ ಬಿಟ್ಟುಕೊಡದ ವಿನೂತನ ಪಾಲಿಮರ್!

ವಿಜ್ಞಾನ ಲೋಕದಿಂದ
Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಗ್ರ್ಯಾಫೀನ್  ಬಳಸಿ ತೇವಾಂಶವನ್ನು ಸ್ವಲ್ಪವೂ ಬಿಟ್ಟುಕೊಡದ  ವಿನೂತನ ಪಾಲಿಮರ್‌ನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಈ  ವಿನೂತನ  ಜೈವಿಕ ಪಾಲಿಮರ್‌,  ಪ್ಲಾಸ್ಟಿಕ್ ಪ್ಯಾಕೇಜಿಂಗ್‌ಗೆ  ಪರ್ಯಾಯವಾಗಲಿದೆ. ಇದರ ಬಳಕೆಯಿಂದ ಸಾವಯವ ವಿದ್ಯುನ್ಮಾನ ಸಾಧನಗಳ ಸಕ್ರಿಯ ಜೀವಿತಾವಧಿ ಹೆಚ್ಚುವ ಮತ್ತು ಅವುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.

ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ವಸ್ತು  ಅವಶ್ಯವಾಗಿ ಜಲನಿರೋಧಕ ವಾಗಿರಬೇಕು. ಅದೂ, ಸಾವಯವ ವಿದ್ಯುನ್ಮಾನ (ಆರ್ಗಾನಿಕ್‌ ಎಲೆಕ್ಟ್ರಾನಿಕ್ಸ್‌)  ಕ್ಷೇತ್ರದಲ್ಲಿ  ಕೆಲಸ ಮಾಡುವವರಿಗೆ, ಸಾಮಾನ್ಯ ಪ್ಲಾಸ್ಟಿಕ್ ಅಥವಾ ಪಾಲಿಮರ್‌ಗಳ ಸಾಮಾನ್ಯ ಶ್ರೇಣಿಯ ಜಲನಿರೋಧಕತೆ  ಸಾಲದು.  

ಸಂಸ್ಕರಿತ ಮಾವಿನ ರಸವನ್ನು ತುಂಬುವ ಬಾಟಲಿಗಳಿಗೆ ಜಟಿಲವಾದ ಸಂಯುಕ್ತ ಪ್ಯಾಕೇಜಿಂಗ್ ಬಳಸಿದರೂ, ನೀರಿನ ಆವಿಯ ಒಳಹರಡಿಕೆ ದರವು ದಿನಕ್ಕೆ ಒಂದು ಚದರ ಮೀಟರ್‌ಗೆ  0.0001 ಗ್ರಾಂನಷ್ಟು ಇರುತ್ತದೆ. ಈ ಸಂಯುಕ್ತ ಪ್ಯಾಕೇಜಿಂಗ್‌ನಲ್ಲಿರುವ ಪ್ಲಾಸ್ಟಿಕ್ ಪದರವು, ದಿನಕ್ಕೆ ಒಂದು ಚದರ ಮೀಟರ್‌ಗೆ 1 ಗ್ರಾಂಗಿಂತ ಹೆಚ್ಚಿನ ದರದಲ್ಲಿ ನೀರನ್ನು ತನ್ನ ಮೂಲಕ ಹಾದುಹೋಗಲು ಅವಕಾಶ ಕಲ್ಪಿಸುತ್ತದೆ.

ಇದನ್ನು ಗಮನಿಸಿದರೆ, ನಾವು ಬಳಸುತ್ತಿರುವ ಚಿಪ್ಸ್ ಮತ್ತು ಹಣ್ಣಿನ ರಸಗಳ ಪ್ಯಾಕೇಜಿಂಗ್‌ಗಳು ಖಂಡಿತ ಸಂಪೂರ್ಣ ಜಲನಿರೋಧಕವಲ್ಲ ಎಂಬುದು ತಿಳಿಯುತ್ತದೆ. ಹಾಗಾದರೆ, ವಿದ್ಯುನ್ಮಾನ ಸಾಧನ ಮತ್ತು ಔಷಧಿಗಳ ಪ್ಯಾಕೇಜಿಂಗ್‌ನಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಪದರಗಳ ನೀರಿನ ಆವಿ ಒಳಹರಡುವಿಕೆ ದರವು, ಸಾಮಾನ್ಯ ಪ್ಲಾಸ್ಟಿಕ್‌ನ ನೀರಿನ ಆವಿ ಒಳಹರಡುವಿಕೆ  ದರಕ್ಕಿಂತ 10 ಲಕ್ಷ ಪ್ರಮಾಣದಷ್ಟು ಕಡಿಮೆ ಇರುವ ಅಗತ್ಯವಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು ಇದನ್ನು ಸಾಧಿಸಿದೆ.  ನ್ಯಾನೋ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ಪ್ರೊ. ಶ್ರೀನಿವಾಸನ್ ರಾಘವನ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಪ್ರವೀಣ್ ಸಿ. ರಾಮಮೂರ್ತಿಯವರು ಚಮತ್ಕಾರಿ ವಸ್ತುವಾದ ಗ್ರ್ಯಾಫೀನ್  ಬಳಸಿ, ತೇವಾಂಶವನ್ನು ಸ್ವಲ್ಪವೂ ಬಿಟ್ಟುಕೊಡದ  ವಿನೂತನ ಪಾಲಿಮರ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಹೊಸ ಜೈವಿಕ ಪಾಲಿಮರ್‌ ಬಳಕೆಯಿಂದ,  ವಾತಾವರಣದಲ್ಲಿರುವ  ತೇವಾಂಶದ ಒಳಹರಡುವಿಕೆ ಸಂಪೂರ್ಣವಾಗಿ ಇಲ್ಲವಾಗಿ, ಸಾವಯವ ವಿದ್ಯುನ್ಮಾನ ಸಾಧನಗಳ ಸಕ್ರಿಯ ಜೀವಿತಾವಧಿ ಹೆಚ್ಚುವ ಮತ್ತು ಅವುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.  ಈ  ಪಾಲಿಮರ್‌ ಅಭಿವೃದ್ಧಿಪಡಿಸಲು ಪ್ರಾಯೋಗಿಕ ಮತ್ತು ಆಣ್ವಿಕ ಮಾದರಿ ರಚನೆ ವಿಧಾನಗಳನ್ನು ಬಳಸಲಾಗಿದೆ.

ವಿಮಾನವೊಂದರಲ್ಲಿ ಇಬ್ಬರು ಪ್ರಾಧ್ಯಾಪಕರ ನಡುವೆ ನಡೆದ ಅನೌಪಚಾರಿಕ ಮಾತುಕತೆ  ಈ ವಿನೂತನ ಆವಿಷ್ಕಾರಕ್ಕೆ ಪ್ರೇರಣೆಯಾಯಿತು.
‘ಇಡೀ ಯೋಜನೆಗೆ ಮೂಲ ಪ್ರೇರಣೆ ಸಿಕ್ಕಿದ್ದು  ಪ್ರವೀಣ್ ಮತ್ತು ನಾನು ಒಂದು ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ನಡೆದ ಸಂಭಾಷಣೆಯಲ್ಲಿ. 

ಪ್ರಯೋಗಾಲಯದಲ್ಲಿ ಗ್ರ್ಯಾಫೀನ್ ಅನ್ನು ಹೇಗೆ ತಯಾರಿಸುತ್ತೇವೆ ಮತ್ತು ಅದು ಹೇಗೆ ತನ್ಮೂಲಕ ಹೀಲಿಯಂ ಅನ್ನು ಕೂಡ ಹಾದುಹೋಗಲು ಅವಕಾಶ ಕೊಡುವುದಿಲ್ಲ ಎಂದು ಪ್ರವೀಣ್ ಅವರಿಗೆ ವಿವರಿಸುತ್ತಿದ್ದೆ’ ಎಂದು ಪ್ರೊ.ಎಸ್‌. ರಾಘವನ್ ಅವರು ಈ ಅಂತರ ಶಾಸ್ತ್ರೀಯ ವಿಧಾನದ ಬಗ್ಗೆ ಹಂಚಿಕೊಳ್ಳುತ್ತಾರೆ.

‘ಯಾವುದನ್ನೂ ತನ್ನ ಮೂಲಕ ಬಿಟ್ಟುಕೊಡದ ಅಭೇದ್ಯವಾದ ಕಾಗದ ತಯಾರಿಸುವ ನಿಟ್ಟಿನಲ್ಲಿ ನಾವು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸುತ್ತಿದ್ದೆ. ಆಗ, ಅವರು, ಮೊದಲು ಪ್ಲಾಸ್ಟಿಕ್ ಅನ್ನು ಏಕೆ ಪ್ರಯತ್ನಿಸಬಾರದು ಎಂದರು. 

ಈಗಾಗಲೇ ಜಲನಿರೋಧಕ ಎಂದು ಪರಿಗಣಿಸಲಾಗಿರುವ ಪ್ಲಾಸ್ಟಿಕ್ ಇನ್ನಷ್ಟು ಅಭೇದ್ಯವನ್ನಾಗಿ ರೂಪಿಸಲು ಪ್ರಯತ್ನಿಸುತ್ತಿರುವುದಾಗಿಯೂ ತಿಳಿಸಿದರು. ಈ ಸಂಭಾಷಣೆ ನಡೆದ ಮುಂದಿನ ವಾರವೇ  ನಾವು ನಮ್ಮ ಪ್ರಯೋಗದ ಮೊದಲ ಸಫಲ ಫಲಿತಾಂಶ  ಕಂಡುಕೊಂಡೆವು. ಅಲ್ಲದೇ ತಕ್ಷಣವೇ ಅದನ್ನು ಪೇಟೆಂಟ್‌ಗಾಗಿ ಸಲ್ಲಿಸಲಾಯಿತು’ ಎಂದು ಅವರು ವಿವರಿಸಿದರು. 

ಸಾವಯವ ವಿದ್ಯುನ್ಮಾನ ಕ್ಷೇತ್ರವು ವಸ್ತುವಿಜ್ಞಾನದ ಒಂದು ಭಾಗ. ಇದು ವಾಹಕತೆ ಮತ್ತು ನಮ್ಯತೆಯಂತಹ ಅಪೇಕ್ಷಣೀಯ ವಿದ್ಯುನ್ಮಾನ ಗುಣಲಕ್ಷಣಗಳನ್ನು ಹೊಂದಿರುವ ಸಾವಯವ ಮೂಲದ ಸಣ್ಣ ಕಣಗಳ ಅಥವಾ ಪಾಲಿಮರ್‌ಗಳ ವಿನ್ಯಾಸ, ಸಂಶ್ಲೇಷಣೆ, ಮತ್ತು ಅನ್ವಯಿಕೆಗೆ ಸಂಬಂಧಿಸಿದ್ದಾಗಿದೆ.

ಈ ಸಾವಯವ ಮೂಲದ ಅಥವಾ ಇಂಗಾಲದ ಅಂಶವುಳ್ಳ ಸಣ್ಣ ಕಣಗಳು ಅಥವಾ ಪಾಲಿಮರ್‌ಗಳು, ಇಂಗಾಲಾಂಶವಿಲ್ಲದ ಸಿಲಿಕಾನ್‌ನಿಂದ ಮಾಡಲ್ಪಟ್ಟ ತಮ್ಮ  ಪ್ರತಿರೂಪಗಳಿಗಿಂತ ಹೆಚ್ಚು ಪರಿಸರ ಸ್ನೇಹಿ, ಸಮರ್ಥ, ಇಂಧನ ದಕ್ಷತೆಯುಳ್ಳದ್ದಾಗಿವೆ. ಇವನ್ನು ತಯಾರಿಸುವುದೂ ಸುಲಭವೇ. ಆದರೆ, ಇವುಗಳಿಗಿದ್ದ ಸಂಪೂರ್ಣ ಜಲನಿರೋಧಕತೆಯ ಅಡಚಣೆ ನಿವಾರಿಸಲು ಅಂತರಶಾಸ್ತ್ರೀಯ ವಿಧಾನ ವನ್ನು ಬಳಸಿದ್ದಾರೆ ಸಂಶೋಧಕರು.

ಈಗ ತಯಾರಿಸಲಾಗಿರುವ ಹೊಸ ಪಾಲಿಮರ್ ನಮ್ಯ, ಪಾರದರ್ಶಕ ಮತ್ತು ತೇವಾಂಶವನ್ನು ಸ್ವಲ್ಪವೂ  ಬಿಟ್ಟುಕೊಳ್ಳದ ಗುಣವನ್ನು ಹೊಂದಿದೆ. ಇದನ್ನು ಸುರ್ಲಿನ್‌ನ ಪದರದಲ್ಲಿ ಗ್ರ್ಯಾಫೀನ್‌ನ ಏಕಪದರವನ್ನು ಹುದುಗಿಸಿ ರಚಿಸಲಾಗಿದೆ. ಗ್ರ್ಯಾಫೀನ್ ಎಂಬುದು ಇಂಗಾಲದ ಒಂದು ಭಿನ್ನರೂಪ. ಇದು ಜೇನುಗೂಡಿನ ಜಾಲಕ ರಚನೆ ಹೊಂದಿದೆ.

ಇದನ್ನು ಅರೆವಾಹಕ ಮತ್ತು ವಿದ್ಯುನ್ಮಾನ ಉದ್ಯಮದಲ್ಲಿ ಬಳಸಲಾಗುತ್ತದೆ. ವಿಸ್ತಾರವಾಗಿ ಹರಡಿಕೊಂಡಿರುವ ತಾಮ್ರದ ಹಾಳೆಯ ಮೇಲೆ ಏಕರೂಪದ ಗ್ರ್ಯಾಫೀನ್ ಏಕಪದರವನ್ನು ಪಡೆದುಕೊಳ್ಳುವುದು ಈ ಹೊಸ ಪಾಲಿಮರ್‌ನ  ತಯಾರಿಕೆಯಲ್ಲಿ ಒಂದು ಪ್ರಮುಖ ಹಂತ. ರಾಸಾಯನಿಕ ಆವಿ ಶೇಖರಣೆ ಮೂಲಕ ಇದನ್ನು ಪ್ರೊ.ರಾಘವನ್ ಅವರ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಸಾಕಾರಗೊಳಿಸಲಾಯಿತು.

ನಂತರ ಗ್ರ್ಯಾಫೀನ್ - ತಾಮ್ರ ಹಾಳೆಯ ತಲಾಧಾರದ ಮೇಲೆ ಪಾಲಿಮರ್ ಅನ್ನು ಕರಗಿಸಿ ಎರಕ ಹೊಯ್ಯಲಾಯಿತು. ತಾಮ್ರದ ಹಾಳೆಯು ಕಾಲಾನುಕ್ರಮದಲ್ಲಿ ಕೊರೆಯುವಿಕೆಯ ಫಲವಾಗಿ ಕಣ್ಮರೆಯಾಗುತ್ತದೆ.

ಹೀಗೆ,  ಪ್ರೊ. ರಾಮಮೂರ್ತಿಯವರು ತಮ್ಮ ಪ್ರಯೋಗಾಲಯದಲ್ಲಿ, ಪಾಲಿಮರ್ - ಗ್ರ್ಯಾಫೀನ್ ಸಂಯುಕ್ತ ಪದರದ ತಯಾರಿಸುವಲ್ಲಿ ಯಶಸ್ವಿಯಾದರು. ಈ ‘ನೇರ ವರ್ಗಾವಣೆ ವಿಧಾನ’ದಿಂದ, ಅಪೇಕ್ಷಿತ ಉತ್ಪನ್ನದ ಪ್ರಮಾಣವನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಗ್ರ್ಯಾಫೀನ್ ಪದರಗಳ ಮೇಲಾಗುವ ಯಾಂತ್ರಿಕ ಹಾನಿಯನ್ನು ಕಡಿಮೆ ಮಾಡಬಹುದು ಎಂಬುದು ಈ ಸಂಶೋಧನಾ ತಂಡದ ನಂಬಿಕೆ.

ಸಂಶೋಧಕರು ಈ ಹೊಸ ಪಾಲಿಮರ್ ಅನ್ನು ಬಳಸುವ ಮುಖಾಂತರ, ಬಹುತೇಕ ನಗಣ್ಯವೆನ್ನಬಹುದಾದಷ್ಟು ನೀರಿನ ಒಳಹರಡಿಕೆ ಹೊಂದಿರುವ ಸಂಯುಕ್ತ ಪದರಗಳನ್ನು, ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದರು.

‘ಆಣ್ವಿಕ ಮಾದರಿ ರಚನೆ ಅಧ್ಯಯನಗಳಿಂದ ನಮಗೆ ಮನವರಿಕೆ ಆಗಿದ್ದೇನೆಂದರೆ, ಪಾಲಿಮರ್‌ ಮೇಲಿರುವ ಗ್ರ್ಯಾಫೀನ್ ಏಕಪದರವು ನೀರಿನ ಒಳಹರಡುವಿಕೆಗೆ ಪಾತ್ರವಾಗಿಲ್ಲ. ಆ ಪದರದ ಶಕ್ತ ವಿಭವ ಕ್ಷೇತ್ರವನ್ನು ಜಯಿಸಲು ಅಗತ್ಯವಾದಷ್ಟು ಹೆಚ್ಚಿನ ಶಕ್ತಿ ನೀರಿನ ಅಣುಗಳಿಗೆ ಇಲ್ಲದಿರುವುದೇ ಇದಕ್ಕೆ ಕಾರಣ.

ಈ ಹೊಸ ಬಗೆಯ ಸಂಯುಕ್ತ ಪಾಲಿಮರ್ ಪದರವು, ಈಗ ಬಳಕೆಯಲ್ಲಿರುವ, ಕೇವಲ ಪಾಲಿಮರ್ ಅನ್ನು ಮಾತ್ರ  ಹೊಂದಿರುವ ಪದರಕ್ಕಿಂತ 10 ಲಕ್ಷ ಪಟ್ಟು ಕಡಿಮೆ ತೇವಾಂಶವನ್ನು ಬಿಟ್ಟುಕೊಡುತ್ತದೆ’ ಎನ್ನುತ್ತಾರೆ ಪ್ರೊ. ರಾಮಮೂರ್ತಿ.

ಈ ಹೊಸ ಗ್ರ್ಯಾಫೀನ್ - ಪಾಲಿಮರ್ ಸಂಯುಕ್ತ ಪದರಗಳ ಮೇಲೆ ನಡೆಸಿದ ಪಾರದರ್ಶಕತೆ ಮತ್ತು ನಮ್ಯತೆಯ ಪರೀಕ್ಷೆಗಳಿಂದ ಇವು ಕೂಡ ಹೆಚ್ಚೂ ಕಮ್ಮಿ ಇತರ ಲಭ್ಯವಿರುವ ಪಾಲಿಮರ್ ಪದರಗಳಷ್ಟೇ ಪಾರದರ್ಶಕ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಇದರರ್ಥ, ಗ್ರ್ಯಾಫೀನ್ ಏಕಪದರದ ಬಳಕೆಯಿಂದ ಪಾಲಿಮರ್ ಪದರಗಳ ನಮ್ಯತೆಯಲ್ಲಿ  ರಾಜಿ ಆಗಿಲ್ಲ. ಕೋಶದಿಂದ ಆವೃತವಾಗಿರುವ ಸಾಧನಗಳಾದ ಸಾವಯವ ದ್ಯುತಿವಿದ್ಯುಜ್ಜನಕ (OPV) ಸಾಧನಗಳನ್ನು ರಕ್ಷಿಸಲು ಈ ಪದರಗಳಿಗೆ ಇರುವ ಸಾಮರ್ಥ್ಯವನ್ನು ಸಂಶೋಧಕರ ತಂಡವು ತೋರಿಸಿಕೊಟ್ಟಿತು ಮತ್ತು ಇವುಗಳ ವಿದ್ಯುತ್ ಪರಿವರ್ತನಾ ಸಾಮರ್ಥ್ಯವನ್ನು (PCE) ಪರೀಕ್ಷಿಸಲಾಯಿತು.

ಕೋಶದಿಂದ ಆವೃತವಾಗಿರದ ತಮ್ಮ ಪ್ರತಿರೂಪಗಳಿಗೆ ಹೋಲಿಸಿದರೆ, ಗ್ರ್ಯಾಫೀನ್ - ಸುರ್ಲಿನ್ ಕೋಶದಿಂದ ಆವೃತವಾಗಿರುವ ಸಾವಯವ ದ್ಯುತಿವಿದ್ಯುಜ್ಜನಕ (OPV) ಸಾಧನಗಳು, 1000 ನಿಮಿಷಗಳ ನಂತರವೂ ತಮ್ಮ ಸಾಮರ್ಥ್ಯವನ್ನು ಶೇಕಡ 50 ರಷ್ಟು ಉಳಿಸಿಕೊಂಡಿದ್ದು ಕಂಡುಬಂದಿದೆ.

ಅಧ್ಯಯನಗಳು ಸೂಚಿಸುವ ಪ್ರಕಾರ, ಈ ಸಂಯುಕ್ತ ಪದರಗಳಿಂದ ಆವೃತವಾದ ಸಾಧನವು ಸುಮಾರು 10 ಲಕ್ಷ  ನಿಮಿಷಗಳ (ಬಹುತೇಕ 1.9 ವರ್ಷ) ವಿಸ್ತೃತ ಕಾರ್ಯಚರಣಾ ಜೀವಿತಾವಧಿಯನ್ನು ಹೊಂದಿರುತ್ತದೆ.

ಇದು ಸಾವಯವ ಸಾಧನಗಳಿಗೆ ಅತ್ಯಂತ ಅಪೇಕ್ಷಣೀಯವಾದ ಕಾರ್ಯಚರಣಾ ಜೀವಿತಾವಧಿಯಾಗಿದೆ. ಕೋಶದಿಂದ ಆವೃತವಾಗಿರುವ ಸಾವಯವ ದ್ಯುತಿವಿದ್ಯುಜ್ಜನಕ (OPV) ಸಾಧನಗಳ ಮೇಲೆ ನಡೆಸಿದ ಒತ್ತಡ ಪರೀಕ್ಷೆಗಳು ಕೂಡ ಅವುಗಳ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.  ಇದು ಪ್ಯಾಕೇಜಿಂಗ್‌ನಲ್ಲಿ ಬಳಸಲಾಗುವ ಈ ಸಂಯುಕ್ತ ಪದರಗಳ ದೃಢವಾದ ಪ್ರಕೃತಿಯನ್ನು ಸೂಚಿಸುತ್ತದೆ.

ಸಹ ಸಂಶೋಧಕರಾದ ಪ್ರೊ. ಶ್ರೀನಿವಾಸನ್ ರಾಘವನ್‌ ಅವರ ಪ್ರಕಾರ, ಇದೇ ತತ್ವವನ್ನು ಕಾಗದಕ್ಕೆ ಅನ್ವಯಿಸಿ ಗ್ರ್ಯಾಫೀನ್ ಅನ್ನು ಬಳಸಿ ಕಾಗದವನ್ನು ತೇವಾಂಶವನ್ನು ಬಿಟ್ಟುಕೊಳ್ಳದಂತೆ ಮಾಡಿದರೆ,  ನಾವು ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನ ಸಮಸ್ಯೆಗಳಿಂದ  ಮುಕ್ತಿ ಪಡೆಯಬಹುದು.

ಇದರ ಒಳಾರ್ಥ ಅರಿತರೆ, ಇದು ಕೂಡ ಪ್ಲಾಸ್ಟಿಕ್‌ನ ಆವಿಷ್ಕಾರಕ್ಕೆ ಸಮಾನಾಂತರವಾದ ಒಂದು ಆವಿಷ್ಕಾರವಾಗಿರಬಹುದು.  ಪ್ಯಾಕೇಜಿಂಗ್‌ಗೆ ಅದರಲ್ಲೂ ಔಷಧಿಗಳ  ಪ್ಯಾಕೇಜಿಂಗ್‌ಗೆ  ಬಳಸುತ್ತಿರುವ ಪ್ಲಾಸ್ಟಿಕ್‌ಗೆ  ಹೋಲಿಸಿದರೆ, ಈ ಸಂಯುಕ್ತ ಪದರಗಳ ಆವಿಷ್ಕಾರವು ಬಹಳ ಮಹತ್ವವಾದದ್ದು ಎಂಬುದು ಅವರ ಅನಿಸಿಕೆ. 
- ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT