ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜೋವಧೆ ಯತ್ನ- ತಪ್ಪಿತಸ್ಥರ ಬಂಧಿಸಿ

Last Updated 9 ಫೆಬ್ರುವರಿ 2011, 11:10 IST
ಅಕ್ಷರ ಗಾತ್ರ

ಪುತ್ತೂರು: ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನೇತಾರ ಕೂರ ತಂಙಳ್‌ತೇಜೋವಧೆಗೆ ಯತ್ನಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು  ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಬಜ್ಪೆ ಆಗ್ರಹಿಸಿದ್ದಾರೆ. ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಆರೋಪಿಗಳ ಪೈಕಿ ಒಬ್ಬರಾದ ಹುಸೈನ್ ದಾರಿಮಿಯವರ  ಅಪಹರಣ ನಾಟಕ ಪ್ರಕರಣದ ಕುರಿತು  ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಯಲುಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಸಮುದಾಯದ ನೇತಾರ,  ಹಲವು ಮೊಹಲ್ಲಾಗಳ ಸಹಾಯಕ ಖಾಜಿ ಆಗಿರುವ ಸಯ್ಯದ್ ಫಝಲ್ ಕೋಯಮ ತಂಙಳ್ (ಕೂರ ತಂಙಳ್) ಅವರ ವಿರುದ್ಧ ಎಸ್.ಬಿ. ಮುಹಮದ್ ದಾರಿಮಿ, ಹುಸೈನ್ ದಾರಿಮಿ ರೆಂಜಲಾಡಿ, ಹಮೀದ್ ದಾರಿಮಿ ಸಂಪ್ಯ, ಸರ್ಫುದ್ದೀನ್ ತಂಙಳ್ ಮತ್ತು ಸುಲೈಮಾನ್ ಮೌಲವಿ ಕಲ್ಲೇಗ  ಸುದ್ದಿಗೋಷ್ಠಿ ನಡೆಸಿ  ಅವಮಾನಕಾರಿ ಹೇಳಿಕೆ ನೀಡುವ ಕೂರ ತಂಙಳ್ ತೇಜೋವಧೆಗೆ  ಯತ್ನಿಸಿದ್ದಾರೆ.  ಅಲ್ಲದೆ  ಕರ್ನಾಟಕ ಮತ್ತು ಕೇರಳದಲ್ಲಿರುವ ಲಕ್ಷಾಂತರ ಮಂದಿ ತಂಙಳ್ ಅವರ ಅಭಿಮಾನಿಗಳ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಗೌರವಾನ್ವಿತ ಸ್ಥಾನದಲ್ಲಿರುವ ಕೂರ ತಂಙಳ್ ವಿರುದ್ಧ ಸ್ಥಾಪಿತ ಹಿತಾಸಕ್ತಿಗಳು ನೀಡಿರುವ ಅವಮಾನಕಾರಿ ಹೇಳಿಕೆ ಬಹುಸಂಖ್ಯಾತ ಮುಸ್ಲಿಂ ಮನಸ್ಸುಗಳಿಗೆ ಘಾಸಿಯನ್ನುಂಟು ಮಾಡಿದ್ದು, ಸಮಾಜದಲ್ಲಿ ಒಡಕುಂಟು ಮಾಡಿ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ನಡೆಸಿರುವ ಐವರು ಆರೋಪಿಗಳನ್ನು ಶೀಘ್ರವಾಗಿ  ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಪುತ್ತೂರು ಭಾಗದವರೊಬ್ಬರು ಉನ್ನತ ಖಾಜಿ ಸ್ಥಾನವನ್ನು ಪಡೆದಿರುವುದನ್ನು ಕೇಳಿ ಸಂತೋಷ ಪಡಬೇಕಾಗಿದ್ದ ಮತ್ತು ಅವರನ್ನು  ಅಭಿನಂದಿಸಬೇಕಾಗಿದ್ದ  ಈ ಮಂದಿ ಅವರ ಉನ್ನತಿಯನ್ನು ಸಹಿಸದೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ದುರಂತ ಎಂದರು.ಕೂರ ತಂಙಳ್ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ.  ಆದರೆ ಇತ್ತೀಚಿಗೆ ಅವರ ಜನಪ್ರಿಯತೆಯನ್ನು ಸಹಿಸದ ಮಂದಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು. 

ತನಿಖೆಗೆ ಒತ್ತಾಯ:
ಕೂರ ತಂಙಳ್ ವಿರುದ್ಧ ನೀಡಿರುವ  ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಹಲವು ಕಡೆಗಳಲ್ಲಿ ತಂಙಳ್ ಅಭಿಮಾನಿಗಳು ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ದಿಕ್ಕು ತಪ್ಪಿಸಿ, ಬಂಧನವಾಗುವುದನ್ನು ತಡೆಯಲು ಮತ್ತು ಸಮಾಜದ ಅನುಕಂಪ ಗಿಟ್ಟಿಸಿಕೊಳ್ಳಲು  ಆರೋಪಿಗಳ ಪೈಕಿ ಒಬ್ಬರಾದ ಹುಸೈನ್ ದಾರಿಮಿ ರೆಂಜಿಲಾಡಿ  ಅಪಹರಣ ನಾಟಕ ಸೃಷ್ಟಿಸಿ ಕೂರ ತಂಙಳ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಅಬ್ದುಲ್ ಹಮೀದ್ ಬಜ್ಪೆ  ಆರೋಪಿಸಿದರು.ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದ ಅವರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಯಲುಗೊಳಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಸಮಾಜದ ಮತ್ತು ದೇಶದ ಒಳಿತು ಐಕ್ಯತೆಗಾಗಿ  ನಿರಂತರ ಶ್ರಮಿಸುತ್ತಿರುವ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸಂಘಟನೆಯ ಹೆಸರನ್ನು ದುರುದ್ದೇಶಪೂರ್ವಕವಾಗಿ ಬಳಸಿಕೊಂಡು ಹೊಣೆಯಾಗಿಸುವ  ಪ್ರಯತ್ನ ಖಂಡನೀಯ ಎಂದ ಅವರು  ಸಮುದಾಯದಲ್ಲಿ ಅನೈತಿಕತೆ ಸೃಷ್ಟಿಸಲೆತ್ನಿಸುವ ಸಮಾಜದ್ರೋಹಿಗಳ  ಎಲ್ಲಾ ಕೃತ್ಯಗಳನ್ನು ವಿಫಲಗೊಳಿಸಲು ಸಮಾಜ ಬಾಂಧವರು ಶಾಂತಿ ಮತ್ತು ಸಂಯಮ ಕಾಪಾಡುವಂತೆ  ಮನವಿ ಮಾಡಿದರು.

ರಾಜ್ಯ ಎಸ್ಸೆಸ್ಸೆಫ್‌ನ ಕ್ಯಾಂಪಸ್ ಕಾರ್ಯದರ್ಶಿ ಎಂ.ಬಿ.ಹಮೀದ್ ಮಡಿಕೇರಿ, ಸಮಾಜ ಸೇವಾ ಘಟಕದ ಅಧ್ಯಕ್ಷ ಹಬೀಬ್ ನಾಳ, ಪುತ್ತೂರು ವಿಭಾಗೀಯ ಅಧ್ಯಕ್ಷರಾದ ವಕೀಲ ಮುಹಮದ್ ಶಾಕೀರ್, ಪುತ್ತೂರು ಮುಸ್ಲಿಂ ಯುವಜನ ಪರಿಷತ್‌ನ ಪಿ.ಬಿ. ಖಾಸಿಂ.ಹಾಜಿ, ಬನ್ನೂರು ಜುಮಾ ಮಸೀದಿ ಅಧ್ಯಕ್ಷ  ಮೊದು ಕುಟ್ಟಿ ಹಾಜಿ, ಬಿ. ಇಬ್ರಾಹಿಮ ಕಲೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT