ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಪೆ ಹಚ್ಚಲು ಈಶ್ವರಪ್ಪ ಯತ್ನ; ಶೆಟ್ಟರ್ ಮನೆಯಲ್ಲಿ ಬಿಎಸ್‌ವೈ ಆಪ್ತರ ಸಭೆ

Last Updated 17 ಮೇ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯಲ್ಲಿನ ಬಣ ರಾಜಕೀಯಕ್ಕೆ ತೆರೆ ಎಳೆಯುವ ಸಲುವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುರುವಾರ ಸರಣಿ ಸಭೆಗಳನ್ನು ನಡೆಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡ ನಂತರ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಕೆಲವು ಸಚಿವರನ್ನು ಹತ್ತಿರ ತರುವ ಪ್ರಯತ್ನ ಮಾಡಿದರು. ಮುಂದೆ ಗುಂಪುಗಾರಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಕೆಲವು ಸಚಿವರೇ ವಾಗ್ದಾನ ಮಾಡಿದ್ದಾರೆ.

ಯಡಿಯೂರಪ್ಪ ಬಣದ ಸಚಿವರನ್ನು ಪಕ್ಷದ ತೆಕ್ಕೆಗೆ ತರುವ ಪ್ರಯತ್ನದ ಫಲವಾಗಿ ಮೊದಲು ಸಚಿವರಾದ ಜಗದೀಶ ಶೆಟ್ಟರ್ ಮತ್ತು ಆರ್.ಅಶೋಕ ಇಬ್ಬರೇ ಚರ್ಚೆ ನಡೆಸಿದರು. ನಂತರ ಅವರು ಶೆಟ್ಟರ್ ಮನೆಯಲ್ಲಿ ಇತರೆ ಸಚಿವರು, ಶಾಸಕರ ಜೊತೆ ಚರ್ಚಿಸಿದರು.

ಬಳಿಕ ಈಶ್ವರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ ಎಲ್ಲರೂ ಮುಕ್ತವಾಗಿ ಮಾತುಕತೆ ನಡೆಸಿದರು. ಇದುವರೆಗೂ ಆಗಿರುವುದನ್ನು ಮರೆತು ಮುಂದೆ ಗೊಂದಲಗಳಿಗೆ ಅವಕಾಶ ಇಲ್ಲದಂತೆ ನಡೆದುಕೊಳ್ಳಲು ತೀರ್ಮಾನಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

`ಯಡಿಯೂರಪ್ಪ ಒಬ್ಬ ಪ್ರಭಾವಿ ನಾಯಕ. ಅವರು ಪಕ್ಷ ಬಿಡಬೇಕೆಂದರೂ ನಾವೆಲ್ಲ ಸೇರಿ ಅದನ್ನು ತಡೆದಿದ್ದೇವೆ. ಅವರನ್ನು ನಿರ್ಲಕ್ಷಿಸಬಾರದು. ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳಬೇಕು~ ಎಂದೂ ಸಚಿವರು ಈಶ್ವರಪ್ಪ ಅವರಲ್ಲಿ ಮನವಿ ಮಾಡಿದರು.

ಈಶ್ವರಪ್ಪ ಕೂಡ, `ಯಡಿಯೂರಪ್ಪ ಬಗ್ಗೆ ಎಲ್ಲರಿಗೂ ಗೌರವವಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಇನ್ನು ಮುಂದೆ ಗುಂಪುಗಾರಿಕೆಗೆ ಅವಕಾಶ ಇಲ್ಲ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು~ ಎಂದು ಸಲಹೆ ಮಾಡಿದರು ಎನ್ನಲಾಗಿದೆ.

ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಸಿ.ಎಂ.ಉದಾಸಿ, ಎಂ.ಪಿ.ರೇಣುಕಾಚಾರ್ಯ, ವಿ.ಸೋಮಣ್ಣ, ರಾಜೂಗೌಡ  ಸೇರಿದಂತೆ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿರುವ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು. ಸಚಿವರಾದ ಶೋಭಾ ಕರಂದ್ಲಾಜೆ, ಮುರುಗೇಶ ನಿರಾಣಿ, ರೇವು ನಾಯಕ ಬೆಳಮಗಿ ಅವರು ನಗರದಲ್ಲಿ ಇರಲಿಲ್ಲ. ಸದಾನಂದ ಗೌಡ ಅವರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಗೊತ್ತಾಗಿದೆ.

ಪಕ್ಷದ ಕಚೇರಿಯಲ್ಲಿ ಸಭೆ: ಈಶ್ವರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ ನಂತರ ಎಲ್ಲರೂ ಯಡಿಯೂರಪ್ಪ ಅವರಿಂದ ಅನುಮತಿ ಪಡೆದು ಪಕ್ಷದ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರಾದ ಸುರೇಶಕುಮಾರ್, ಗೋವಿಂದ ಕಾರಜೋಳ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಇತರರು ಹಾಜರಿದ್ದರು.

ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.  ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ನಗರಕ್ಕೆ ಬಂದಾಗ ಎಲ್ಲರೂ ಒಟ್ಟಾಗಿ ತೆರಳಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.

ಇಂದು ಜೇಟ್ಲಿ ನಗರಕ್ಕೆ
ಬೆಂಗಳೂರು: ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ನಗರಕ್ಕೆ ಬರಲಿದ್ದಾರೆ.

ಪ್ರಧಾನ್ ಅವರು ಬೆಳಿಗ್ಗೆಯೇ ನಗರಕ್ಕೆ ಬರುತ್ತಾರೆ. ಜೇಟ್ಲಿ ಅವರು ತಡ ರಾತ್ರಿ ಬರಲಿದ್ದಾರೆ.

ಶನಿವಾರ ಇಡೀ ದಿನ ನಗರದಲ್ಲೇ ಉಳಿಯುವ ಈ ಮುಖಂಡರು ಎಲ್ಲ ಬಣಗಳ ಜತೆಗೂ ಮಾತುಕತೆ ನಡೆಸುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

`ಶೆಟ್ಟರ್ ಡಿಸಿಎಂ ಆಗಬೇಕು~
ಬೆಂಗಳೂರು: `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಈಗಿರುವ ಹುದ್ದೆಗಳಲ್ಲೇ ಮುಂದುವರಿಯಬೇಕು. ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು~ ಎಂದು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಗುರುವಾರ ಇಲ್ಲಿ ವರಿಷ್ಠರನ್ನು ಆಗ್ರಹಪಡಿಸಿದರು.

ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿ ಮಾಡುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ. ಈ ಕುರಿತು ಮುಖ್ಯಮಂತ್ರಿ ಮತ್ತು ಈಶ್ವರಪ್ಪ ಅವರ ಜತೆಗೂ ಚರ್ಚೆ ನಡೆಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಮುಖಂಡರಾದ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಅತಿ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಈ ವಿಷಯ ಕುರಿತು ಚರ್ಚೆ ನಡೆಸುವಂತೆ ರಾಜ್ಯದ ಮುಖಂಡರಲ್ಲಿ ಕೋರಿರುವುದಾಗಿಯೂ ಹೇಳಿದರು. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆಯೂ ಒತ್ತಾಯಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT