ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರುಮಲ್ಲೇಶ್ವರ ಜಾತ್ರೆ; ರೈತರಿಗೆ ವಿವಿಧ ಇಲಾಖೆಗಳ ಮಾಹಿತಿ

Last Updated 10 ಫೆಬ್ರುವರಿ 2012, 9:35 IST
ಅಕ್ಷರ ಗಾತ್ರ

ಹಿರಿಯೂರು: ಪಟ್ಟಣದ ತೇರುಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ, ರೇಷ್ಮೆ ಹಾಗೂ ಪಶುಸಂಗೋಪನ ಇಲಾಖೆ ವತಿಯಿಂದ ಕೃಷಿಕರಿಗೆ ಸಮಗ್ರ ಮಾಹಿತಿ ನೀಡುವ ಅರ್ಥಪೂರ್ಣ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ಕೃಷಿ ಇಲಾಖೆಯಿಂದ ಖುಷ್ಕಿ ಬೇಸಾಯ, ಕೃಷಿ ಯೋಜನೆಗಳ ಉದ್ದೇಶ, ಮಣ್ಣು ಮಾದರಿಗಳ ಸಂಗ್ರಹ, ಜೈವಿಕ ಇಂಧನ, `ಶ್ರೀ~ ಪದ್ಧತಿಯಲ್ಲಿ ಬತ್ತದ ಬೇಸಾಯ, ರೋಗಗಳ ಹತೋಟಿ ಬಗ್ಗೆ, ರೇಷ್ಮೆ ಇಲಾಖೆ ವತಿಯಿಂದ ಜೋಡಿ ಸಾಲು ಬೇಸಾಯ ಪದ್ಧತಿ, ಮಣ್ಣಿನ ಫಲವತ್ತತೆ, ವಿವಿಧ ಹಂತದ ರೇಷ್ಮೆ ಹುಳುಗಳು, ಸೋಂಕು ನಿವಾರಣೆ, ಮಿಶ್ರತಳಿ ಗೂಡುಗಳು, ನೂಲು ಬಿಚ್ಚುವ ವಿಧಾನ, ರೇಷ್ಮೆ ಗೂಡಿನ ಹಾರ ಮುಂತಾದವುಗಳು ಪ್ರದರ್ಶನದಲ್ಲಿ ಗಮನಸೆಳೆದವು.

ಪಶುಪಾಲನಾ ಇಲಾಖೆ ವತಿಯಿಂದ ಮಿಶ್ರತಳಿ ಹಸು, ಗುರುರಾಜ ಕೋಳಿ, ರಾಮದೇವಕುರಿ, ಪ್ರಸಿದ್ಧ ಎಮ್ಮೆ ತಳಿಗಳ ಪ್ರದರ್ಶನ ಮಾಡಲಾಗಿತ್ತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಗುತ್ತಿಗೆದಾರ ಎಚ್. ವೆಂಕಟೇಶ್, ಎ. ಮಂಜುನಾಥ್ ಮತ್ತಿತರರು ವಸ್ತುಪ್ರದರ್ಶನ ವೀಕ್ಷಿಸಿದರು.

ಅಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಗೋಪಾಲನಾಯ್ಕ, ಜಯಲಿಂಗಪ್ಪ, ಶ್ರೀಹರ್ಷ, ಕಾಂತಪ್ಪ, ರಮೇಶ್, ಮಹಾಂತೇಶ್ ಮತ್ತಿತರರು ಹಾಜರಿದ್ದರು.

ಡಿಸಿಸಿ ಬ್ಯಾಂಕಿನಿಂದ ್ಙ 25 ಕೋಟಿ ಸಾಲ
ತಾಲ್ಲೂಕಿನ ರೈತರು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ತೊಂದರೆ ಅನುಭವಿಸುವುದನ್ನು ತಪ್ಪಿಸಲು, ಡಿಸಿಸಿ ಬ್ಯಾಂಕಿನಿಂದ ರೂ 25 ಕೋಟಿ ಸಾಲ ನೀಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಭರವಸೆ ನೀಡಿದರು.

ತಾಲ್ಲೂಕಿನ ಮಸ್ಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರೈತರಿಗೆ ಕೆಸಿಸಿ ಸಾಲದ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹೆಚ್ಚಿನ ಪ್ರಮಾಣದಲ್ಲಿ ಷೇರುದಾರರಾಗಬೇಕು. ಬ್ಯಾಂಕಿನಿಂದ ಪಡೆಯುವ ಸಾಲವನ್ನು, ಆಯಾ ಉದ್ದೇಶಕ್ಕೆ ಮಾತ್ರ ಬಳಸಬೇಕು. ಸಕಾಲದಲ್ಲಿ ಸಾಲ ಮರುಪಾವತಿಯಾದರೆ ಮಾತ್ರ ಹೊಸಬರಿಗೆ ಸಾಲ ಕೊಡಲು ಸಾಧ್ಯ. ತಾವು ಬೆಳೆಯುವ ಜತೆಗೆ ಬ್ಯಾಂಕನ್ನೂ ಬೆಳೆಸಬೇಕು.
 
ಮಹಿಳಾ ಸಂಘಗಳ ಸದಸ್ಯರಿಗೆ ಕೇವಲ 40 ಪೈಸೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಈ ರೀತಿ ಪಡೆಯುವ ಸಾಲದ ಹಣದಿಂದ ಗುಡಿ ಕೈಗಾರಿಕೆ ನಡೆಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು.

ಅತಿ ಶೀಘ್ರದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರೈತರ ಮಕ್ಕಳಿಗೆ ಶಿಕ್ಷಣ ಸಾಲ ವಿತರಿಸುವ ಯೋಜನೆ ಜಾರಿಗೆ ತರಲಾಗುವುದು. ಇದರಿಂದ ಮಕ್ಕಳನ್ನು ಓದಿಸುವ ಕಷ್ಟದಿಂದ ರೈತರು ಮುಕ್ತರಾಗಬಹುದು ಎಂದು ತಿಳಿಸಿದರು.

ಮಾಜಿ ಶಾಸಕ ಆರ್. ರಾಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರ ಸಂಘಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಸಂಘಗಳ ಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಗ್ರಾ.ಪಂ. ಸದಸ್ಯ ಸೋಮಣ್ಣ, ಶಿವಣ್ಣ, ಹನುಮಂತಪ್ಪ, ವೆಂಕಟೇಶ್, ಶಶಿ, ಮುದ್ದಲಿಂಗಪ್ಪ, ವಿಜಯಲಕ್ಷ್ಮೀ, ಲೋಲಾಕ್ಷಮ್ಮ, ಕೆಂಚಮ್ಮ, ಚಿದಾನಂದಪ್ಪ, ಮಹಾಂತೇಶ್ ಇದ್ದರು.
ಯು. ರಾಜಣ್ಣ ಸ್ವಾಗತಿಸಿದರು. ಕೆ. ರಾಜಪ್ಪ ವಂದಿಸಿದರು. ಲಿಂಗರಾಜು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT