ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ವ್ಯಾಪಾರ: ಇರಾನ್ ಮೇಲೆ ನಿರ್ಬಂಧ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬ್ರುಸೆಲ್ಸ್ (ಎಎಫ್‌ಪಿ): ಅಣ್ವಸ್ತ್ರ ಹೊಂದುವ ತನ್ನ ಇರಾದೆಯನ್ನು ಸಡಿಲಿಸದ ಇರಾನ್ ಮೇಲೆ ತೈಲ ವ್ಯಾಪಾರ ನಿಷೇಧ ಹೇರಲು ಯುರೋಪ್ ಒಕ್ಕೂಟದ ರಾಷ್ಟ್ರಗಳು ಸೋಮವಾರ ಒಪ್ಪಿಗೆ ನೀಡಿವೆ. ಇದರಿಂದ ಮಾತುಕತೆಯ ಮೇಜಿಗೆ ಇರಾನ್ ಬರಬೇಕು ಎಂಬ ಪಶ್ಚಿಮದ ರಾಷ್ಟ್ರಗಳ ಆಗ್ರಹಕ್ಕೆ ಬಲ ಬಂದಂತಾಗಿದೆ.
`ಇರಾನ್ ಮೇಲೆ ಹೇರಲಾಗುತ್ತಿರುವ ನಿರ್ಬಂಧದಲ್ಲಿ ಇದು ಮಹತ್ವದ ನಿರ್ಧಾರ~ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಹೇಳಿದ್ದಾರೆ.

`ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಇರಾನ್ ಪದೇ ಪದೇ ಉಲ್ಲಂಘಿಸಿದೆ. ಮಾತ್ರವಲ್ಲದೆ, ಅಣ್ವಸ್ತ್ರ ಯೋಜನೆ ಬಗ್ಗೆ ಅರ್ಥಪೂರ್ಣ ಮಾತುಕತೆ ನಡೆಸಲು ಆ ರಾಷ್ಟ್ರ ಸಿದ್ಧವಿಲ್ಲ.  ಆದ್ದರಿಂದ ಇರಾನ್ ಮೇಲೆ ತೈಲ ವ್ಯಾಪಾರ ನಿಷೇಧ ಹೇರುವುದು ಸಮಂಜಸ ನಿರ್ಧಾರ~ ಎಂದೂ ಅವರು ತಿಳಿಸಿದ್ದಾರೆ.

ಇರಾನ್‌ನಿಂದ ಕಚ್ಚಾ ತೈಲ ಖರೀದಿ ನಿಷೇಧ ಕುರಿತಂತೆ ಯೂರೋಪ್ ಒಕ್ಕೂಟದ 27 ರಾಷ್ಟ್ರಗಳ ರಾಯಭಾರಿಗಳು ಕೆಲವು ವಾರಗಳಿಂದ ಕಠಿಣವಾದ ಮಾತುಕತೆಯಲ್ಲಿ ತೊಡಗಿದ್ದರು. ತೈಲ ಖರೀದಿ ನಿಷೇಧ ವಿಧಿಸುವ ಸಮಯ ಮತ್ತು ನಿಯಮಗಳ ಬಗ್ಗೆ ಸೋಮವಾರ ಮುಂಜಾನೆ ಹೊತ್ತಿಗೆ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ನಂತರ ಈ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಬ್ರುಸೆಲ್ಸ್‌ನಲ್ಲೇ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವರು ಸಿರಿಯಾ ವಿರುದ್ಧವೂ ಕಠಿಣ ತರಹದ ನಿರ್ಬಂಧಗಳನ್ನು ವಿಧಿಸಲು ಒಪ್ಪಿಗೆ ನೀಡಿದ್ದಾರೆ. ಇರಾನ್ ಮತ್ತು ಸಿರಿಯಾ ವಿರುದ್ಧ ಹೇರಲಾಗುವ ನಿರ್ಬಂಧಗಳ ಅಧಿಕೃತ ಉದ್ಘೋಷಣೆಯು ನಂತರ ಹೊರಬೀಳಲಿದೆ.

ಯುರೋಪ್ ಒಕ್ಕೂಟದ ರಾಷ್ಟ್ರಗಳು ಇರಾನ್‌ನಿಂದ ಕಚ್ಚಾ ತೈಲ ಆಮದಿಗೆ ತಕ್ಷಣ ನಿಷೇಧ ಹೇರಿರುವುದರ ಜೊತೆಗೆ ಆ ರಾಷ್ಟ್ರದೊಂದಿಗೆ ಜುಲೈ 1ನೇ ತಾರೀಖಿನವರೆಗೆ ಒಪ್ಪಂದಗಳನ್ನು ಹಂತ ಹಂತವಾಗಿ ರದ್ದುಗೊಳಿಸಲಿವೆ  ಎಂದು ಸಭೆಯಲ್ಲಿ ಭಾಗವಹಿಸಿದ್ದ ಉನ್ನತ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಆರ್ಥಿಕವಾಗಿ ಹಿನ್ನಡೆಯಲ್ಲಿರುವ ಗ್ರೀಸ್, ಸ್ಪೇನ್ ಮತ್ತು ಇಟಲಿ ರಾಷ್ಟ್ರಗಳು ಜಾಗತಿಕ ತೈಲ ಮಾರುಕಟ್ಟೆ ಜೊತೆಗೆ ಇರಾನ್‌ನಿಂದ ಆಮದಾಗುವ ತೈಲವನ್ನೇ ನೆಚ್ಚಿಕೊಂಡಿವೆ. ಇರಾನ್‌ನಿಂದ ತೈಲ ಆಮದಿಗೆ ನಿಷೇಧ ವಿಧಿಸುವ ಸುದ್ದಿ  ಈ ಮೂರು ರಾಷ್ಟ್ರಗಳಲ್ಲಿ ಹಬ್ಬಿ ತೈಲ ಬೆಲೆ ಏರಿಕೆಯಾಗಿ ದರದಲ್ಲಿ ಅನಿಶ್ಚಿತತೆ ಉಂಟಾಗಿದೆ. ಇರಾನ್ ತನ್ನ ದೇಶದ ಕಚ್ಚಾ ತೈಲ ಸಂಪತ್ತಿನಲ್ಲಿ ಶೇ 20ರಷ್ಟನ್ನು ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿದೆ. ಇದರಲ್ಲಿ ಗ್ರೀಸ್, ಸ್ಪೇನ್ ಮತ್ತು ಇಟಲಿಗಳೇ ಪ್ರಮುಖ ಗ್ರಾಹಕ ದೇಶಗಳು.

ಯುರೋಪ್ ಒಕ್ಕೂಟದ ರಾಷ್ಟ್ರಗಳು ಇರಾನಿನ ಕೇಂದ್ರೀಯ ಬ್ಯಾಂಕ್ ವ್ಯವಹಾರ, ತೈಲೋತ್ಪನ್ನ ಉದ್ದಿಮೆಗಳು  ಮತ್ತು ಚಿನ್ನದ ವಹಿವಾಟಿನ ಮೇಲೂ ಕಠಿಣ ರೀತಿಯ ನಿಷೇಧ ವಿಧಿಸುವ ಆಲೋಚನೆಯಲ್ಲಿವೆ. ಈ ಮೂಲಕ ಅಣ್ವಸ್ತ್ರ ಯೋಜನೆಗಳ ಮೇಲೆ ಹಣ ಹೂಡಲು ಆ ರಾಷ್ಟ್ರಕ್ಕೆ  ಕಷ್ಟವಾಗುವಂತಹ ಸನ್ನಿವೇಶ ನಿರ್ಮಿಸುವುದು ಯುರೋಪ್ ಒಕ್ಕೂಟದ ರಾಷ್ಟ್ರಗಳ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT