ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೆಳೆ ಹಾನಿ: ರೈತ ಕಂಗಾಲು

Last Updated 14 ಡಿಸೆಂಬರ್ 2013, 5:00 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ತೊಗಲೂರ, ಗೋರಟಾ ಮತ್ತು ಮುಚಳಂಬ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಲ್ಲಿನ ತೊಗರಿ ಬೆಳೆಯ ಹೂವು, ಮೊಗ್ಗು ಉದುರಿವೆ. ಇದು ಚಂಡಮಾರುತದ ಪರಿಣಾಮವೋ ಅಥವಾ ಗೊಡ್ಡು ರೋಗವೋ ಎಂಬದು ತಿಳಿಯದೆ ರೈತರು ಕಂಗಾಲಾಗಿದ್ದಾರೆ.

ತೊಗರಿ ಹೆಚ್ಚಾಗಿ ಬೆಳೆಯುವ ಈ ಭಾಗದಲ್ಲಿ ಯಥೇಚ್ಛ ಹೂವುಗಳು ಬಿಟ್ಟಿದ್ದರಿಂದ ಬಂಪರ್ ಇಳುವರಿ ಕನಸು ರೈತರು ಕಾಣುತ್ತಿದ್ದರು. ಆದರೆ ಹೆಲೆನ್ ಮತ್ತು ಲೆಹರ್ ಚಂಡಮಾರುತ ಬೀಸಿದ ನಂತರ ಮತ್ತು ಈಚೆಗೆ ಸಾಕಷ್ಟು ಮಂಜು ಬೀಳುತ್ತಿರುವ ಕಾರಣ ಹೂವುಗಳೆಲ್ಲ ಉದುರಿ ಬಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕಾಯಿ ಕಟ್ಟಿದ್ದ ಬೆಳೆಗಳಿಗೆ ಏನೂ ಆಗಿಲ್ಲ. ಆದರೆ ಮೊಗ್ಗು ಮತ್ತು ಹೂವು ಬಿಡುತ್ತಿದ್ದ ಬೆಳೆಗಳು ಬರಡಾಗಿವೆ. ಒಂದೆಡೆ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ತೊಗರಿ ಹಾನಿ ಆಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ತೊಗಲೂರ ಗ್ರಾಮದ ರವಿ ಜಗಶೆಟ್ಟಿಯ 4 ಎಕರೆ, ಕವಿರಾಜ ಬಿರಾದಾರ ಅವರ 15 ಎಕರೆ, ರಾಜಶೇಖರ ಪಾಟೀಲ ಮತ್ತು ಓಂಕಾರ ಅವರ 3 ಎಕರೆ, ವಿಶ್ವನಾಥ ಕಾಮಣ್ಣ, ಮಹಾದೇವ ರಾಜೋಳೆ, ಶರಣಪ್ಪ ಮಂಠಾಳೆ, ಮದಾರ ಸಂಗೋಳಗಿ, ಪ್ರಹ್ಲಾದ ಸಿದ್ಧಗೊಂಡ ಮತ್ತು ಗೋರಟಾದ ಬಸವರಾಜ ಕೋಲಿಯ 16 ಎಕರೆಯಲ್ಲಿನ ತೊಗರಿ ಸಂಪೂರ್ಣ ಬರಡಾಗಿವೆ.

ಬೇರೆಯವರ ಹೊಲ ಲಾವಣಿ ಮಾಡಿ 16 ಎಕರೆ ತೊಗರಿ ಹಾಕಿದ್ದೆವು. ಆದರೆ ಎಲ್ಲ ಬರಡಾಗಿದ್ದರಿಂದ ದಿಕ್ಕು ತೋಚದಂತಾಗಿದೆ. ಸರ್ಕಾರ ರೈತರಿಗೆ ಸಹಾಯ ಮಾಡಬೇಕು . ಆದರೆ ಸರ್ಕಾರಕ್ಕೆ ನಮ್ಮ ಗೋಳು ಕಾಣುತ್ತಿಲ್ಲ’ ಎಂದು ರೈತರಾದ ಬಸವರಾಜ ಕೋಲಿ ಮತ್ತು ಧರ್ಮಾಜಿ ಹೇಳುತ್ತಾರೆ.

‘ತೊಗರಿ ಹಾಳಾಗಿದ್ದರಿಂದ ಬೆಳೆ ಸಾಲ ಮರುಪಾವತಿಗೆ ಒಂದು ವರ್ಷ ಕಾಲಾವಕಾಶ ಕೊಡಬೇಕು. ಅಲ್ಲದೆ ಯೋಗ್ಯ ಪರಿಹಾರ ಧನ ಒದಗಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿ ಮೇತ್ರೆ ಒತ್ತಾಯಿಸಿದ್ದಾರೆ. ಮಂಜಿನಿಂದಾಗಿಯೇ ತೊಗರಿಗೆ ಹಾನಿ ಆಗಿದೆ ಎಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ ಚೆನ್ನಶೆಟ್ಟಿ ತಿಳಿಸಿದ್ದಾರೆ. ಬಾವಿ ಇದ್ದವರು ತೊಗರಿಗೆ ನೀರು ಹರಿಸಿದರೆ ಇನ್ನೊಮ್ಮೆ ಹೂವು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT