ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೂ ನಂಜಾಣು ರೋಗ, ಕೀಟಬಾಧೆ

Last Updated 11 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಈ ಬಾರಿ ಹೆಚ್ಚಿನ ವಿಸ್ತೀರ್ಣದಲ್ಲಿ ತೊಗರಿ ಬೆಳೆಯನ್ನು ಬೆಳೆಯಲಾಗಿದೆ. ಹೂ ಮತ್ತು ಹೀಚಿನ ಹಂತದಲ್ಲಿಯೇ ರೋಗ ಹಾಗೂ ಕಾಯಿಕೊರಕ ಹುಳುಗಳ ಕಾಟ ಹೆಚ್ಚಿದೆ. ಕೀಟನಾಶಕವನ್ನು ಸಿಂಪರಣೆ ಮಾಡಿದರೂ, ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಎಂದು ರೈತರು ಹೇಳುತ್ತಾರೆ.

ರೈತರು ಸಮಗ್ರ ಪೀಡೆ ನಿವಾರಣಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ತೊಗರಿ ಬೆಳೆಯನ್ನು ಕಾಡುತ್ತಿರುವ ರೋಗ ಹಾಗೂ ಕೀಟ ಬಾಧೆಯನ್ನು ನಿವಾರಿಸಿ ಅಧಿಕ ಇಳುವರಿಯನ್ನು ಪಡೆದುಕೊಳ್ಳಬಹುದು ಎಂದು ತಾಲ್ಲೂಕಿನ ಕೃಷಿ ಅಧಿಕಾರಿ ಪಿ.ಅರ್.ರವಿ ತಿಳಿಸಿದ್ದಾರೆ.

ನಂಜಾಣುರೋಗ (ಬಂಜೆ ರೋಗ) ಬಂದಲ್ಲಿ ಎಲೆಗಳ ಮೇಲೆ ಹಳದಿ ಮಿಶ್ರಿತ ಹಸಿರು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ರೋಗ ಪೀಡಿತ ಗಿಡಗಳನ್ನು ಕಿತ್ತು ಸುಡಬೇಕು ಮತ್ತು ಡೈಕೊಫಾಲ್ 20ಇಸಿ ಔಷಧಿಯನ್ನು 1ಲೀಟರ್ ನೀರಿಗೆ 2.5 ಮಿ.ಲೀ ನಂತೆ ಬೆರೆಸಿ ಸಿಂಪರಣೆ ಮಾಡಬೇಕು.

ಗೂಡುಮಾರು ಹುಳುಗಳು ಹೂಗೊಂಚಲು ಮತ್ತು ಎಳೆ ಎಲೆಗಳನ್ನು ಮುದುಡಿ ಬಳೆ ಕಟ್ಟುತ್ತವೆ. ಬಿತ್ತನೆಗೆ ಮೊದಲು ಬೀಜೋಪಚಾರದ ಸಂದರ್ಭದಲಲ್ಲಿ ಕಾರ್ಬನ್ ಡೈಜಿಯಂ ಅನ್ನು 1 ಕೆ.ಜಿ ಬೀಜಕ್ಕೆ 2 ಗ್ರಾಂ ನಂತೆ ಬೆರೆಸುವುದರ ಮೂಲಕ ಮತ್ತು ಬೆಳೆ ಪರಿವರ್ತನೆ ಮಾಡುವುದರ ಮೂಲಕ ಹುಳು ಬಾಧೆಯನ್ನು ನಿವಾರಿಸಬಹುದು.

ಕಾಯಿಕೊರಕ ಹುಳುಗಳು ಹೂ, ಮೊಗ್ಗು, ಕುಡಿ ಮತ್ತು ಕಾಯಿಗಳನ್ನು ಕೊರೆದು ತಿಂದು ಬೆಳೆಯನ್ನು ಹಾಳು ಮಾಡುತ್ತವೆ. ಅವುಗಳ ನಿಯಂತ್ರಣಕ್ಕೆ ತೊಗರಿ ಹೊಲದಲ್ಲಿ ಕವಲೊಡೆದ ಕೊಂಬೆಗಳನ್ನು ನೆಡಬೇಕು.
ಹಲವು ಜಾತಿಯ ಪಕ್ಷಿಗಳು ಕೊಂಬೆಗಳ ಮೇಲೆ ಕುಳಿತು ಹುಳುಗಳನ್ನು ಹುಡುಕಿ ತಿನ್ನುತ್ತವೆ. ಮೋಹಕ ಬಲೆಯನ್ನು ಬಳಸಿಯೂ ಕೀಟಗಳನ್ನು ನಿಯಂತ್ರಿಸಬಹುದು. ತತ್ತಿ ನಾಶಕಗಳನ್ನು ಬಳಸಿದಲ್ಲಿ ಹುಳು ನಿಯಂತ್ರಣ ಪರಿಣಾಮಕಾರಿಯಾಗುತ್ತದೆ.

ತೊಗರಿ ಬೆಳೆಗೆ ತಟ್ಟುವ ರೋಗ ಹಾಗೂ ಕೀಟಬಾಧೆಯನ್ನು ಐದು ಹಂತಗಳಲ್ಲಿ ನಿಯಂತ್ರಿಸಬಹುದು. ಮೊದಲ ಹಂತದಲ್ಲಿ ಮೆಥೋಮಿಲ್ 40 ಎಸ್‌ಪಿ ಔಷಧಿಯನ್ನು 10 ಲೀಟರ್ ನೀರಿಗೆ 6 ಗ್ರಾಂ, ಪ್ರೊಫಿತೋಪಾಸ್ ಅನ್ನು 1 ಲೀಟರ್ ನೀರಿಗೆ 2 ಮಿಲಿ ಲೀಟರ್, ಅಥವಾ ಥಯೋಡಿಕಾರ್ಬ್ ಅನ್ನು 10 ಲೀಟರ್ ನೀರಿಗೆ 6 ಗ್ರಾಂ ಬೆರೆಸಿ ಸಿಂಪರಣೆ ಮಾಡಬೇಕು.

ಎರಡನೇ ಹಂತದಲ್ಲಿ ಬೇವಿನ ಎಣ್ಣೆ ಅಥವಾ ಬೇವಿನ ಮೂಲದ ಕೀಟನಾಶಕಗಳನ್ನು ಸಿಂಪಡಿಸಬೇಕು.
ಎಚ್‌ಎನ್‌ಪಿಯು ನಂಜುರೋಗ ಬೀಜಾಣುವನ್ನು 1 ಹೆಕ್ಟೇರ್‌ಗೆ 500 ಎಲ್‌ಇ ನಂತೆ, ಒಂದು ಮಿ.ಲೀ ಔಷಧಿಗೆ 5ಗ್ರಾಂ ಬೆಲ್ಲ ಸೇರಿಸಿ ಮೂರನೆ ಸಿಂಪರಣೆ ಮಾಡಬೇಕು.

ನಾಲ್ಕನೇ ಸಿಂಪರಣೆಗೆ ರಾಸಾಯನಿಕ ಕೀಟನಾಶಕವಾದ ಕ್ವಿನಾಲ್‌ಪಾಸ್ ಅನ್ನು 1 ಲೀಟರ್ ನೀರಿಗೆ 2 ಮಿ.ಲೀ, ಕ್ಲೋರೊಪೈರಿಪಾಸ್ 2 ಮಿ.ಲೀ, ಅಸಿಪೇಟ್ 1 ಗ್ರಾಂ, ಇಂಡಾಕ್ಸಿಕಾರ್ಬ್ 1 ಮಿ.ಲೀ ಸೇರಿಸಿ ಸಿಂಪರಣೆ ಮಾಡಬೇಕು. ಐದನೇ ಸಿಂಪರಣೆಯ ಅಗತ್ಯ ಕಂಡುಬಂದಲ್ಲಿ 1 ಲೀಟರ್ ನೀರಿಗೆ 3 ಮಿ.ಲೀ ಸೈಫರ್ ಮೆಥರಿನ್, ಆಲ್ಫಾಸೈಲೋಥ್ರಿನ್ (ಕರಾಟೆ) 5 ಮಿ.ಲೀ ಸೇರಿಸಿ ಸಿಂಪರಣೆ ಮಾಡಬಹುದು ಎಂದು ಸಲಹೆ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT