ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕಾ ವಿ.ವಿ. ಘಟಿಕೋತ್ಸವದಲ್ಲಿ ಈತನಿಗೆ 14 ಚಿನ್ನದ ಪದಕ

ಕನ್ನಡ ಪ್ರೀತಿ ಮೆರೆದ ಜಾರ್ಖಂಡ್ ಹುಡುಗ
Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದ ಪ್ರಥಮ ತೋಟಗಾರಿಕಾ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ 14 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಜಾರ್ಖಂಡ್‌ನ ಅಭಯ್ ಕುಮಾರ್  ಗೌರವ್, ಚಿನ್ನದ ಪದಕಗಳಿಗಿಂತ ಹೆಚ್ಚಾಗಿ ಕನ್ನಡ  ಕಲಿತ ಖುಷಿಯಲ್ಲಿ ಬೀಗುತ್ತಿದ್ದರು.

ಜಾರ್ಖಂಡ್‌ನ  ಕೊಡರ್ಮ ಜಿಲ್ಲೆಯ ಪಿಪ್ರಾಡಿ ಗ್ರಾಮದ ಅಭಯ್ ಕುಮಾರ್ ಗೌರವ್ ಕನ್ನಡದಲ್ಲೇ ಭಾಷೆ, ನೆಲದ ಬಗ್ಗೆ ತಮಗಿರುವ ಪ್ರೀತಿ, ಅಭಿಮಾನವನ್ನು `ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡರು.

`ಬಿ.ಎಸ್‌ಸಿ ತೋಟಗಾರಿಕಾ ಪದವಿಯಲ್ಲಿ ನನಗೆ ಚಿನ್ನದ ಪದಕ ಬಂದಿರುವುದಕ್ಕಿಂತ ಕನ್ನಡ ಭಾಷೆ ಕಲಿತಿರುವುದು ಹೆಚ್ಚಿನ ಖುಷಿ ನೀಡಿದೆ. ನಾಲ್ಕು ವರ್ಷ ಕರ್ನಾಟಕದಲ್ಲಿ ಕಳೆದ ದಿನಗಳನ್ನು ಎಂದಿಗೂ ಮರೆಯಲಾಗದು. `ಪಿಯುಸಿ ಬಳಿಕ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಆರ್) ನಡೆಸಿದ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಈ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ತೋಟಗಾರಿಕೆ ಪದವಿಗೆ ಸೀಟು ಸಿಕ್ಕಿತು. ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಾದ ನಮಗೆ ಸರಿಯಾದ ಮೂಲ ಸೌಲಭ್ಯ ಇರಲಿಲ್ಲ. ಕಾಲೇಜು ಕ್ಯಾಂಪಸ್ ಜಾಲಿ ಗಿಡಗಳಿಂದ ತುಂಬಿ ಹೋಗಿತ್ತು, ಭಾಷೆ, ಆಹಾರ, ಸಂಸ್ಕೃತಿ, ಪರಿಸರ ಎಲ್ಲವೂ ನನಗೆ ಭಿನ್ನವಾಗಿತ್ತು, ಆದರೂ ಇಲ್ಲಿಯೇ ಪದವಿ ಕಲಿಯಬೇಕೆಂದು ನಿಶ್ಚಯಿಸಿದೆ' ಎಂದು ಅವರು ಹೆಮ್ಮೆಯಿಂದ ಹೇಳಿದರು.

`ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರೊಂದಿಗೆ ಬೆರೆತೆ, ಅವರ ಸಹಕಾರದಿಂದ ನಿಧಾನವಾಗಿ ಒಂದೊಂದೇ ಕನ್ನಡ ಪದಗಳನ್ನು ಮಾತನಾಡತೊಡಗಿದೆ. ಆರಂಭದಲ್ಲಿ ಇಂಗ್ಲಿಷ್‌ನಲ್ಲೂ ಹೇಳಿಕೊಳ್ಳುವಷ್ಟು ಪ್ರಬುದ್ಧತೆ ಇರಲಿಲ್ಲ. ಆದರೆ, ಇದೀಗ ಹಿಂದಿಯಷ್ಟೇ ಸುಲಭವಾಗಿ ಇಂಗ್ಲಿಷ್, ಕನ್ನಡದಲ್ಲಿ ಮಾತನಾಡಬಲ್ಲೆ. ಪ್ರಸ್ತುತ ವರ್ಷ ನಡೆದ ಐಸಿಆರ್ ಪರೀಕ್ಷೆಯಲ್ಲಿ 5ನೇ ರಾಂಕ್ ಗಳಿಸಿದ್ದು, ನವದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪುಷ್ಪ ಮತ್ತು ಉದ್ಯಾನಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಅಧ್ಯಯನದಲ್ಲಿ ತೊಡಗಿದ್ದೇನೆ. ಜ್ಯೂನಿಯರ್ ರೀಸರ್ಚ್ ಫೆಲೋಶಿಫ್ (ಜೆಆರ್‌ಎಫ್) ಕೂಡ ದೊರೆತಿದೆ. ಇದರಿಂದ ಪ್ರತಿ ತಿಂಗಳು ರೂ 8,400 ವಿದ್ಯಾರ್ಥಿವೇತನ ಸಿಗುತ್ತಿರುವುದು ವಿದ್ಯಾಭ್ಯಾಸಕ್ಕೆ ಸಹಾಯಕವಾಗಿದೆ' ಎಂದು ತಿಳಿಸಿದರು.

`ಭವಿಷ್ಯದಲ್ಲಿ ತೋಟಗಾರಿಕಾ ವಿಜ್ಞಾನಿಯಾಗಬೇಕು ಎಂಬ ಗುರಿ ಹೊಂದಿದ್ದೇನೆ. ಹಳ್ಳಿಗೆ ತೆರಳಿ ತೋಟಗಾರಿಕಾ ಕ್ಷೇತ್ರದಲ್ಲಿ ರೈತರಿಗೆ ಸಹಾಯವಾಗುವಂತಹ ಸಂಶೋಧನೆ ನಡೆಸಬೇಕು ಎಂದುಕೊಂಡಿದ್ದೇನೆ' ಎಂದು ಗೌರವ್ ತಮ್ಮ ಕನಸಿನ ಬಗ್ಗೆ ತಿಳಿಸಿದರು. `ಖಾಸಗಿ ಕಂಪೆನಿಯೊಂದರಲ್ಲಿ ಲೆಕ್ಕಪರಿಶೋಧಕ ರಾಗಿರುವ ತಂದೆ ಸುರೇಶ್ ಪ್ರಸಾದ್, ತಾಯಿ ಕಮಲಾ ಮತ್ತು ಕುಟುಂಬದವರು ಘಟಿಕೋತ್ಸವಕ್ಕೆ ಬರಲು ಉತ್ಸುಕರಾಗಿದ್ದರು. ಆದರೆ ಮುಂಚಿತವಾಗಿ ತಿಳಿಯದ ಕಾರಣ ಬರಲು ಅವರಿಗೆ ಸಾಧ್ಯವಾಗಲಿಲ್ಲ' ಎಂದರು.

38 ಚಿನ್ನದ ಪದಕ, 199 ವಿದ್ಯಾರ್ಥಿಗಳಿಗೆ ಪದವಿ

ಬಾಗಲಕೋಟೆ:  ಘಟಿಕೋತ್ಸವದಲ್ಲಿ 150 ವಿದ್ಯಾರ್ಥಿಗಳಿಗೆ ಬಿ.ಎಸ್‌ಸಿ ತೋಟಗಾರಿಕೆ ಪದವಿ ಮತ್ತು 49 ವಿದ್ಯಾರ್ಥಿಗಳಿಗೆ ಎಂ.ಎಸ್‌ಸಿ ತೋಟಗಾರಿಕೆ ಪದವಿ ಮತ್ತು ರ‌್ಯಾಂಕ್ ವಿಜೇತರಿಗೆ 38 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಎಂ.ಎಸ್‌ಸಿ ತೋಟಗಾರಿಕೆ ಮತ್ತು ಬಿ.ಎಸ್‌ಸಿ ತೋಟಗಾರಿಕೆ ಪದವಿಯಲ್ಲಿ ಚಿನ್ನದ ಪದಕ ಪಡೆದುಕೊಂಡವರ ವಿವರ ಇಂತಿದೆ.

ಎಂ.ಎಸ್‌ಸಿ ತೋಟಗಾರಿಕೆ: ಅಮ್ರೀನ್ ತಾಜ್ ಅವರಿಗೆ 4(ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ), ಅನೂಷ್ಮ - 3 (ಅರಭಾವಿ), ಲೇಶಾಂಗ್‌ತೆಮ್ ಜೀಬಿತ್ ಸಿಂಗ್ - ಎರಡು (ಪಿ.ಜಿ.ಸೆಂಟರ್ ಬೆಂಗಳೂರು) ಹಾಗೂ ಶೀಲಾ ಮಲಘಾಣ (ಬಾಗಲಕೋಟೆ), ಅಕ್ಷಿತಾ ಎಚ್.ಜೆ (ಪಿ.ಜಿ.ಸೆಂಟರ್ ಬೆಂಗಳೂರು), ಕೆ.ಗಂಗಾಧರ  (ಅರಭಾವಿ), ವೀಣಾ ಜಿ.ಎಲ್. (ಪಿ.ಜಿ. ಸೆಂಟರ್ ಬೆಂಗಳೂರು) ತಲಾ ಒಂದೊಂದು ಚಿನ್ನದ ಪದಕ ಪಡೆದುಕೊಂಡರು.

ಬಿ.ಎಸ್‌ಸಿ ತೋಟಗಾರಿಕೆ: ಅಭಯ್ ಕುಮಾರ್ ಗೌರವ್-14 (ಬಾಗಲಕೋಟೆ), ಸಂಧ್ಯಾ ಗಣಪತಿ ಭಟ್- 4 (ಅರಭಾವಿ), ಕೆ.ಎಂ.ಆಶಾ-3  (ಮೂಡಿಗೆರೆ), ಗುರುರಾಜ ಕಮರಿ -2 (ಬೀದರ್) ಹಾಗೂ ನೇತ್ರಾವತಿ (ಬೀದರ್) ಮತ್ತು ಗುರುದಯಾಳ ಸಾಹು (ಮೂಡಿಗೆರೆ) ತಲಾ ಒಂದೊಂದು ಚಿನ್ನದ ಪದಕ ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT