ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಪ್ರಗತಿ: ಸಮಗ್ರ ಯೋಜನೆ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತೋಟಗಾರಿಕೆಯನ್ನು ಪ್ರಗತಿದಾಯಕ ಕ್ಷೇತ್ರ ಎಂದು ಸರ್ಕಾರ ಪರಿಗಣಿಸಿದ್ದು, ಮೂರು ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಆರು ಲಕ್ಷ ಹೆಕ್ಟೇರ್‌ಗಳಷ್ಟು ವಿಸ್ತರಿಸಲು ನಿರ್ಧರಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದ ಕೃಷಿ ಭೂಮಿಯ ಪೈಕಿ ಶೇಕಡ 14.8ರಷ್ಟು ಭೂಮಿ ತೋಟಗಾರಿಕೆಗೆ ಬಳಕೆಯಾಗುತ್ತಿದ್ದು, ಕೃಷಿ ಮೂಲದ ಆದಾಯದಲ್ಲಿ ಶೇ 40ರಷ್ಟು ಈ ವಲಯದಿಂದಲೇ ಬರುತ್ತಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಮತ್ತು ತಂತ್ರಜ್ಞಾ   ನದ ವರ್ಗಾವಣೆ ಮೂಲಕ ತೋಟಗಾರಿಕಾ ಕ್ಷೇತ್ರದ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.

‘ಕೃಷಿ ಕ್ಷೇತ್ರದ ಪ್ರಗತಿಯಲ್ಲಿ ಹಿನ್ನಡೆ ಆಗಿರುವುದರಿಂದ ರಾಜ್ಯದ ಒಟ್ಟಾರೆ ಆರ್ಥಿಕ ಪ್ರಗತಿಯ ದರ ಕುಂಠಿತವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಶೇಕಡ 11ರ ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆಯುವ ಕೃಷಿ ಹೂಡಿಕೆದಾರರ ಸಮಾವೇಶದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
 
ರಾಜ್ಯ ಬ್ಯಾಂಕರುಗಳ ಸಮಿತಿಯ ಅಧ್ಯಕ್ಷ ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಅಧ್ಯಕ್ಷ ಬಸಂತ್ ಸೇಠ್ ಮಾತನಾಡಿ, ಎರಡು ಸಾವಿರಕ್ಕಿಂತ ಹೆಚ್ಚು ಜನರಿರುವ ಹಳ್ಳಿಗಳನ್ನು ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ವ್ಯಾಪ್ತಿಗೆ ತರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಹತ್ವದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಹೆಚ್ಚು ಆಸಕ್ತಿ ತಳೆಯಬೇಕು ಎಂದರು.

‘2011ರ ಮಾರ್ಚ್ ಒಳಗಾಗಿ ರಾಜ್ಯದಲ್ಲಿ 2000ಕ್ಕಿಂತ ಹೆಚ್ಚು ಜನರಿರುವ 2,253 ಹಳ್ಳಿಗಳನ್ನು ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿತ್ತು. ಆದರೆ ಕೇವಲ 1,121 ಹಳ್ಳಿಗಳನ್ನು ಮಾತ್ರ ಈ ವ್ಯಾಪ್ತಿಗೆ ತರಲಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಕೋರ್ ಬ್ಯಾಂಕಿಂಗ್ ಪದ್ಧತಿಗೆ ಬದಲಾವಣೆ ಹೊಂದುವ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ಈ ಹಿನ್ನಡೆ ಆಗಿದೆ’ ಎಂದು ಹೇಳಿದರು. ಸಂಪರ್ಕದಲ್ಲಿ ಸಮಸ್ಯೆ, ಕಾರ್ಯಕ್ಷೇತ್ರದಲ್ಲಿ ತರಬೇತಿ ಮತ್ತು ಸಿಬ್ಬಂದಿ ಕೊರತೆ, ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬ ಮತ್ತಿತರ ಕಾರಣಗಳು ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಜಾರಿಗೆ ಅಡ್ಡಿಯಾಗುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ಬ್ಯಾಂಕ್‌ಗಳು ಪ್ರಯತ್ನಿಸಬೇಕು ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ವಿಜಯ್ ಭಾಸ್ಕರ್ ಮಾತನಾಡಿ, ‘ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಅನುಷ್ಠಾನದ ಮಾದರಿ ಗ್ರಾಮಗಳನ್ನಾಗಿ ರಾಜ್ಯದ ಒಂಬತ್ತು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳ ಪ್ರಗತಿಯನ್ನು ದೇಶದಾದ್ಯಂತ ಪ್ರಚುರಪಡಿಸಲಾಗುವುದು’ ಎಂದು ಹೇಳಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೀರಾ ಸಕ್ಸೇನಾ, ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್ ತಗತ್ ಮಾತನಾಡಿದರು. ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳು ಮತ್ತು ವಿಮಾ ಕಂಪೆನಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT