ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಬೆಳೆಗಳತ್ತ ರೈತರ ಚಿತ್ತ

Last Updated 10 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಕೋಲಾರ: ನೀರಿನ ತೀರದ ಬವಣೆ ಜಿಲ್ಲೆಯ ರೈತರನ್ನು ಕೃಷಿಯಿಂದ ತೋಟಗಾರಿಕೆಯತ್ತ ಸೆಳೆಯುತ್ತಿದೆ. ನಿರಂತರವಾಗಿ ನೀರು ಬಯಸುವ ಕೃಷಿ ಚಟುವಟಿಕೆಗಳಿಂದ ಜಿಲ್ಲೆಯ ರೈತರು ನಿಧಾನಕ್ಕೆ ದೂರ ಸರಿದು, ಕಡಿಮೆ ನೀರು ಬಯಸುವ ತೋಟಗಾರಿಕೆ ಚಟುವಟಿಕೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಅಕಾಲಿಕ ಮಳೆ, ಕೃಷಿ ಕೂಲಿಕಾರರ ಕೊರತೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. 2007-08, 08-09 ಹಾಗೂ 09-10ನೇ ಸಾಲಿನ ತೋಟಗಾರಿಕೆ ಇಲಾಖೆ ಅಂಕಿ-ಅಂಶಗಳೂ ಈ ಸಂಗತಿಯನ್ನು ದೃಢಪಡಿಸುತ್ತವೆ.

ಹಣ್ಣಿನ ಬೆಳೆ, ತರಕಾರಿ ಬೆಳೆ, ಸಾಂಬಾರ ಬೆಳೆ, ತೋಟದ ಬೆಳೆ, ವಾಣಿಜ್ಯ ಪುಷ್ಪಗಳು, ಔಷಧೀಯ ಸಸ್ಯಗಳು, ಸುಗಂಧಿತ ಸಸ್ಯಗಳು-ಇವು ಜಿಲ್ಲೆಯಲ್ಲಿ ಬೆಳೆಯಲಾಗುವ ಪ್ರಮುಖ ತೋಟಗಾರಿಕೆ ಬೆಳೆಗಳು. ಇವುಗಳ ಪೈಕಿ ಹಣ್ಣಿನ ಬೆಳೆಯ ಪ್ರಮಾಣ ಹೆಚ್ಚು. ಪ್ರಸ್ತುತ ಎರಡು ಅವಧಿಯಲ್ಲಿ ಹಣ್ಣಿನ ಬೆಳೆಗಳನ್ನು ಬೆಳೆಯುವ ವಿಸ್ತೀರ್ಣ ಎರಡು ಸಾವಿರ ಎಕರೆಯಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ. ಹಣ್ಣುಗಳಿಗೆ ನಿಗದಿತ ಆದಾಯವೂ ಇರುವುದೂ ಇದಕ್ಕೆ ಕಾರಣ. ಹಣ್ಣುಗಳೂ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಬೆಲೆ ಹೆಚ್ಚಿರುವುದರಿಂದ, ಕೊಳವೆಬಾವಿ ಸೌಕರ್ಯವಿರುವ ರೈತರೂ ಸೇರಿದಂತೆ ಬಹಳಷ್ಟು ಮಂದಿ ಅತ್ತಕಡೆಗೇ ವಾಲುತ್ತಿದ್ದಾರೆ.

2007-08ನೇ ಸಾಲಿನಲ್ಲಿ 46,220 ಹೆಕ್ಟೇರ್‌ನಲ್ಲಿ ಹಣ್ಣಿನ ಬೆಳೆಗಳನ್ನು ಬೆಳೆದಿದ್ದರೆ, ನಂತರದ ಸಾಲಿನಲ್ಲಿ ಅದು 48,781 ಹೆಕ್ಟೇರ್‌ಗೆ ಏರಿದೆ. ಕಳೆದ ಸಾಲಿನಲ್ಲಿ 51,410 ಹೆಕ್ಟೇರ್‌ನಲ್ಲಿ ಹಣ್ಣುಗಳನ್ನು ಬೆಳೆಯ ಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 5.190 ಹೆಕ್ಟೇರ್ ಹೆಚ್ಚು ಪ್ರದೇಶದಲ್ಲಿ ಹಣ್ಣು ಬೆಳೆಯಲಾಗಿದೆ. 08ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 99,796 ಹೆಕ್ಟೇರ್, 09ನೇ ಸಾಲಿನಲ್ಲಿ 97,274 ಹೆಕ್ಟೇರ್ ಹಾಗೂ 10ನೇ ಸಾಲಿನಲ್ಲಿ 1,03,581 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ. ಮೂರು ವರ್ಷದಲ್ಲಿ 3.785 ಕ್ಕೂ ಹೆಚ್ಚು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಯಲಾಗಿದೆ.

ಶ್ರೀನಿವಾಸಪುರ ಹೆಚ್ಚು: ಮಾವಿನ ತವರೆಂದೇ ಖ್ಯಾತವಾದ ಶ್ರೀನಿವಾಸಪುರ ತಾಲ್ಲೂಕು ತೋಟಗಾರಿಕೆ ಬೆಳೆಯುವಲ್ಲುೂ ಮೊದಲ ಸ್ಥಾನ ಗಳಿಸಿದೆ. 08ನೇ ಸಾಲಿನಲ್ಲಿ 20,632.20 ಹೆಕ್ಟೇರ್, 09ನೇ ಸಾಲಿನಲ್ಲಿ 21,548 ಹೆಕ್ಟೇರ್‌ನಲ್ಲಿ ಹಣ್ಣುಗಳನ್ನು ಬೆಳೆಯಲಾಗಿದೆ.

ಇಳುವರಿಯೂ ಹೆಚ್ಚು: ತೋಟಗಾರಿಕೆ ಬೆಳೆಗಳನ್ನು ಬೆಳೆದ ವಿಸ್ತೀರ್ಣ ಹೆಚ್ಚಾದ ಪರಿಣಾಮವಾಗಿ ಇಳುವರಿ ಯೂ ಹೆಚ್ಚಾಗಿದೆ. 08ನೇ ಸಾಲಿನಲ್ಲಿ ಪ್ರತಿ ಹೆಕ್ಟೇರ್‌ಗೆ 5.69 ಟನ್‌ಗಳಷ್ಟಿದ್ದ ಹಣ್ಣುಗಳ ಇಳುವರಿ, 09ನೇ ಸಾಲಿನಲ್ಲಿ 12.79 ಟನ್‌ಗೆ ಏರಿದೆ. 08ನೇ ಸಾಲಿನಲ್ಲಿ 1,21,2290.75 ಟನ್, 09ನೇ ಸಾಲಿನಲ್ಲಿ 1,44,6857.80 ಟನ್‌ಗಳಷ್ಟು ಉತ್ಪಾದನೆ ಯಾಗಿದೆ. ಇಳುವರಿ ಪ್ರಮಾಣ 08ರಲ್ಲಿ ಪ್ರತಿ ಹೆಕ್ಟೇರ್‌ಗೆ 12.15 ಟನ್‌ಗಳಷ್ಟಿದ್ದರೆ, 09ರಲ್ಲಿ 12.15ರಷ್ಟಕ್ಕೆ ಹೆಚ್ಚಿದೆ. ಎರಡೂ ಸಾಲಿನಲ್ಲಿ ಉತ್ಪಾದನೆಯ ಮೌಲ್ಯವೂ ಹೆಚ್ಚಿದೆ. 08ನೇ ಸಾಲಿನಲ್ಲಿ 70.53 ಕೋಟಿ ಇದ್ದರೆ ಅದು 09ನೇ ಸಾಲಿನಲ್ಲಿ 130.8 ಕೋಟಿಯಾಗಿದೆ! ಉತ್ಪಾದನೆಯ ಮೌಲ್ಯ ಮುಳಬಾಗಲು ತಾಲ್ಲೂಕಿನಲ್ಲಿ ಹೆಚ್ಚಿರುವುದು ಗಮನಾರ್ಹ.

10ನೇ ಸಾಲಿನಲ್ಲೂ ಹೆಚ್ಚು: 2009-10ನೇ ಸಾಲಿನಲ್ಲಿ 51,410 ಹೆಕ್ಟೇರ್‌ನಲ್ಲಿ ಹಣ್ಣು (ಮಾವು, ಬಾಳೆ, ಸಪೋಟ), 35,216 ಹೆಕ್ಟೇರ್‌ನಲ್ಲಿ ತರಕಾರಿ (ಎಲ್ಲ ಬಗೆಯ ತರಕಾರಿ), 10,122 ಹೆಕ್ಟೇರ್‌ನಲ್ಲಿ  ತೋಟದ ಬೆಳೆಗಳು (ತೆಂಗು, ಗೋಡಂಬಿ, ಹುಣಿಸೆ), 4,152 ಹೆಕ್ಟೇರ್‌ನಲ್ಲಿ ಸಾಂಬಾರು ಬೆಳೆ (ಶುಂಠಿ, ಅರಿಶಿನ), 1834 ಹೆಕ್ಟೇರ್‌ನಲ್ಲಿ  ಹೂಬಳೆ (ಚೆಂಡು, ಗುಲಾಬಿ, ಕಾಖಡಾ, ಕನಕಾಂಬರ), 847 ಹೆಕ್ಟೇರ್‌ನಲ್ಲಿ ಸುಗಂಧಿತ ಬೆಳೆಗಳನ್ನು (ದವನ, ಪಚೋಲಿ, ಜಿರೇನಿಯಂ) ಬೆಳೆಯಲಾಗಿದೆ.

ಕೂಲಿಗಳಿಲ್ಲ: ಕೃಷಿ ಕೂಲಿಕಾರರ ಕೊರತೆಯೂ ಕೂಡ ರೈತರು ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗಲು ಕಾರಣ ಎಂಬುದು ಗಮನಾರ್ಹ. ಹೆಚ್ಚು ಕೂಲಿ ದೊರಕುವ ಕೃಷಿಯೇತರ ಕೆಲಸಗಳತ್ತ ರೈತರು ಹೆಜ್ಜೆ ಹಾಕುತ್ತಿದ್ದಾರೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ದೊರಕುವ ಕೂಲಿಯೂ ಹೆಚ್ಚಿರುವುದರಿಂದ ಕೃಷಿ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಹೀಗಾಗಿ ಕೂಲಿಗಳನ್ನು ಹೆಚ್ಚು ಆಶ್ರಯಿಸದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದೇ ಸೂಕ್ತ ಎಂಬುದು ಹಲವು ರೈತರ ಅಭಿಪ್ರಾಯವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಉಳುವುದು, ಬಿತ್ತನೆ ಮಾಡುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ಮಳೆಗಾಗಿ ಕಾಯುವುದು ಸೇರಿದಂತೆ ಹಲವು ಪರಿಶ್ರಮಗಳನ್ನು ಬೇಡುವ ಕೃಷಿ ಚಟುವಟಿಕೆಗಿಂತಲೂ ಒಮ್ಮೆ ಗಿಡ ನೆಟ್ಟರೆ ಹೆಚ್ಚು ನೀರು ಬಯಸದ, ಕೂಲಿಗಳನ್ನು ಬಯಸದ, ತೋಟಗಾರಿಕೆ ಬೆಳೆಗಳೇ ರೈತರಿಗೆ ಸಮಾಧಾನ ತರುತ್ತಿವೆ. ಮುಂದಿನ ದಿನಗಳಲ್ಲೂ ಹೆಚ್ಚು ರೈತರು ತೋಟಗಾರಿಕೆಯತ್ತ ಗಮನ ಹರಿಸುವ ಲಕ್ಷಣಗಳಿವೆ ಎಂಬುದು ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾರೆಡ್ಡಿಯವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT