ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ: ಯೋಜನೆ ಜಾರಿಗೆ ಒಪ್ಪಿಗೆ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವ `ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ~ಗೆ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, `ಈ ಯೋಜನೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 525 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ತೋಟಗಾರಿಕಾ ಬೆಳೆಗಳ ನೀರಿನ ನಿರ್ವಹಣೆ, ಕೀಟಬಾಧೆ ನಿಯಂತ್ರಣ, ಮಾರುಕಟ್ಟೆ ಸುಧಾರಣೆ ಮತ್ತಿತರ ಕಾರ್ಯಗಳಿಗೆ ಈ ಯೋಜನೆಯಡಿ ನೆರವು ಒದಗಿಸಲಾಗುವುದು~ ಎಂದು ತಿಳಿಸಿದರು.

ರಾಜ್ಯದಲ್ಲಿ 19.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 20,000 ಕೋಟಿ ರೂಪಾಯಿ ಮೌಲ್ಯದ 1.54 ಕೋಟಿ ಟನ್ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. 12 ಲಕ್ಷ ಕುಟುಂಬಗಳು ಮತ್ತು 75 ಲಕ್ಷ ಜನರು ಈ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ರಾಜ್ಯದ ಕೃಷಿ ವಲಯದ ಉತ್ಪಾದನೆಯಲ್ಲಿ ಶೇಕಡ 40ರಷ್ಟು ತೋಟಗಾರಿಕಾ ಕ್ಷೇತ್ರದಿಂದ ಬರುತ್ತಿದೆ. ತೋಟಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಯ ಜಾರಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ಹೂವು, ಹಣ್ಣು, ತರಕಾರಿ ಮತ್ತಿತರ ಬೆಳೆಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ. ಯೋಜನೆ ಜಾರಿಯಿಂದ ತೋಟಗಾರಿಕಾ ಆದಾಯದಲ್ಲಿ ಶೇ 40ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 125 ಕೋಟಿ ರೂಪಾಯಿ ನೆರವು ಪಡೆಯಲು ಯೋಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಲೂಗೆಡ್ಡೆ ಬೆಳೆಗಾರರಿಗೆ ಪ್ಯಾಕೇಜ್: ಪ್ರಸಕ್ತ ವರ್ಷ ಆಲೂಗೆಡ್ಡೆ ಬೆಳೆಯುವ ಬೆಳೆಗಾರರಿಗೆ ನೆರವು ನೀಡಲು ವಿಶೇಷ ಪ್ಯಾಕೇಜ್ ಜಾರಿಗೊಳಿಸುವ ಪ್ರಸ್ತಾವಕ್ಕೂ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಯೋಜನೆಯಡಿ ಆಲೂಗೆಡ್ಡೆ ಬೆಳೆಗಾರರಿಗೆ 17.5 ಕೋಟಿ ರೂಪಾಯಿ ನೆರವು ನೀಡಲು ಉದ್ದೇಶಿಸಲಾಗಿದೆ.
`ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ಆಲೂಗೆಡ್ಡೆ ಬೆಳೆಯುವ ರೈತರಿಗೆ ಈ ಪ್ಯಾಕೇಜ್‌ನಿಂದ ಅನುಕೂಲ ದೊರೆಯಲಿದೆ.

ಗೊಬ್ಬರ ಮತ್ತು ಔಷಧಿ ಖರೀದಿಗೆ ನೆರವು ನೀಡಲಾಗುವುದು. ಎರಡು ಎಕರೆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ 5,000 ರೂಪಾಯಿವರೆಗೂ ಧನಸಹಾಯ ಒದಗಿಸಲಾಗುವುದು~ ಎಂದು ಕಾಗೇರಿ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT