ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಬೆಳೆಯಾಗಿ ಸೀತಾ ಫಲ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರಕೃತಿ ನಮಗೆ ಹತ್ತಾರು ಹಣ್ಣು ಹಂಪಲುಗಳನ್ನು ನೀಡಿದೆ. ಒಂದೊಂದು ಹಣ್ಣಿಗೂ ಒಂದೊಂದು ಹೆಸರು, ಭಿನ್ನ ರುಚಿ, ಆಕಾರ. ಕೆಲವು ದೇಶಿಯ ಹಣ್ಣುಗಳು. ಇನ್ನು ಕೆಲವು ವಿದೇಶಿ ಮೂಲದವು. ಭಾರತ ಮೂಲದ ಹಣ್ಣುಗಳು ಬೇರೆ ದೇಶಗಳಿಗೆ ಹೋಗಿವೆ.

ಹಾಗೆಯೇ ಬೇರೆ ದೇಶದ ಹಣ್ಣುಗಳು ನಮ್ಮ ದೇಶದಲ್ಲೂ ನೆಲೆ ಕಂಡುಕೊಂಡಿವೆ. ಕೆಲ ವಿದೇಶಿ ಮೂಲದ ಹಣ್ಣುಗಳು ನಮ್ಮ ದೇಶದ ಹಣ್ಣುಗಳೆನೋ ಎಂಬಷ್ಟು ಸಹಜವಾಗಿ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತವೆ.

ಬೇಸಾಯ, ತೋಟಗಾರಿಕೆ ನಮ್ಮ ದೇಶದ ಬೆನ್ನೆಲುಬು. ಸಾವಿರಾರು ವರ್ಷಗಳಿಂದ ನಮ್ಮ ರೈತರ ಮೂಲ ಆದಾಯ ಬೇಸಾಯ ಮತ್ತು ತೋಟಗಾರಿಕೆ. ಉತ್ತರ ಭಾರತದ ಹವಾಗುಣಕ್ಕೆ ಸೂಕ್ತವಾದ ಹಣ್ಣುಗಳನ್ನು ದಕ್ಷಿಣ ಭಾರತದಲ್ಲಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಹಣ್ಣುಗಳು ಇಡೀ ದೇಶದ ಉದ್ದಗಲದಲ್ಲಿ ಬೆಳೆಯುತ್ತವೆ. ಅಂತಹ ಹಣ್ಣುಗಳಲ್ಲಿ ಸೀತಾಫಲವೂ ಒಂದು.

 ಸೀತಾ ಫಲ ನಮ್ಮ ದೇಶದ ಹಣ್ಣು. ಈ ಹಣ್ಣಿನೊಂದಿಗೆ ರಾಮಾಯಣದ ಸೀತೆಯ ಹೆಸರು ತಳಕು ಹಾಕಿಕೊಂಡಿದೆ. ಸೀತೆಗೂ ಸೀತಾಫಲಕ್ಕೂ ಏನು ಸಂಬಂಧವಿದೆ ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಸೀತಾ ಫಲದ ಜಾತಿಗೆ ಸೇರಿದ ರಾಮ ಫಲ, ಲಕ್ಷ್ಮಣ ಫಲ ಹೆಸರಿನ ಹಣ್ಣುಗಳಿವೆ. ರುಚಿಯಲ್ಲಿ ಈ ಮೂರು ಹಣ್ಣುಗಳ ನಡುವೆ ಸಾಮ್ಯತೆ ಇದೆ.

ಸೀತಾ ಫಲ ಹಣ್ಣಿನ ಗಿಡಗಳು ಬಯಲು ಸೀಮೆಯ ಗುಡ್ಡಗಾಡು ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ರಾಜ್ಯದ ತುಮಕೂರು, ಚಿತ್ರದುರ್ಗ ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸೀತಾಫಲ ಗಿಡಗಳು ಸಹಜವಾಗಿ ಬೆಳೆಯುತ್ತವೆ. ಗುಡ್ಡಗಾಡು ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳಿಂದ ಬೀಜ ಪ್ರಸಾರವಾಗಿ ಅಲ್ಲಲ್ಲಿ ಗಿಡಗಳು ಬೆಳೆದು ಹಣ್ಣು ಕೊಡುತ್ತವೆ.

ಸೀತಾಫಲದಲ್ಲಿ ಹತ್ತಾರು ದೇಶಿ ತಳಿಗಳಿವೆ. ದೇಶದ ವಿವಿಧ ರಾಜ್ಯಗಳಲ್ಲಿನ ತೋಟಗಾರಿಕೆ ಸಂಶೋಧನಾ ಸಂಸ್ಥೆಗಳು ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ. ದೊಡ್ಡ ಗಾತ್ರದ, ಕಡಿಮೆ ಬೀಜದ, ಕೊಯ್ಲುನಂತರ ಹೆಚ್ಚುಕಾಲ ಕೆಡದಂತೆ ಉಳಿಯುವ ಗುಣಧರ್ಮಗಳನ್ನು ಒಳಗೊಂಡು ಹೊಸ ತಳಿಗಳು ಈಗ ಬಂದಿವೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕುಂಬಳವಳನೆ ಎಂಬ ಗ್ರಾಮದ ತಾನಾಜಿ ಪಂಡರನಾಥ ಮೋರೆ ಎಂಬ ರೈತರು ಸೀತಾಫಲ ಬೆಳೆದು ರೈತರ ಗಮನ ಸೆಳೆದಿದ್ದಾರೆ. ಅವರು ಎಂಟು ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ನಾಟಿ ಮಾಡಿದ ವಿಶಿಷ್ಟ ತಳಿಯ ಸೀತಾಫಲ ಹಣ್ಣಿನ ಗಿಡಗಳಿವೆ. ಈ ಗಿಡಗಳಲ್ಲಿ ಹಣ್ಣುಗಳು ತೊನೆದಾಡುತ್ತಿವೆ.
 
ಸುಮಾರು 500ಕ್ಕೂ ಗಿಡಗಳು ಈಗ ಫಸಲು ಬಿಟ್ಟಿವೆ. ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಮೋರೆ ಅವರು ಬೇಸಾಯ ಮಾಡಿದ್ದಾರೆ. ಒಂದು ಎಕರೆಯಲ್ಲಿ ಸೀತಾಫಲ ಬೆಳೆಯಲು 25 ಸಾವಿರ ರೂ ಬಂಡವಾಳ ಹಾಕಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 1.5 ರೂವರೆಗೆ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ತಾನಾಜಿ ಮೋರೆಯವರು ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಪುಣೆಯ ವ್ಯಾಪಾರಿಗಳಿಗೆ ಮಾರುತ್ತಾರೆ. ಈಗ ಸೀತಾಫಲ ಹಣ್ಣುಗಳಿಗೆ ಎಲ್ಲಡೆ ಉತ್ತಮ ಬೇಡಿಕೆ ಇದೆ.

ಮೋರೆ ಅವರು ಪ್ರತಿಯೊಂದು ಹಂತದಲ್ಲೂ ತೋಟಗಾರಿಕೆ ಇಲಾಖೆಯ ತಜ್ಞರ ಸಲಹೆ ಪಡೆದು ತೋಟ ನಿರ್ವಹಣೆ ಮಾಡುತ್ತಾರೆ. ಅದೇ ಅವರ ಯಶಸ್ಸಿನ ಗುಟ್ಟು.

ಸೀತಾಫಲದ ಗಿಡಗಳಿಗೆ ಕಸಿ ಕಟ್ಟಿ ಸಸಿ ಮಾರಾಟ ಮಾಡುವ ಉದ್ದೇಶ ಅವರಿಗೆ ಇದೆ. ಅವರ ತೋಟದಲ್ಲಿ ಹಲವಾರು ತಳಿಯ ಸೀತಾ ಫಲದ ಗಿಡಗಳಿವೆ
ತಾನಾಜಿ ಅವರೊಂದಿಗೆ ಮಾತನಾಡಿ ಅವರ ಅನುಭವಗಳನ್ನು ಕೇಳಬಹುದು. ಹಿಂದಿ ಮತ್ತು ಮರಾಠಿಯಲ್ಲಿ ಅವರ ಜತೆಯಲ್ಲಿ ಸಂಭಾಷಣೆ ಮಾಡಬಹುದು. ಅವರ ಮೊಬೈಲ್ ನಂಬರ್: 07350066175, 098229 23652.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT