ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ, ಒತ್ತುವರಿ ಹಾವಳಿಯಲ್ಲಿ ಕರಗುತಿದೆ ಕೆರೆ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಮಹದೇವಪುರ: ಇಲ್ಲಿಗೆ ಸಮೀಪದ ಹೂಡಿಯ ಗಿಡ್ಡನ ಕೆರೆಗೆ ಪ್ರತಿದಿನವೂ ಕಶ್ಮಲ ತ್ಯಾಜ್ಯ ಬಂದು ಸೇರುತ್ತಿರುವ ಹಿನ್ನೆಲೆಯಲ್ಲಿ ನೀರು ಸಂಪೂರ್ಣವಾಗಿ ಮಲಿನಗೊಂಡಿದ್ದು, ಸೊಳ್ಳೆಗಳು ಉತ್ಪತ್ತಿಯಾಗುವ ಕೊಳಚೆ ಗುಂಡಿಯಂತಹ ತಾಣವಾಗಿ ಬದಲಾಗಿದೆ.

ಅಲ್ಲದೆ, ಕೆರೆಯ ಸುತ್ತಮುತ್ತಲಿರುವ ಸರ್ಕಾರಿ ಭೂಪ್ರದೇಶವನ್ನು ಕೆಲ ಭೂಗಳ್ಳರು ಹಂತ ಹಂತವಾಗಿ ಮಣ್ಣು ತುಂಬಿ ಒತ್ತುವರಿ ಮಾಡಿಕೊಳ್ಳುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇಂತಹ ಬೆಳವಣಿಗೆ ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆಯ ಅಧೀನದಲ್ಲಿರುವ ಈ ಕೆರೆ ರಾಜಪಾಳ್ಯ ಗ್ರಾಮದ ವ್ಯಾಪ್ತಿಗೂ ಸೇರಿರುವುದರಿಂದ `ರಾಜಪಾಳ್ಯ ಕೆರೆ~ ಎಂತಲೂ ಕರೆಯಲಾಗುತ್ತಿದೆ. ಈ ಕೆರೆಯು ಹೂಡಿ ಗ್ರಾಮದ ಸರ್ವೆ ನಂ.138ರಲ್ಲಿದ್ದು, ಒಟ್ಟು 28 ಎಕರೆ 31 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. ಸದಾ ನೀರಿನಿಂದ ತುಂಬಿರುವ ಕ್ಷೇತ್ರದಲ್ಲಿನ ಕೆರೆಗಳ ಪೈಕಿ ಇದು ಕೂಡ ಒಂದಾಗಿದೆ.

ಕೆರೆಗೆ ಹೊಂದಿಕೊಂಡಿರುವ ಕೆಲ ಖಾಸಗಿ ವಸತಿ ಸಮುಚ್ಚಯಗಳ ನಿರ್ಮಾಣ ಸಂಸ್ಥೆಗಳು ಕೆರೆಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುತ್ತಿವೆ. ಹಾಗೆಯೇ ಅಂತಹ ಸಂಸ್ಥೆಗಳು ಕೆರೆಯ ದಕ್ಷಿಣ ಭಾಗದ ಭೂಪ್ರದೇಶವನ್ನು ತಮ್ಮ ಕಟ್ಟಡಗಳ ಮುಂದೆ ಉದ್ಯಾನವನ್ನಾಗಿ ಪರಿವರ್ತನೆ ಮಾಡಿಕೊಂಡಿವೆ. ಇಂತಹ ಬೆಳವಣಿಗೆಯಿಂದಾಗಿ ಕೆರೆ ವಿಸ್ತೀರ್ಣ ಕಡಿಮೆ ಆಗಿದೆ.

ಕೆರೆಯ ದಡದಲ್ಲಿ ಪ್ಲಾಸ್ಟಿಕ್ ನಮೂನೆಯ ಕರಗದಂತಹ ವಿವಿಧ ಘನತ್ಯಾಜ್ಯ ವಸ್ತುಗಳಿವೆ. ಇದರಿಂದಾಗಿ ಕೆರೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಇದೇ ಕೆರೆಯ ಹತ್ತಿರದಲ್ಲಿಯೇ ಇಂಟರ್ ನ್ಯಾಷನಲ್ ಟೆಕ್‌ಪಾರ್ಕ್ ಇದೆ. ಇನ್ನು ನೂರಾರು ಬಹುರಾಷ್ಟ್ರೀಯ ಕಂಪೆನಿಗಳು, ಸಣ್ಣ ಕೈಗಾರಿಕಾ ಘಟಕಗಳು ತಲೆ ಎತ್ತಿವೆ. ಇಂತಹ ಪ್ರದೇಶದಲ್ಲಿರುವ ಗಿಡ್ಡನ ಕೆರೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗೆಣಿಸಲಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಅನೇಕ ಬಹುಮಹಡಿ ಕಟ್ಟಡಗಳಿಂದ ಹಾಗೂ ಸಣ್ಣ ಕೈಗಾರಿಕಾ ಘಟಕಗಳಿಂದಲೂ ಪ್ರತಿ ದಿನ ಕಶ್ಮಲ ತ್ಯಾಜ್ಯ ನೀರು ಹೊರಬಂದು ಕೆರೆಯ ಒಡಲನ್ನು ಸೇರುತ್ತಿದೆ. ಇದರಿಂದಾಗಿ ಕೆರೆಯ ನೀರು ಕಪ್ಪಾಗಿ ಹೋಗಿದೆ. ಕೆಟ್ಟ ದುರ್ವಾಸನೆ ಕೂಡ ಬರುತ್ತಿದೆ.

`ಮೀನುಗಾರರಿಗೆ ಜೀವನಾಧಾರ ವಾಗಿದ್ದ ಕೆರೆ ವರ್ಷದಿಂದೀಚೆಗೆ ಕೆರೆಗೆ ಹೇರಳವಾಗಿ ಕಶ್ಮಲ ತ್ಯಾಜ್ಯ ಬಂದು ಸೇರತೊಡಗಿದೆ. ಇದರಿಂದಾಗಿ ಕಳೆದ ವರ್ಷ ಕೆರೆಯಲ್ಲಿನ ಸಾವಿರಾರು ಮೀನುಗಳು ಸತ್ತು ಹೋದ ಘಟನೆ ನಡೆಯಿತು. ಬಡ ಮೀನುಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವೂ ಆಯಿತು~ ಎಂದರು.

ನಂತರದ ದಿನಗಳಲ್ಲಿಯೂ ಕೆರೆ ಸಂಪೂರ್ಣವಾಗಿ ಮಲಿನಗೊಂಡು ಕೆರೆಯ ನೀರಿನೊಳಗಿನ ಹಾವುಗಳ ಸಮೇತ ನೂರಾರು ವನ್ಯಜೀವಿಗಳು ಮತ್ತು ಬಾತುಕೋಳಿ, ನೀರು ಕಾಗೆ, ನಾಮಕೋಳಿ, ಕೊಕ್ಕರೆಗಳಂತಹ ಜಲಪಕ್ಷಿಗಳು ಸತ್ತು ತೇಲಿದವು. ಆದರೆ ಇದುವರೆಗೂ ಬಿಬಿಎಂಪಿ, ಅರಣ್ಯ, ಕಂದಾಯ ಇಲಾಖೆಯಾಗಲಿ, ಕೆರೆ ಅಭಿವೃದ್ಧಿ ಪ್ರಾಧಿಕಾರವಾಗಲಿ, ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ಈ ಎಲ್ಲಾ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT