ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿ: ಗುತ್ತಿಗೆದಾರರ ಅಸಹಕಾರ?

Last Updated 5 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಂಗಡಣೆ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸಲು ಜನರಿಗಿಂತ ಪ್ರಭಾವಿ ಗುತ್ತಿಗೆದಾರರೇ ತೊಡರುಗಾಲು ಹಾಕುತ್ತಿದ್ದಾರೆಯೇ? ತ್ಯಾಜ್ಯ ವಿಲೇವಾರಿ ವ್ಯವಹಾರದ ಮೇಲೆ ಹಿಡಿತ ಸಾಧಿಸಿರುವ ಕೆಲ ಗುತ್ತಿಗೆದಾರರು ಸಮರ್ಪಕ ಕಸ ವಿಲೇವಾರಿಗೆ ಅಸಹಕಾರ ತೋರುತ್ತಿರುವುದು ಸ್ವತಃ ಪಾಲಿಕೆ ಅಧಿಕಾರಿಗಳಿಗೇ ಇಂತಹ ಅನುಮಾನ ಮೂಡುವಂತಾಗಿದೆ.

ಬಿಬಿಎಂಪಿಯು ಹಸಿ ತ್ಯಾಜ್ಯ ವಿಂಗಡಣೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಮೂಲದಲ್ಲೇ ಕಸ ವಿಂಗಡಿಸುವುದನ್ನು ಕಡ್ಡಾಯಗೊಳಿಸಿರುವುದು ಒಂದು ರೀತಿಯಲ್ಲಿ ಗುತ್ತಿಗೆದಾರರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇನ್ನು, ಬಡಾವಣೆಗಳಿಂದ ಸಂಗ್ರಹಿಸುವ ಕಸವನ್ನು ನಗರದ ಹೊರಭಾಗದ ವಿಲೇವಾರಿ ಘಟಕಗಳಿಗೆ ಸಾಗಿಸಬೇಕಾದ ಗುತ್ತಿಗೆದಾರರೊಬ್ಬರು ಎಂ.ಜಿ. ರಸ್ತೆ ಬಳಿಯ ಸೇಂಟ್ ಮಾರ್ಕ್ಸ್ ಚರ್ಚ್ ಬಳಿ ಸುರಿದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬೆಳಿಗ್ಗೆ ಕಸದ ರಾಶಿಗೆ ಮುಗಿ ಬಿದ್ದ ಬೀದಿ ನಾಯಿಗಳು ಹಾಗೂ ದನಗಳು, ತ್ಯಾಜ್ಯವನ್ನೆಲ್ಲಾ ಚೆಲ್ಲಾಪಿಲ್ಲಿ ಎಳೆದಾಡಿರುವುದು ಅಸಹ್ಯ ಮೂಡಿಸುವಂತಿತ್ತು.

ಅವೈಜ್ಞಾನಿಕ ರೀತಿಯಲ್ಲಿ ಚರ್ಚ್ ಬಳಿ ಕಸ ಸುರಿದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚರ್ಚ್‌ನ ಕಾರ್ಯದರ್ಶಿ ಸಾಮ್ಯುಯಲ್ ಮೋಹನ್, `ಈ ಕೃತ್ಯದ ಹಿಂದೆ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸುವ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿರುವುದನ್ನು ಕೂಡ ತಳ್ಳಿ ಹಾಕುವಂತಿಲ್ಲ~ ಎಂಬ ಸಂಶಯ ವ್ಯಕ್ತಪಡಿಸಿದರು.

ಈ ನಡುವೆ, ಎಂ.ಜಿ. ರಸ್ತೆಯ ಚರ್ಚ್ ಬಳಿ ಕಸ ಸುರಿದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆದರೆ, ತ್ಯಾಜ್ಯ ವಿಂಗಡಣೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂಬುದನ್ನು ಪಾಲಿಕೆ ಅಧಿಕಾರಿಗಳು ಕೂಡ ಒಪ್ಪಿಕೊಳ್ಳುತ್ತಾರೆ.

ಕೋಟ್ಯಂತರ ರೂಪಾಯಿ ವ್ಯವಹಾರ:  ತ್ಯಾಜ್ಯವು `ಕಪ್ಪು ಚಿನ್ನ~ ಎಂಬುದನ್ನು ಬಿಬಿಎಂಪಿ ಈಗ ಅರ್ಥ ಮಾಡಿಕೊಂಡಿದ್ದರೆ, ಇದು ಗುತ್ತಿಗೆದಾರರಿಗೆ ಹಲವು ವರ್ಷಗಳ ಹಿಂದೆಯೇ ಮನವರಿಕೆಯಾಗಿದೆ. ಕಳೆದ ಆರು ವರ್ಷಗಳಿಂದ ತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆಯು ಪ್ರತಿ ವರ್ಷ ಸುಮಾರು 430 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದರಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವುದನ್ನು ಕೂಡ ಅಲ್ಲಗಳೆಯುವಂತಿಲ್ಲ.

2008ರಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಸಲ್ಲಿಸಿದ ತನಿಖಾ ವರದಿ ಪ್ರಕಾರ, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಹಣಕಾಸು ಅವ್ಯವಹಾರದಲ್ಲಿ 81 ಅಧಿಕಾರಿಗಳು ಹಾಗೂ 38 ಗುತ್ತಿಗೆದಾರರು ಭಾಗಿಯಾಗಿರುವುದು ದೃಢಪಟ್ಟಿದೆ.

ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅವ್ಯವಹಾರ ನಡೆಸಿರುವುದು ತನಿಖೆಯಿಂದ ಸಾಬೀತಾಗಿದೆ. ತ್ಯಾಜ್ಯ ವಿಲೇವಾರಿ ವ್ಯವಹಾರದಲ್ಲಿ ಸುಮಾರು 120 ಗುತ್ತಿಗೆದಾರರು ಪಾಲ್ಗೊಳ್ಳುತ್ತಿದ್ದು, ಇದರಲ್ಲಿ 30 ಮಂದಿ ಪ್ರಭಾವಿಗಳಾಗಿದ್ದಾರೆ. ಕೆಲ ಪ್ರಭಾವಿ ಶಾಸಕರು ಇವರನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ.

ಈ ಮಧ್ಯೆ, ಪಾಲಿಕೆಯು ಒಣ ತ್ಯಾಜ್ಯವನ್ನು ಮಾರಾಟ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಅಲ್ಲದೆ, ಕೆಲವು ಖಾಸಗಿ ಸಂಘ-ಸಂಸ್ಥೆಗಳು ಒಣ ತ್ಯಾಜ್ಯವನ್ನು ಪುನರ್ ಬಳಕೆಗಾಗಿ ಪಡೆಯಲು ಮುಂದೆ ಬಂದಿವೆ.

ಇದರಿಂದ ವಿಲೇವಾರಿ ಘಟಕಗಳಿಗೆ ಸಾಗಿಸುವ ತ್ಯಾಜ್ಯದ ಪ್ರಮಾಣ ಅರ್ಧಕ್ಕರ್ಧ ಕಡಿವೆುಯಾಗಲಿರುವುದರಿಂದ ಗುತ್ತಿಗೆದಾರರಿಗೆ ಲಾಭಾಂಶದಲ್ಲಿ ತೀವ್ರ ಹೊಡೆತ ಬೀಳಲಿದೆ. ಈ ಉದ್ದೇಶದಿಂದಲೇ ಗುತ್ತಿಗೆದಾರರು ಕಸ ವಿಲೇವಾರಿಗೆ ಉದ್ದೇಶಪೂರ್ವಕವಾಗಿ ಅಸಹಕಾರ ತೋರುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಇನ್ನು, ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಹಳೇ ಗುತ್ತಿಗೆದಾರರು ತಮಗೆ ಗುತ್ತಿಗೆ ಸಿಗುತ್ತದೋ ಇಲ್ಲವೋ ಎಂಬ ಅನುಮಾನದಿಂದ ತ್ಯಾಜ್ಯ ವಿಲೇವಾರಿ ಮಾಡಲು ಅಸಹಕಾರ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಸ ನಿರ್ವಹಣೆ ಬೆಂಗಳೂರಿನಲ್ಲೇ ದುಬಾರಿ: ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಸ ನಿರ್ವಹಣೆ ದುಬಾರಿ ಎಂಬುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ. ಬೆಂಗಳೂರಿಗಿಂತ ಜನಸಂಖ್ಯೆ ಹೆಚ್ಚಿರುವ ಮುಂಬೈನಲ್ಲಿ ತ್ಯಾಜ್ಯ ವಿಲೇವಾರಿಗೆ ಅಲ್ಲಿನ ಪಾಲಿಕೆ 191 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೆ, ಮೂರು ಮಹಾನಗರ ಪಾಲಿಕೆಗಳಿರುವ ನವದೆಹಲಿಯಲ್ಲಿ 177 ಕೋಟಿ ಹಾಗೂ ಚೆನ್ನೈನಲ್ಲಿ 135 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಈ ಉದ್ದೇಶಕ್ಕಾಗಿ 430 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಿಂದ ಕಸ ವಿಲೇವಾರಿಯಲ್ಲಿ `ಗುತ್ತಿಗೆ ಮಾಫಿಯಾ~ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT