ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಗ್ರಹ: ಉಪ ತೆರಿಗೆ ವಸೂಲಿಗೆ ನಿರ್ಧಾರ

Last Updated 5 ಡಿಸೆಂಬರ್ 2012, 8:24 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಿರುವ ನಗರಸಭೆ ವಿವಿಧ ಕಟ್ಟಡಗಳ ಮೇಲೆ ಉಪ ತೆರಿಗೆ ವಿಧಿಸಲು ನಿರ್ಧರಿಸಿದೆ.
ನಗರಸಭೆ ಅಧ್ಯಕ್ಷೆ ಭೀಮಾ ಬಾಯಿ ವಡ್ಡರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಪೌರಾಯುಕ್ತ ಎ.ಬಿ.ಶಿಂಧೆ ಅವರು, ವಿವಿಧ ಕಟ್ಟಡಗಳಿಗೆ ವಿಧಿಸಲಾಗಿರುವ ಉಪ ತೆರಿಗೆಯ ವಿವರ ನೀಡಿದರು.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಈ ಉಪ ತೆರಿಗೆಯನ್ನು ವಿಧಿಸ ಲಾಗುತ್ತಿದ್ದು, ಬರುವ ಜನವರಿಯಿಂದಲೇ ಉಪ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದರು.

ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಇರುವ ವಾಸದ ಕಟ್ಟಡಗಳಿಗೆ ರೂ.15 ಮತ್ತು  ಒಂದು ಸಾವಿರ ಚದರ ಅಡಿ ಮೇಲ್ಪಟ್ಟ ಕಟ್ಟಡಗಳಿಗೆ ರೂ.20, ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಇರುವ ವಾಣಿಜ್ಯ ಕಟ್ಟಡಗಳಿಗೆ ರೂ. 50 ಮತ್ತು ಒಂದು ಸಾವಿರ ಚದರ ಅಡಿ ಮೇಲ್ಪಟ್ಟ ವಾಣಿಜ್ಯ ಕಟ್ಟಡಗಳಿಗೆ ರೂ.100, ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಇರುವ ಕಾರ್ಖಾನೆಗಳಿಗೆ ರೂ.100 ಮತ್ತು ಒಂದು ಸಾವಿರ ಚದರ ಅಡಿ ಮೇಲ್ಪಟ್ಟ ಕಾರ್ಖಾನೆಗಳಿಗೆ ರೂ.200 ಹಾಗೂ ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂಗಳಿಗೆ ರೂ.300 (ಒಂದು ಸಾವಿರ ಚದರ ಅಡಿ ಒಳಗಿನ)  ಮತ್ತು ರೂ. 500 (ಒಂದು ಸಾವಿರ ಚದರ ಅಡಿ ಮೇಲ್ಪಟ್ಟ) ಉಪ ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದರು.

ಸಮುದಾಯ ಭವನ ನಿರ್ವಹಣೆ: ನಗರಸಭೆ ವತಿಯಿಂದ ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಸೆಕ್ಟರ್‌ನ ನಿವಾಸಿಗಳಿಗೆ ವಹಿಸುವ ಸಂಬಂಧ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ವಿಷಯ ಕುರಿತು ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಸಮು ದಾಯ ಭವನದ ಮಾಲೀಕತ್ವಕ್ಕೆ ಧಕ್ಕೆ ಯಾಗದಂತೆ ಕೇವಲ ನಿರ್ವಹಣೆ ಮಾತ್ರ ಸಾರ್ವಜನಿಕರಿಗೆ ಸಾರ್ವಜನಿಕರಿಗೆ ನೀಡುವ ಸಂಬಂಧ ತಜ್ಞ ವಕೀಲರಿಂದ ಕಾನೂನು ಸಲಹೆ ಪಡೆದುಕೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ದಿನ ಸಂತೆ: ಹಳೆ ಬಾಗಲಕೋಟೆ ನೀರಿನ ಟ್ಯಾಂಕ್ ಬಳಿ ಇರುವ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಶನಿವಾರ ಮಾತ್ರ ಸಂತೆ ನಡೆಯುತ್ತಿದೆ. ಉಳಿದ ದಿನಗಳಲ್ಲಿ ಮಾರುಕಟ್ಟೆ ಪ್ರದೇಶ ಖಾಲಿ ಇರುವುದರಿಂದ ಸುತ್ತಲಿನ ಜನತೆ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ವಾತಾವರಣ ಕೆಟ್ಟುಹೋಗಿದ್ದು, ಸೂಕ್ತಕ್ರಮಕೈಗೊಳ್ಳ ಬೇಕೆಂದು ವಾರ್ಡ್ ಸದಸ್ಯ ಹಣಮಂತ ರಾಕುಂಪಿ ಸಭೆಯ ಗಮನಕ್ಕೆ ತಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪ್ರತಿನಿತ್ಯ ಸಂತೆ ನಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿ, ಹಳೆ ಕಾಯಿಪಲ್ಲೆ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವಂತೆ ತಿಳಿಸಿದರು.
ಸಮರ್ಪಕ ಕಾರ್ಯ ನಿರ್ವಹಿಸದ ಹೆಸ್ಕಾಂ ಅಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಉಪಾಧ್ಯಕ್ಷ ಶರಣಪ್ಪ ಗುಳೇದ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ಪೂಜಾರಿ, ರಾಜೂ ಬಳೂಲಮಠ, ಸದಾನಂದ ನಾರಾ, ಭಾಗ್ಯ ಹಂಡಿ, ಲಕ್ಷ್ಮಿ ಪೀರಶೆಟ್ಟಿ, ಮಲ್ಲಮ್ಮ ಜಾಲಗಾರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT