ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯದಿಂದ ಖರ್ಚಿಲ್ಲದೇ ಗೊಬ್ಬರ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯರ ಪ್ರತಿಭಟನೆಯಿಂದ ನಗರದ ಹೊರಗಡೆ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಲು ಬಿಬಿಎಂಪಿ ಹೆಣಗಾಡುತ್ತಿದ್ದರೆ, ನಗರದ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಯಾವುದೇ ಖರ್ಚು ಅಥವಾ ತಂತ್ರಜ್ಞಾನದ ನೆರವಿಲ್ಲದೆ ಕ್ಯಾಂಪಸ್‌ನಲ್ಲಿನ ಮರಗಳಿಂದ ಉದುರುವ ಎಲೆ, ಕಸ-ಕಡ್ಡಿ ಹಾಗೂ ನೌಕರರ ವಸತಿಗೃಹಗಳ ಅಡಿಗೆ ಮನೆ ತ್ಯಾಜ್ಯದಿಂದಲೇ ಫಲವತ್ತಾದ ಗೊಬ್ಬರ ತಯಾರಿಸಿ ಇತರೆ ಸರ್ಕಾರಿ ಸಂಸ್ಥೆಗಳಿಗೆ ಮಾದರಿ ಎನಿಸಿದೆ.

`ಮಲ್ಲೇಶ್ವರಂ ಮ್ಯಾಟರ್ಸ್‌~ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ತಯಾರಿಸಿರುವ ಗೊಬ್ಬರವನ್ನು ಇದೀಗ ಆಸಕ್ತ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಕೂಡ ಸಂಸ್ಥೆಯು ಚಿಂತನೆ ನಡೆಸಿದೆ.

ಸುಮಾರು 25 ಎಕರೆಯಷ್ಟು ವಿಸ್ತೀರ್ಣದ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಅರಣ್ಯ ರೀತಿಯಲ್ಲಿ ಸಮೃದ್ಧವಾಗಿ ಬೆಳೆದ ಮರಗಳಿಂದ ಉದುರುವ ಎಲೆ, ಕಸ-ಕಡ್ಡಿ ಹಾಗೂ ಇತರೆ ಹಸಿ ತ್ಯಾಜ್ಯದಿಂದಲೇ ಈ ಗೊಬ್ಬರ ತಯಾರಿಸಿರುವುದು ವಿಶೇಷ.

ಹುಲ್ಲಿನ ಬಣವೆ ಮಾದರಿಯ ತಿಪ್ಪೆಗಳು:
ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ರೈತರು ಹುಲ್ಲಿನ ಬಣವೆ ಹಾಕುವ ಮಾದರಿಯಲ್ಲೇ ಈ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಗೊಬ್ಬರದ ತಿಪ್ಪೆಗಳು ಎದ್ದು ಕಾಣುತ್ತವೆ. ಈ ಕಾರಣದಿಂದಲೇ ಇವು ಹಳ್ಳಿಗಳಲ್ಲಿನ ತಿಪ್ಪೆಗಳಿಗಿಂತ ವಿಭಿನ್ನವಾಗಿವೆ ಎನ್ನಬಹುದು.

ಗ್ರಾಮೀಣ ಭಾಗದ ಹೊಲ ಹಾಗೂ ತಿಪ್ಪೆಗಳಲ್ಲಿ ಕಾಣಸಿಗುವ `ರೈತನ ಮಿತ್ರ~ ಎರೆಹುಳು ಕೂಡ ತಿಪ್ಪೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣ ಸಿಗುವುದು ವಿಶೇಷ.


ಗೊಬ್ಬರ ತಯಾರಿಕೆ ಹೇಗೆ?
ಕ್ಯಾಂಪಸ್‌ನಲ್ಲಿ ಸಂಗ್ರಹವಾದ ಕಸವನ್ನು ಸಗಣಿ ಬೆರೆಸಿದ ನೀರಿನಲ್ಲಿ ತೊಳೆದು ತಿಪ್ಪೆ ರೀತಿಯಲ್ಲಿ ರಾಶಿ ಹಾಕಲಾಗುತ್ತದೆ. ಹುಲ್ಲಿನ ಬಣವೆ ರೀತಿಯಲ್ಲಿ ಕೆಳಗೆ ಗಾಳಿಯಾಡಲು ಅವಕಾಶ ಕಲ್ಪಿಸಲಾಗಿದೆ. ನಂತರ ಪ್ರತಿ ದಿನ ತಿಪ್ಪೆಗೆ ಸುರಿಯುವ ಹಸಿ ತ್ಯಾಜ್ಯದ ಮೇಲೆ ನೀರು ಹಾಕಿ ತೇವಾಂಶ ಕಾಯ್ದುಕೊಳ್ಳಲಾಗುತ್ತದೆ. 45 ದಿನಗಳ ನಂತರ ಕಸದ ರಾಶಿ ಫಲವತ್ತಾದ ಗೊಬ್ಬರವಾಗಿ ಮಾರ್ಪಡುತ್ತದೆ.

`ನಗರದ ಉದ್ಯಾನವನಗಳು, ಕ್ಯಾಂಪಸ್‌ಗಳಿರುವಂತಹ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಈ ರೀತಿ ನಿತ್ಯ ಸಂಗ್ರಹವಾಗುವ ಕಸ-ಕಡ್ಡಿ, ಮರಗಳ ಎಲೆಗಳಿಂದಲೇ ಫಲವತ್ತಾದ ಗೊಬ್ಬರ ತಯಾರಿಸಬಹುದು. ಇದರಿಂದ ಹಸಿ ತ್ಯಾಜ್ಯವನ್ನು ಹೊರಗೆ ಸಾಗಿಸುವುದು ಕೂಡ ತಪ್ಪಲಿದೆ. ಅಲ್ಲದೆ, ನರ್ಸರಿ, ಕೈತೋಟಗಳಿಗೆ ಈ ಗೊಬ್ಬರ ಬಳಸಿಕೊಳ್ಳಬಹುದು~ ಎಂದು ಸಾಮಾಜಿಕ ಕಾರ್ಯಕರ್ತೆ ಡಾ.ಮೀನಾಕ್ಷಿ ಭರತ್ ಹೇಳಿದರು.

`ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದಕ್ಕೆ ಯಾವುದೇ ತಂತ್ರಜ್ಞಾನದ ಬಳಕೆ ಹಾಗೂ ಅಧಿಕ ಹಣದ ಅವಶ್ಯಕತೆಯಿಲ್ಲ. ನಗರದ ಉದ್ಯಾನಗಳಲ್ಲಿಯೂ ಇದೇ ಮಾದರಿ ಅನುಸರಿಸಿ ಗೊಬ್ಬರ ತಯಾರಿಸುವಂತೆ ಪಾಲಿಕೆಯನ್ನೂ ಕೋರಲಾಗಿದೆ~ ಎಂದರು.

ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಎಸ್.ಸಿ. ಜೋಷಿ ಮಾತನಾಡಿ, `ಕ್ಯಾಂಪಸ್‌ನಲ್ಲಿ ತಯಾರಿಸಿರುವ ಗೊಬ್ಬರವನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಹಣ ಮಾಡುವ ಯಾವುದೇ ಉದ್ದೇಶ ಸಂಸ್ಥೆಗಿಲ್ಲ. ಆದರೆ, ಈ ಹಣವನ್ನು ಜೈವಿಕ ಅನಿಲ ಘಟಕ ಸ್ಥಾಪನೆಗೆ ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ~ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT