ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ಕೊಲೆ-ನಾಲ್ವರಿಗೆ ಗಲ್ಲು ಶಿಕ್ಷೆ

Last Updated 11 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಶಹಾಪುರ: ಹೆತ್ತ ಒಡಲಿನ ತಾಯಿಯ ಕಣ್ಣು ಮುಂದೆ ಇಬ್ಬರು ಮಕ್ಕಳನ್ನು ಹಾಗೂ ಬಸವಣಗೌಡನನ್ನು ಅಮಾನುಷವಾಗಿ ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದ ನಾಲ್ವರು ಆರೋಪಿತರಿಗೆ ಜಿಲ್ಲಾ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಅಮಾನುಷವಾಗಿ ತ್ರಿವಳಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.

ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ತ್ರಿವಳಿ ಕೊಲೆಯ ಪ್ರಕರಣದ ಶಿಕ್ಷೆಯ ಪ್ರಮಾಣದ ಆದೇಶವನ್ನು ಕೇಳಲು ಸೆಷನ್ಸ್ ಕೋರ್ಟ್‌ನ ಮುಂದೆ ಬುಧವಾರ ಹೆಚ್ಚಿನ ವಕೀಲರು, ಮಾಧ್ಯಮದವರು  ಕೋರ್ಟ್ ಕಲಾಪದ ಸಮಯಕ್ಕೆ ಹಾಜರಾದರು.  ಶಿಕ್ಷೆಯನ್ನು ಪ್ರಕಟಿಸುವ ಮುಂಚೆ ಎಲ್ಲಾ ಆರೋಪಿತರು ಹಾಜರಾಗಿದ್ದಾರೆ ಇಲ್ಲ ಎಂಬುವುದನ್ನು ಖಚಿತಪಡಿಸಿಕೊಂಡ ನ್ಯಾಯಾಧೀಶರು ಪ್ರತಿಯೊಂದು ಪುಟಕ್ಕೆ ಸಹಿ ಹಾಕಿದರು.

ನಂತರ ಶಿಕ್ಷೆ ವಿಧಿಸಿದ ಬಗ್ಗೆ ಪ್ರಕಟಿಸುತ್ತಿದ್ದಂತೆ ನೆರೆದ ಜನರಲ್ಲಿ ಢವ ಢವ ಶುರುವಾಗಿತ್ತು. ಕೊನೆಗೆ ನಾಲ್ವರು ಆರೋಪಿತರಿಗೆ ಮರಣದಂಡನೆ ವಿಧಿಸಿದ ಬಗ್ಗೆ ಕೋರ್ಟ್ ತೀರ್ಪು ನೀಡಿದಾಗ ಕ್ಷಣಕಾಲ ನಿಂತ ನೆಲವೆ ಕಂಪಿಸಿದ ಅನುಭವ. ಕ್ಷಣಕಾಲ ಕೋರ್ಟ್ ಸಭಾಂಗಣದಲ್ಲಿ ಮೌನ ಆವರಿಸಿತು. ತೀರ್ಪು ಪ್ರಕಟಿಸಿ ನ್ಯಾಯಾಧೀಶರು ಕೆಲಕಾಲ ಮರಳಿ ಛೆಂಬರಗೆ ತೆರಳಿದರು.

ನಮಗೆ ಗಲ್ಲು ಶಿಕ್ಷೆಯಾಗಿದೆ ಎಂದು ಅರಿವಾದ ತಕ್ಷಣವೇ ಆರೋಪಿ ಬಸವರಾಜ ದುಃಖತಪ್ತನಾಗಿ ಬಿಕ್ಕಳಿಸುತ್ತಾ ಹೊರ ನಡೆದ. ಸಾವಧಾನವಾಗಿ ಪೊಲೀಸ್ ಸಿಬ್ಬಂದಿ ವ್ಯಾನ್‌ಗೆ ಕರೆದುಕೊಂಡು ಕುಳ್ಳರಿಸಿದರು. ಎಂತಹ ಶಿಕ್ಷೆಯನ್ನು ದೇವರು ಕೊಟ್ಟರು. ನಾವು ಮಾಡಿದ ಪಾಪದ ಫಲ ಎಂದು ಅಲುಬುತ್ತಿದ್ದರೆ. ಆರೋಪಿ ಯಂಕಪ್ಪ ಮಾತ್ರ ನಾವು ಕೊಲೆ ಮಾಡಿಲ್ಲ. ನಮಗೆ ಇಂತಹ ಶಿಕ್ಷೆಯಾಗಿದೆ. ಜೀವನ ಮುಗಿದು ಹೋಯಿತು. ದಯವಿಟ್ಟು ಮಾತನಾಡಿಸಬೇಡಿ ಎಂದು ಮಾಧ್ಯಮದವರ ಮುಂದೆ ಬೇಡಿಕೊಂಡರು.

ನಂತರ `ಪ್ರಜಾವಾಣಿ~ ಜೊತೆ ಮಾತನಾಡಿದ ಸರ್ಕಾರಿ ಅಭಿಯೋಜಕರಾದ ಬಿ.ಆರ್.ನಾಡಗೌಡ ಜಿಲ್ಲೆಯಲ್ಲಿ ಅಪರೂಪ ಪ್ರಕರಣವಾಗಿದೆ. ತಾಯಿಯ ಸಮ್ಮುಖದಲ್ಲಿಯೇ ಇಬ್ಬರು ಮಕ್ಕಳನ್ನು ಅಮಾನುಷವಾಗಿ ಕೊಲೆ ಮಾಡಿ ಸುಟ್ಟು ಹಾಕುತ್ತಾರೆ ಎಂದರೆ ಏನು ? ಚಿಗರಿ ಬೇಟೆಯಾಡುವುದು ಹಾಗೂ ದರೋಡೆ ನಡೆಸುವುದು ವೃತ್ತಿಯನ್ನಾಗಿ ರೂಪಿಸಿಕೊಂಡು ಯಾವುದಕ್ಕೂ ಹಿಂಜರಿಯದ ವ್ಯಕ್ತಿಗಳು ಆಗಿದ್ದರು.

ಕರಳು ಬಳ್ಳಿಯನ್ನು ಕಳೆದುಕೊಂಡು ಯಾತನೆ ಅನುಭವಿಸುತ್ತಿದ್ದ ತಾಯಿ ಸೂರ್ಯಕಾಂತಮ್ಮ ಪ್ರಮುಖ ಸಾಕ್ಷಿಯಾಗಿ ಅಂದಿನ ಕರಾಳ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸಾಕ್ಷಿ ಹೇಳುವಾಗ ಅವಳಲ್ಲಿ ಎಷ್ಟು ರೋಷಿ ಉಕ್ಕಿ ಬಂದಿತು ಎಂದರೆ ನನ್ನ ಮಕ್ಕಳನ್ನು ಕೊಲೆ ಮಾಡಿದ ಕೊಲೆಗಡುಕರು ಇವರೇ ಎಂದು ಧೈರ್ಯವಾಗಿ ಸಾಕ್ಷಿಯನ್ನು ನುಡಿದರು. ಇತರ ಪೂರಕ ಸಾಕ್ಷಿಗಳು ನಮಗೆ ಹೆಚ್ಚಿಗೆ ನೆರವಿಗೆ ಬಂದವು. ಒಟ್ಟು 26ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವು.

ಕಾನೂನು ಕೈಗಳು ತುಂಬಾ ಉದ್ದವಾಗಿವೆ. ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳು ಕೋರ್ಟ್‌ನ ಮುಂದೆ ಬಂದು ಸಾಕ್ಷಿ ಹೇಳಿದರೆ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎಂಬುವುದು ಇಂತಹ ಪ್ರಕರಣಗಳು ರುಜುವಾತು ಮಾಡಿವೆ ಎಂದು ವಿವರಿಸಿದರು.

ಅಲ್ಲದೆ ಸದರಿ ಪ್ರಕರಣಕ್ಕೆ ಪ್ರೇರಣೆ ನೀಡಿದ್ದಾನೆಂದು ಆರೋಪಿಸಲಾದ ಪೊಲೀಸ್ ಮುಖ್ಯಪೇದೆ ಮೇಘನಾಥ ನಾಯಕನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಮೇಘನಾಥ ಖುಲಾಸೆಗೊಂಡಿದ್ದಾರೆ ಎಂದು ಅವರು ಹೇಳಿದರು.

ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಅಂಬಣ್ಣ ಸಿಂಧನೂರ ಉಪಸ್ಥಿತರಿದ್ದರು.
ಪ್ರಕರಣದ ಸಾರಾಂಶ: ತಾಲ್ಲೂಕಿನ ಸೈದಾಪೂರ ಠಾಣೆ ವ್ಯಾಪ್ತಿಯಲ್ಲಿ ಬಸವರಾಜಪ್ಪಗೌಡ ಎಂಬುವರ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ ಆಂಧ್ರ ಮೂಲದ ಸೂರ್ಯಕಾಂತಮ್ಮ ಹಾಗೂ ಇಬ್ಬರು ಮಕ್ಕಳಾದ ಶ್ರೀನಿವಾಸ (22) ಶಿವರಡ್ಡಿ (25)  ಶೆಡ್‌ನಲ್ಲಿ ವಾಸವಾಗಿದ್ದರು.
 
2009 ಫೆಬ್ರವರಿ 14ರಂದು ರಾತ್ರಿ 11 ಗಂಟೆಯ ಸುಮಾರಿಗೆ ಆರೋಪಿ ಬಸವರಾಜ ಪಲ್ಲೆಪ್ಪ ಚಿಗೆರಿಕಾರ (48), ಪಲ್ಲಾ ಶಂಕ್ರೆಪ್ಪ ಚಿಗರಿಕಾರ (25), ಯಂಕಪ್ಪ ಹುಲ್ಲೆಪ್ಪ ಚಿಗರಿಕಾರ (53), ರಮೇಶ (22) ಎಲ್ಲರು ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗುಂಡಗುರ್ತಿ ಗ್ರಾಮದವರು  ಹೊಂಚು ಆಗಮಿಸಿದ್ದರು.

 ನಾಲ್ವರು ಆರೋಪಿಗಳು ಶೆಡ್ಡಿಗೆ ದರೋಡೆ ಮಾಡಲು ಬಂದು ಶೆಡ್ಡಿನ ಮುಂದುಗಡೆ ಮಲಗಿದ್ದ ಬಸವನಗೌಡ ಇವರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದರು. ನಂತರ ಶೆಡ್‌ನಲ್ಲಿ ಮಲಗಿದ್ದ ಸೂರ್ಯಕಾಂತಮ್ಮ ಸಮಕ್ಷಮದಲ್ಲಿ  ಇಬ್ಬರು ಮಕ್ಕಳಾದ ಶ್ರೀನಿವಾಸ, ಶಿವರಡ್ಡಿಯನ್ನು ಕೊಡಲಿ ಹಾಗೂ ದೊಡ್ಡ ಚಾಕುವಿನಿಂದ ಚುಚ್ಚಿ ಹತ್ಯೆಗೈದರು. ಸೂರ್ಯಕಾಂತಮ್ಮಳ ಮೇಲೆ ಹಲ್ಲೆ ಮಾಡಿ ಅವರಿಂದ ಕಿವಿಯಲ್ಲಿದ್ದ ಒಲೆಗಳನ್ನು ಹರಿದುಕೊಂಡು ದುಡ್ಡು ಕಸಿದುಕೊಂಡರು.  ನಂತರ ಹತ್ಯೆಮಾಡಲಾಗಿದ್ದ ಎರಡು ದೇಹಗಳನ್ನು ಹತ್ತಿಗಾದಿಯ ಬಟ್ಟೆಯಲ್ಲಿ ಸುತ್ತಿ ತಾಯಿಯ ಸಮ್ಮುಖದಲ್ಲಿ ಸುಟ್ಟು ಹಾಕಿದ್ದರು.

ಪಕ್ಕದ ಜಮೀನಿನ ಹೊಲದಲ್ಲಿದ ಶ್ರೀನಿವಾಸ ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದು ನೋಡಿ ನಂತರ
ಠಾಣೆಗೆ ದೂರು ನೀಡಿದ್ದರು ಎಂದು ಸೈದಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಪಿಐ ಎನ್,ಲೋಕೋಶ ದೋಷಾರೋಪಣಾ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ್ದರು.
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT