ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ರಸ್ತೆಗಳ ಮುಂಜಾನೆಯೂ ಬೈಗೂ

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

`ನೆಲ ಕಾಣುವುದಿಲ್ಲ~ ಎನ್ನುವ ಮಾತು ಹರೆಯದ ಹೆಣ್ಣುಮಕ್ಕಳಿಗೆ ಮಾತ್ರವಲ್ಲ; ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ರಸ್ತೆಗಳಲ್ಲಿ ಓಡಾಡುವ ಗಂಡು ಹೈಕಳಿಗೂ ಅನ್ವಯಿಸುವ ಮಾತು. ಬಣ್ಣದ ಚಿಟ್ಟೆಗಳು ಹಿಂಡು ಹಿಂಡು ಸುಳಿದಾಡುವಂತೆ ಈ ರಸ್ತೆಗಳೆಲ್ಲ ರಂಗು ರಂಗು. ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಓಡಾಡುತ್ತ, ಎದುರಿನವರಿಗೆ ಡಿಕ್ಕಿ ಹೊಡೆಯುತ್ತ, ಹಿಂದೆ ಬರುವವರಿಗೆ ದಾರಿ ಬಿಡದೆ ಸತಾಯಿಸುತ್ತ, ಮುಂದೆ ಬರುವವರ ಕಣ್ಣು ಕುಕ್ಕುತ್ತಾ ನಗುತ್ತಾ, ರೇಗಿಸುತ್ತಾ, ರೇಗುತ್ತಾ ಓಡಾಡುವ ಹದಿ ಹರೆಯದ ಜೋಡಿಗಳೇ ಈ ರಸ್ತೆಗಳಲ್ಲಿ ಹೆಚ್ಚು. ಜೀವನೋತ್ಸಾಹವೇ ತುಂಬಿ ತುಳುಕಾಡುವಂತೆ ಕಾಣಿಸುವ ಈ ತ್ರಿವಳಿ ರಸ್ತೆಗಳಲ್ಲಿ ಕಿತ್ತು ಕೊರಕಲಾಗಿರುವ ಪಾದಚಾರಿ ರಸ್ತೆಯೂ ಸುಂದರವಾಗಿಯೇ ಕಾಣಿಸುತ್ತದೆ.

ಅಂದಹಾಗೆ, ಐಷಾರಾಮ ಹಾಗೂ ಉತ್ಸಾಹದ ಭರಾಟೆಯಲ್ಲಿ ಜಗಮಗ ಎನ್ನುವ ಈ ರಸ್ತೆಗಳು ನಿದ್ದೆ ಕಳೆದೆದ್ದ ನಂತರ ಹೇಗೆ ಕಾಣಿಸುತ್ತವೆ ಗೊತ್ತೇ? ಮೇಕಪ್ಪು ತೆಗೆದಿಟ್ಟ ಸುಂದರಿಯರಂತೆ ಭಾಸವಾಗುವ ಆ ರಸ್ತೆಗಳಲ್ಲಿ ಎಳೆ ಮುಂಜಾನೆಯಲ್ಲಿ ಅಡ್ಡಾಡಿದರೆ `ಇವೇನಾ ಆ ರಸ್ತೆಗಳು?~ ಅನ್ನಿಸದಿರದು.

ಗಾಂಧಿ ರಸ್ತೆಯಲ್ಲಿ...
ಅನಿಲ್‌ಕುಂಬ್ಳೆ ವೃತ್ತದ ಕಡೆಯಿಂದ ನೋಡುತ್ತಾ ಬಂದರೆ ರಾತ್ರಿ ಐಸ್‌ಕ್ರೀಂ ತಿಂದು ಬಿಸಾಡಿದ ಕಾಗದದ ತಟ್ಟೆಗಳು, ಸಿಹಿಯ ಅಂಟು ಉಳಿಸಿಕೊಂಡ ಕಡ್ಡಿಗಳು, ಟೀ ಕುಡಿದು ಬಿಸಾಡಿರುವ ಕಪ್‌ಗಳು, ಸಿಗರೇಟ್ ತುಂಡುಗಳ ಅವಶೇಷಗಳು, ಪೇಪರ್‌ಗಳು, ಖಾಲಿಯಾದ ನೀರಿನ ಬಾಟಲುಗಳು, ಅಂಗಡಿಗಳವರು ಗುಡಿಸಿ ತಂದು ರಸ್ತೆಗೆ ಹಾಕಿರುವ ಕಸದ ಗುಪ್ಪೆ, ಅಂಗಡಿ ಮುಂಭಾಗವನ್ನು ತೊಳೆದು ರಸ್ತೆಗೆ ಬಿಟ್ಟಿರುವ ಗಲೀಜು ನೀರು- ಹೀಗೆ, ಅನೇಕ ಚಿತ್ರಗಳು ಎದುರಾಗುತ್ತವೆ. ಇಷ್ಟು ಮಾತ್ರವಲ್ಲ, ತರಾತುರಿಯಲ್ಲಿ ಕೆಲಸಕ್ಕೆ ಓಡುತ್ತಿರುವ ಜನರೂ ನಿದ್ದೆ ತೀರದೆ ಆಕಳಿಸುವ ಬೀದಿ ನಾಯಿಗಳೂ ಮತ್ತು ಮಳಿಗೆಗಳು ಬಾಗಿಲು ತೆರೆಯುವುದನ್ನೇ ಕಾದು ನಿಂತಿರುವ ಕೆಲಸಗಾರರು ಕಾಣಿಸುತ್ತಾರೆ.

ಮಧ್ಯಾಹ್ನದ ನಂತರ ಗಿಜಿಗುಡುವ ಮೇಯೊಹಾಲ್, ಯುಟಿಲಿಟಿ ಸೌಧಗಳು ಬೆಳಿಗ್ಗೆ ಬಿಕೋ ಎನ್ನುತ್ತಿರುತ್ತವೆ. ರಸ್ತೆ ಕೂಡ ನೀರವ. ಸಪ್ಪೆ ಮೆಟ್ರೋ ನಿಲ್ದಾಣ ಅಲಂಕಾರ ಒಲ್ಲದ ಸುಂದರಿಯಂತೆ ಕಾಣಿಸುತ್ತದೆ. ಪೊಲೀಸರಿಗೆ ಎಂಥದೋ ನಿರಾಳ. ಆಗಾಗ ಕೇಳುವ ಮೆಟ್ರೊ ರೈಲಿನ ಹಾರನ್ ಶಬ್ದ ಬದುಕಿನ ಗಿರಣಿ ಕಾವೇರುತ್ತಿರುವುದನ್ನು ಸೂಚಿಸುವಂತಿರುತ್ತದೆ.

ಅದೇನಾ ಈ ರಸ್ತೆ!
ಅಬ್ಬರದ ಶಬ್ದ ಒಮ್ಮೆಲೇ ನಿಂತಾಗ ಉಂಟಾಗುವ ಶೂನ್ಯತೆಯ ಭಾವ ಮುಂಜಾನೆಯ ಬ್ರಿಗೇಡ್ ರಸ್ತೆಯದು. ಕೊಳ್ಳುಬಾಕರ ಸ್ವರ್ಗ ಎನ್ನಿಸುವ ಮಳಿಗೆಗಳೂ ಬೆಳಿಗ್ಗೆ ಒಂದೂ ತೆರೆದಿರುವುದಿಲ್ಲ. ದೊಡ್ಡ ಕಟ್ಟಡಗಳ ಮುಂದೆ ನಿಂತಿರುವ, ಮಲಗಿರುವ ಕಾವಲುಗಾರರು. ಅಂಗೈ ಕನ್ನಡಿಯಲ್ಲಿ ಗಡ್ಡ ಕೆರೆದುಕೊಳ್ಳುವ ಸೆಕ್ಯುರಿಟಿ.

ವಾಣಿಜ್ಯ ಸಂಕೀರ್ಣಗಳ ಮುಂದೆಲ್ಲ ಕಸದ ಸಣ್ಣ ರಾಶಿ. ದಿನಪೂರ್ತಿ ಶೇಖರಿಸಿ ಇಟ್ಟುಕೊಂಡಿದ್ದ ಗಲೀಜು ನೀರನ್ನು ತಡ ರಾತ್ರಿಯಲ್ಲಿ ರಸ್ತೆಗೆ ಬಿಡುವುದರಿಂದ ಗಬ್ಬೆನ್ನುವ ನಾತ. ಪಾದಚಾರಿ ನಡೆದಾಡಲೂ ಜಾಗವಿಲ್ಲದಂತೆ ಕಾಲಿಟ್ಟಲ್ಲೆಲ್ಲ ಎಡತಾಕುವ ಕಸ.

ಆಗೊಮ್ಮೆ ಈಗೊಮ್ಮೆ ಅಷ್ಟೇ ಜನ ಸಂಚಾರ. ರಾತ್ರಿ ಮಿರಮಿರ ಮಿನುಗುತ್ತಿದ್ದ, ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಓಡಾಡುತ್ತಿದ್ದ ಗುಂಪುಗುಂಪು ಯುವಕ ಯುವತಿಯರ ಅಡ್ಡೆ ಇದೇನಾ ಅನಿಸುತ್ತದೆ.

ಛೀ, ಗಲೀಜು!
ಐವತ್ತಕ್ಕೂ ಹೆಚ್ಚು ಹೋಟೆಲ್‌ಗಳು ಇರುವ ರಸ್ತೆಯಿದು. ವಾಣಿಜ್ಯ ಸಂಕೀರ್ಣಗಳು, ಜನ ವಸತಿ ಎಲ್ಲವೂ ಇರುವ ಈ ರಸ್ತೆಯಲ್ಲಿ ಮುಂಜಾನೆಯಲ್ಲಿ ಓಡಾಡುವುದು ಸ್ವಲ್ಪ ಕಷ್ಟವೇ. ರಾತ್ರಿ ಕಂಠಪೂರ್ತಿ ಕುಡಿದು ಎಚ್ಚರವಿಲ್ಲದೆ ಬೀದಿಯಲ್ಲೇ ಬಿದ್ದಂತಹ ಅನುಭವ.

ಒಂದೊಂದು ಹೋಟೆಲ್ ಮುಂದೆಯೂ ನಾರುವ ಕಸದ ರಾಶಿ, ಅದನ್ನು ಕೆದಕುತ್ತಿರುವ ಭಾರಿ ಗಾತ್ರದ ನಾಯಿಗಳು, ಕಸ ತುಂಬಲು ನಿಂತ ಕಸದ ಲಾರಿ, ಎತ್ತ ನೋಡಿದರೂ ಗಲೀಜು...  ಬೆಳಗಿನ ವಾಕಿಂಗ್ ಮುಗಿಸಿ ತಮ್ಮ ತಮ್ಮ ಮಹಲನ್ನು ಸೇರಲು ಕೈಯಲ್ಲಿ ಕೋಲು ಹಿಡಿದು ಓಡು ನಡಿಗೆಯಲ್ಲಿ ನಡೆಯುವ ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗುವ ಹಿರಿಯರು.

ಬೆಳಗಿನ ಹೊತ್ತು ಬಂದಾದ ಗಿರಣಿಯಂತೆ ಕಾಣಿಸುವ ಮೇಲಿನ ತ್ರಿವಳಿ ರಸ್ತೆಗಳಿಗೆ ಮತ್ತೆ ಜೀವಕಳೆ ಬರುವುದು ಹನ್ನೊಂದರ ನಂತರವೇ. ಮಧ್ಯಾಹ್ನದ ನಂತರ ಪಬ್ಬು, ಕ್ಲಬ್ಬು, ಅಂಗಡಿಗಳು ನಿಧಾನವಾಗಿ ರಂಗೇರುತ್ತವೆ. ಗಿಜಿಗುಡುವ ಜನ ಸಂದಣಿ, ಹರೆಯದ ಹುಡುಗರ ಉನ್ಮಾದದ ನಗು, ಮತ್ತದೇ ನೆಲ ನೋಡದ ರಂಗೇರಿದ ಜನಗಳು, ದುಬಾರಿ ಕಾರುಗಳು, ಬಣ್ಣ ಬಣ್ಣದ ಜನರು...

ಸಂಜೆಯಲ್ಲಿ ಹಾಗೂ ಇರುಳಿನಲ್ಲಿ ಕುಬೇರನ ಅಲಕಾವತಿಯಂತೆ ತೋರುವ ಈ ರಸ್ತೆಗಳು ಮುಂಜಾನೆ ಸೂರೆಹೋಗಿ ಚೇತರಿಸಿಕೊಳ್ಳುತ್ತಿರುವಂತೆ ಕಾಣಿಸುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT