ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ನ್ಯಾಯಕ್ಕೆ ನೂತನ ಯೋಜನೆ

Last Updated 31 ಡಿಸೆಂಬರ್ 2010, 13:10 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯಗಳಲ್ಲಿ ದಾಖಲಾದ ಆಸ್ತಿ ಹಕ್ಕು, ಜೀವನಾಂಶ, ಮಕ್ಕಳ ನಿರ್ವಹಣೆ, ವಿಚ್ಛೇದನ, ಬಾಡಿಗೆ ವಸೂಲಿ ಇತ್ಯಾದಿ ಪ್ರಕರಣಗಳು ಇತ್ಯರ್ಥಗೊಳ್ಳದೇ ವರ್ಷಾನುಗಟ್ಟಲೆ ಅಲೆದಾಡುತ್ತಿರುವ ಕಕ್ಷಿದಾರರಿಗೆ ಹೊಸ ವರ್ಷದ ಕೊಡುಗೆಯೊಂದನ್ನು ರಾಜ್ಯದ ನ್ಯಾಯಾಂಗ ನೀಡಿದೆ.ತ್ವರಿತ ನ್ಯಾಯದಾನ (‘ಕೇಸ್ ಫ್ಲೋ ಮ್ಯಾನೇಜ್‌ಮೆಂಟ್’) ಎಂಬ ನೂತನ ಯೋಜನೆಗೆ ಜನವರಿ ಒಂದರಿಂದ ಚಾಲನೆ ದೊರಕಲಿದ್ದು, ಇದನ್ನು ಕಟ್ಟುನಿಟ್ಟಾಗಿ ಅಧೀನ ಕೋರ್ಟ್‌ಗಳು ಪಾಲನೆ ಮಾಡುವಂತೆ ಹೈಕೋರ್ಟ್‌ನಿಂದ ಅಧಿಸೂಚನೆ ಹೊರಬಿದ್ದಿದೆ. 2005ರಲ್ಲಿಯೇ ಜಾರಿಗೆ ಬಂದಿದ್ದರೂ ಐದು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಈಗ ಮರುಜೀವ ಸಿಕ್ಕಿದೆ.

ಏನಿದು ಯೋಜನೆ: ‘ತ್ವರಿತ ನ್ಯಾಯ’ ಈ ಯೋಜನೆಯ ಮುಖ್ಯ ಉದ್ದೇಶ. ಇದರಿಂದಾಗಿ ಕೋರ್ಟ್‌ಗೆ ದಾಖಲಾಗುವ ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ರೂಪಿಸಲಾಗಿದೆ. ಇಂತಿಷ್ಟೇ ದಿನಗಳ ಒಳಗೆ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.ಇವುಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿರುವ ವಿಷಯ. ಆಸ್ತಿ ಹಕ್ಕು, ಜೀವನಾಂಶ, ಮಕ್ಕಳ ನಿರ್ವಹಣೆ, ಬಾಡಿಗೆ ವಸೂಲಿ ಮುಂತಾದ ವಿಷಯಗಳು ಇದರಲ್ಲಿ ಒಳಗೊಂಡಿವೆ. ಈ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಒಂಬತ್ತು ತಿಂಗಳಲ್ಲಿ ಮುಗಿಸುವುದು ಇನ್ನು ಮುಂದೆ ಕಡ್ಡಾಯ. ಅದರಂತೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣವನ್ನು ಗಮನದಲ್ಲಿ ಇಟ್ಟುಕೊಂಡು ಇದಕ್ಕೂ ಯೋಜನೆಯಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು 12 ತಿಂಗಳಿನಲ್ಲಿಯೇ ಮುಗಿಸುವಂತೆ ಸೂಚಿಸಲಾಗಿದೆ.

ಅಂತೆಯೇ ಆಸ್ತಿ ವಿಭಜನೆ, ಪರಿಹಾರ ಕೋರಿಕೆಗೆ ಸಂಬಂಧಿಸಿದ ಅರ್ಜಿ, ಕಾಪಿ ರೈಟ್, ಪೇಟೆಂಟ್, ಟ್ರೇಡ್ ಮಾರ್ಕ್ ಮುಂತಾದ ವಿಷಯಗಳ ವಿಚಾರಣೆಯನ್ನು 24 ತಿಂಗಳ ಒಳಗೆ ಮುಗಿಸಬೇಕಿದೆ.ಇನ್ನು ಸಮನ್ಸ್, ನೋಟಿಸ್ ಇತ್ಯಾದಿಗಳನ್ನು ಜಾರಿ ಮಾಡಲು  ಕೋರ್ಟ್ ಸಿಬ್ಬಂದಿ ವಿಳಂಬ ಮಾಡುತ್ತಿರುವುದನ್ನು ತಪ್ಪಿಸಲು ಇದಕ್ಕೂ ಕಾಲ ಮಿತಿ ಹಾಕಲಾಗಿದ್ದು, ಇವುಗಳ ಜಾರಿಗೆ ಗರಿಷ್ಠ 30 ದಿನಗಳ ಗಡುವು ನೀಡಲಾಗಿದೆ.

ಆಡಳಿತಾತ್ಮಕ ಕೆಲಸಗಳಿಗೆ ಕಡಿವಾಣ: ಅಧೀನ ಕೋರ್ಟ್‌ಗಳಲ್ಲಿ ಬೆಳಿಗ್ಗೆ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಮೊದಲ 2-3 ಗಂಟೆಗಳ ಕಾಲ ನಡೆಯುತ್ತಿರುವ ಆಡಳಿತಾತ್ಮಕ ಕೆಲಸಗಳಿಗೆ ಈ ಯೋಜನೆ ಕಡಿವಾಣ ಹಾಕಿದೆ. ಅರ್ಜಿಗೆ ವಕೀಲರು ವಕಾಲತ್ತು ಹಾಕುವುದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡುವುದು, ಯಾವ ಪ್ರಕರಣಗಳನ್ನು ಲೋಕ ಅದಾಲತ್, ರಾಜಿ ಸಂಧಾನ ಕೇಂದ್ರಗಳಿಗೆ ಕಳುಹಿಸಬೇಕು ಎನ್ನುವುದನ್ನು ನಿರ್ಧರಿಸುವುದು, ಆಕ್ಷೇಪಣಾ ಹೇಳಿಕೆ ಸಲ್ಲಿಸುವುದು ಹೀಗೆ ನೂರೆಂಟು ಆಡಳಿತಾತ್ಮಕ ಕಾರ್ಯಗಳು ಇಲ್ಲಿಯವರೆಗೆ ತೆರೆದ ನ್ಯಾಯಾಲಯದಲ್ಲಿಯೇ ನಡೆಯುತ್ತಿವೆ.

ಇದಕ್ಕಾಗಿ ನ್ಯಾಯಾಧೀಶರು ಕನಿಷ್ಠ 2ರಿಂದ 3ಗಂಟೆ ವ್ಯಯ ಮಾಡಬೇಕಿದೆ. ಈ ಕೆಲಸಗಳನ್ನು ಮಾಡಲು ಆಯಾ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಅವರು ತಮ್ಮ ಕಚೇರಿಯಲ್ಲಿ ಈ ಎಲ್ಲ ಕಾರ್ಯಗಳನ್ನು ಪೂರೈಸಲಿದ್ದಾರೆ. ವಕೀಲರ ಹರ್ಷ: ನೂತನ ಯೋಜನೆಗೆ ವಕೀಲ ಸಮುದಾಯದಲ್ಲಿ ಹರ್ಷ ವ್ಯಕ್ತವಾಗಿದೆ. ‘ಈ ಯೋಜನೆ ಕಟ್ಟುನಿಟ್ಟಾಗಿ ಜಾರಿಗೊಂಡಲ್ಲಿ, ಕಕ್ಷಿದಾರರು ಮಾತ್ರವಲ್ಲದೇ ವಕೀಲರು ಕೂಡ ನಿರಾಳವಾಗಬಹುದು’ ಎನ್ನುತ್ತಾರೆ ವಕೀಲ ಎ.ವಿ.ಅಮರನಾಥನ್.

 ‘ಪ್ರಕರಣಗಳ ವಿಚಾರಣೆಗೆ ಕಾಲ ಮಿತಿ ಹಾಕಿರುವುದು ಕಕ್ಷಿದಾರರಿಗೆ ವರದಾನವಾಗಿದೆ. ಅಂತೆಯೇ ತೆರೆದ ನ್ಯಾಯಾಲಯದಲ್ಲಿ ವಕಾಲತ್ತು ಹಾಕುವ ಕೆಲಸವನ್ನೂ ಮಾಡಬೇಕಾಗಿರುವ ಕಾರಣ, 2-3 ಗಂಟೆ ಕಾಲ ವಕೀಲರು ಕಾಯುತ್ತ ಕುಳಿತಿರಬೇಕಿತ್ತು. ಆದರೆ ಈಗ ಅದೆಲ್ಲವೂ ಕಚೇರಿಯ ಮಟ್ಟದಲ್ಲಿಯೇ ನಡೆಯುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಸರಳವಾಗಿ ನಡೆಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT