ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾರ್ ಮರಭೂಮಿಯಲ್ಲಿ ರ‌್ಯಾಲಿ ಬಿರುಗಾಳಿ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸರ್ದಾರ್‌ಶಹರ್ (ರಾಜಸ್ತಾನ):  ಇಲ್ಲಿಂದ ಕೇವಲ 20 ಕಿ.ಮೀ. ದೂರದಲ್ಲಿ ತನ್ನ ಪ್ರಭುತ್ವ ಆರಂಭಿಸಿರುವ ಥಾರ್ ಮರಭೂಮಿಯಲ್ಲಿ ಬಿರುಗಾಳಿ ಎಬ್ಬಿಸಿದ ಕಾರುಗಳು, ಜಾರುವ ನೆಲದ ಸವಾಲುಗಳನ್ನು ಹಿಮ್ಮೆಟ್ಟಿಸಿ ಶರವೇಗದಲ್ಲಿ ಓಡುವ ಮೂಲಕ ಮಂಗಳವಾರದ ನಸುಕಿನಲ್ಲಿ `ಮರಳುಗಾಡಿನ ಮಹಾಯಾತ್ರೆ~ ಆರಂಭಿಸಿದವು.

ಮಾರುತಿ ಸುಜುಕಿ ಸಂಸ್ಥೆ ಆಯೋಜಿಸಿರುವ 10ನೇ ರಾಷ್ಟ್ರೀಯ ಮೋಟಾರ್ ರ‌್ಯಾಲಿ `ಡಸರ್ಟ್ ಸ್ಟಾರ್ಮ್~ಗೆ ಚಾಲನೆ ಸಿಗುತ್ತಿದ್ದಂತೆಯೇ ವಾಹನಗಳು, `ರುಮ್ ರುಮ್~ ಎಂಬ ಅವಾಜು ಹಾಕುತ್ತಾ, ಎಬ್ಬಿಸಿದ ಬಿರುಗಾಳಿಗೆ ಮರಭೂಮಿ ಸಹ ಬೆಚ್ಚಿಬಿತ್ತು.
 
ರ‌್ಯಾಲಿಯ ಮೊದಲ ಹಂತದಲ್ಲಿ ಸ್ಪರ್ಧಿಗಳು ರಾತ್ರಿವೇಳೆ ವಾಹನಗಳನ್ನು ಚಲಿಸಬೇಕಿತ್ತು. ಆ ಕತ್ತಲ ಸಾಮ್ರಾಜ್ಯದಲ್ಲಿ ಗಾಲಿಗಳನ್ನು ಜಾರಿಸುತ್ತಿದ್ದ ಉಸುಕಿನಲ್ಲಿಯೇ ವಾಹನ ಓಡಿಸುವ ದೊಡ್ಡ ಸವಾಲನ್ನು ಚಾಲಕರು ಎದುರಿಸಬೇಕಾಯಿತು.

ರ‌್ಯಾಲಿಯಲ್ಲಿ ಒಟ್ಟಾರೆ 280 ತಂಡಗಳು ಪಾಲ್ಗೊಂಡಿದ್ದು, ಎಕ್ಸ್‌ಟ್ರೀಮ್ ಮತ್ತು ಎಂಡ್ಯೂರ್ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಐದು ದಿನಗಳ ಮರಳುಗಾಡಿನ ಮಹಾ ಓಟದಲ್ಲಿ ವಾಹನಗಳು ಅಂದಾಜು 3,500 ಕಿ.ಮೀ. ದೂರ ಕ್ರಮಿಸಲಿವೆ. ಇದೇ ಮೊದಲ ಸಲ ಟ್ರಕ್‌ಗಳು ಸಹ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ರ‌್ಯಾಲಿಯ ವಿಶೇಷವಾಗಿದೆ.

ಥಾರ್ ಮರಭೂಮಿ ಮಾತ್ರವಲ್ಲದೆ ಭುಜ್ ಮತ್ತು ಕಚ್‌ನ ಮರಳು ಸಾಗರದಲ್ಲೂ ಈ ರ‌್ಯಾಲಿ ಓಡಲಿದೆ. ಕೆಂಪು ಕಲ್ಲಿನಿಂದ ನಿರ್ಮಿಸಲಾದ ಅಂದದ ಲಾಲ್‌ಗಡ ಅರಮನೆಯ ಊರು ಬಿಕಾನೇರ್, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಜೈಸ ಲ್ಮೇರ್ ಮತ್ತು ಅಣುಶಕ್ತಿ ಪ್ರದರ್ಶನದಿಂದ ಖ್ಯಾತವಾದ ಪೋಖ್ರಾನ್ ಮೂಲಕ ಹಾಯ್ದುಹೋಗುವ ಈ ಯಾತ್ರೆ, ಇದೇ 25ರಂದು ಅಹ್ಮದಾಬಾದ್‌ನಲ್ಲಿ ಕೊನೆಗೊಳ್ಳಲಿದೆ. ಅಂದು ಸಂಜೆ ಅಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 

ಹಿಂದಿನ ಒಂಬತ್ತು ರ‌್ಯಾಲಿಗಳಲ್ಲಿ ಇದುವರೆಗೆ ಒಮ್ಮೆ ಗೆದ್ದವರಿಗೆ ಪ್ರಶಸ್ತಿಯನ್ನು ಮತ್ತೆ ಗೆಲ್ಲಲು ಆಗಿಲ್ಲ. ಹಾಲಿ ಚಾಂಪಿಯನ್ ಮಹಾರಾಷ್ಟ್ರದ ಟಾಟಾ ತಂಡದ ಸಂಜಯ್ ರಾಮ್ ಟಕಾಲೆ ಅವರಿಗೂ ಈ ಗುಮ್ಮ ಕಾಡುತ್ತಿದೆ.
ಗೌರವ್ ಗಿಲ್, ಸುರೇಶ್ ರಾಣಾ, ಸನ್ನಿ ಸಿಧು, ಗೌರವ್ ಚಿರಿಪಾಲ್, ಹರ್‌ಪ್ರೀತ್ ಸಿಂಗ್ ಬಾವಾ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿರುವ ಈ ರ‌್ಯಾಲಿಯಲ್ಲಿ ಮೈಸೂರಿನ ಲೋಹಿತ್ ಅರಸ್ ಕೂಡ ಫೇವರಿಟ್ ಚಾಲಕರಲ್ಲಿ ಒಬ್ಬರೆನಿಸಿದ್ದಾರೆ.

ಮನಾಲಿಯಲ್ಲಿ ಗ್ಯಾರೇಜ್ ಹೊಂದಿರುವ ರಾಣಾ, 2009ರಲ್ಲಿ `ಡಸರ್ಟ್ ಸ್ಟಾರ್ಮ್~ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಅಶ್ವಿನ್ ನಾಯಕ್ ರೂಪದಲ್ಲಿ ಸಹ ಚಾಲಕನನ್ನು ಹೊಂದಿರುವ ಅವರು, ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ಪುನಃ ಪ್ರಶಸ್ತಿ ಗೆಲ್ಲುವ ಇರಾದೆ ವ್ಯಕ್ತಪಡಿಸಿದರು.
 
ಗೆಳೆಯ ಪಿವಿಎಸ್ ಮೂರ್ತಿ ಅವರನ್ನು ಸಹ ಚಾಲಕನ ಸ್ಥಾನದಲ್ಲಿ ಹೊಂದಿರುವ ಲೋಹಿತ್, ಜೋರಾಗಿಯೇ `ರುಮ್ ರುಮ್~ ಸದ್ದು ಹೊರಡಿಸಿದರು. ಮಾರುತಿ, ಆರ್ಮಿ ಅಡ್ವೆಂಚೇರ್, ಟಾಟಾ, ಥಂಡರ್ ಬೋಲ್ಟ್, ಪರ್‌ಫೆಕ್ಟ್ ರ‌್ಯಾಲಿ, ಫಿಯೇಟ್ ಇಂಡಿಯಾಗಳು ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರಮುಖ ತಂಡಗಳಾಗಿವೆ. 

ಸರ್ದಾರ್‌ಶಹರ್‌ದಲ್ಲಿ ರ‌್ಯಾಲಿಗೆ ಅಧಿಕೃತ ಚಾಲನೆ ಸಿಗುವ ಮುನ್ನ ನವದೆಹಲಿಯ ಮಾರುತಿ ಸುಜುಕಿ ಪ್ರಧಾನ ಕಚೇರಿ ಆವರಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಿತು. ಚಿಯರ್ ಗರ್ಲ್‌ಗಳು ಪ್ರತಿ ವಾಹನವನ್ನೂ ತಮ್ಮ ಮೋಹಕ ನೃತ್ಯದ ಮೂಲಕ ಬೀಳ್ಕೊಟ್ಟರು.
 
ಮಧ್ಯಾಹ್ನದ ಉರಿ ಬಿಸಿಲಲ್ಲಿ ಕುಣಿಯುತ್ತಾ, ಬಳಕುತ್ತಾ 280 ವಾಹನಗಳಿಗೆ ಶುಭಕೋರಿ ಬೀಳ್ಕೊಟ್ಟಾಗ ಅವರೆಲ್ಲ ಸುಸ್ತು ಹೊಡೆದಿದ್ದರು. ನವದೆಹಲಿಯಿಂದ ಹತ್ತು ಗಂಟೆಗಳ ಯಾತ್ರೆ ಬಳಿಕ ಸರ್ದಾರ್‌ಶಹರ್ ಸೇರಿದ ಸ್ಪರ್ಧಿಗಳು, ತುಸು ವಿಶ್ರಾಂತಿ ಪಡೆದ ಮೇಲೆ ಸ್ಪರ್ಧೆಗೆ ಸಿದ್ಧರಾದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT