ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಲಿ ಊಟದ ರಾಜವೈಭೋಗ

Last Updated 16 ಜನವರಿ 2017, 15:40 IST
ಅಕ್ಷರ ಗಾತ್ರ

ಆದರದ ಆತಿಥ್ಯ, ಬೆಳ್ಳಿ ಬಟ್ಟಲಿನ ಥಾಲಿ, ಮರದ ಸೂಕ್ಷ್ಮ ಕೆತ್ತನೆಯುಳ್ಳ ಒಳಾಂಗಣ ವಿನ್ಯಾಸ, ಅಲೆಅಲೆಯಾಗಿ ಮನ ಮುಟ್ಟುವ ರಾಜಸ್ತಾನದ ಸಾಂಪ್ರದಾಯಿಕ ಸಂಗೀತ, ಕೊಣೆಯನ್ನು ತುಂಬಿದ ಖೂಬ್‌ಸೂರತ್ ಗುಲಾಬ್ ಕೀ ನಶಾ.. ಇನ್ನೇನು ಬೇಕು ಸಾಕ್ಷಾತ್ ಗಂಧರ್ವ ಲೋಕ ವೈಭೋಗದ ಅಸಲೀತನ ಜೆ.ಪಿ.ನಗರದಲ್ಲಿರುವ ಕೇಸರಿಯಾ ಹೋಟೆಲ್‌ನಲ್ಲಿ ಅವತರಿಸಿದೆ.

ಬೆಂಗಳೂರಿನ ಶೇಖಾವತ್ ರೆಸ್ಟೊರೆಂಟ್ ಕೇಸರಿಯಾದಲ್ಲಿ ‘ರಸ್ಟಿಕ್ ರಾಜಸ್ತಾನ್’ ಉತ್ಸವ ನಡೆಯುತ್ತಿದೆ. ಮೇ 12ರಿಂದ ಆರಂಭವಾಗಿರುವ ಉತ್ಸವ ಮೇ 22 ರವರೆಗೆ ನಡೆಯಲಿದೆ.

ರಾಜಸ್ತಾನ ಒಳನಾಡಾದ ಶೇಖಾವತ್ ಪ್ರದೇಶದ ವಿಶೇಷ ಜನಪದ ಕಲಾ ಪ್ರಕಾರಗಳಾದ ಲ್ಯಾಕರ್ ಬಳೆಗಳ ತಯಾರಿಕೆ, ಮೆಹೆಂದಿ ಮತ್ತು ಮಣ್ಣಿನ ಮಡಿಕೆ ತಯಾರಿಕೆಯನ್ನು ನೋಡುತ್ತಾ, ಬೆಳ್ಳಿ ಬಟ್ಟಲಿನ ಥಾಲಿ ಸವಿಯುವ ಅವಕಾಶವನ್ನು ಉತ್ಸವ ಕಲ್ಪಿಸಿದೆ.

ರಾಜಸ್ತಾನಿ ಕಲಾವಿದರು ಈ ಉತ್ಸವಕ್ಕೆ ಆಗಮಿಸಿದ್ದಾರೆ. ‘ರಾಜಸ್ತಾನಿ ಕಲೆ ಮತ್ತು ಜಾನಪದ ವೈಶಿಷ್ಟ್ಯ ಮತ್ತು ಆಹಾರ ಪದ್ಧತಿಯನ್ನು ಬೆಂಗಳೂರಿಗರಿಗೆ ಪರಿಚಯಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಿದ್ದೇವೆ. ಹೊಟೇಲ್‌ನಲ್ಲಿ ಬಳಸಿದ ಮರದ ಕಂಬಗಳು, ಚಿತ್ರಗಳೂ ರಾಜಸ್ತಾನದಿಂದಲೇ ಬಂದಿವೆ’ ಎನ್ನುತ್ತಾರೆ ಕೇಸರಿಯಾ ಹೋಟೆಲ್‌ನ ಮಾಲೀಕರಾದ ಸಿದ್ಧಾರ್ಥ್.

ಲ್ಯಾಕರ್ ಬಳೆಗಳು
ಇಜ್ಜಲಿನಲ್ಲಿ ಬಣ್ಣದ (ಒಂದು ಬಗೆಯ ನೈಸರ್ಗಿಕ ಮೇಣ) ಲ್ಯಾಕ್ ಕರಗಿಸಿ ಅದಕ್ಕೆ ಚಿನ್ನ, ಕಪ್ಪು ಬಣ್ಣಗಳ ಒಂದು ಎಳೆ ಮಿಶ್ರಣ ಮಾಡಿ ಸುರುಳಿ ಸುತ್ತಿ ಬಳೆಗಳನ್ನು ಮಾಡುತ್ತಾರೆ ಭುವರ್ ಸಿಂಗ್.

ಈ ಬಳೆಗಳು ರಾಜಸ್ತಾನದಲ್ಲಿ ಸಾಂಪ್ರದಾಯಿಕ ಮಾನ್ಯತೆಯನ್ನು ಪಡೆದಿದೆ. ನಮ್ಮಲ್ಲಿ ಮದು ಮಗಳಿಗೆ ಕಪ್ಪು ಬಳೆ ತೊಡಿಸುವಂತೆ ರಾಜಸ್ತಾನದಲ್ಲಿ ಈ ಲ್ಯಾಕ್ ಬಳೆಗಳನ್ನು ಶುಭ ಸಮಾರಂಭದಲ್ಲಿ ಹೆಣ್ಣು ಮಕ್ಕಳಿಗೆ ನೀಡುತ್ತಾರೆ.

ಭುವರ್ ಸಿಂಗ್ ರಾಜಸ್ತಾನದಲ್ಲಿ ದಿನಕ್ಕೆ 200ರಿಂದ 300 ಬಳೆಗಳನ್ನು ತಯಾರಿಸುತ್ತಾರೆ. ಬಳೆ ತಯಾರಿಕೆಯಲ್ಲಿ ಪರಿಣಿತಿ ಹೊಂದಿರುವ ಭುವರ್‌ ಅವರನ್ನು ‘ರಸ್ಟಿಕ್ ರಾಜಸ್ತಾನ್’ ಉತ್ಸವಕ್ಕೆ ಕರೆಸಿದ್ದಾರೆ ಸಿದ್ಧಾರ್ಥ್.

ಈ ಬಳೆಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ಕಲಾವಿದರನ್ನು ‘ಲಖಾರಾಸ್’ ಎಂದು ಕರೆಯಲಾಗುತ್ತದೆ. ಕೆರಿಯಾ ಲಕ್ಕಾ ಎಂಬ ಕೀಟದಿಂದ ಪಡೆದ ನೈಸರ್ಗಿಕ ಮೇಣವೇ ಲ್ಯಾಕ್.

ಸೂಕ್ಷ್ಮವಾದ ವಿನ್ಯಾಸ ಮತ್ತು ಹರಳಿನ ವಿನ್ಯಾಸದಿಂದ ಮಾಡಿದ ಬಳೆಗಳು  ರಾಜಸ್ತಾನವನ್ನು ಪ್ರತಿನಿಧಿಸಿ ರಾಯಲ್ ಲುಕ್ ನೀಡುತ್ತದೆ.

ರಾಜಸ್ತಾನಿ ಕುಂಬಾರಿಕೆ
ರಾಜಸ್ತಾನದ ಅತ್ಯಂತ ಹಳೆಯ ಕರಕುಶಲ ಕಲೆಗಳಲ್ಲಿ ಒಂದಾದ ಮಣ್ಣಿನ ಮಡಿಕೆ ತಯಾರಿಕೆ ಕೂಡ ಈ ಉತ್ಸವದಲ್ಲಿ ಇದೆ. ಉತ್ಸವದಲ್ಲಿ ಭಾಗಿಯಾದರೆ ಪ್ರಾಯೋಗಿಕವಾಗಿ ಮಣ್ಣಿನ ಪುಟ್ಟ ಪುಟ್ಟ ಮಡಿಕೆ, ದೀಪ, ಬಟ್ಟಲುಗಳನ್ನು ತಯಾರಿಸಬಹುದು. ಮಣ್ಣಿನೊಂದಿಗೆ ಆಡುವ ಮಕ್ಕಳಿಗೆ ಈ ಮಡಿಕೆ ತಯಾರಿಗೆ ಇಷ್ಟವಾಗುತ್ತೆ. ಕುಂಬಾರಿಕೆಯಲ್ಲಿ ನಿಪುಣರಾದ ಹರ್ಪಲ್ ಸಿಂಗ್ ಮಡಿಕೆ ತಯಾರಿಸಲು ಸಹಾಯ ಮಾಡುತ್ತಾರೆ.

ರಾಜಸ್ತಾನಿ ಮೆಹೆಂದಿ
ರಾಜಸ್ತಾನಿ ಮೆಹೆಂದಿ ವಿನ್ಯಾಸವು ರಾಜಸ್ತಾನಿ ಸಂಸ್ಕೃತಿಯ ಪ್ರತಿಬಿಂಬ. ಎಲೆಯಾಕಾರ, ರಾಯಗೋಪುರ, ಆನೆ ಹೀಗೆ ರಾಜ ಪರಂಪರೆಯನ್ನು ನೆನಪಿಸುವ ವಿಶಿಷ್ಟ ವಿನ್ಯಾಸಗಳನ್ನು ಮನಮೋಹಕವಾಗಿ ಹಾಗೂ ಸೂಕ್ಷ್ಮವಾಗಿ ಬಿಡಿಸುತ್ತಾರೆ ಭೂಮರಿ ದೇವಿ. ಅಲ್ಲದೆ ರಾಜಸ್ತಾನದ ಗ್ರಾಮೀಣ ಚಿತ್ರಣಗಳನ್ನು ಒಳಗೊಂಡ ವಿನ್ಯಾಸವನ್ನು ಮೆಹೆಂದಿ ಕಲೆಯಲ್ಲಿ ಮೂಡಿಸುತ್ತಾರೆ. ಹೋಟೆಲ್‌ಗೆ ಬರುವ ಗ್ರಾಹಕರು ಉಚಿತವಾಗಿ ಈ ವಿಶೇಷ ವಿನ್ಯಾಸದ ಮೆಹೆಂದಿಯನ್ನು ಹಾಕಿಸಿಕೊಳ್ಳಬಹುದು.

35 ಬಗೆಯ ಭರ್ಜರಿ ಥಾಲಿ
ರಾಜಸ್ತಾನ ಮರುಭೂಮಿ ಪ್ರದೇಶಕ್ಕೆ ಅನುಗುಣವಾಗಿ ಹುಟ್ಟಿಕೊಂಡ ಸಾಂಪ್ರದಾಯಿಕ ಥಾಲಿ ಈ ಹೋಟೆಲ್‌ನಲ್ಲಿ ಲಭ್ಯ. ಮರುಭೂಮಿ ಆಹಾರದ ರುಚಿಯನ್ನು ಬೆಂಗಳೂರಿನ ಜನತೆಗೆ ಪರಿಚಯಿಸುವ ಉತ್ಸಾಹವನ್ನು ರಂಗೋಲಿಯಾ ಹೊಂದಿದೆ.

ಒಣಪ್ರದೇಶದ ಆಹಾರವಾದ್ದರಿಂದ ರಾಜಸ್ತಾನ ಥಾಲಿಯಲ್ಲಿ ಮೊಸರು, ತುಪ್ಪ, ಬಾಯಾರಿಕೆ ತಣಿಸುವ ಮತ್ತು ಬೇಸಿಗೆಯ ವಿಶೇಷ ಹಣ್ಣಾದ ಮಾವಿನ ಪೇಯಗಳು ಇರುತ್ತವೆ.

ಥಾಲಿಯಲ್ಲಿ ಏಳು ಹಂತವಾಗಿ ಒಟ್ಟು 35 ಬಗೆಯ ತಿನಿಸುಗಳನ್ನು ಸವಿಯಬಹುದು.

ಖಷ್ಠ ಬೇಳೆ ಸಮೋಸ, ಸಂಗರ್ ಕಾಳಿನ ಕಚೋರಿ, ಸಾಬುದಾನ ವಡೆ, ಪಂಚ್ ವೇಲ್ ದಾಲ್, ಹರ್‌ಹರ್‌ ದಾಲ್, ದಾಲ್ ಪರಾಟಾ, ಮೇಥಿ ಪೂರಿ, ಶೇಖಾವತಿ ಪನೀರ್, ಬಿಕನೇರಿ  ಚನ್ನ ಜೈಸಲ್ಮೇರ್, ಗುಲಾಬ್ ಚೂರ್ಮ, ವಿಶೇಷವಾಗಿ ತಯಾರಿಸಲಾದ ಪನ್ನೀರ್ ಜಿಲೇಬಿ, ಸೇಬಿನ ಜಿಲೇಬಿ, ಕಿಚಡಿ, ಪಲಾವ್ ಹೀಗೆ ವಿಶೇಷ ತಿನಿಸುಗಳನ್ನು ಒಳಗೊಂಡಿವೆ.

ಬೇಸಗೆಯ ಬಿಸಿಯನ್ನು ತಣಿಸುವ ಆಮ್‌ರಸ್, ರಾಜಸ್ತಾನಿ ಮಸಾಲೆ ಮಜ್ಜಿಗೆ, ಆಮ್ ಪನ್ನಾದಂಥ ಪೇಯಗಳೂ ಇವೆ
ಹೆಚ್ಚು ಮಸಾಲೆ ಇಲ್ಲದೆ ನವಿರಾದ ರುಚಿ ಹೊಂದಿವೆ. ಜೀರಿಗೆ ಮತ್ತು ಸಿಹಿ ತುಸು ಮುಂದು. ರಾಜಸ್ತಾನ ಪ್ರದೇಶದ ವಿಭಿನ್ನ ದಾಲ್‌ಗಳು ಮೆದುವಾದ ವಿಶೇಷ ರುಚಿಯನ್ನು ನೀಡುತ್ತದೆ. ಮಾವಿನ ಹಣ್ಣಿನ ಪೇಯ ಮತ್ತು ಸಿಹಿ ತಿಂಡಿಗಳು ಥಾಲಿಯ ವಿಶೇಷ.

ಕೇಸರಿ, ಡ್ರೈಫ್ರೂಟ್ಸ್, ಬೆಲ್ಲ, ತುಪ್ಪ, ಡೈರಿ ಉತ್ಪನ್ನಗಳು, ಬಾಜ್ರಾ ಸಾಮಾಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ. ಕರಿಯಲ್ಲಿ ಸೇರುವ ಬಾದಾಮಿ ಪಿಸ್ತಾ ಸ್ವಾದಿಷ್ಟ ರುಚಿ ನೀಡುತ್ತದೆ.

ಹಂತ ಹಂತವಾಗಿ ಬೆಳ್ಳಿ ಪಾತ್ರೆಯಲ್ಲಿ ಥಾಲಿಯನ್ನು ತಿನ್ನುವಾಗ  ರಾಜ ಭೋಜನದ ಅನುಭವವಾಗುತ್ತದೆ.
ಶೇಖಾವತಿಯ ಹವೇಲಿಗಳ (ಮನೆ) ಸಾಂಪ್ರದಾಯಿಕ ಅಭ್ಯಾಸದಂತೆ ಬೆಳ್ಳಿ ಬಟ್ಟಲು, ತಟ್ಟೆ, ಲೋಟದಲ್ಲಿ ಥಾಲಿಯನ್ನು ಕೇಸರಿಯಾದಲ್ಲಿ ನೀಡುತ್ತಾರೆ. ಕೈಯಲ್ಲೇ ಅರೆದು ಮಾಡಿದ ಮಸಾಲೆಗಳಿಂದ ಹಿಡಿದು ರಾಜಸ್ಥಾನದ ವಿಶೇಷ ಸಾಮಾಗ್ರಿಗಳ ಬಳಕೆ ಈ ಥಾಲಿಯ ವಿಶೇಷ.


ಮಧ್ಯಾಹ್ನ 12ರಿಂದ 3.30 ಮತ್ತು ಸಂಜೆ 7ರಿಂದ ರಾತ್ರಿ 11ರವರೆಗೆ ಥಾಲಿ ಲಭ್ಯ.

ಸ್ಥಳ: ಕೇಸರಿಯಾ, ಗೇಟ್ ಸಂಖ್ಯೆ 55, ಗೋಯೆಂಕಾ ಛೇಂಬರ್ಸ್, 19ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, 2ನೇ ಹಂತ, ಜೆ.ಪಿ.ನಗರ, ಬೆಂಗಳೂರು.
ಟೇಬಲ್ ಕಾಯ್ದಿರಿಸಲು ಕರೆ ಮಾಡಿ 080 26590800
ಬೆಲೆ: ವಯಸ್ಕರಿಗೆ ₹ 545, ಮಕ್ಕಳಿಗೆ ₹ 300 (5ರಿಂದ 8 ವರ್ಷ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT