ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿ ಆತ್ಮಹತ್ಯೆ; ಕಾರಣ ನಿಗೂಢ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ವಿಜಯನಗರ ಸಮೀಪದ ಅಮರಜ್ಯೋತಿನಗರದಲ್ಲಿ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅಮರಜ್ಯೋತಿನಗರದ ನಾಲ್ಕನೇ ಅಡ್ಡರಸ್ತೆ ನಿವಾಸಿ ಸಂದೀಪ್‌ಹೆಗ್ಡೆ (28) ಮತ್ತು ಅವರ ಪತ್ನಿ ಸೌಮ್ಯಕುಮಾರಿ (25) ಆತ್ಮಹತ್ಯೆ ಮಾಡಿಕೊಂಡವರು. ಅವರ ವಿವಾಹವಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದವು. ದಂಪತಿಗೆ ಮಕ್ಕಳಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಮೂಡುಬಿದರೆಯ ಸಂದೀಪ್‌ಹೆಗ್ಡೆ ಬಿ.ಇ ಓದಿದ್ದರು. ಅವರು, ಗಾಂಧಿನಗರದಲ್ಲಿನ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಉಜಿರೆಯವರಾದ ಸೌಮ್ಯಕುಮಾರಿ, ನಗರದ ಜಿಗಣಿ ಬಳಿಯ ಖಾಸಗಿ ಕಾಲೇಜಿನಲ್ಲಿ ಆಯುರ್ವೇದ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.

ದಂಪತಿ ಸೋಮವಾರ ರಾತ್ರಿ ಕೊನೆಯ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಸ್ವಲ್ಪ ಸಮಯದ ನಂತರ ಸೌಮ್ಯಕುಮಾರಿ ಕೊಠಡಿಯೊಂದಕ್ಕೆ ತೆರಳಿ ನೇಣು ಹಾಕಿಕೊಂಡಿದ್ದಾರೆ. ಪತ್ನಿ ಕೊಠಡಿಯೊಳಗೆ ಹೋಗಿ ಚೀಲಕ ಹಾಕಿಕೊಂಡಿದ್ದರಿಂದ ಅನುಮಾನಗೊಂಡ ಸಂದೀಪ್‌ಹೆಗ್ಡೆ, ಕೊಠಡಿಯ ಬಾಗಿಲು ಮುರಿದು ಒಳ ಹೋದಾಗ ಸೌಮ್ಯಕುಮಾರಿ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಅವರು ಪತ್ನಿಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಪ್ರಾಣ ಉಳಿಸಲು ಯತ್ನಿಸಿದ್ದಾರೆ.

ಆದರೆ, ಆ ವೇಳೆಗಾಗಲೇ ಸೌಮ್ಯಕುಮಾರಿ ಮೃತಪಟ್ಟಿದ್ದಾರೆ. ಇದರಿಂದ ಮನನೊಂದ ಸಂದೀಪ್‌ಹೆಗ್ಡೆ, ಮತ್ತೊಂದು ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರು, ದಂಪತಿಯ ಮೊಬೈಲ್‌ಗಳಿಗೆ ಮಂಗಳವಾರ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು, ನಗರದಲ್ಲೇ ನೆಲೆಸಿರುವ ಸೌಮ್ಯಕುಮಾರಿ ಅವರ ಭಾವ ಅನೂಪ್ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅನೂಪ್ ಅವರು ಸಂಜೆ ವೇಳೆಗೆ ದಂಪತಿಯ ಮನೆಯ ಬಳಿ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿ ಅನ್ಯೋನ್ಯವಾಗಿದ್ದರು. ಅವರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಗೊತ್ತಿಲ್ಲ ಎಂದು ಪೋಷಕರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ದಂಪತಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ಯೋನ್ಯವಾಗಿದ್ದರು: `ಸೌಮ್ಯ ಸ್ವಭಾವದವರಾದ ಸಂದೀಪ್‌ಹೆಗ್ಡೆ ದಂಪತಿ ಅನ್ಯೋನ್ಯವಾಗಿದ್ದರು. ಪರಸ್ಪರರ ನಡುವೆ ಗಾಢ ಪ್ರೀತಿ ಇತ್ತು. ಅವರು ಏಕೆ ಆತ್ಮಹತ್ಯೆ ಮಾಡಿಕೊಂಡರೆಂಬುದು ಗೊತ್ತಿಲ್ಲ~ ಎಂದು ಮೃತರ ಸಂಬಂಧಿ ದೀಪಕ್‌ಜೈನ್ ಸುದ್ದಿಗಾರರಿಗೆ ತಿಳಿಸಿದರು. ಘಟನೆ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT