ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: ಮಹಿಳಾ ವಿವಿಧೋದ್ದೇಶ ಸಹಕಾರ ಬ್ಯಾಂಕ್ ಆರಂಭ

Last Updated 4 ಅಕ್ಟೋಬರ್ 2011, 8:25 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ವಿವಿಧೋದ್ದೇಶ ಸಹಕಾರ ಬ್ಯಾಂಕ್ ಸ್ಥಾಪಿಸಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯ ಆರಂಭಿಕ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸ್ಥಾಪನೆಗೊಳ್ಳಲಿದೆ ಎಂದು ನಿಗಮ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಹೇಳಿದ್ದಾರೆ.

ಬ್ಯಾಂಕ್ ಸ್ಥಾಪಿಸುವ ಯೋಜನೆ ಇದೀಗ ಆರಂಭಿಕ ಹಂತದಲ್ಲಿದೆ. 2-3 ತಿಂಗಳಲ್ಲಿ ಅಗತ್ಯದ ಪ್ರಕ್ರಿಯೆಗಳು ಕೊನೆಗೊಳ್ಳಬಹುದು. ಈ ಬ್ಯಾಂಕ್ ಆರಂಭವಾದ ಬಳಿಕ ಎಲ್ಲಾ ಸಾಲ ಯೋಜನೆಗಳನ್ನು ಮಹಿಳೆಯರಿಗೆ ಈ ಬ್ಯಾಂಕ್ ಮೂಲಕವೇ ನೀಡಲಾಗುವುದು. 5 ಕೋಟಿ ರೂಪಾಯಿಗಳ ಆರಂಭಿಕ ಠೇವಣಿಯನ್ನು ಇದರಲ್ಲಿ ಇರಿಸಲಾಗುವುದು ಎಂದು ಅವರು ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಸ್ವಸಹಾಯ ಗುಂಪುಗಳ ಸದಸ್ಯರು ಈ ಬ್ಯಾಂಕ್‌ನ ಸದಸ್ಯರಾಗಲು ಕನಿಷ್ಠ ಶುಲ್ಕ ರೂ. 100 ಇರುತ್ತದೆ ಎಂದ ಅವರು, ದ.ಕ. ಜಿಲ್ಲೆಯ ಯಶಸ್ಸನ್ನು ನೋಡಿಕೊಂಡು ಇತರೆ ಜಿಲ್ಲೆಗಳಲ್ಲಿ ಬ್ಯಾಂಕ್ ಶಾಖೆ ತೆರೆಯಲಾಗುವುದು ಎಂದು ಅವರು ಹೇಳಿದರು.

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಮಹಿಳೆಯರಿಗೆ ದಿನಕ್ಕೆ ರೂ. 500ರಿಂದ 5 ಸಾವಿರದವರೆಗೆ ಹಣಕಾಸು ನೆರವು ನೀಡುವ `ಜೀವನ ಸಾಥಿ~ ಯೋಜನೆಯನ್ನು ನಿಗಮವು ಗದಗ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆರಂಭಿಸಿದೆ. ಇದಕ್ಕೆ ಶೇ 2ರಷ್ಟು ಬಡ್ಡಿ ಮಾತ್ರ ಇರುತ್ತದೆ, ಇದರಿಂದ ಭಾರಿ ಬಡ್ಡಿ ನೀಡಿ ಹೊರಗಿನಿಂದ ಸಾಲ ಪಡೆಯುವ ಕಷ್ಟ ತಪ್ಪುತ್ತದೆ ಎಂದರು.

ಈ ಯೋಜನೆಯನ್ನು ಹಂತ ಹಂತಗಳಲ್ಲಿ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ 2 ಕೋಟಿ ರೂಪಾಯಿ ತೆಗೆದಿರಿಸಲಾಗಿದ್ದು, ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ನೀಡಲಾಗುವುದು ಎಂದು ಅವರು ವಿವರಿಸಿದರು.

ಅಂಗವಿಕಲ ಪುರುಷ ಮತ್ತು ಮಹಿಳೆಯರಿಗೆ ಸಣ್ಣ ಉದ್ದಿಮೆ ಸ್ಥಾಪಿಸಲು 6 ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುವುದು. ದ.ಕ. ಜಿಲ್ಲೆಯಲ್ಲಿ ಇದಕ್ಕಾಗಿ 16 ಅರ್ಜಿಗಳು ಬಂದಿದ್ದು, 13 ಅರ್ಜಿಗಳನ್ನು ಅಂಗೀಕರಿಸಿ ಒಪ್ಪಿಗೆಗಾಗಿ ರಾಜ್ಯ ಸಮಿತಿಗೆ ಕಳುಹಿಸಲಾಗಿದೆ ಎಂದು ಭಾರದ್ವಾಜ್ ಹೇಳಿದರು.

ಮಾರಾಟಗಾರರು ಮತ್ತು ಖರೀದಿದಾರರಿಗೆ ಸಂಪರ್ಕ ಸೇತುವೆಯಾಗಲು ಮಾರಾಟ ಮೇಳ ಹಮ್ಮಿಕೊಳ್ಳಲಾಗುವುದು. ಉದ್ಯೋಗಿನಿ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಶೇ. 6ರ ಬಡ್ಡಿದರದಲ್ಲಿ ಈ ಸಾಲ ನೀಡಲಾಗುವುದು. ಜಿಲ್ಲೆಯಿಂದ ಇದಕ್ಕೆ 15 ಅರ್ಜಿಗಳು ಬಂದಿವೆ. ನಗರದ ಬಿಗ್ ಬಜಾರ್ ಬಳಿ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಪ್ರತ್ಯೇಕ ಮಾರಾಟ ಕೇಂದ್ರ ಆರಂಭಿಸಲಾಗುವುದು ಎಂದರು.

ತಾವು ಈವರೆಗೆ 14 ಜಿಲ್ಲೆಗಳ 14 ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿದ್ದು, ಪ್ರತಿಯೊಂದು ಕಡೆಯೂ ಮಹಿಳಾ ಗ್ರಾಮಸಭೆಗಳನ್ನು ನಡೆಸಿ ಮಹಿಳಾ ಸಬಲೀಕರಣದ ವಿಚಾರದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉತ್ತೇಜನ ನೀಡುತ್ತಿರುವುದಾಗಿ ತಿಳಿಸಿದರು.

ಪ್ರದರ್ಶನ-ಮಾರಾಟ: ಮಂಗಳಾದೇವಿ ದೇವಸ್ಥಾನ ಸಮೀಪ ಕಾಂತಿ ಚರ್ಚ್ ಸಭಾಂಗಣದಲ್ಲಿ ಮಹಿಳಾ ಸ್ವಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳ ಮೂರು ದಿನಗಳ ಪ್ರದರ್ಶನ ಮತ್ತು ಮಾರಾಟ ಸೋಮವಾರ ಆರಂಭವಾಗಿದೆ. ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಜ್ಯೂಸ್, ಜವುಳಿ, ಚೀಲಗಳ ಸಹಿತ ಹಲವು ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT