ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷ ಆಡಳಿತಗಾರ, ನಿಪುಣ ತಂತ್ರಗಾರ

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ದೇಶದ 13ನೇ ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ ಆಯ್ಕೆ ಮಾಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಜನನಾಯಕ ಅಲ್ಲದಿರಬಹುದು, ಆದರೆ, ದಕ್ಷ ಆಡಳಿಗಾರ, ನಿಪುಣ ತಂತ್ರಗಾರ. 

ಕಾಂಗ್ರೆಸ್ ಪಕ್ಷ ಹಾಗೂ ಯುಪಿಎ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಮುನಿಸಿಕೊಂಡ ಮಿತ್ರಪಕ್ಷಗಳು, ವಿರೋಧ ಪಕ್ಷಗಳ ಮನವೊಲಿಸಿ ಎಂಥದ್ದೇ ಸಮಸ್ಯೆ ಪರಿಹರಿಸುವ ಆಪದ್ಬಾಂಧವ. ಅದಕ್ಕೆಂದೇ ಪಕ್ಷದಲ್ಲಿ ಅವರಿಗೆ `ಚಾಣಕ್ಯ~ ಎಂಬ ಅಡ್ಡಹೆಸರು. ಅಜಾತಶತ್ರು ಎಂಬ ಹಿರಿಮೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನಂತರ ಎರಡನೇ ನಾಯಕರಾಗಿರುವ ಪ್ರಣವ್ ಮುಖರ್ಜಿಗೆ ಐದು ದಶಕಗಳ ಸುದೀರ್ಘ ರಾಜಕೀಯ ಅನುಭವ. ರಕ್ಷಣಾ ಖಾತೆ, ವಿದೇಶಾಂಗ ಖಾತೆ, ಹಣಕಾಸು ಖಾತೆಯಂತಹ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ.
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ 1935ರಲ್ಲಿ ಜನಿಸಿದ ಪ್ರಣವ್ ಮುಖರ್ಜಿ ಅವರ ತಂದೆ ಕಮದ್ ಕಿಂಕರ್ ಮುಖರ್ಜಿ ಕಾಂಗ್ರೆಸ್ ರಾಜಕಾರಣಿಯಾಗಿದ್ದರು. ರಾಜಕೀಯದತ್ತ ಪ್ರಣವ್ ಒಲವು ಹರಿದಿದ್ದು ಹೀಗೆ.

ಇತಿಹಾಸ, ಕಾನೂನು ಹಾಗೂ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದ ಪ್ರಣವ್ ಮುಖರ್ಜಿ, ತಮ್ಮ ಆಸಕ್ತಿಯ ಕ್ಷೇತ್ರಗಳಾದ ಬೋಧನೆ ಹಾಗೂ ಪತ್ರಿಕೋದ್ಯಮ ತೊರೆದು 60ರ ದಶಕದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. 
1969ರಲ್ಲಿ ರಾಜ್ಯಸಭೆಯ ಮೂಲಕ ಸಂಸತ್ತು ಪ್ರವೇಶಿಸಿದ ಅವರು 2004ರವರೆಗೆ ಸತತವಾಗಿ ಮೇಲ್ಮನೆಗೆ ಆಯ್ಕೆಯಾಗುತ್ತಲೇ ಹೋದರು. 2004ರಲ್ಲಿ ಮೊದಲ ಬಾರಿ ನೇರ ಚುನಾವಣೆ ಎದುರಿಸಿ ಲೋಕಸಭೆಗೆ ಆಯ್ಕೆಯಾದರು.

1973ರಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ ಕಂದಾಯ ಮತ್ತು ಬ್ಯಾಂಕಿಂಗ್ ಖಾತೆಯ ಸಚಿವರಾಗಿ ಮೊದಲ ಬಾರಿ ಸಂಪುಟ ಪ್ರವೇಶಿಸಿದ್ದರು.ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೆಲ್ಲ ಪ್ರಧಾನಿಗಳು ವಿದೇಶ ಪ್ರವಾಸಕ್ಕೆ ಹೋದಾಗ, ಅಸ್ವಸ್ಥರಾದಾಗ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದ ಪ್ರಣವ್‌ಗೆ ಪ್ರಧಾನಿ ಪಟ್ಟ ಮಾತ್ರ ಕೈಗೆಟಕಲಿಲ್ಲ.

ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಜತೆಗಿನ ಮನಸ್ತಾಪದಿಂದ ಕಾಂಗ್ರೆಸ್ ತೊರೆದು ಹೊರನಡೆದಿದ್ದರು. ತಮ್ಮದೇ ಪಕ್ಷ ಕಟ್ಟಿದ್ದ ಅವರು 1989ರಲ್ಲಿ ಮತ್ತೆ ತವರು ಪಕ್ಷಕ್ಕೆ ಮರಳಿದರು. ಅವರ ಮಹತ್ವಾಕಾಂಕ್ಷೆ ಅರಿತಿದ್ದ ಗಾಂಧಿ ಕುಟುಂಬ ಪ್ರಧಾನಿ ಕುರ್ಚಿಯಿಂದ ಅವರನ್ನು ಬೇಕೆಂದೇ ದೂರ ಇಟ್ಟಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 

ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಣವ್, 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಂದೊಮ್ಮೆ ತಮ್ಮ ಕೆಳಗೆ ಕೆಲಸ ಮಾಡಿದ್ದ ಮನಮೋಹನ್ ಸಿಂಗ್ ಅಡಿ ಸಚಿವರಾಗಿ ಕೆಲಸ ಮಾಡಬೇಕಾಯಿತು. 1982ರಲ್ಲಿ ಇಂದಿರಾ ಸಂಪುಟದಲ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಮನಮೋಹನ್ ಸಿಂಗ್ ರಿಸರ್ವ್ ಬ್ಯಾಂಕ್ ಅಧ್ಯಕ್ಷರಾಗಿದ್ದರು.

ಮನಮೋಹನ್ ರಾಜ್ಯಸಭೆಯ ಸದಸ್ಯರಾಗಿದ್ದರಿಂದ 2004ರಲ್ಲಿ ಸದನದ ನಾಯಕನ ಪಟ್ಟ ಅವರಿಗೆ ಒಲಿದು ಬಂತು.2008ರಲ್ಲಿ ಮುಂಬೈ ಮೇಲೆ ಪಾಕ್ ಮೂಲದ ಭಯೋತ್ಪಾದಕರು ಬರ್ಬರ ದಾಳಿ ಮಾಡಿದಾಗ ಪ್ರಣವ್ ಮುಖರ್ಜಿ ವಿದೇಶಾಂಗ ಸಚಿವರಾಗಿದ್ದರು. ಭಯೋತ್ಪಾದಕರು `ದೇಶ ರಹಿತರು~, ತಮಗೂ ಅವರಿಗೂ ಸಂಬಂಧವಿಲ್ಲ ಎನ್ನುತ್ತಿದ್ದ ಪಾಕಿಸ್ತಾನ, ಭಯೋತ್ಪಾದಕರೆಲ್ಲ ತನ್ನ ಪ್ರಜೆಗಳು ಎಂದು ಒಪ್ಪಿಕೊಳ್ಳುವಂತೆ ಮಾಡಿದರು. ಅಮೆರಿಕದ ಮೇಲೂ ಒತ್ತಡ ತಂದು ಭಾರತದ ಅಭಿಪ್ರಾಯಕ್ಕೆ ಮನ್ನಣೆ ಸಿಗುವಂತೆ ನೋಡಿಕೊಂಡರು.

ನಡೆದಾಡುವ ವಿಶ್ವಕೋಶ: ಅಧಿಕಾರಿಗಳ ವಲಯಲ್ಲಿ `ನಡೆದಾಡುವ ವಿಶ್ವಕೋಶ~ ಎಂದೇ ಹೆಸರಾಗಿರುವ ಪ್ರಣವ್ ಕಣ್ಣುತಪ್ಪಿಸುವುದು ಅಷ್ಟು ಸುಲಭವಲ್ಲ. ಆಡಳಿತಕ್ಕೆ ಸಂಬಂಧಿಸಿದ ಪ್ರತಿ ವಿಚಾರವೂ ಅವರಿಗೆ ಕರತಲಾಮಲಕ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ವಿದೇಶಿ ನಾಯಕರ ಜತೆ ಚರ್ಚೆ, ಮಾತುಕತೆ ನಡೆಯುವಾಗ ಪ್ರತಿ ನಿಯಮಾವಳಿ, ವಿಧಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು.

ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳುವ ಸ್ವಭಾವದ ಪ್ರಣವ್, ರಜೆ ತೆಗೆದುಕೊಳ್ಳುವುದೂ ಅಪರೂಪ. ಆದರೆ, ಪ್ರತಿವರ್ಷ ದುರ್ಗಾಪೂಜೆಯ ಸಮಯದಲ್ಲಿ ಪೂರ್ವಿಕರ ಮನೆ ಇರುವ ಬಿರ್ಭುಮ್ ಜಿಲ್ಲೆಯ `ಮಿರಿತಿ~ಗೆ ತಪ್ಪದೇ ಹೋಗುತ್ತಾರೆ. ಕಾಳಿ ಮಾತೆ ಆರಾಧಿಸುತ್ತಾರೆ.

ಕಟ್ಟಾ ಕುಟುಂಬ ಪ್ರೇಮಿಯಾದ ಪ್ರಣವ್‌ಗೆ ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ಸಮಯ ಸಿಗುತ್ತಿಲ್ಲ. ಅವರ ಪತ್ನಿ ಸುರ್ವಾ ಸಂಗೀತಗಾರ್ತಿ. ಮುಖರ್ಜಿ ದಂಪತಿಗೆ ಒಬ್ಬ ಮಗಳು ಹಾಗೂ ಇಬ್ಬರು ಪುತ್ರರು ಇದ್ದಾರೆ.ಪ್ರಣವ್ ಮುಖರ್ಜಿ ಇಲ್ಲದಿದ್ದಲ್ಲಿ ಯುಪಿಎ ಸರ್ಕಾರ ಒಂದು ದಿನವೂ ಅಧಿಕಾರದಲ್ಲಿ ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ ಮಾತು ಪ್ರಣವ್ ವ್ಯಕ್ತಿತ್ವ ಹಾಗೂ ಹಿರಿಮೆಗೆ ಕನ್ನಡಿ ಹಿಡಿಯುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT