ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲೊಬ್ಬ ಮಹಿಳೆ!

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಢಾಕಾ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದವರು ಅಭ್ಯಾಸ ನಡೆಸುವಾಗಲೆಲ್ಲಾ ಅಲ್ಲೊಬ್ಬ ಮಹಿಳೆ ಕ್ರೀಡಾಂಗಣದಲ್ಲಿ ಚುರುಕಿನಿಂದ ಅತ್ತಿಂದಿತ್ತ ಓಡಾಡುತ್ತಿರುವುದನ್ನು ಕಾಣಬಹುದು. ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರೊಂದಿಗೆ ಆ ಮಹಿಳೆ ಪದೇಪದೇ ಸಮಾಲೋಚನೆ ನಡೆಸುತ್ತಿರುತ್ತಾರೆ. ಪತ್ರಿಕಾಗೋಷ್ಠಿ ವೇಳೆ ನಾಯಕ ಗ್ರೇಮ್ ಸ್ಮಿತ್ ಪಕ್ಕ ನಿಂತಿರುತ್ತಾರೆ!

ಪುರುಷರ ತಂಡದಲ್ಲಿ ಆ ಮಹಿಳೆಗೇನು ಕೆಲಸ ಇರಬಹುದು ಅಂತೀರಾ? ಅವರು ದಕ್ಷಿಣ ಆಫ್ರಿಕಾ ತಂಡದ ಮಾಧ್ಯಮ ಮ್ಯಾನೇಜರ್ ಲೆರಾಟೊ ಮಾಲೆಕುಟು. ಆಕೆ 23ರ ಹರೆಯದ ಹೆಣ್ಣು ಮಗಳು. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಯಶಸ್ಸಿಗೆ ಲೆರಾಟೊ ಕೂಡ ಕಾರಣ.

ತುಂಬಾ ದಿನಗಳ ಕಾಲ ಕ್ರಿಕೆಟ್ ಆಡುತ್ತಾ ವಿದೇಶಿ ಪ್ರವಾಸದಲ್ಲಿರುವ ಪುರುಷರ ತಂಡಕ್ಕೆ ಮಹಿಳೆಯನ್ನು ಮಾಧ್ಯಮ ಮ್ಯಾನೇಜರ್ ಆಗಿ ನೇಮಿಸಿರುವುದು ಅಚ್ಚರಿ ಎನಿಸಬಹುದು. ಆದರೆ ಆ ಸವಾಲಿಗೆ ಎದೆಕೊಟ್ಟು ತಮ್ಮ ಸಾಮರ್ಥ್ಯದ ಮೂಲಕ ಲೆರಾಟೊ ಆಟಗಾರರು ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮನ ಗೆದ್ದಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸ್ಮಿತ್ ಪಡೆ ಕ್ವಾರ್ಟರ್ ಫೈನಲ್ ತಲುಪಿರುವುದು ಅವರ ಕೆಲಸವನ್ನು ಮತ್ತಷ್ಟು ಹೆಚ್ಚಿಸಿದೆ. ಈ ತಂಡ ಶುಕ್ರವಾರ ಮಿರ್‌ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಎದುರು ಆಡಲಿದೆ. ವಿಶೇಷವೆಂದರೆ ನ್ಯೂಜಿಲೆಂಡ್ ತಂಡದಲ್ಲಿ ಕೇಟ್ ಸ್ಟಾಕರ್ ಎಂಬ ಮಹಿಳಾ ಫಿಜಿಯೋ ಇದ್ದಾರೆ!

ಜೋಹಾನ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಲೆರಾಟೊ ಕ್ರಿಕೆಟ್‌ನ ಪರಮ ಅಭಿಮಾನಿ. ಸೆಪ್ಟೆಂಬರ್‌ನಲ್ಲಿ ಅವರು ತಂಡದ ಮಾಧ್ಯಮ ಮ್ಯಾನೇಜರ್ ಆಗಿ ನೇಮಕವಾಗಿದ್ದರು.

‘ಕ್ರಿಕೆಟ್ ನನ್ನ ಮೊದಲ ಪ್ರೀತಿ’ ಎನ್ನುವ ಲೆರಾಟೊ ಸೋಮವಾರ ಢಾಕಾದಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

* ಪುರುಷರ ತಂಡಕ್ಕೆ ಒಬ್ಬ ಮಹಿಳೆ ಮಾಧ್ಯಮ ಮ್ಯಾನೇಜರ್ ಆಗಿರುವುದು ಖಂಡಿತ ವಿಶೇಷ. ಈ ಅವಕಾಶ ಹೇಗೆ ಲಭಿಸಿತು?

ಕ್ರಿಕೆಟ್ ವರದಿಗಾರ್ತಿ ಆಗಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಪತ್ರಿಕೋದ್ಯಮ ಪದವಿಯ ಅಂತಿಮ ವರ್ಷದಲ್ಲಿದ್ದಾಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್‌ಎ) ಸಂಪರ್ಕ ವಿಭಾಗದಲ್ಲಿ ಇಂಟರ್ನ್‌ಷಿಪ್ ಮಾಡಿದ್ದೆ. ಬಳಿಕ ಅಲ್ಲಿಯೇ ಕೆಲಸ ಲಭಿಸಿತು. ಕ್ರಿಕೆಟ್ ಸುಧಾರಣಾ ಮಂಡಳಿಯ ಮಾಧ್ಯಮ ಅಧಿಕಾರಿಯಾಗಿದ್ದಾಗ ನಾನು ಒಳ್ಳೆಯ ಕಾರ್ಯಕ್ರಮ ರೂಪಿಸಿದ್ದೆ. ನನಗೆ ಈ ಅವಕಾಶ ಸಿಗಲು ಇದೇ ಕಾರಣ.

* ಮಾಧ್ಯಮ ಮ್ಯಾನೇಜರ್ ಕೆಲಸದ ಅನುಭವ ಹೇಗಿದೆ?

ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುವ ನನಗೆ ಈ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ತುಂಬಾ ಹತ್ತಿರದಿಂದ ಕ್ರಿಕೆಟ್ ಹಾಗೂ ಆಟಗಾರರನ್ನು ನೋಡುವ ಕನಸು ಈಡೇರಿದೆ. ಸಂದರ್ಶನ ಏರ್ಪಡಿಸುವುದು, ಪತ್ರಿಕಾಗೋಷ್ಠಿ ಆಯೋಜಿಸುವುದು ಹಾಗೂ ಮಾಧ್ಯಮಗಳಲ್ಲಿ ಆಟಗಾರರ ಬಗ್ಗೆ ಸಕಾರಾತ್ಮಕ ಅಂಶಗಳು ಬರುವಂತೆ ನೋಡಿಕೊಳ್ಳುವುದು ನನ್ನ ಕೆಲಸ.

* ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು?
ಇದೊಂದು ಪುರುಷ ಪ್ರಾಬಲ್ಯ ಇರುವ ಸಮಾಜ. ಅದರಲ್ಲಿ ನಾನು ಒಬ್ಬ ಮಹಿಳೆಯಾಗಿ, ಅದರಲ್ಲೂ ಕಪ್ಪು ವರ್ಣೀಯ ಹೆಣ್ಣು ಮಗಳಾಗಿ ತನ್ನದೇ ಆದ ಗೌರವ ಪಡೆಯುವುದು ಒಂದು ದೊಡ್ಡ ಸವಾಲು. ನಾನು ಅದರಲ್ಲಿ ಯಶಸ್ವಿಯಾಗಿದ್ದೇನೆ. ಈ ಕೆಲಸಕ್ಕೆ ಸಮರ್ಥ ವ್ಯಕ್ತಿ ಎಂದು ಕ್ರಿಕೆಟ್ ವಲಯ ನನ್ನನ್ನು ಗುರುತಿಸುತ್ತಿದೆ. ಪತ್ರಕರ್ತರು ಪದೇಪದೇ ಸಂದರ್ಶನಕ್ಕಾಗಿ ಕೋರುತ್ತಾರೆ. ಆಗ ಆಟಗಾರರನ್ನು ಒಪ್ಪಿಸಿ ಅದಕ್ಕೆ ಸಿದ್ಧಗೊಳಿಸುವುದು ಹಾಗೂ ವಿವಾದಗಳು ಎದ್ದಾಗ ಅದನ್ನು ಬಗೆಹರಿಸುವುದು ಕೂಡ ಒಂದು ಸವಾಲು.

* ಆಟಗಾರರು ನಿಮ್ಮ ಜೊತೆ ಯಾವ ರೀತಿ ವರ್ತಿಸುತ್ತಾರೆ?
ನನ್ನನ್ನು ಅವರು ಸಹೋದರಿಯಂತೆ ನೋಡಿಕೊಳ್ಳುತ್ತಾರೆ. ಸದಾ ತಮಾಷೆ ಮಾಡುತ್ತಿರುತ್ತಾರೆ. ಅವರ ಪತ್ನಿ ಹಾಗೂ ಗೆಳತಿಯರು ನನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುತ್ತಾರೆ. ಅವರೊಂದಿಗೆ ಸಿನಿಮಾ ಕೂಡ ವೀಕ್ಷಿಸುತ್ತೇನೆ.

* ದಕ್ಷಿಣ ಆಫ್ರಿಕಾ ಈ ಬಾರಿ ವಿಶ್ವಕಪ್ ಗೆಲ್ಲುತ್ತಾ?
ಇನ್ನೂ ಮೂರು ಪಂದ್ಯಗಳಿವೆ. ನಾವು ಈಗ ಕ್ವಾರ್ಟರ್ ಫೈನಲ್‌ನತ್ತ ಮಾತ್ರ ಗಮನ ಹರಿಸುತ್ತಿದ್ದೇವೆ. ಈಗ ನೀಡುತ್ತಿರುವ ಪ್ರದರ್ಶನ ಗಮನಿಸಿದರೆ ನಮ್ಮ ತಂಡ ಗೆಲ್ಲುವ ಭರವಸೆ ಇದೆ.

* ದಕ್ಷಿಣ ಆಫ್ರಿಕಾ ತಂಡ ‘ಚೋಕರ್ಸ್‌’ ಎಂಬ ಹಣೆಪಟ್ಟಿ ಹೊಂದಿರುವ ಬಗ್ಗೆ?

ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿರುವ ಭಾರತ ವಿರುದ್ಧದ ರೋಚಕ ಪಂದ್ಯದಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಹಿಂದೆ ಕೆಲ ಪಂದ್ಯಗಳಲ್ಲಿ ಕೊನೆ ಕ್ಷಣದಲ್ಲಿ ಎಡವಿದ್ದೇವೆ ಎಂದ ಮಾತ್ರಕ್ಕೆ ಅದು ಪ್ರತಿಬಾರಿ ಆಗಬೇಕು ಎಂದೇನಿಲ್ಲ. ಆಗ ಅದೃಷ್ಟ ನಮ್ಮ ಕಡೆ ಇರಲಿಲ್ಲ ಅಷ್ಟೆ.

* ಉಪಖಂಡದ ಕ್ರಿಕೆಟ್ ಕ್ರೇಜ್ ನಿಮ್ಮ ಕೆಲಸದ ಒತ್ತಡವನ್ನು ಹೆಚ್ಚಿಸಿದೆಯೇ?

ಖಂಡಿತ ನನಗೆ ಹೆಚ್ಚು ಕೆಲಸ ನೀಡಿದೆ. ಆದರೆ ಇದನ್ನು ನಾನು ಇಷ್ಟಪಡುತ್ತೇನೆ.

* ನೀವು ಕ್ರಿಕೆಟ್ ಆಡಿದ್ದೀರಾ?

ಹೌದು, ನಾನು ಆರಂಭದಲ್ಲಿ ಅಥ್ಲೀಟ್ ಆಗಿದ್ದೆ. ಆಮೇಲೆ ಕಾಲೇಜ್ ತಂಡದಲ್ಲಿ ಕ್ರಿಕೆಟ್ ಆಡಿದ್ದೇನೆ. ಲಿಂಪೊಪೊ ಪ್ರಾಂತ್ಯವನ್ನು ಪ್ರತಿನಿಧಿಸಿದ್ದೇನೆ. ನಾನು ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್. ತಪ್ಪದೇ ಪ್ರತಿ ದಿನ ಜಿಮ್‌ಗೆ ಹೋಗುತ್ತೇನೆ. ಲೆವೆಲ್-2 ಕೋಚಿಂಗ್ ಕೋರ್ಸ್ ಪಡೆಯುತ್ತಿದ್ದೇನೆ.

* ಪ್ರವಾಸದ ವೇಳೆ ತುಂಬಾ ದಿನಗಳ ಕಾಲ ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ, ಆಗ?

ತಂದೆ, ತಾಯಿ, ಒಬ್ಬ ಸಹೋದರ ಹಾಗೂ ಸಹೋದರಿ ಜೋಹಾನ್ಸ್‌ಬರ್ಗ್‌ನಲ್ಲಿದ್ದಾರೆ. ತುಂಬಾ ದಿನ ಅವರನ್ನು ಬಿಟ್ಟು ಇರಬೇಕಾಗುತ್ತದೆ ಎನ್ನುವುದು ಬೇಸರದ ವಿಚಾರವೇ. ಆದರೆ ಈಗ ಕ್ರಿಕೆಟ್ ತಂಡವೇ ನನ್ನ ಪಾಲಿನ ಕುಟುಂಬ ಎನಿಸಿದೆ.

* ದಕ್ಷಿಣ ಆಫ್ರಿಕಾ ತಂಡದ ಭವಿಷ್ಯದ ಬಗ್ಗೆ?

ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಆಗಬೇಕು ಹಾಗೂ ಕಪ್ಪು ವರ್ಣೀಯ ಆಟಗಾರರು ಹೆಚ್ಚು ಮಂದಿ ಈ ತಂಡದಲ್ಲಿ ಆಡಬೇಕು ಎನ್ನುವುದು ನನ್ನ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT