ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾಗೆ ಚಾಂಪಿಯನ್ ಪಟ್ಟ

ಏಷ್ಯಾ ಕಪ್ ಹಾಕಿ: ಫೈನಲ್‌ನಲ್ಲಿ ಎಡವಿದ ಭಾರತ ತಂಡ; ಪಾಕ್‌ಗೆ ಕಂಚು
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಪೋ (ಪಿಟಿಐ): ಎರಡನೇ ಅವಧಿಯಲ್ಲಿ ದಿಟ್ಟ ಆಟ ತೋರಿದರೂ ದಕ್ಷಿಣ ಕೊರಿಯಾ ಕೈಯಲ್ಲಿ ಸೋಲು ಅನುಭವಿಸಿದ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ `ರನ್ನರ್ ಅಪ್' ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದರಿಂದ ವಿಶ್ವಕಪ್ ಹಾಕಿ ಟೂರ್ನಿಗೆ ನೇರ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡಿತು.

ಸುಲ್ತಾನ್ ಅಜ್ಲಾನ್ ಷಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 4-3 ಗೋಲುಗಳ ರೋಚಕ ಗೆಲುವು ಪಡೆದ ಹಾಲಿ ಚಾಂಪಿಯನ್ ಕೊರಿಯಾ ಏಷ್ಯಾ ಕಪ್ ಗೆದ್ದುಕೊಂಡಿತು. ಇದರೊಂದಿಗೆ ನಾಲ್ಕನೇ ಬಾರಿ ಈ ಪ್ರತಿಷ್ಠಿತ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಮೂರನೇ ಬಾರಿ ಕಿರೀಟ ಜಯಿಸಬೇಕೆಂಬ ಭಾರತದ ಕನಸು ಭಗ್ನಗೊಂಡಿತು.

ಕಪ್ ಗೆಲ್ಲಲು ವಿಫಲವಾದರೂ ಭಾರತ ಮುಂಬರುವ ವಿಶ್ವಕಪ್‌ನಲ್ಲಿ ಆಡುವುದು ಖಚಿತ. ಆದರೆ ಅದಕ್ಕಾಗಿ ನವೆಂಬರ್‌ವರೆಗೆ ಕಾಯಬೇಕು. ಓಸೀನಿಯಾ ಕಪ್ ನವೆಂಬರ್‌ನಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ಈ ಟೂರ್ನಿಯಲ್ಲಿ ಗೆಲುವು ಪಡೆಯುವ ಸಾಧ್ಯತೆಯಿದೆ. ಆ ಬಳಿಕವಷ್ಟೇ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಹಾಲೆಂಡ್‌ನ ಹೇಗ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳ ಪಟ್ಟಿಯನ್ನು ಪ್ರಕಟಿಸಲಿದೆ.

ಕೊರಿಯಾ ಗೆದ್ದ ಕಾರಣ ಆತಿಥೇಯ ಮಲೇಷ್ಯಾ ತಂಡ ಕೂಡಾ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎಫ್‌ಐಎಚ್ ವಿಶ್ವ ಲೀಗ್ ಮೂಲಕ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.

ಭಾನುವಾರ ನಡೆದ ಪಂದ್ಯದ ಮೊದಲ ಅವಧಿಯಲ್ಲಿ ಭಾರತ 0-2 ಗೋಲುಗಳ ಹಿನ್ನಡೆಯಲ್ಲಿತ್ತು. ಜಂಗ್ ಜೊಂಗ್ ಹ್ಯೂನ್ ಮತ್ತು ಯೊ ಹ್ಯೊ ಸಿಕ್ ಅವರು ಕ್ರಮವಾಗಿ 28 ಹಾಗೂ 29ನೇ ನಿಮಿಷದಲ್ಲಿ ಗೋಲು ಗಳಿಸಿ ಕೊರಿಯಾ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಮೊದಲ ಅವಧಿಯಲ್ಲಿ ಭಾರತಕ್ಕೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತಾದರೂ, ಗೋಲು ಗಳಿಸಲು ವಿಫಲವಾಯಿತು.

ಆದರೆ ಎರಡನೇ ಅವಧಿಯಲ್ಲಿ ಭಾರತ ಚುರುಕಿನ ಪ್ರದರ್ಶನ ನೀಡಿತು. 48ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ರೂಪಿಂದರ್‌ಪಾಲ್ ಭಾರತಕ್ಕೆ ಮೊದಲ ಗೋಲು ಗಳಿಸಿದರು. ಇದಾದ ಆರು ನಿಮಿಷಗಳ ಬಳಿಕ ನಿಕ್ಕಿನ್ ತಿಮ್ಮಯ್ಯ ಚೆಂಡನ್ನು ಗುರಿ ಸೇರಿಸಿ 2-2 ರಲ್ಲಿ ಸಮಬಲಕ್ಕೆ ಕಾರಣರಾದರು. ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್‌ನಲ್ಲಿ ನಿಕ್ಕಿನ್ `ರಿವರ್ಸ್ ಹಿಟ್' ಮೂಲಕ ಚೆಂಡನ್ನು ಗುರಿ ಸೇರಿಸಿದ ರೀತಿ ಸೊಗಸಾಗಿತ್ತು.

57ನೇ ನಿಮಿಷದಲ್ಲಿ ಹ್ಯುನ್ ವೂ ಗೋಲು ಗಳಿಸಿದ ಕಾರಣ ಕೊರಿಯಾ (3-2) ಮತ್ತೆ ಮುನ್ನಡೆ ಪಡೆಯಿತು. ಭಾರತ ಕೂಡಾ ಪಟ್ಟುಬಿಡಲಿಲ್ಲ. ಮನ್‌ದೀಪ್ ಸಿಂಗ್ (64ನೇ ನಿಮಿಷ) ಗೋಲು ಗಳಿಸಿದ್ದರಿಂದ ಪಂದ್ಯದಲ್ಲಿ ಮತ್ತೆ ಸಮಬಲ (3-3) ಕಂಡುಬಂತು. ಈ ಹಂತದಲ್ಲಿ ಪಂದ್ಯ ಹೆಚ್ಚುವರಿ ಅವಧಿಗೆ ಮುಂದುವರಿಯಲಿದೆ ಎಂದೇ ಭಾವಿಸಲಾಗಿತ್ತು.

ಉಭಯ ತಂಡಗಳು ಗೆಲುವಿನ ಗೋಲಿಗಾಗಿ ಎಲ್ಲ ರೀತಿಯ ಪ್ರಯತ್ನ ನಡೆಸಿದ ಕಾರಣ ಅಂತಿಮ ನಿಮಿಷಗಳಲ್ಲಿ ಪಂದ್ಯದ ಕಾವು ಹೆಚ್ಚಿತು. ಪಂದ್ಯ ಕೊನೆಗೊಳ್ಳಲು ಕೇವಲ ಎರಡು ನಿಮಿಷಗಳಿರುವಾಗ ಕೊರಿಯಾಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಚೆಂಡನ್ನು ಗುರಿ ಸೇರಿಸಲು ಯಾವುದೇ ತಪ್ಪು ಮಾಡದ ಕಾಂಗ್ ಮೂನ್ ವೆಯೊನ್ ಗೆಲುವಿನ ರೂವಾರಿ ಎನಿಸಿದರು.

ಸರ್ದಾರ್ ಸಿಂಗ್ ನೇತೃತ್ವದ ಭಾರತ ಲೀಗ್ ಹಂತದಲ್ಲಿ ಇದೇ ತಂಡದ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿತ್ತು. ಕೊರಿಯಾ ಕಪ್ ಗೆಲ್ಲುವ ಜೊತೆಗೆ ಲೀಗ್ ಹಂತದಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸುವಲ್ಲೂ ಯಶ ಕಂಡಿತು. ಭಾರತದ ಪಿ.ಆರ್. ಶ್ರೀಜೇಶ್ `ಟೂರ್ನಿಯ ಶ್ರೇಷ್ಠ ಗೋಲ್‌ಕೀಪರ್' ಪ್ರಶಸ್ತಿ ಪಡೆದರೆ, ವಿ.ಆರ್. ರಘುನಾಥ್ `ಅತ್ಯಂತ ಬೆಲೆಯುಳ್ಳ ಆಟಗಾರ' ಎನಿಸಿಕೊಂಡರು.
ಪಾಕಿಸ್ತಾನಕ್ಕೆ ಕಂಚು: ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಪಾಕಿಸ್ತಾನ ತಂಡ ಕಂಚಿನ ಪದಕ ಗೆದ್ದುಕೊಂಡಿತು.

ಅಬ್ದುಲ್ ಹಸೀಮ್ ಖಾನ್ (35 ಮತ್ತು 56ನೇ ನಿಮಿಷ) ಹಾಗೂ ಮೊಹಮ್ಮದ್ ಇಮ್ರಾನ್ (54) ಅವರು ಪಾಕ್ ತಂಡಕ್ಕೆ ಗೋಲು ತಂದಿತ್ತರೆ, ಆತಿಥೇಯ ತಂಡದ ಏಕೈಕ ಗೋಲನ್ನು ಫೈಜಲ್ ಸಾರಿ (34) ಗಳಿಸಿದರು. ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದ ಕಾರಣ ಪಾಕಿಸ್ತಾನ ತಂಡ ಮುಂಬರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT