ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಚಿರಾಪುಂಜಿಯ ಹನಿ ಹನಿಯೂ ಘಾಟಿ

Last Updated 9 ಜೂನ್ 2011, 8:45 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಚಿರಾಪುಂಜಿ ಎಂಬ ಖ್ಯಾತಿ ಹೊಂದಿರುವ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ತನ್ನ ಸಹಜ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿನ ನಿತ್ಯಹರಿದ್ವರ್ಣ ಕಾಡು ಎಂಥಹವರನ್ನೂ ಒಂದು ಕ್ಷಣ ನಿಂತು ಸೌಂದರ್ಯವನ್ನು ಸವಿಯುವಂತೆ ಮಾಡಬಲ್ಲದು!

ಸಮುದ್ರಮಟ್ಟದಿಂದ 850 ಮೀಟರ್ ಎತ್ತರ ಹೊಂದಿರುವ ಆಗುಂಬೆ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶ. ಮೈಗೆ ತಾಕಿ ಜಾರುವ ಮಂಜು ಆಹ್ಲಾದಕರ ವಾತಾವರಣದಿಂದಾಗಿ ಸ್ವರ್ಗದ ಸೊಬಗನ್ನು ಸೃಷ್ಟಿಸುತ್ತದೆ.

ವರ್ಷದ ಎಲ್ಲಾ ದಿನಗಳಲ್ಲಿಯೂ ಇಲ್ಲಿನ ಸೂರ್ಯಾಸ್ತಮಾನ ದೃಶ್ಯದ ಸೊಬಗನ್ನು ಪ್ರವಾಸಿಗರು ಸವಿಯುತ್ತಾರೆ. ಇಂಥಹ ಆಗುಂಬೆ ತನ್ನ ದಟ್ಟ ಕಾಡಿನ ಗರ್ಭದೊಳಗೆ ಅದೆಷ್ಟೋ ನಗ್ನ ಸತ್ಯಗಳನ್ನು ಬಚ್ಚಿಟ್ಟುಕೊಂಡು ಪ್ರತಿ ಕ್ಷಣವೂ ವಿಸ್ಮಯ ಹುಟ್ಟಿಸುವಂತೆ ಮಾಡಬಲ್ಲದು.

ಸುತ್ತಲೂ ಹಸಿರು
ಉಷ್ಣವಲಯದ ನಿತ್ಯಹರಿದ್ವರ್ಣ ಕಾಡನ್ನು ಹೊಂದಿರುವ ಆಗುಂಬೆಯ ಪಶ್ಚಿಮ ಘಟ್ಟದಲ್ಲಿ ಕನಿಷ್ಠ 4 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 28ರಿಂದ 32 ಡಿಗ್ರಿ ಸೆಲ್ಸಿಯಸ್ ಹವಾಮಾನ ಹೊಂದಿದೆ. ದಟ್ಟವಾದ ಅರಣ್ಯದಲ್ಲಿ ಸಿಂಗಳೀಕ, ಕೊಂಬುಕೊಕ್ಕಿನ ಹಕ್ಕಿ, ಕಾಳಿಂಗ ಸರ್ಪಗಳು, ಹುಲಿ, ಕಪ್ಪು ಚುಕ್ಕೆಚಿರತೆ ಸೇರಿದಂತೆ ಕಡವೆ, ಜಿಂಕೆ, ಕಾಡುಕೋಣ, ಕಾಡುಹಂದಿ, ವಿವಿಧ ಜಾತಿಯ ಪಕ್ಷಿಗಳು, ಜೇನುಗಳಿಂದ ತುಂಬಿದೆ.

ವರ್ಷದ ಎಲ್ಲಾ ಋತುಮಾನಗಳಲ್ಲಿಯೂ ಹಿತವಾದ ವಾತಾವರಣ ನಿರ್ಮಾಣವಾಗುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳನ್ನು ಇಲ್ಲಿನ ಜನರು ಬಳಸಿಕೊಳ್ಳುತ್ತಾರೆ.

ಸುವರ್ಣ ಗ್ರಾಮ
ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಆಗುಂಬೆ ಗ್ರಾಮ ಪಂಚಾಯ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮದ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ರಸ್ತೆ ಮಾರ್ಗ ಸೂಚಿಗಳನ್ನು ಹಾಕಲಾಗಿದ್ದು, ಗ್ರಾಮ ಅಭಿವೃದ್ಧಿಯ ದಿಕ್ಕಿನಲ್ಲಿದೆ ಎಂಬ ಅಭಿಪ್ರಾಯವನ್ನು ಹಲವು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.

ಪುರಾತನ ದೇವಸ್ಥಾನ
ಇಲ್ಲಿನ ಪ್ರಸಿದ್ಧ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ದೇವರು ಕುಂದಾದ್ರಿ ಸಮೀಪ ನಾಬಳದ ಮುಚುಕುಂದಾಶ್ರಮ ಎಂಬಲ್ಲಿತ್ತು. ಆಗ ಈ ಪ್ರದೇಶ ಜೈನರ ಆಳ್ವಿಕೆಯಲ್ಲಿದ್ದು, ಇಲ್ಲಿರುವ ದೇವರನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ನಿರ್ಧಾರದಿಂದಾಗಿ ದಕ್ಷಿಣ ಕನ್ನಡದ ಹೆಬ್ರಿ ಕಾಡಿನಲ್ಲಿ ಹಾಕಲಾಯ್ತು ಎಂಬ ಕಥೆ ಇದೆ. 

 ನಾಬಳ ಹೆಗ್ಡೆ ಮನೆತನದ ಒಬ್ಬರಿಗೆ ಈ ದೇವರಿಗೆ ಒಂದು ನೆಲೆ ಕಾಣಿಸುವಂತೆ ಸ್ವಪ್ನ ಬಿದ್ದಿದ್ದರಿಂದ ಆ ದೇವರನ್ನು ತೆಗೆದುಕೊಂಡು ಹೋಗುತ್ತಿರುವಾಗ ಕತ್ತಲಾದ ಕಾರಣ ಅದು ಆಗುಂಬೆಯಲ್ಲಿನ ಪರಿಸರ ಚನ್ನಾಗಿದೆ, ನಾನು ಇಲ್ಲಿಯೇ ನೆಲೆ ನಿಲ್ಲುತ್ತೇನೆ ಎಂದು ದೇವರು ಬಯಸಿದ್ದರಿಂದ ಆಗುಂಬೆಯಲ್ಲಿ ನೆಲೆ ನಿಲ್ಲಿಸಿ ಪ್ರತಿಷ್ಠಾಪಿಸಲಾಯಿತು ಎಂಬ ಪ್ರತೀತಿ ಇದೆ ಎಂದು ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿಭಟ್ ಹೇಳುತ್ತಾರೆ.
ಸಂಜೀವಿನಿ ವನ
ಪ್ರಪಂಚದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಆಗುಂಬೆಯಲ್ಲಿನ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ವನಮೂಲಿಕಾ ಔಷಧಿ ಸಸ್ಯಗಳಿರುವ ಪ್ರದೇಶವೆಂದು ಘೋಷಣೆ ಮಾಡಿದ್ದು ಈ ಪ್ರದೇಶವನ್ನು ಸಂರಕ್ಷಿಸಿ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ವನದಲ್ಲಿ ಬಲಿಗೆ ಬಳ್ಳಿ, ಅಮೃತಬಳ್ಳಿ, ಕೀಟಹಾರಿ ಸಸ್ಯ, ದುರ್ವಾಸನೆ ಮರ, ಧೂಮ, ಮಾಕಾಳಿ ಬೇರು, ಸೀತಾ ಅಶೋಕ, ಏಕನಾಯಕನ ಬೇರು, ಕಲ್ಯಾಣ ಸೌಗಂಧಿ, ರಾಮಡಿಕೆ, ಭೂಧಗನ್ನಿ, ಕಾಡುಹಂಬು ತಾವರೆ, ಮುಳ್ಳುಮುತ್ತಗ, ನಾಗದಂತಿ, ಕಾಡುಜಾಯಿಕಾಯಿ, ಬಿಲ್ವಪತ್ರೆ, ನೀರಿಚುಂಗ, ನಾಯಿಹಲಸು, ಮರದರಿಸಿನಿ, ಚಂದ್ರಕಾಂತಿ ಬಳ್ಳಿ, ಹರಳೀಬಳ್ಳಿ, ಕಾಡುಸುವರ್ಣ, ಗಂಗೂಚಿಬಳ್ಳಿ, ದೊಡ್ಡೀಶ್ವರಿ, ಅರಸಿನ ಬಳ್ಳಿ, ಕರಿಕುಮಾರ್ ಸೇರಿದಂತೆ 460ಕ್ಕೂ ಹೆಚ್ಚಿನ ಔಷಧಿ ಸಸ್ಯರಾಶಿ ಇದೆ.

ಪ್ರವಾಸಿ ತಾಣ
ಆಗುಂಬೆಯ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಇವುಗಳಲ್ಲಿ ಬರ್ಕಣ, ಒನಕೆಬ್ಬಿ, ಜೋಗಿಗುಂಡಿ, ನಿಸಾನೆಗುಡ್ಡ ಸೇರಿದಂತೆ ಅನೇಕ ಪ್ರದೇಶಗಳು ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದ ನೆನೆಪುಗಳನ್ನು ಮೂಡಿಸುತ್ತವೆ.

ಈ ಪ್ರದೇಶಗಳಿಗೆ ಹೋಗಲು ಅಲ್ಲಿನ ಸೌಂದರ್ಯ ಸವಿಯಲು ನಕ್ಸಲ್‌ಪೀಡಿತ ಪ್ರದೇಶವೆಂದು ಘೋಷಿಸಿದ ಮೇಲೆ ತೊಡಕಾಗಿದೆ.

ಮಾಸದ ಮಾಲ್ಗುಡಿ ಡೇಸ್
ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ಕೃತಿಯನ್ನು ಆಧರಿಸಿ ಟಿವಿ ಧಾರಾವಾಹಿಯನ್ನು ನಟ ಹಾಗೂ ನಿರ್ದೇಶಕ ದಿವಂಗತ ಶಂಕರ್‌ನಾಗ್ ಆಗುಂಬೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಿದ್ದರು. ಇಂದಿಗೂ ಆ ದಿನಗಳನ್ನು ಇಲ್ಲಿನ ಜನರು ನೆನಪಿಸುತ್ತಾರೆ. ಆ ನಂತರ ವರ ನಟ ಡಾ.ರಾಜ್‌ಕುಮಾರ್ ಚಿತ್ರಗಳಿಂದ ಹಿಡಿದು ಅನೇಕ ಚಿತ್ರಗಳ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.

ಮೂಲ ನಿವಾಸಿಗರಿಗೆ ನೆಲೆ ಇಲ್ಲ: ಆಗುಂಬೆಯ ಕಾಡುಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಮೂಲ ನಿವಾಸಿಗರಿಗೆ ಇಂದು ಈ ಪ್ರದೇಶ ನಿಷೇಧಿತ ಪ್ರದೇಶವಾದ್ದರಿಂದ ಆ ಸಮುದಾಯ ನೆಲೆ ಕಳೆದುಕೊಂಡಿದೆ.
ಇಲ್ಲಿನ ಕಾಡಿನಲ್ಲಿ ಸಿಗುತ್ತಿದ್ದ ಬೆತ್ತ, ವಾಟೆ, ಬಳ್ಳಿಗಳನ್ನು ಬಳಸಿ ಬುಟ್ಟಿ ತಟ್ಟೆ ಮಾಡುತ್ತಿದ್ದ ಮೂಲ ನಿವಾಸಿಗರು ಅರಣ್ಯ ಇಲಾಖೆಯ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ನೆಲೆ ಕಳೆದುಕೊಂಡಿದ್ದಾರೆ. ತಮ್ಮ ಮೂಲ ಕಸುಬನ್ನು ಬಿಟ್ಟು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಕೆರೆ ಅಭಿವೃದ್ಧಿ
ವಿಶ್ವದ ಗಮನ ಸೆಳೆಯಬಲ್ಲ ಆಗುಂಬೆ ಘಾಟಿಯ ಸಮೀಪ ಅರಣ್ಯ ಇಲಾಖೆ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಗ್ರಾಮಾರಣ್ಯ ಸಮಿತಿ ವತಿಯಿಂದ ಹಾಳುಬಿದ್ದ ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದೆ. ಸುತ್ತಲೂ ಆಕರ್ಷಕ ಹೂತೋಟ ಬೆಳೆಸಿದೆ.

ನಕ್ಸ್‌ಲ್ ಚಟುವಟಿಕೆಯ ಪ್ರದೇಶವಾದ್ದರಿಂದ ಪ್ರವಾಸಿಗರು ಮುಕ್ತವಾಗಿ ಇಲ್ಲಿನ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಆಗುಂಬೆ ವ್ಯಾಪ್ತಿಗೆ ನವೀಕರಿಸಿದ ಉನ್ನತ ದರ್ಜೆಯ ಪೊಲೀಸ್ ಠಾಣೆಯನ್ನು ಆರಂಭಿಸಲಾಗಿದೆ. ನಕ್ಸ್‌ಲ್ ನಿಗ್ರಹ ದಳದ ಸಿಬ್ಬಂದಿಗಳ ಓಡಾಟ ಹೆಚ್ಚಿದೆ.

 ಈ ನಡುವೆ ಆರು ವರ್ಷಗಳ ಹಿಂದೆ ಇಲ್ಲಿ ಆರಂಭಗೊಂಡ ಮಳೆಕಾಡು ಸಂಶೋಧನಾಕೇಂದ್ರ ಕಾಳಿಂಗ ಸರ್ಪಗಳ ಕುರಿತು ಅಧ್ಯಯನ, ಸಂಶೋಧನೆ ಕೈಗೊಂಡಿದೆ. ನವೀಕರಿಸಿದ ಪ್ರವಾಸಿಮಂದಿರ, ಬಸ್‌ನಿಲ್ದಾಣ ಆಗುಂಬೆ ಸೊಬಗನ್ನು ಹೆಚ್ಚಿಸಿದೆಯಾದರೂ ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ಕಟ್ಟಿಸಿದ ಬೃಹತ್ ಛತ್ರ ಶಿಥಿಲಾವಸ್ಥೆ ತಲುಪಿದ್ದು ಅದಕ್ಕೆ ಹೊದಿಸಿದ್ದ ಹೆಂಚು, ಬಾಗಿಲು, ಕಿಟಕಿ ಕಣ್ಮರೆಯಾಗಿವೆ.

ವೇಣುಗೋಪಾಲಸ್ವಾಮಿ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT