ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣಾದಿಗೆ ಒಗ್ಗಿದ ಡ್ರಮ್ಸ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಪಾಶ್ಚಾತ್ಯ ಜಾಸ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಡಬ ಡಬ ಬಡಿಯುವ ಒಂದು ದೊಡ್ಡ ವಾದ್ಯವನ್ನು ನೀವು ನೋಡಿರಬಹುದು. ಜೋರಾಗಿ ನಾದ ಬರುವ ಈ ವಾದ್ಯ ವಿದೇಶಿ ಮೂಲದ ಡ್ರಮ್ಸ. ಆದರೆ ಡ್ರಮ್ಸ ಇದೀಗ ದಕ್ಷಿಣಾದಿ ಸಂಗೀತಕ್ಕೂ ಚೆನ್ನಾಗಿ ಒಗ್ಗಿಕೊಂಡಿದೆ, ಕರ್ನಾಟಕ ಸಂಗೀತದಲ್ಲಿ ಉತ್ತಮ ಲಯ ನೀಡಿ ಉಪ ಪಕ್ಕವಾದ್ಯವಾಗಿ ಸಹಕರಿಸುತ್ತಿದೆ. ಇದರಲ್ಲಿ ಸುಳಾದಿ ಸಪ್ತತಾಳ ಸೇರಿದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ತಾಳಗಳಿಗೆ ಅಳವಡಿಸಿ ನುಡಿಸಿದಾಗ ಅದರ ಲಯದ ಅಲೆ ಕೇಳಲು ಬಹು ಸೊಗಸು.

ದಕ್ಷಿಣಾದಿ ಕಂಪು
`ಡ್ರಮ್ಸನ ನಾದ ಜೋರು. ಇದು ನಮ್ಮ ಸಂಗೀತಕ್ಕೆ ಹೊಂದಾಣಿಕೆಯಾಗದು ಎಂಬ ಅಭಿಪ್ರಾಯವಿತ್ತು. ಕರ್ನಾಟಕ ಸಂಗೀತಕ್ಕೆ ಪಕ್ಕವಾದ್ಯಗಳಾದ ಮೃದಂಗ, ಘಟಂ, ಖಂಜೀರ, ಮೋರ್ಚಿಂಗ್‌ಗಳಂತೆ ಡ್ರಮ್ಸನಲ್ಲೂ ಲಯದ ನಾದ ಹೊರಡಿಸಬಹುದು; ಪ್ರಯೋಗ ಮಾಡುವುದರಲ್ಲಿ ಏನು ತಪ್ಪು ಎನ್ನುತ್ತಲೇ ಡ್ರಮ್ಸನ್ನು ದಕ್ಷಿಣಾದಿ ಸಂಗೀತದ ಲಯವಾದ್ಯವಾಗಿ ಪರಿವರ್ತಿಸಿದೆ...~ ಡ್ರಮ್ಸನಲ್ಲಿ ದಕ್ಷಿಣಾದಿ ಸಂಗೀತದ ಲಯ ನುಡಿಸುವ ಅಪರೂಪದ ಡ್ರಮ್ಸ ವಾದಕ ಬಿ.ಎಸ್. ಅರುಣ್ ಕುಮಾರ್ ಹೇಳುತ್ತಾ ಹೋದರು.

`ಡ್ರಮ್ಸನಲ್ಲಿ ಪ್ರಯೋಗ ಮಾಡಬೇಕು ಎನ್ನುವುದು ನನ್ನ ತಂದೆ ಬಿ.ಎಸ್. ಸುಕುಮಾರ್ ಅವರ ಕನಸು. ಡ್ರಮ್ಸ ಬಗ್ಗೆ ಆಸಕ್ತಿ ಇದ್ದ ಅವರು, ನಾನು ಇದರಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಇಚ್ಛೆ ಪಟ್ಟರು. ಹೀಗಾಗಿ ನನ್ನನ್ನು ಮೊದಲು ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ಬಳಿ ಮೃದಂಗಕ್ಕೆ ಸೇರಿಸಿದರು. ಆಗ ದೇವಸ್ಥಾನಗಳಲ್ಲಿ ಮೃದಂಗ ನುಡಿಸುತ್ತಾ ಇದ್ದೆ. ನಂತರ ಡ್ರಮ್ಸ ಕಡೆಗೆ ಮನಸ್ಸು ವಾಲಿತು. ಯಾರೂ ಮಾಡದೇ ಇರುವುದನ್ನು ಮಾಡಬೇಕು ಎನಿಸಿ ಶಿವಮಣಿ, ರಂಜಿತ್ ಬ್ಯಾರಟ್ ಅವರ ಬಳಿ ಡ್ರಮ್ಸ ಕಲಿಯಲಾರಂಭಿಸಿದೆ. ಅವರು ಡ್ರಮ್ಸನಲ್ಲಿ ಪಾಶ್ಚಾತ್ಯ ಜಾಸ್ ನುಡಿಸುತ್ತಾ ಇದ್ದರು. ಸುಮಾರು 10-15 ವರ್ಷಗಳ ಹಿಂದೆ ಡ್ರಮ್ಸನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದೆ. ದಕ್ಷಿಣಾದಿಯ ಪಕ್ಕವಾದ್ಯಗಳಾದ ಮೃದಂಗ, ಘಟ, ಖಂಜೀರ ಗಾಯಕರ ಜತೆ ಹೇಗೆ ಹೊಂದುತ್ತದೋ, ಅದೇ ತರ ಡ್ರಮ್ಸ ನುಡಿಸಲು ಶುರು ಮಾಡಿದೆ~ ಎನ್ನುತ್ತಾರೆ ವಿದ್ವಾನ್ ಅರುಣ್.

ಈ ವಾದ್ಯವನ್ನು ದಕ್ಷಿಣಾದಿ ಸಂಗೀತಕ್ಕೆ ಒಗ್ಗಿಸುವ ಸವಾಲನ್ನು ಅವರು ತೆರೆದಿಡುವುದು ಹೀಗೆ: `ಡ್ರಮ್ಸನಲ್ಲಿ ಕರ್ನಾಟಕ ಸಂಗೀತದ ತಾಳಗಳಾದ ಅಟ್ಟತಾಳ, ಮಿಶ್ರಛಾಪು, ಖಂಡ ಛಾಪು ಮುಂತಾದ ಕ್ಲಿಷ್ಟಕರ ತಾಳಗಳನ್ನು ಹೊಂದಾಣಿಕೆ ಮಾಡಿ ನುಡಿಸುವುದು ಕಷ್ಟ. ಆದರೆ ಸತತ ಅಭ್ಯಾಸದಿಂದ ಇದನ್ನು ರೂಢಿಸಿಕೊಂಡೆ. ಕದ್ರಿಗೋಪಾಲನಾಥ್ ಅವರ ಸ್ಯಾಕ್ಸೊಫೋನ್, ಗಣೇಶ್ ಕುಮರೇಶ್ ಗಾಯನ, ಎಂ.ಎಸ್.ಶೀಲಾ ಗಾಯನ ಕಛೇರಿಗಳಿಗೆ ಡ್ರಮ್ಸನ್ನು ಉಪ ಪಕ್ಕವಾದ್ಯವಾಗಿ ನುಡಿಸಿದ್ದೇನೆ. ಆರಂಭದಲ್ಲಿ ಇದು ನಮ್ಮ ಸಂಗೀತಕ್ಕೆ ಸರಿಹೊಂದೊಲ್ಲ ಎಂದವರು ಈಗ ಪ್ರಶಂಸಿಸಲು ಆರಂಭಿಸಿದ್ದಾರೆ.

ಕರ್ನಾಟಕ ಸಂಗೀತದಲ್ಲಿ ತಾಳ, ನಡೆ, ಗತಿ, ಲೆಕ್ಕಾಚಾರ ಇವೆಲ್ಲ ಮುಖ್ಯ. ಡ್ರಮ್ಸ ನುಡಿಸಲು ವಿಶೇಷ ಕೌಶಲ ಬೇಕು. ತಂತಿವಾದ್ಯ ವೀಣೆಗೆ ಸಾಥ್ ನೀಡುವಾಗ ಬೇರೆ ರೀತಿಯಲ್ಲಿ ಡ್ರಮ್ಸ ನುಡಿಸಬೇಕು. ಗಾಯನಕ್ಕೆ ಉಪಪಕ್ಕವಾದ್ಯವಾದಾಗ ನುಡಿಸಾಣಿಕೆಯ ವೈವಿಧ್ಯ ಬೇರೆಯದಾಗಿರಬೇಕು. ಆದರೆ ಮೃದಂಗ ಲಯದಂತೆಯೇ ಡ್ರಮ್ಸನಲ್ಲೂ ಲಯದ ಅಲೆ ಹೊರಡಿಸಲು ಸಾಧ್ಯವಾಗಿದೆ~.

ವಿದೇಶಗಳಲ್ಲಿ ಮಾತ್ರವಲ್ಲದೆ ನಮ್ಮಲ್ಲಿ ಕೂಡ ಇಂದು ಡ್ರಮ್ಸ ಇಲ್ಲದೆ ಆರ್ಕೆಸ್ಟ್ರಾ ನಡೆಯುವುದೇ ಇಲ್ಲ. ವಿಶಿಷ್ಟ ನಾದ ಹೊಮ್ಮಿಸುವ ಡ್ರಮ್ಸ ಈಗ ದೇಸಿ ಸಂಗೀತವನ್ನೂ ಒಲಿಸಿಕೊಂಡಿದೆ.

ಇಲ್ಲೆಲ್ಲಾ ಸಿಗುತ್ತದೆ...
ಎಲ್ಲ ಸಂಗೀತ ಪರಿಕರಗಳ ಅಂಗಡಿಗಳಲ್ಲಿ ಡ್ರಮ್ಸ ಸಿಗುತ್ತದೆ. ಬಸವನಗುಡಿಯಲ್ಲಿರುವ ಗಣೇಶ್ ಮ್ಯೂಸಿಕಲ್ಸ್ (080- 22201402), ಜೆಸಿ ರಸ್ತೆಯಲ್ಲಿ ರಾಜೀವ್ ಡಿಸ್ಟ್ರಿಬ್ಯೂಟರ್ಸ್‌ (080- 22918021), ಚಿಕ್ಕಪೇಟೆಯಲ್ಲಿ ಭಾರತ್ ಹಾರ್ಮೋನಿಯಂ ವರ್ಕ್ಸ್ (080- 22872627), ಕಮ್ಮನಹಳ್ಳಿಯ ಆರ್‌ಎಸ್ ಪಾಳ್ಯದಲ್ಲಿ `ರಾಗ್ ಮ್ಯೂಸಿಕಲ್ಸ್~ (080-66492495) ಮತ್ತು ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ ನ್ಯೂ (9341214105) ಬೆಲೆ ಸುಮಾರು 15 ಸಾವಿರ ರೂಪಾಯಿಗಳಿಂದ ಆರಂಭ.

ಡ್ರಮ್ಸನಲ್ಲಿ ಕರ್ನಾಟಕ ಸಂಗೀತ ಲಯವಾದ್ಯ ಕಲಿಯುವ ಆಸಕ್ತಿ ಇರುವವರು ಬಿ.ಎಸ್. ಅರುಣ್‌ಕುಮಾರ್ ಅವರನ್ನು 9845401566ರಲ್ಲಿ ಸಂಪರ್ಕಿಸಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT