ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡದಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಹೆವಿ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ತೆರವುಗೊಳಿಸಲು ಆಗ್ರಹ
Last Updated 6 ಆಗಸ್ಟ್ 2013, 6:49 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ದಡದಹಳ್ಳಿ ಗ್ರಾಮದ ಮಧ್ಯಭಾಗದಿಂದ ಹಾದುಹೋಗಿರುವ ಹೆವಿ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಪ್ರತಿಭಟನೆಯನ್ನು ಆರಂಭಿಸಿದ ಗ್ರಾಮಸ್ಥರು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ತಮ್ಮ ಗ್ರಾಮದ ಮಧ್ಯಭಾಗದಲ್ಲಿ ಎಕ್ಸಪ್ರೆಸ್‌ಹೆವಿ  ವಿದ್ಯುತ್ ಮಾರ್ಗ ಹಾದುಹೋಗಲು ಸೆಸ್ಕ್‌ನಿಂದ ನೀಡಿರುವ ಪರವಾನಗಿ ವಾಪಸ್ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರು ಶನಿವಾರ ಮನವಿ ಮಾಡಿದ್ದರು.

ಅಂತೆಯೆ, ಅವರು ಸಹ ವಿದ್ಯುತ್ ಮಾರ್ಗ ರದ್ದತಿ ಸಂಬಂಧ ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಗ್ರಾಮದಲ್ಲಿ ಹೆವಿ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ಹಾದುಹೋಗಿದೆ. ವಿದ್ಯುತ್ ಮಾರ್ಗ ಅಳವಡಿಸುವ ಆತುರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಬೇಡ್ಕರ್ ಅವರ ಭಾವಚಿತ್ರವಿರುವ ಫಲಕದ ಮೇಲೆ ಮರದ ಕೊಂಬೆಗಳನ್ನು ಕಡಿದು ಹಾಕಿದ್ದು ನಾಮ ಫಲಕವನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದರು.

ಕೃಷಿ ಭೂಮಿಗೆ ಯೋಗ್ಯವಾದ ಸ್ಥಳದಲ್ಲಿ ಕರಿಕಲ್ಲು ಕಾರ್ಖಾನೆ ಸ್ಥಾಪನೆ ಆಗುತ್ತಿದೆ. ಈ ಸ್ಥಳ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಒಳಪಟ್ಟಿದೆ. ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆ, ಪರಿಶಿಷ್ಟರ ಬೀದಿ, ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್, ತೊಂಬೆಗಳು, ಸಮುದಾಯ ಭವನದ ಮೆಲೆ ವಿದ್ಯುತ್ ಮಾರ್ಗ ಹಾದುಹೋಗಿದೆ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ, ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಮಾರ್ಗ ತೆರವುಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನ ದೇವರಾಜಪುರ ಸಮೀಪ  ಇರುವ ಕರಿಕಲ್ಲು ಕಾರ್ಖಾನೆಗೆ ಹೆವಿ  ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಸಲಾಗುತ್ತಿದೆ. ಉದ್ಯಮಿಯೊಬ್ಬರಿಗೆ ಅನುಕೂಲ ಕಲ್ಪಿಸಲು ಸೆಸ್ಕ್ ಅಧಿಕಾರಿಗಳು ವಿದ್ಯುತ್ ಮಾರ್ಗ ಹಾದು ಹೋಗಲು ಅನುಮತಿ ನೀಡಿದ್ದಾರೆ. ಕೆಲ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ನಿರ್ಲಕ್ಷ್ಯಿಸಿರುವ ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, `ವಿದ್ಯುತ್ ಮಾರ್ಗ ರದ್ದತಿ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕೆ. ಕುಮಾರ್, ಪರ್ವತ್‌ರಾಜ್, ಮಹದೇವಸ್ವಾಮಿ, ಶೇಷಣ್ಣ, ಶಿವಕುಮಾರ್, ಗೋವಿಂದರಾಜು, ನಂಜುಂಡೇಗೌಡ, ಪ್ರಭಾಕರ್,  ಶಂಕರ್, ಉಮೇಶ್, ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT