ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವರಿಯದ ನಾಯಕ ಸತ್ಯಪಾಲ್ ಡಂಗ್

ವ್ಯಕ್ತಿ ಸ್ಮರಣೆ
Last Updated 27 ಜುಲೈ 2013, 16:56 IST
ಅಕ್ಷರ ಗಾತ್ರ

ಭಾರತದ ಕಮ್ಯುನಿಸ್ಟ್ ಹೋರಾಟಗಾರರಲ್ಲಿ ಹೆಚ್ಚು ಕಾಲ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಹೋರಾಟಕ್ಕೆ ಅರ್ಪಿಸಿಕೊಂಡ ದಣಿವರಿಯದ ನಾಯಕರಲ್ಲಿ ಸತ್ಯಪಾಲ್ ಡಂಗ್ ಪ್ರಮುಖರು. 93 ವರ್ಷದ ಡಾಂಗೆ ಅವರು ಜೂನ್ 15ರಂದು ರಾತ್ರಿ ಕೊನೆಯುಸಿರೆಳೆವ ಮೂಲಕ ಪಂಜಾಬಿನ ಎಡಪಂಥೀಯ ಕಿಡಿಯೊಂದು ನಂದಿದಂತಾಯಿತು. ಹೋರಾಟದ ಜ್ವಾಲೆಯೊಂದು ತಣ್ಣಗಾದಂತಾಗಿದೆ. ಸತ್ಯಪಾಲ್ ಅವರ ಜೀವನದ ಕಥೆಯೆಂದರೆ ಅದು ಕಾರ್ಮಿಕರ ಹೋರಾಟ ಮತ್ತು ಸಿಪಿಐ ಪಕ್ಷದ ಸಂಘಟನೆಯ ಕಥೆಯೇ ಆಗಿದೆ.

ಈಗ ಪಾಕಿಸ್ತಾನ ಸೇರಿರುವ ಗುಜ್ರಾನ್ವಾಲ ಜಿಲ್ಲೆಯ ಪುಟ್ಟ ಊರು ರಾಮ್‌ನಗರದ ಭೂಮಾಲೀಕ ಕುಟುಂಬದಲ್ಲಿ 1920ರಲ್ಲಿ ಡಾಂಗೆ ಜನಿಸಿದರು. ತಂದೆ ವೈದ್ಯರಾಗಿದ್ದರು. ಲಾಹೋರ್‌ನಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮಾಡಿದರು. ಲಾಹೋರ್‌ನ ಕಾಲೇಜ್ ದಿನಗಳಲ್ಲಿಯೇ ಸತ್ಯಪಾಲ್ ವಿದ್ಯಾರ್ಥಿಗಳ ನಾಯಕನಾಗಿ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಆಗ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಹೋರಾಟದ ಸಂಗಾತಿಯಾಗಿದ್ದರು. ಭಾರತ -ಪಾಕಿಸ್ತಾನ ಇಬ್ಭಾಗವಾದಾಗ ಸತ್ಯಪಾಲ್ ತಮ್ಮ ಹುಟ್ಟೂರನ್ನು ಕಳೆದುಕೊಳ್ಳಬೇಕಾಯಿತು. ಇಡೀ ಬದುಕನ್ನು ಪಂಜಾಬ್‌ನ ಅಮೃತಸರದಲ್ಲಿ ಸವೆಸಿದರು.

ಡಂಗ್  ಅವರು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಕೆಲಕಾಲ ಮುಂಬೈನಲ್ಲಿ ನೆಲೆಸಿದ್ದರು. 1952ರಲ್ಲಿ ಎಡಪಂಥೀಯ ಹೋರಾಟಗಾರ್ತಿಯಾದ ವಿಮಲಾ ಅವರನ್ನು ಮದುವೆಯಾದರು. ನಂತರ ಡಂಗ್ ಅವರ ನಿರಂತರ ಹೋರಾಟಕ್ಕೆ ವಿಮಲ ಅವರು ದೊಡ್ಡ ಶಕ್ತಿಯಾಗಿ ಜೊತೆಯಾದರು.

ವಿಮಲಾ ಭಾರತೀಯ ಅಂತರರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ದಂಪತಿಗಳು ಅಮೃತಸರಕ್ಕೆ ಭೇಟಿ ನೀಡಿದಾಗ, ಅಲ್ಲಿನ ಛೆಹೆರ್ತಾದ ಕೈಗಾರಿಕಾ ವಲಯದಲ್ಲಿ ಕಾರ್ಮಿಕರ ಸ್ಥಿತಿಗತಿಗಳನ್ನು ನೋಡಿದರು. ಬಳಿಕ ಕಾರ್ಮಿಕರ ಪರವಾದ ಹೋರಾಟ ಕಟ್ಟಲು ಅಲ್ಲಿಯೇ ನೆಲೆಸಿದರು. ಇಬ್ಬರೂ ಹೋರಾಟಗಾರರಾದ ಕಾರಣ ಮಕ್ಕಳನ್ನು ಪಡೆಯಬಾರದು, ಮಕ್ಕಳಾದರೆ ಹೋರಾಟದ ಕಾಳಜಿ ಕಡಿಮೆಯಾಗುತ್ತದೆ ಎನ್ನುವುದು ಅವರ ನಿಲುವಾಗಿತ್ತು. ಇದು ಅವರ  ಹೋರಾಟದ ಬಗೆಗಿನ ಬದ್ಧತೆಯನ್ನು ಬಿಂಬಿಸುತ್ತದೆ.

ಅವರ ಹೋರಾಟದ ಕಾರ್ಯಕ್ಷೇತ್ರ ಅಮೃತಸರವೇ ಆಗಿತ್ತು. ಅಲ್ಲಿ ಶಕ್ತಿಯುತವಾದ ಕಾರ್ಮಿಕರ ಸಂಘಟನೆಯನ್ನು ಕಟ್ಟಿದರು. ಸತ್ಯಪಾಲ್ ಅವರ ರಾಜಕೀಯ ಒಳನೋಟಗಳು ಮತ್ತು ಮಾರ್ಕ್ಸ್‌ವಾದದ ಆಳವಾದ ತಿಳಿವು ಅಮೃತಸರದಲ್ಲಿ ಸಿಪಿಐ ಬಲಶಾಲಿಯಾಗಲು ಕಾರಣವಾಯಿತು. ಅವರ ಜೀವನ ಮತ್ತು ಹೋರಾಟವನ್ನು ಮೂರು ನೆಲೆಗಳಲ್ಲಿ ಗುರುತಿಸಬಹುದು.

ಪಂಜಾಬಿನಲ್ಲಿ ಕಾರ್ಮಿಕರ ಸಂಘಟನೆ ಮತ್ತು ಪಕ್ಷವನ್ನು ಬಲಪಡಿಸಿದ್ದು, ಎರಡನೆಯದಾಗಿ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿ ಭಾಗವಹಿಸುವಿಕೆ, ಮೂರನೆಯದಾಗಿ ಜನರ ದುಃಖವನ್ನು ಆಲಿಸುವ ನೆಲೆಯಲ್ಲಿ ಪಂಜಾಬ್‌ನಲ್ಲಿ ಸಿಪಿಐ ಪಕ್ಷವನ್ನು ರೂಪಿಸಿದ್ದು. ಕಾನೂನಾತ್ಮಕವಾಗಿಯೂ ಹೋರಾಟವನ್ನು ಕಟ್ಟುವಲ್ಲಿ ಡಾಂಗೆ ಅವರಿಗೆ ಅಪಾರ ತಿಳಿವಿತ್ತು. ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ಹೋರಾಟದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಡಾಂಗೆ ದಂಪತಿಗಳು ಪಂಜಾಬ್‌ನಲ್ಲಿ ಹುಟ್ಟಿದ ಖಲಿಸ್ತಾನ್ ಚಳವಳಿಯ ಭಯೋತ್ಪಾದನಾ ಚಟುವಟಿಕೆಗಳಿಗೆ ದೊಡ್ಡ ವಿರೋಧವನ್ನು ಹುಟ್ಟಿಸಿದ್ದರು. ಈ ಸಮಯದಲ್ಲಿ ಹಿಂದುಗಳೆಲ್ಲಾ ಅಮೃತಸರವನ್ನು ತೊರೆದು ಬೇರೆ ಬೇರೆ ನಗರ ಪಟ್ಟಣಗಳಿಗೆ ವಲಸೆ ಹೋಗಲಾರಂಭಿಸಿದರು. ಆಗ ಡಾಂಗೆ ಮತ್ತು ವಿಮಲಾ ಇಂತಹ ವಿಷಮ ಸ್ಥಿತಿಯಲ್ಲೂ ಜೀವದ ಹಂಗು ತೊರೆದು ಸಿಖ್ ಭಯೋತ್ಪಾದನೆ ವಿರುದ್ಧ ಹೋರಾಡಿದರು. ಅಲ್ಲಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಾ ಭಯೋತ್ಪಾದನೆ ವಿರುದ್ಧ ಜನಜಾಗೃತಿಯನ್ನು ಉಂಟುಮಾಡಿದರು. ಕೊನೆ ತನಕವೂ ಡಂಗ್ ಸಿಖ್ ಮೂಲಭೂತವಾದಿ ಚಟುವಟಿಕೆಗಳನ್ನು ವಿರೋಧಿಸುತ್ತಲೇ ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಿದರು.

ಡಾಂಗೆ ಕೇವಲ ಸಿಪಿಐ ನಾಯಕ ಮಾತ್ರ ಆಗಿರಲಿಲ್ಲ. ಜನರ ಜತೆಗೆ ಇದ್ದು ಹೋರಾಟದ ಕಾರಣಕ್ಕೆ ದೊಡ್ಡ ಜನನಾಯಕ ಕೂಡ ಆಗಿದ್ದರು. 1966-67ರಲ್ಲಿ ಡಂಗ್ ಮೊದಲ ಬಾರಿಗೆ ವಿಧಾನ ಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಅಭ್ಯರ್ಥಿ ಗುರುಮುಖ್ ಸಿಂಗ್ ಮುಸಾಫಿರ್ ಅವರನ್ನು ಸೋಲಿಸಿದರು. ಆಗ ಪಂಜಾಬಿನಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷಗಳ ಸಂಯುಕ್ತ ಸರ್ಕಾರ ರಚನೆಯಾಯಿತು. ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ವ್ಯವಹಾರ ಖಾತೆಯ ಮಂತ್ರಿಯಾದರು.

ಆಡಳಿತಾವಧಿಯಲ್ಲಿ ಬಡಜನರಿಗೆ ಆಹಾರ ಮತ್ತು ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿದರು. ಬಳಿಕ 1969, 72, 77ರಲ್ಲಿಯೂ ಗೆದ್ದು ಜನಮುಖಿ ಚಟುವಟಿಕೆಗಳನ್ನು ಮುಂದುವರೆಸಿದರು. 1980ರಲ್ಲಿ ಸೋಲನ್ನನುಭವಿಸಿ, ನಂತರ ಅವರು ಚುನಾವಣೆಗೆ ವಿಮುಖರಾದರು. 1992ರಲ್ಲಿ ಮಡದಿ ವಿಮಲಾ ಜಯ ಗಳಿಸಿ ಮಹಿಳಾ ಪರ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಿದರು.

ಡಾಂಗೆ ಅವರು ಸಚಿವರಿಗೆ ಇರುವ ಬಂಗಲೆಯಲ್ಲಿ ವಾಸ ಮಾಡದೆ, ಶಾಸಕರ ಕೊಠಡಿಯಲ್ಲೇ ಜೀವಿಸಿದರು. ಅವರು ಜಯಗಳಿಸಿದ ಕ್ಷೇತ್ರದಲ್ಲಿ ಸೈಕಲ್ ಏರಿ ಪ್ರವಾಸ ಕೈಗೊಂಡು ಜನರ ಕಷ್ಟಸುಖಗಳನ್ನು ಆಲಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಕೀಯದ ಮಿತಿಗಳನ್ನು ಮೀರಿಯೂ ಜನಪರವಾದ ಕೆಲಸಗಳನ್ನು ಕೈಗೊಳ್ಳುವ ಸಾಧ್ಯತೆಗಳನ್ನು ತೋರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ಪಡೆವ ಅರ್ಹತೆ ಇದ್ದರೂ ಕೊನೆಯವರೆಗೂ ಅವರು ಅದನ್ನು ಪಡೆಯಲು ಇಚ್ಛಿಸಲಿಲ್ಲ. 

ಸತ್ಯಪಾಲ್ ಅವರ ಚಿಂತನೆಯ ಬಗ್ಗೆ ಪಂಜಾಬಿನಲ್ಲಿ ಹೊಗಳಿಕೆ, ಮೆಚ್ಚುಗೆ ವ್ಯಕ್ತವಾಯಿತೇ ಹೊರತು ಅವರ ಆಲೋಚನೆ ಮತ್ತು ಹೋರಾಟವನ್ನು ವಿಸ್ತರಿಸುವ ಬದ್ಧತೆಯ ಅನುಯಾಯಿಗಳು ತಯಾರಾಗಲಿಲ್ಲ. ಕೊನೆಗೂ ತಮ್ಮ ಆಲೋಚನೆ ಮತ್ತು ಹೋರಾಟದ ನಿಷ್ಠೆಯನ್ನು ಪಾಲಿಸಿದವರೆಂದರೆ, ಸ್ವತಃ ಸತ್ಯಪಾಲ್ ಮತ್ತು ವಿಮಲಾ ಮಾತ್ರ. ದೇಶದಲ್ಲಿ ಎಡಪಂಥೀಯ ಆಲೋಚನೆಯನ್ನು ಹೋರಾಟ, ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಕ್ರಾಂತಿಕಾರಕವಾಗಿ ಅಳವಡಿಸಿಕೊಂಡ ದಂಪತಿಗಳೆಂದರೆ ಅದು ಸತ್ಯಪಾಲ್ ಡಂಗ್ ಮತ್ತು ವಿಮಲಾ ಎನ್ನುವ ಮಾತಿದೆ.

ಸತ್ಯಪಾಲ್ ಸಾವಿನ ಜತೆಯೇ ಪಂಜಾಬಿನ ಎಡಪಂಥೀಯ ರಾಜಕೀಯ ಯುಗವೇ ಅಂತ್ಯವಾಯಿತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಸದಾ ನ್ಯಾಯದ ಪರವಾಗಿ ಹೋರಾಡುವ ಕಿಚ್ಚು ಸತ್ಯಪಾಲ್ ಅವರ ಯೌವನದಲ್ಲಿಯೇ ಮೊಳಕೆಯೊಡೆದು, ಅದು ಹೆಮ್ಮರವಾಗಿ ಪಂಜಾಬಿನಲ್ಲಿ ಅದು ಫಲ ಕೊಡುತ್ತಿತ್ತು ಎಂದು ಚಳವಳಿಗಾರರು ಹೇಳುತ್ತಾರೆ. ಮಾರ್ಕ್ಸ್‌ವಾದವನ್ನು ಭಾರತದ ನೆಲೆಯಲ್ಲಿ ಪುನರ್ ವ್ಯಾಖ್ಯಾನ ಮಾಡುವಲ್ಲಿ ಡಂಗ್ ಇನ್ನಷ್ಟು ಪರಿಣಾಮಕಾರಿಯಾಗಿ ಚಿಂತಿಸಲಿಲ್ಲ ಎನ್ನುವ ಅಪವಾದಗಳೂ ಇವೆ. ಅವರು ಸ್ವತಃ ತನ್ನ ಹೋರಾಟದ ಹಾದಿಯಲ್ಲಿ ವಿಚಲಿತರಾಗಲಿಲ್ಲ, ಸಿನಿಕವಾಗಲಿಲ್ಲ. ತಮ್ಮ ಹೋರಾಟದ ಜನಪ್ರಿಯತೆಗಾಗಿಯೂ ಹಂಬಲಿಸಲಿಲ್ಲ.

ಸಂಗಾತಿ ವಿಮಲಾ 2009ರಲ್ಲಿ ತೀರಿದ ಬಳಿಕ ಡಾಂಗೆ ಒಂಟಿಯೇ ಆಗಿದ್ದರು. ಆರೋಗ್ಯ ಕೈಕೊಡಲು ಶುರುವಾದಂದಿನಿಂದ ಜನರ ಒಡನಾಟದಿಂದಲೂ ದೂರವಾದರು. ಕೊನೆಕೊನೆಗೆ ಸ್ಮರಣಾಶಕ್ತಿ ಕಳೆದುಕೊಂಡು ಸಂಬಂಧಿಕರೊಬ್ಬರ ಆಶ್ರಯದಲ್ಲಿದ್ದರು. ಅವರ ಖರ್ಚನ್ನು ಸಿಪಿಐ ನೋಡಿಕೊಳ್ಳುತ್ತಿತ್ತು.

ಬದುಕಿನಲ್ಲಿ ಸತ್ಯಪಾಲ್ ಮಾಧ್ಯಮಗಳ ಜತೆ ಅಂತರ ಕಾಯ್ದುಕೊಂಡಿದ್ದರ ಕಾರಣವೋ ಏನೋ, ಅವರ ಸಾವು ಪಂಜಾಬಿನಲ್ಲಿ ಕೂಡ ದೊಡ್ಡ ಸುದ್ದಿಯಾಗಲಿಲ್ಲ. ಸತ್ಯಪಾಲ್ ಕೊನೆಯುಸಿರೆಳೆದಾಗ, ಪಂಜಾಬಿನಲ್ಲಿ ಬಿತ್ತಿದ ಎಡಪಂಥೀಯ ಹೋರಾಟ ಮತ್ತು ಆಲೋಚನೆಗಳ ಹೊರತಾಗಿ ಅವರ ಹೆಸರಲ್ಲಿ ಯಾವ ಆಸ್ತಿಯೂ ಇರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT