ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಜಯಂತಿ: ಸಿದ್ಧತೆ, ಪರಿಶೀಲನೆ, ಕಟ್ಟೆಚ್ಚರ

Last Updated 14 ಡಿಸೆಂಬರ್ 2013, 6:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಗುರುದತ್ತಾತ್ರೇಯ ಬಾಬಾ­ಬುಡನ್‌ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿಯಲ್ಲಿ ಶಾಂತಿ ಕಾಪಾಡಲು ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬಂದೋಬಸ್ತ್‌ಗೆ ಒಟ್ಟು 2600 ಪೊಲೀಸರನ್ನು ನೇಮಕಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಗೋಯಲ್‌ ತಿಳಿಸಿದ್ದಾರೆ.

ಐ.ಡಿ.ಪೀಠಕ್ಕೆ ಶನಿವಾರ ಪೂರ್ವ ಸಿದ್ಧತೆ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 25 ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ 5 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದ ಎಂದರು.
4 ಮಂದಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ­ಕಾರಿಗಳು, 12 ಮಂದಿ ಡಿವೈಎಸ್‌ಪಿ, 16 ಮಂದಿ ಸರ್ಕಲ್‌ ಇನ್ಸ್‌ಪೆಕ್ಟರ್‌, 40 ಮಂದಿ ಸಬ್‌­ಇನ್ಸ್‌ಪೆಕ್ಟರ್‌ಗಳು, 350 ಮಂದಿ ಕಾನ್ಸ್‌­ಟೆಬಲ್‌ಗಳು, 400 ಮಂದಿ ಗೃಹರಕ್ಷಕ ದಳ, 12 ಕೆಎಸ್ಆರ್‌ಪಿ ತುಕಡಿ, 4 ಜಿಲ್ಲಾ ಶಸಸ್ತ್ರ­ಪಡೆಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಮದ್ಯ ಮಾರಾಟ ನಿಷೇಧ
ಚಿಕ್ಕಮಗಳೂರು:
ಗುರುದತ್ತಾತ್ರೇಯ ಬಾಬಾ­ಬುಡನ್‌ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಮಾಲಾ ಅಭಿಯಾನ, ದತ್ತಜಯಂತಿ ಕಾರ್ಯ­ಕ್ರಮ ಇರುವುದರಿಂದ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿಸೆಂಬರ್ 13ರ ಮಧ್ಯರಾತ್ರಿಯಿಂದ ಡಿಸೆಂಬರ್ 16ರ ಮಧ್ಯರಾತ್ರಿಯವರೆಗೆ ಚಿಕ್ಕಮಗಳೂರು ತಾಲ್ಲೂಕಿ ನಾದ್ಯಂತ ಎಲ್ಲಾ ನಮೂನೆಯ ಮದ್ಯ­ದಂಗಡಿ ಮುಚ್ಚುವಂತೆ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಆದೇಶ ಹೊರಡಿಸಿದ್ದಾರೆ.

ಮದ್ಯ, ಬಿಯರ್, ಮದ್ಯಸಾರ ಇತ್ಯಾದಿ ಅಬಕಾರಿ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಡಿಸೆಂಬರ್ 15 ರ ಮಧ್ಯರಾತ್ರ್ರಿಯಿಂದ ಡಿಸೆಂಬರ್ 16ರ ಮಧ್ಯರಾತ್ರಿ­ಯವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲ ನಮೂನೆಯ ಮದ್ಯದಂಗಡಿ ಮುಚ್ಚು­ವಂತೆಯೂ ಹಾಗೂ ಮದ್ಯ, ಬಿಯರ್‌, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ನಿಷೇಧಿಸಲಾಗಿದೆ.

ಐ.ಡಿ.ಪೀಠದಲ್ಲಿ  ಕ್ಯಾಮೆರಾ, ಮೊಬೈಲ್ ಬಳಕೆ ನಿಷೇಧ
ಚಿಕ್ಕಮಗಳೂರು: ಗುರುದತ್ತಾತ್ರೇಯ ಬಾಬಾ­ಬುಡನ್ ಸ್ವಾಮಿ ದರ್ಗಾ ಐ.ಡಿ.ಪೀಠದಲ್ಲಿ ಇದೇ 14 ರಿಂದ 16 ರವರೆಗೆ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ಐ.ಡಿ.ಪೀಠಕ್ಕೆ ಆಗಮಿಸುವ ಭಕ್ತರು ಮೊಬೈಲ್, ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ಹಿಡನ್ ಕ್ಯಾಮೆರಾ, ಪೆನ್ ಕ್ಯಾಮೆರಾಗಳನ್ನು ದತ್ತಪೀಠ­ದಲ್ಲಿನ ನಿಷೇಧಿತ ಪ್ರದೇಶದ ಆವರಣದ ಒಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದೇ 16 ರಂದು  ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ­ಮಾಲಾ ಮತ್ತು ದತ್ತ ಜಯಂತಿ ಅಂಗವಾಗಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪಾದುಕೆಗಳ ದರ್ಶ­ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ಗುರು­ದತ್ತಾತ್ರೇಯ ಬಾಬಾಬುಡನ್  ಸ್ವಾಮಿ ದರ್ಗಾ­ದಲ್ಲಿ ಧಾರ್ಮಿಕ ದತ್ತಿ ಆಯುಕ್ತರ 1989 ಫೆಬ್ರವರಿ 25 ರ ಆದೇಶದಂತೆ 1975ನೇ ಇಸವಿ­ಗಿಂತ ಹಿಂದೆ ಇದ್ದ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ, ಷೆಡ್‌ವ್ಯವಸ್ಥೆ, ವೈದ್ಯಕೀಯ ಸೇವೆ, ವಿಶೇಷ ಬಸ್ ಸೌಲಭ್ಯ, ಶೌಚಾಲಯ ಮುಂತಾದ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಭಕ್ತರನ್ನು ಕೊಂಡೊಯ್ಯುವ ವಾಹನಗಳನ್ನು 16 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೈಮರ ಚೆಕ್ ಪೋಸ್ಟ್‌ನಿಂದ ಬಿಡಲಾಗುವುದು ಎಂದರು.

ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ ದೃಷ್ಟಿಯಿಂದ ಹಾಗೂ ಧಾರ್ಮಿಕ ಕಾರ್ಯಕ್ರಮ ಸುಗಮವಾಗಿ ನಡೆಯಲು ಭಕ್ತಾದಿಗಳು ಸಹಕರಿಸಲು ಜಿಲ್ಲಾಧಿಕಾರಿ ಮನವಿ ಮಾಡಿದರು. ಶುಕ್ರವಾರ ಬೆಳಿಗ್ಗೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೀಠಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ದತ್ತಜಯಂತಿ: ಅನುಮತಿ ಇಲ್ಲದೆ ಧ್ವನಿವರ್ಧಕ ಬಳಕೆ ಇಲ್ಲ
ಚಿಕ್ಕಮಗಳೂರು: 
ದತ್ತ ಮಾಲಾ, ದತ್ತ ಜಯಂತಿ ಕಾರ್ಯಕ್ರಮಕ್ಕೆ ಬರುವ ದತ್ತ ಮಾಲಾಧಾರಿಗಳು ತಮ್ಮ ವಾಹನಗಳಲ್ಲಿ ಅನುಮತಿ ಇಲ್ಲದೆ ಧ್ವನಿ­ವರ್ಧಕ ಅಳವಡಿಸಬಾರದೆಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿ­ದ್ದಾರೆ.

ಇದೇ 14 ರಿಂದ 16ರವರೆಗೆ ಚಿಕ್ಕಮಗಳೂರು ನಗರ ಹಾಗೂ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಮಾಲಾ, ದತ್ತಜಯಂತಿ ಕಾರ್ಯಕ್ರಮ ಆಚರಿಸಲಿದ್ದು, ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಕ್ತಾದಿಗಳು ದೊಡ್ಡ ವಾಹನಗಳನ್ನು ಉಪಯೋಗಿಸದೇ ಲಘು ವಾಹನದಲ್ಲಿ ಬರಲು ಮನವಿ ಮಾಡಿರುವ ಅವರು, ಪೀಠದ ಒಳಗೆ ಬಾವುಟ, ಕ್ಯಾಮೆರಾ, ಮೈಕ್, ಮೊಬೈಲ್ ಫೋನ್, ಬೆಂಕಿ ಪೊಟ್ಟಣ, ಸಿಗರೇಟ್, ಲೈಟರ್ ಮತ್ತು ಇತರ ಯಾವುದೇ ರೀತಿಯ ಆಯುಧಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ಯಾವುದೇ ವಾಹನ, ಐ.ಡಿ.ಪೀಠದ ದಾರಿ ಮಧ್ಯೆ ಕೆಟ್ಟು ಹೋದಲ್ಲಿ ಕ್ರೇನ್ ಮತ್ತು ಪ್ರಯಾಣಿಕರಿಗೆ ತಕ್ಷಣದ ಸಹಾಯಕ್ಕೆ ಬರಲು ಪೊಲೀಸ್ ಸಹಾಯ ವಾಹನದ ವ್ಯವಸ್ಥೆ ಮಾಡಲಾಗಿದೆ. ಸಹಾಯಕ್ಕಾಗಿ ಮೊಬೈಲ್ ಸಂಖ್ಯೆ 9480805131 ಅಥವಾ 9480­805147 ಸಂಪರ್ಕಿಸಬಹುದು. ಪೊಲೀಸ್ ಇಲಾಖೆಯೊಂದಿಗೆ ಶಾಂತಿ ಕಾಪಾಡಲು ಸಹಕರಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT