ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಂಶ ನಿರ್ವಹಣಾ ಕೇಂದ್ರಕ್ಕೆ ಚಾಲನೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಕಂಪ್ಯೂಟರ್ ಆಧಾರಿತ ಸೇವೆಗಳಾದ ಭೂಮಿ, ಆಧಾರ್, ಕಾವೇರಿ, ಪೌರಾಡಳಿತ, ಇ-ಸಂಗ್ರಹಗಳ ತಂತ್ರಾಂಶ ಮತ್ತು ಅದಕ್ಕೆ ಸಂಬಂಧಿಸಿದ ದತ್ತಾಂಶ ನಿರ್ವಹಣಾ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಕಾಸಸೌಧದಲ್ಲಿ ಗುರುವಾರ ಉದ್ಘಾಟಿಸಿದರು.

ನಾಲ್ಕು ಸಾವಿರ ಚದರ ಅಡಿ ಸ್ಥಳಾವಕಾಶದ ಈ ದತ್ತಾಂಶ ನಿರ್ವಹಣಾ ಕೇಂದ್ರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಂದಿನ 10 ವರ್ಷಗಳ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಪಡೆದಿದೆ. ಈ ಕೇಂದ್ರದ ಸಹಾಯದಿಂದ ಇಲಾಖೆಗಳ ಇ-ಸೇವೆಯನ್ನು ತ್ವರಿತವಾಗಿ ಆರಂಭಿಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಧಾರ್ ಯೋಜನೆಗೆ ಇದುವರೆಗೆ 45 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ ತಾಲ್ಲೂಕು ಮಟ್ಟದಿಂದ ವಿಧಾನಸೌಧದವರೆಗೆ ಮೂರು ಸಾವಿರ ಸರ್ಕಾರಿ ಕಚೇರಿಗಳನ್ನು ಇ-ಆಡಳಿತ ವ್ಯವಸ್ಥೆಯಡಿ ಬೆಸೆಯಲಾಗಿದೆ ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನದ ಮೂಲಕ ದಕ್ಷ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ ತರಲು ಸರ್ಕಾರ ಶ್ರಮಿಸುತ್ತಿದೆ, ಕಳೆದ ಮೂರು ವರ್ಷಗಳಲ್ಲಿ ಇ-ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇ-ಸೇವೆ: ಮುಂಬರುವ ದಿನಗಳಲ್ಲಿ ಅನೇಕ ಇ-ಸೇವೆಗಳನ್ನು ಆರಂಭಿಸಲು ಸರ್ಕಾರ ಯೋಚಿಸಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿಯೂ ಇದರಲ್ಲಿ ಸೇರಿದೆ.ಅಲ್ಲದೆ, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪೋರ್ಟಲ್ ಒಂದನ್ನು ಆರಂಭಿಸಲಾಗುವುದು ಎಂದು ಇ-ಆಡಳಿತ ಇಲಾಖೆ ತಿಳಿಸಿದೆ.

ಸರ್ಕಾರದ 14 ಇಲಾಖೆಗಳ 75 ಆನ್‌ಲೈನ್ ಸೇವೆಗಳು ಅಕ್ಟೋಬರ್‌ನಲ್ಲಿ ಚಾಲನೆ ಪಡೆದುಕೊಳ್ಳಲಿವೆ. ಆಸ್ತಿ ನೋಂದಣಿಯ ದಾಖಲಾತಿ ಪ್ರತಿಗಳು, ವಿವಾಹ ಪ್ರಮಾಣ ಪತ್ರ ಮತ್ತು ನಿರಾಕ್ಷೇಪಣಾ ಪತ್ರಗಳೂ ಇ-ಸೇವೆಯಡಿ ದೊರೆಯುವ ವ್ಯವಸ್ಥೆ ಜಾರಿಯಾಗಲಿದೆ.

ಸಂಪುಟ ಸಭೆ:ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಮರಳು ಗಣಿ ಗುತ್ತಿಗೆ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರದ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಪುಟ ವಿಸ್ತರಣೆ: ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು. ಕಾನೂನು ಸಚಿವ ಸುರೇಶ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT